ಬುಧವಾರ, ಜೂನ್ 16, 2021
28 °C

ಲೋಕಪಾಲರ ನೇಮಕ ಎಂಬನಾಲ್ಕು ವರ್ಷಗಳ ಕತೆ

ವಿಜಯ್ ಜೋಷಿ Updated:

ಅಕ್ಷರ ಗಾತ್ರ : | |

ಭ್ರಷ್ಟಾಚಾರ ತಡೆಯುವ ಉದ್ದೇಶದ ಲೋಕಪಾಲ ಸಂಸ್ಥೆಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡದ ಕೇಂದ್ರ ಸರ್ಕಾರದ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌, ಸರ್ಕಾರದ ನಿಲುವು ‘ಒಂಚೂರೂ ತೃಪ್ತಿಕರವಾಗಿಲ್ಲ’ ಎಂದು ಈ ವಾರ ಹೇಳಿತು. ಇದು ಮಾಧ್ಯಮಗಳಲ್ಲಿ ಸುದ್ದಿಯಾಯಿತು. ಆದರೆ ಈ ಸುದ್ದಿಗೆ ಒಂದು ಹಿನ್ನೆಲೆ ಇದೆ. ಆ ಹಿನ್ನೆಲೆಯನ್ನು ತಿಳಿಯುವ ಮೊದಲು ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಬೃಹತ್ ಆಂದೋಲನವನ್ನು ಒಮ್ಮೆ ನೆನಪು ಮಾಡಿಕೊಳ್ಳಬೇಕು.

ಸಂಸತ್ತು ಜನಲೋಕಪಾಲ ಮಸೂದೆಗೆ ಅನುಮೋದನೆ ನೀಡಬೇಕು ಎಂದು ಆಗ್ರಹಿಸಿ ಗಾಂಧಿವಾದಿ ಅಣ್ಣಾ ಹಜಾರೆ ಅವರು 2011ರಲ್ಲಿ ದೆಹಲಿಯಲ್ಲಿ ಹೋರಾಟ ಆರಂಭಿಸಿದರು. ಅವರ ಹೋರಾಟಕ್ಕೆ ದೇಶದಾದ್ಯಂತ ಸ್ಪಂದನೆ ದೊರೆಯಿತು. ಹಜಾರೆ ಅವರ ಹೋರಾಟದ ನಂತರ ಕೇಂದ್ರ ಸರ್ಕಾರ ಲೋಕಪಾಲ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿ, ಅನುಮೋದನೆ ಪಡೆಯಿತು. ಮಸೂದೆಗೆ ಅನುಮೋದನೆ ಸಿಕ್ಕಿದ್ದು 2013ರಲ್ಲಿ. 2014ರ ಜನವರಿ 16ರಂದು ಇದು ಕಾಯ್ದೆಯಾಗಿ ಜಾರಿಗೆ ಬಂತು. ಆದರೆ, ಇದುವರೆಗೂ ಲೋಕಪಾಲರ ಅಥವಾ ಲೋಕಪಾಲ ಸಂಸ್ಥೆಗೆ ಇತರ ಸದಸ್ಯರ ನೇಮಕ ಆಗಿಲ್ಲ. ಇದರ ಹಿನ್ನೆಲೆಯ ಕುರಿತು ಒಂದು ನೋಟ ಇಲ್ಲಿದೆ:

ಲೋಕಪಾಲ ನೇಮಕ ವಿಚಾರ ಕೋರ್ಟ್‌ ಅಂಗಳಕ್ಕೆ ಹೋಗಿರುವುದು ಏಕೆ?

ಲೋಕಪಾಲರನ್ನು ಹಾಗೂ ಲೋಕಪಾಲ ಸಂಸ್ಥೆಗೆ ಇತರ ಸದಸ್ಯರನ್ನು ನೇಮಕ ಮಾಡುವಂತೆ ಆಗ್ರಹಿಸಿ, ಕಾಮನ್‌ ಕಾಸ್‌ ಎನ್ನುವ ಸ್ವಯಂಸೇವಾ ಸಂಸ್ಥೆ ಹಾಗೂ ಇತರ ಕೆಲವು ಗುಂಪುಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ‘ಈಗಿರುವ ಕಾಯ್ದೆಯು ಕಾರ್ಯರೂಪಕ್ಕೆ ತರಲು ಅತ್ಯಂತ ಸೂಕ್ತವಾಗಿದೆ.

ಕಾಯ್ದೆಯಲ್ಲಿ ಕೆಲವು ಬದಲಾವಣೆಗಳು ಆಗಬೇಕು ಎಂದು ಕಾದು ಕುಳಿತು, ಬದಲಾವಣೆಗಳು ಆಗುವವರೆಗೆ ಕಾಯ್ದೆಯನ್ನು ಜಾರಿಗೊಳಿಸದೆ ಇರಲು ಸರ್ಕಾರಕ್ಕೆ ಸಮರ್ಥನೆಗಳು ಇಲ್ಲ’ ಎಂದು 2017ರ ಏಪ್ರಿಲ್‌ನಲ್ಲಿ ನೀಡಿದ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿತ್ತು. ಹೀಗಿದ್ದರೂ, ಲೋಕಪಾಲರ ನೇಮಕ ಆಗಿಲ್ಲ ಎಂದು ಕಾಮನ್‌ ಕಾಸ್‌ ಸಂಸ್ಥೆಯು ಸುಪ್ರೀಂ ಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಿದೆ. ಇದರ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌, ಸರ್ಕಾರದ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

2017ರ ತೀರ್ಪಿನಲ್ಲಿ ಕೋರ್ಟ್‌ ಏನು ಹೇಳಿತ್ತು?

ಲೋಕಪಾಲರನ್ನಾಗಿ ಯಾರನ್ನು ನೇಮಕ ಮಾಡಬಹುದು ಎಂಬ ಶಿಫಾರಸನ್ನು ‘ಆಯ್ಕೆ ಸಮಿತಿ’ಯು ರಾಷ್ಟ್ರಪತಿಗೆ ಕಳುಹಿಸಬೇಕು. ಆಯ್ಕೆ ಸಮಿತಿಗೆ ಪ್ರಧಾನಿ ಅಧ್ಯಕ್ಷರಾಗಿರುತ್ತಾರೆ. ಲೋಕಸಭೆಯ ಸ್ಪೀಕರ್, ಲೋಕಸಭೆಯ ವಿರೋಧ ಪಕ್ಷದ ನಾಯಕ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಹಾಗೂ ಒಬ್ಬ ಹಿರಿಯ ನ್ಯಾಯಶಾಸ್ತ್ರಜ್ಞ ಈ ಸಮಿತಿಯ ಸದಸ್ಯರಾಗಿರುತ್ತಾರೆ (ಸಿಜೆಐ ಅವರಿಗೆ, ಸುಪ್ರೀಂ ಕೋರ್ಟ್‌ನ ಇತರ ಯಾವುದೇ ಒಬ್ಬ ನ್ಯಾಯಮೂರ್ತಿಯನ್ನು ತಮ್ಮ ಪರವಾಗಿ ಕಳುಹಿಸಿಕೊಡುವ ಅಧಿಕಾರ ಇದೆ).

‘ಆಯ್ಕೆ ಸಮಿತಿ’ಯು ಲೋಕಪಾಲ ಹಾಗೂ ಸದಸ್ಯರ ನೇಮಕಕ್ಕೆ ಹೆಸರುಗಳನ್ನು ಸಿದ್ಧಪಡಿಸಿಕೊಡಲು ಒಂದು ‘ಶೋಧನಾ ಸಮಿತಿ’ ರಚಿಸಬೇಕು. ಮೊದಲೇ ಹೇಳಿದಂತೆ ಇದನ್ನೆಲ್ಲ ವಿವರಿಸುವ ಈ ಕಾಯ್ದೆ ಜಾರಿಗೆ ಬಂದಿದ್ದು 2014ರ ಜನವರಿಯಲ್ಲಿ.

2014ರಲ್ಲಿ ನಡೆದ ಲೋಕಸಭಾ ಚುನಾವಣೆ ನಂತರ, ಕೇಂದ್ರದಲ್ಲಿ ಸರ್ಕಾರ ಬದಲಾಯಿತು. ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನ ಯಾರಿಗೂ ಸಿಗಲಿಲ್ಲ. ಕಾಂಗ್ರೆಸ್ ಪಕ್ಷವು ಅತಿದೊಡ್ಡ ವಿರೋಧ ಪಕ್ಷ ಎಂಬಷ್ಟಕ್ಕೇ ತೃಪ್ತಿಪ‍ಡಬೇಕಾಯಿತು. ಲೋಕಸಭೆಯ ವಿರೋಧ ಪಕ್ಷದ ನಾಯಕ, ಲೋಕಪಾಲ ‘ಆಯ್ಕೆ ಸಮಿತಿ’ಯ ಸದಸ್ಯ ಕೂಡ ಹೌದು. ಆದರೆ, ‘ಲೋಕಸಭೆಯ ವಿರೋಧ ಪಕ್ಷದ ನಾಯಕ’ ಎಂಬ ಸ್ಥಾನವೇ ಹಾಲಿ ಲೋಕಸಭೆಯಲ್ಲಿ ಇಲ್ಲ. ಇಂತಹ ಸ್ಥಿತಿಯು ನೇಮಕಾತಿ ಪ್ರಕ್ರಿಯೆಗೆ ಸಮಸ್ಯೆ ತಂದೊಡ್ಡುತ್ತದೆ ಎಂಬ ವಾದ ಕೇಳಿಬಂತು.

ಆದರೆ, ಲೋಕಪಾಲ ಕಾಯ್ದೆಯ ಸೆಕ್ಷನ್‌ 4(2) ಪ್ರಕಾರ, ಆಯ್ಕೆ ಸಮಿತಿಯಲ್ಲಿ ಒಂದು ಸ್ಥಾನ ಖಾಲಿ ಇದೆ ಎಂದಮಾತ್ರಕ್ಕೆ ಲೋಕಪಾಲ ಅಥವಾ ಲೋಕಪಾಲ ಸಂಸ್ಥೆಯ ಸದಸ್ಯರ ನೇಮಕಗಳು ಅಸಿಂಧು ಆಗುವುದಿಲ್ಲ. ಇದನ್ನೆಲ್ಲ ಗಮನಿಸಿದ ಸುಪ್ರೀಂ ಕೋರ್ಟ್‌, ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರ ಮಾತನ್ನು ಉಲ್ಲೇಖಿಸಿ 2017ರ ತೀರ್ಪಿನಲ್ಲಿ ‘ಇದು ಅತ್ಯಂತ ಚೆನ್ನಾಗಿ ಕಾರ್ಯರೂಪಕ್ಕೆ ತರಬಲ್ಲಂತಹ ಕಾಯ್ದೆ’ ಎಂದು ಹೇಳಿತು. ಅಂದರೆ, ಕೋರ್ಟ್‌ ಸ್ಪಷ್ಟಪಡಿಸಿರುವ ಪ್ರಕಾರ, ಲೋಕಪಾಲರ ನೇಮಕಕ್ಕೆ ಕಾನೂನಿನ ಅಡೆತಡೆ ಇಲ್ಲ. ಆದರೆ, ಲೋಕಪಾಲರ ನೇಮಕ ಹಾಗೂ ಲೋಕಪಾಲ ಸಂಸ್ಥೆಗೆ ಇತರ ಸದಸ್ಯರ ನೇಮಕ ಇದುವರೆಗೆ ಆಗಿಲ್ಲ.

ಲೋಕಪಾಲ ನೇಮಕ ಆಗಿಲ್ಲದಿರುವುದಕ್ಕೆ ಯಾರು ಏನು ಕಾರಣ ನೀಡುತ್ತಿದ್ದಾರೆ?

ಲೋಕಪಾಲ ಕಾಯ್ದೆಯ ಕೆಲವು ಸೆಕ್ಷನ್‌ಗಳನ್ನು ಇನ್ನಷ್ಟು ಅರ್ಥಪೂರ್ಣವಾಗುವಂತೆ ಮಾಡಲು ತಿದ್ದುಪಡಿ ಮಸೂದೆಯೊಂದು 2014ರ ಡಿಸೆಂಬರ್‌ನಿಂದಲೂ ದೂಳು ತಿನ್ನುತ್ತ ಬಿದ್ದಿದೆ. ಇದು ಈ ಕಾಯ್ದೆಯನ್ನು ಜಾರಿಗೆ ತರುವಲ್ಲಿ ಕಾರ್ಯಾಂಗ ಹಾಗೂ ಶಾಸಕಾಂಗಕ್ಕೆ ಮನಸ್ಸು ಇಲ್ಲದಿರುವುದನ್ನು ತೋರಿಸುತ್ತದೆ.

ಈಗಿನ ಲೋಕಸಭೆಯಲ್ಲಿ ‘ವಿರೋಧ ಪಕ್ಷದ ನಾಯಕ’ ಇಲ್ಲದಿರುವ ಕಾರಣ, ಕಾಯ್ದೆಯ ಸೆಕ್ಷನ್‌ 4ರಲ್ಲಿ ತಿದ್ದುಪಡಿ ತಂದು ‘ಲೋಕಸಭೆಯ ಅತಿದೊಡ್ಡ ವಿರೋಧ ಪಕ್ಷದ ನಾಯಕ’ ಆಯ್ಕೆ ಸಮಿತಿಯ ಸದಸ್ಯ ಆಗಬಹುದು ಎಂಬ ನಿಯಮ ತರಬೇಕು ಎನ್ನುವುದು ಕೂಡ ಲೋಕಪಾಲರನ್ನು ನೇಮಕ ಮಾಡದಿರುವುದಕ್ಕೆ ಒಂದು ನೆಪ ಅಷ್ಟೇ ಎಂದು ಹಿರಿಯ ವಕೀಲ ಶಾಂತಿ ಭೂಷಣ್ ಅವರು ಈಗಾಗಲೇ ಹೇಳಿದ್ದಾರೆ. ಅವರು ಕಾಮನ್‌ ಕಾಸ್‌ ಸಂಸ್ಥೆ ಪರವಾಗಿ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು.

ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೂ ಈ ವಿಚಾರದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಸರ್ಕಾರವು ನಾಲ್ಕು ವರ್ಷ ಕಳೆದರೂ ಲೋಕಪಾಲರನ್ನು ನೇಮಕ ಮಾಡಿಲ್ಲ’ ಎಂದು ಅವರು ಹೇಳಿದ್ದಾರೆ. ಅಲ್ಲದೆ, ತಮ್ಮನ್ನು ‘ಆಯ್ಕೆ ಸಮಿತಿ’ ಸಭೆಗೆ ‘ವಿಶೇಷ ಆಮಂತ್ರಿತ’ರಾಗಿ ಬರುವಂತೆ ಸರ್ಕಾರ ನೀಡಿರುವ ಆಹ್ವಾನವನ್ನು ತಿರಸ್ಕರಿಸಿರುವ ಖರ್ಗೆ, ‘ವಿಶೇಷ ಆಮಂತ್ರಿತರು ಆಯ್ಕೆ ಸಮಿತಿಯ ಭಾಗ ಆಗುವುದಕ್ಕೆ ಕಾಯ್ದೆಯಲ್ಲಿ ಅವಕಾಶ ಇಲ್ಲ. ಇದು ಸರ್ಕಾರಕ್ಕೆ ಗೊತ್ತಿದೆ. ಆಯ್ಕೆ ಸಮಿತಿಯ ಪ್ರಕ್ರಿಯೆಗಳಲ್ಲಿ ಮತ ಚಲಾಯಿಸುವ ಅಧಿಕಾರ ಕೊಡದೆಯೇ, ವಿಶೇಷ ಆಮಂತ್ರಿತ ಎಂದು ಕರೆಯುವುದು ದೇಶದ ಜನರ ದಿಕ್ಕುತಪ್ಪಿಸುವಂತಹ ಕೆಲಸ’ ಎಂದೂ ಖರ್ಗೆ ಹೇಳಿದ್ದಾರೆ.

ಲೋಕಪಾಲರನ್ನು ನೇಮಕ ಮಾಡುವುದು ಸಂಕೀರ್ಣವಾದ ಪ್ರಕ್ರಿಯೆ ಎಂದು ಸರ್ಕಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿನಿಧಿಸುತ್ತಿರುವ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್‌ ಹೇಳಿದ್ದಾರೆ. ಅಲ್ಲದೆ, ‘ಲೋಕಪಾಲರ ನೇಮಕಕ್ಕೆ ಶೋಧನಾ ಸಮಿತಿಯನ್ನು ಅಂತಿಮಗೊಳಿಸಲು ತುಸು ಸಮಯ ಬೇಕಾಗುತ್ತದೆ. ನೇಮಕ ಪ್ರಕ್ರಿಯೆಯು ಎಲ್ಲರನ್ನೂ ಒಳಗೊಳ್ಳುವಂತೆ ಇರಬೇಕು. ಲೋಕಪಾಲ ಸ್ಥಾನಕ್ಕೆ ಸೂಚಿತವಾಗುವ ಹೆಸರುಗಳನ್ನು ತೀರಾ ಸೂಕ್ಷ್ಮವಾಗಿ ಪರಾಮರ್ಶೆಗೆ ಒಳಪಡಿಸಬೇಕು’ ಎಂದೂ ಅವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.