ಬುಧವಾರ, ಫೆಬ್ರವರಿ 26, 2020
19 °C

ಸುಪ್ರೀಂ ಕೋರ್ಟ್‌ ತೀರ್ಪು | ಶಬರಿಮಲೆ, ರಫೇಲ್‌ ಡೀಲ್

Published:
Updated:
ಕೇರಳದ ಶಬರಿಮಲೆಯ ಅಯ್ಯಪ್ಪ ದೇವಸ್ಥಾನಕ್ಕೆ ಎಲ್ಲ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದು ಎಂದು 2018ರಲ್ಲಿ ನೀಡಿದ್ದ ತೀರ್ಪು ಮರುಪರಿಶೀಲನೆಗೆ ಕೋರಿದ್ದ ಎಲ್ಲ ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಇಂದು (ಗುರುವಾರ– ನ.14) ತೀರ್ಪು ಪ್ರಕಟಿಸಲಿದೆ. ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರಕ್ಕೆ ಕ್ಲೀನ್‌ಚಿಟ್ ನೀಡಿರುವ ಬಗ್ಗೆ ಸಲ್ಲಿಕೆಯಾಗಿರುವ ಮರುಪರಿಶೀಲನಾ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು ಪ್ರಕಟಿಸಲಿದೆ. ರಫೇಲ್ ಕುರಿತ ಮರುಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಮೇ 10ರಂದು ಪೂರ್ಣಗೊಳಿಸಿದ್ದ ಸರ್ವೋಚ್ಚ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು.
 • 11:04 am

  ರಾಹುಲ್ ಗಾಂಧಿ ವಿರುದ್ಧದ ಅರ್ಜಿ ವಜಾ

  ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ದಾಖಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ‘ನೀವು ಜವಾಬ್ದಾರಿಯಿಂದ ಹೇಳಿಕೆ ಕೊಡಬೇಕು’ ಎಂದು ಎಚ್ಚರಿಸಿತು. ಕ್ಷಮೆಯಾಚನೆ ಹಿನ್ನೆಲೆಯಲ್ಲಿ ಅರ್ಜಿ ವಜಾ ಮಾಡಿತು.

 • 11:01 am

  ರಫೇಲ್‌ ಡೀಲ್: ಮರುಪರಿಶೀಲನಾ ಅರ್ಜಿಗೆ ಆಧಾರವಿಲ್ಲ

  ಮರುಪರಿಶೀಲನಾ ಅರ್ಜಿಗೆ ಯಾವುದೇ ಆಧಾರವಿಲ್ಲ ಎಂದ ಸುಪ್ರೀಂಕೋರ್ಟ್‌

 • 11:00 am

  ರಫೇಲ್ ಅರ್ಜಿ ವಜಾ

  ರಫೇಲ್ ಖರೀದಿ ಮರುಪರಿಶೀಲನಾ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್‌.

 • 10:49 am

  ಶಬರಿಮಲೆ: ಹಿಂದಿನ ತೀರ್ಪು ಇನ್ನೂ ಊರ್ಜಿತ

  ಶಬರಿಮಲೆಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 2018ರಲ್ಲಿ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ಅಥವಾ ಮಾರ್ಪಾಡು ಸೂಚಿಸಿಲ್ಲ. ಧಾರ್ಮಿಕ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಸಂಘರ್ಷದ ವಿಚಾರ ಇರುವುದರಿಂದ ಇನ್ನಷ್ಟು ಚರ್ಚೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು 7 ನ್ಯಾಯಮೂರ್ತಿಗಳಿರುವ ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸಿದೆ. ವಿಸ್ತೃತ ನ್ಯಾಯಪೀಠದ ವಿಚಾರಣೆ ಮುಗಿದು, ತೀರ್ಪು ಹೊರಬೀಳುವವರೆಗೆ ಹಿಂದಿನ ತೀರ್ಪು ಊರ್ಜಿತದಲ್ಲಿರುತ್ತದೆ. ಹೀಗಾಗಿ ಶಬರಿಮಲೆಗೆ ಹೆಣ್ಣುಮಕ್ಕಳ ಪ್ರವೇಶ ಅಬಾಧಿತ.

 • 10:43 am

  ಶಬರಿಮಲೆ: 3:2 ಬಹುಮತದಿಂದ ವಿಸ್ತೃತ ಪೀಠಕ್ಕೆ ವರ್ಗಾವಣೆ

  2:3 ಬಹುಮತದಿಂದ ವಿಸ್ತೃತ ಪೀಠಕ್ಕೆ ವಿಚಾರವಣೆ ವರ್ಗಾವಣೆ. ನ್ಯಾಯಮೂರ್ತಿಗಳಾದ ಚಂದ್ರಚೂಡ್ ಮತ್ತು ನಾರೀಮನ್ ವಿರೋಧ. ಉಳಿದ ನ್ಯಾಯಮೂರ್ತಿಗಳಿಂದ ವಿಸ್ತೃತ ವಿಚಾರಣೆಗೆ ಒಪ್ಪಿಗೆ.

 • 10:41 am

  ಶಬರಿಮಲೆ: 7 ನ್ಯಾಯಪೀಠದ ವಿಸ್ತೃತಪೀಠಕ್ಕೆ ವರ್ಗಾವಣೆ

  ಇದು ಕೇವಲ ಹಿಂದೂ ಮಹಿಳೆಯರ ದೇಗುಲ ಪ್ರವೇಶ ವಿಚಾರವಷ್ಟೇ ಅಲ್ಲ. ಮುಸ್ಲಿಮರು, ಪಾರ್ಸಿಗಳ ವಿಚಾರವೂ ಇದೆ. ವೈಯಕ್ತಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯದ ವಿಚಾರವೂ ಇದರಲ್ಲಿದೆ. ವಿಸ್ತೃತವಾದ ಮತ್ತು ವ್ಯಾಪಕವಾದ ಚರ್ಚೆಯಾಗಬೇಕಿದೆ. ಹೀಗಾಗಿ ಏಳು ನ್ಯಾಯಮೂರ್ತಿಗಳ ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾಯಿಸಲಾಗಿದೆ.

 • 10:40 am

  ಶಬರಿಮಲೆ: ಮಹಿಳೆಯರಿಗೆ ನಿರ್ಬಂಧ ಸಾಧ್ಯವಿಲ್ಲ

  ದೇಗುಲ ಪ್ರವೇಶಕ್ಕೆ ಯಾರನ್ನೂ ನಿರ್ಬಂಧಿಸಲು ಸಾಧ್ಯವಿಲ್ಲ. 

 • 10:39 am

  ಶಬರಿಮಲೆ: ದೇಗುಲ ಪ್ರವೇಶಕ್ಕೆ ಸಮಾನ ಹಕ್ಕಿದೆ

  ದೇವಸ್ಥಾನ ಪ್ರವೇಶಕ್ಕೆ ಪುರುಷ ಮತ್ತು ಮಹಿಳೆಯರಿಗೆ ಸಮಾನ ಹಕ್ಕಿದೆ.

 • 10:36 am

  ಶಬರಿಮಲೆ: ತೀರ್ಪು ಓದಲು ಅರಂಭಿಸಿದ ಮುಖ್ಯ ನ್ಯಾಯಮೂರ್ತಿ

  ತೀರ್ಪು ಓದಲು ಆರಂಭಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ.

 • 10:35 am

  ಶಬರಿಮಲೆ: ಕಲಾಪ ಆರಂಭ

  ಕಲಾಪ ಆರಂಭಿಸಿದ ರಂಜನ್ ಗೊಗೊಯಿ ನೇತೃತ್ವದ ಸಾಂವಿಧಾನಿಕ ಪೀಠ. ತೀರ್ಪು ಓದುತ್ತಿರುವ ನ್ಯಾಯಾಧೀಶರು.

 • 10:28 am

  ಹೆಂಗಸರಿಗೆ ಶಬರಿಮಲೆ ದೇಗುಲ ಪ್ರವೇಶಕ್ಕೆ ಅವಕಾಶ

  ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ 10ರಿಂದ 50 ವರ್ಷ ವಯಸ್ಸಿನ ಹೆಣ್ಣುಮಕ್ಕಳು ದೇಗುಲ ಪ್ರವೇಶಿಸದಂತೆ ನಿರ್ಬಂಧಿಸುವುದು ಅಸಾಂವಿಧಾನಿಕ ಎಂದು ಕಳೆದ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. 4:1 ಅನುಪಾತದಲ್ಲಿ ತೀರ್ಪು ಪ್ರಕಟಿಸಿತ್ತು. ಇದನ್ನು ಪ್ರಶ್ನಿಸಿ ದೇವಸ್ಥಾನದ ತಂತ್ರಿ, ನಾಯರ್ ಸೇವಾ ಸಮಾಜ, ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಸೇರಿದಂತೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. 

 • 10:24 am

  ರಫೇಲ್ ಖರೀದಿ ಒಪ್ಪಂದ

  ರಫೇಲ್ ಖರೀದಿ ಒಪ್ಪಂದದಲ್ಲಿ ಸರ್ಕಾರಕ್ಕೆ ಕ್ಲೀನ್‌ಚಿಟ್ ನೀಡಿರುವುದನ್ನು ಮರುಪರಿಶೀಲಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ, ಅರುಣ್ ಶೌರಿ ಮತ್ತು ವಕೀಲ ಪ್ರಶಾಂತ್ ಭೂಷಣ್ ಅರ್ಜಿ ಸಲ್ಲಿಸಿದ್ದರು.

 • 10:23 am

  ಶಬರಿಮಲೆ: ಒಟ್ಟು 65 ಅರ್ಜಿಗಳು

  ಶಬರಿಮಲೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಪೀಠದ ಎದುರು ಈ ಸಂಬಂಧ ಒಟ್ಟು 65 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 56 ಅರ್ಜಿಗಳು ತೀರ್ಪಿನ ಮರುಪರಿಶೀಲನೆಗೆ ಮನವಿ ಮಾಡಿದ್ದವು. ನಾಲ್ಕು ಹೊಸ ಅರ್ಜಿಗಳು, 5 ವರ್ಗಾಯಿಸಿದ ಅರ್ಜಿಗಳು ಇದರಲ್ಲಿ ಸೇರಿವೆ.