ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಭಾಷಣ | ದೇಶ ಪೂರ್ತಿ 21 ದಿನ ಲಾಕ್‌ಡೌನ್
LIVE

ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮೂರು ವಾರಗಳ ಅವಧಿಗೆ, ಒಟ್ಟು 21 ದಿನ ದೇಶವನ್ನು ಸಂಪೂರ್ಣ ಲಾಕ್‌ಡೌನ್ ಮಾಡುವ ನಿರ್ಧಾರ ಪ್ರಕಟಿಸಿದರು. ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದನ್ನು ಅದನ್ನು ಎದುರಿಸಲು ಲಾಕ್‌ಡೌನ್‌ಗಿಂತ ಉತ್ತಮ ಮಾರ್ಗವಿಲ್ಲ ಎಂದು ಹೇಳಿದ ಮೋದಿ, ದೇಶದ ಸಂಕಷ್ಟ ಪರಿಸ್ಥಿತಿಯಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಕೈಜೋಡಿಸಿ ಪ್ರಾರ್ಥಿಸಿದರು.
Last Updated 24 ಮಾರ್ಚ್ 2020, 15:25 IST
ಅಕ್ಷರ ಗಾತ್ರ
15:0624 Mar 2020

ಇಂದು ರಾತ್ರಿ 12 ಗಂಟೆಯಿಂದ ಮೂರು ವಾರಗಳ ಅವಧಿಗೆ ದೇಶವ್ಯಾಪಿ ಲಾಕ್‌ಡೌನ್

ಇಂದು ರಾತ್ರಿ 12 ಗಂಟೆಯಿಂದ ಮೂರು ವಾರಗಳ ಅವಧಿಗೆ ದೇಶವ್ಯಾಪಿ ಲಾಕ್‌ಡೌನ್ ಘೋಷಿಸುತ್ತಿದ್ದೇನೆ.

ನಾವು ಮುನ್ನೆಚ್ಚರಿಕೆ ವಹಿಸದಿದ್ದರೆ ಏನಾಗುತ್ತೆ ಎಂಬುದನ್ನು ಊಹಿಸಲೂ ಆಗುವುದಿಲ್ಲ. ಕಳೆದ ಎರಡು ದಿನಗಳಿಂದ ದೇಶದ ಹಲವು ಭಾಗಗಳಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ರಾಜ್ಯ ಸರ್ಕಾರಗಳ ಈ ಘೋಷಣೆಯನ್ನು ಗಂಭೀರವಾಗಿ ಪರಿಗಣಿಸಬೇಕು. ದೇಶ ಇಂದು ಮಹತ್ವಪೂರ್ಣ ನಿರ್ಣಯ ತೆಗೆದುಕೊಂಡಿದೆ.

ದೇಶದ ಹಿತದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿತ್ತು. ನಾವು ಈ 21 ದಿನಗಳನ್ನು ಸರಿಯಾಗಿ ಸಂಭಾಳಿಸದಿದ್ದರೆ ಇಡೀ ದೇಶ ಹಿಂದಕ್ಕೆ ಹೋಗುತ್ತದೆ.

ಕೊರೊನಾದಿಂದ ತಪ್ಪಿಸಿಕೊಳ್ಳಲು ಇರುವ ಒಂದೇ ಉಪಾಯ ಅಂದ್ರೆ ಮನೆಯಲ್ಲಿಯೇ ಉಳಿಯುವುದು. ಅಮೆರಿಕ, ಇಟಲಿ ಸೇರಿದಂತೆ ಜಗತ್ತಿನ ಹಲವು ದೇಶಗಳ ಜನರಿಗೆ ಈಗ ಈ ವಿಷಯ ಅರ್ಥವಾಗಿದೆ. ಅವರು ಸರ್ಕಾರದ ಆದೇಶ ಒಪ್ಪಿಕೊಂಡಿದ್ದಾರೆ.

ನನ್ನ ಭಾರತೀಯ ಸೋದರರು ಈ ವಿಷಮ ಪರಿಸ್ಥಿತಿಯಲ್ಲಿ ಸರ್ಕಾರದ ಜೊತೆಗೆ ನಿಲ್ಲುತ್ತಾರೆ ಎಂಬ ಭರವಸೆಯಿದೆ. ದಯವಿಟ್ಟು ಮನೆಬಿಟ್ಟು ಹೊರಗೆ ಬರಬೇಡಿ. ಜೀವ ಇದ್ದರೆ ಜಗತ್ತು ಇರುತ್ತೆ (ಜಾನ್ ಹೇ ತೋ ಜಹಾನ್ ಹೇ) ಎನ್ನುವುದನ್ನು ಅರ್ಥ ಮಾಡಿಕೊಳ್ಳಿ.

15:0424 Mar 2020

ಪ್ರಧಾನಿ ಸೇರಿದಂತೆ ಎಲ್ಲರಿಗೂ ಈ ನಿಯಮ ಅನ್ವಯ

ಏನು ಬೇಕಾದರೂ ಆಗಲಿ ನೀವು ಮನೆಯಲ್ಲಿಯೇ ಇರಬೇಕು. ಪ್ರಧಾನಿಯಿಂದ ಹಳ್ಳಿಯ ಸಣ್ಣ ನಾಗರೀಕನವರೆಗೆ ಎಲ್ಲರಿಗೂ ಸಾಮಾಜಿಕ ಅಂತರ ಅನಿವಾರ್ಯ. ಮನೆಯ ಲಕ್ಷ್ಮಣ ರೇಖೆಯನ್ನು ಉಲ್ಲಂಘಿಸಬೇಡಿ.

15:0224 Mar 2020

ದೇಶ ಚೊಕ್ಕಟವಾಗಿಡಲು ಶ್ರಮಿಸುತ್ತಿರುವವರನ್ನು ಗೌರವಿಸಿ

ಈ ಕಠಿಣ ಪರಿಸ್ಥಿತಿಯಲ್ಲಿಯೂ ಸಫಾಯಿ ಕರ್ಮಚಾರಿಗಳು ಇನ್ನೊಬ್ಬರ ಬದುಕು ಉಳಿಸಲು ಕೆಲಸ ಮಾಡುತ್ತಿದ್ದಾರೆ. ದೇಶವನ್ನು ಸ್ವಚ್ಛವಾಗಿಡಲು ಶ್ರಮಿಸುತ್ತಿದ್ದಾರೆ. ಅಂಥವರನ್ನು ಗೌರವಿಸಿ.

15:0124 Mar 2020

ನಿಮಗಾಗಿ ದುಡಿಯುತ್ತಿರುವವರನ್ನು ಗೌರವಿಸಿ

ಜಾನ್ ಹೇ ತೋ ಜಹಾನ್ ಹೇ. ನಾನು ನಿಮ್ಮನ್ನು ಕೈಜೋಡಿಸಿ ಪ್ರಾರ್ಥಿಸುತ್ತೇನೆ. ನೀವು ಮನೆಯಲ್ಲಿರಿ. ಈ ಸಂಕಷ್ಟ ಪರಿಸ್ಥಿತಿಯಲ್ಲಿಯೂ ನಿಮಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು, ನರ್ಸ್‌, ಪ್ಯಾರಾ ಮೆಡಿಕಲ್ ಸ್ಟಾಫ್, ಪ್ಯಾಥಲಜಿಸ್ಟ್‌ಗಳ ಪರಿಶ್ರಮವನ್ನು ಅಭಿನಂದಿಸಿ, ಗೌರವಿಸಿ.

15:0024 Mar 2020

ಖಾಸಗಿ ಸಹಯೋಗ ಶ್ಲಾಘನೀಯ

ಎಲ್ಲ ರಾಜ್ಯ ಸರ್ಕಾಗಳಿಗೂ ಈಗ ಆರೋಗ್ಯವೇ ಮುಖ್ಯವಾಗಬೇಕು. ದೇಶದ ಖಾಸಗಿ ಆಸ್ಪತ್ರೆ, ಪ್ರಯೋಗಾಲಯಗಳೂ ಸರ್ಕಾರಗಳ ಜೊತೆಗೆ ಕೈಜೋಡಿಸಿವೆ. ಇದು ಶ್ಲಾಘನೀಯ ಸಂಗತಿ.

15:0024 Mar 2020

ಸ್ವಯಂ ವೈದ್ಯದ ಸಾಹಸ ಮಾಡಬೇಡಿ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ದೇಶನಗಳನ್ನು ಪೂರ್ಣವಾಗಿ ಪಾಲಿಸಿ. ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧಿ ತೆಗೆದುಕೊಳ್ಳಬೇಡಿ. ನೀವು ತೆಗೆದುಕೊಳ್ಳುವ ತಪ್ಪು ಔಷಧಿ ನಿಮ್ಮ ಜೀವಕ್ಕೆ ಆಪತ್ತು ತರಬಬಹುದು.

14:5824 Mar 2020

ಜೀವ ಸಂರಕ್ಷಣೆಗೆ ಅತ್ಯಗತ್ಯ

ದೇಶದ ಎಲ್ಲ ಭಾರತೀಯರು ಸರ್ಕಾರ, ಸ್ಥಳೀಯ ಆಡಳಿತಗಳ ಜೊತೆಗೆ ಸ್ಪಂದಿಸಬೇಕು. ಈ 21 ದಿನದ ಲಾಕ್‌ಡೌನ್‌ ನಿಮ್ಮ ಜೀವ ಸಂರಕ್ಷಣೆಗೆ ಅತ್ಯಗತ್ಯ. ದೇಶದ ಎಲ್ಲ ಜನರೂ ಈ ಸಂಕಟವನ್ನು ಆತ್ವವಿಶ್ವಾಶದಿಂದ ಎದುರಿಸಿ, ಗೆದ್ದು ಬರುತ್ತಾರೆ ಎಂಬ ವಿಶ್ವಾಸ ಅತ್ಯಗತ್ಯ.

14:5624 Mar 2020

ಸೋಂಕಿತರ ಚಿಕಿತ್ಸೆಗಾಗಿ 15 ಸಾವಿರ ಕೋಟಿ ಮಂಜೂರು

ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ 15 ಸಾವಿರ ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ಘೋಷಿಸುತ್ತಿದೆ. ಈ ಹಣದಿಂದ ಎಲ್ಲ ಅಗತ್ಯ ಸಾಧನಗಳನ್ನು ಖರೀದಿಸಲಾಗುವುದು. ಜೊತೆಜೊತೆಗೆ ಮೆಡಿಕಲ್ ಮತ್ತು ಪ್ಯಾರಾಮೆಡಿಕಲ್ ಸಿಬ್ಬಂದಿಗೆ ತರಬೇತಿಯನ್ನೂ ನೀಡಲಾಗುವುದು.

14:5324 Mar 2020

ಅವಶ್ಯ ವಸ್ತುಗಳ ಪೂರೈಕೆಗೆ ಕ್ರಮ

ಅವಶ್ಯ ವಸ್ತುಗಳ ಪೂರೈಕೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಬಡವರ ಸಂಕಷ್ಟ ಕಡಿಮೆ ಮಾಡಲು ಸಂಘಸಂಸ್ಥೆಗಳ ಜೊತೆಗೆ ಸರ್ಕಾರಗಳು ಕೆಲಸ ಮಾಡುತ್ತಿವೆ. ಜೀವನವನ್ನು ಬದುಕಲು ಅಗತ್ಯವಿರುವುದನ್ನು ಎಲ್ಲ ರೀತಿಯ ಪ್ರಯತ್ನದಿಂದ ನಾವು ಮಾಡಬೇಕು. ಜೀವ ಉಳಿಸಲು ಅಗತ್ಯವಿರುವುದಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯತೆ ಕೊಡಲೇ ಬೇಕು.

14:5124 Mar 2020

ನಿಮಗಾಗಿ ದುಡಿಯುವವರ ಬಗ್ಗೆ ಯೋಚಿಸಿ

ಮಾಧ್ಯಮ ಪ್ರತಿನಿಧಿಗಳ ಬಗ್ಗೆಯೂ ಯೋಚಿಸಿ. ಅವರು ಸಂಕಷ್ಟ ಪರಿಸ್ಥಿತಿಯಲ್ಲಿಯೂ ಆಸ್ಪತ್ರೆಗಳಿಗೆ ಹೋಗ್ತಿದ್ದಾರೆ. ಪೊಲೀಸರು ತಮ್ಮ ಕುಟುಂಬಗಳನ್ನು ಮರೆತು ಹಗಲಿರುಳು ಶ್ರಮಿಸುತ್ತಿದ್ದಾರೆ. ಕೆಲವೊಮ್ಮೆ ಅವರು ಹೊಡೆಯಬಹುದು. ಆದರೆ ಅವರ ಉದ್ದೇಶ ಅರ್ಥ ಮಾಡಿಕೊಳ್ಳಿ.