ಸೈನ್ಯವನ್ನು ಬಂಡವಾಳ ಮಾಡಿಕೊಂಡ ಬಿಜೆಪಿಗರು: ಸಚಿವ ಎಂ.ಬಿ.ಪಾಟೀಲ ವಾಗ್ದಾಳಿ

ಮಂಗಳವಾರ, ಏಪ್ರಿಲ್ 23, 2019
25 °C

ಸೈನ್ಯವನ್ನು ಬಂಡವಾಳ ಮಾಡಿಕೊಂಡ ಬಿಜೆಪಿಗರು: ಸಚಿವ ಎಂ.ಬಿ.ಪಾಟೀಲ ವಾಗ್ದಾಳಿ

Published:
Updated:

ವಿಜಯಪುರ: ‘ಐದು ವರ್ಷದಿಂದ ತಮ್ಮಲ್ಲಿದ್ದ ಸುಳ್ಳು ಭರವಸೆಯ ಮೂಟೆ ಖಾಲಿ ಮಾಡಿಕೊಂಡಿರುವ ಬಿಜೆಪಿಗರು, ಇದೀಗ ದೇಶದ ಹೆಮ್ಮೆಯ ಸೈನ್ಯವನ್ನು ತಮ್ಮ ಬಂಡವಾಳ ಮಾಡಿಕೊಳ್ಳಲು ಮುಂದಾಗಿದ್ದಾರೆ’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ವಾಗ್ದಾಳಿ ನಡೆಸಿದರು.

‘ಚುನಾವಣೆ ರಾಜಕೀಯಕ್ಕಾಗಿ ಸೈನ್ಯವನ್ನು ತರುತ್ತಿರುವುದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲು. ಬಿಜೆಪಿಯ ಮುಖ್ಯಮಂತ್ರಿಯೇ ಇದನ್ನು ಹೇಳಿದ್ದು ನಾಚಿಕೆಗೇಡು’ ಎಂದು ಗುರುವಾರ ನಗರದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ಜಿಲ್ಲೆಯ ಜನರು ಪ್ರಧಾನಿ ಮೋದಿ, ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಬಿಜೆಪಿ ವಿರುದ್ಧ ಬೇಸರಗೊಂಡಿದ್ದು, ನಮ್ಮ ಮೈತ್ರಿ ಅಭ್ಯರ್ಥಿ ಸುನೀತಾ ಚವ್ಹಾಣ 1 ಲಕ್ಷ ಮತಗಳ ಅಂತರದಿಂದ ಗೆಲುವು ದಾಖಲಿಸಲಿದ್ದಾರೆ’ ಎಂದು ಗೃಹ ಸಚಿವರು ತಿಳಿಸಿದರು.

ಗೆಲುವು ನಮ್ಮದೇ: ‘ವಿಜಯಪುರ, ಬಾಗಲಕೋಟೆ ಲೋಕಸಭಾ ಕ್ಷೇತ್ರಗಳಲ್ಲಿ ಮೈತ್ರಿ ಕೂಟ ಹೆಣ್ಮಕ್ಕಳಿಗೆ ಅವಕಾಶ ಕೊಟ್ಟಿದೆ. ಬಹುಸಂಖ್ಯಾತರಿರುವ ಮಹಿಳೆಯರು ನಮ್ಮನ್ನು ಬೆಂಬಲಿಸಿ, ಗೆಲುವು ನೀಡಲಿದ್ದಾರೆ’ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದರು.

‘ಅಟಲ್‌ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಅಡ್ವಾಣಿ ಕಾಲದ ಬಿಜೆಪಿ ಮೂಲೆ ಗುಂಪಾಗಿದೆ. ಇದೀಗ ನರೇಂದ್ರ ಮೋದಿ ಬಿಜೆಪಿಯಷ್ಟೇ ಇದೆ’ ಎಂದು ಶಿವಾನಂದ ಲೇವಡಿ ಮಾಡಿದರು.

‘ಚಲವಾದಿಗಳ ಬಗ್ಗೆ ಕಾಂಗ್ರೆಸ್ಸಿಗರನ್ನೇ ಪ್ರಶ್ನಿಸಲಾಗುತ್ತಿದೆ. ನಾವು ನಡೆಸಿದ ಯತ್ನವನ್ನು ಇಲ್ಲಿ ಹೇಳಲಾಗಲ್ಲ. ನಮ್ಮನ್ನು ಕೇಳುವ ಪ್ರಶ್ನೆಯನ್ನು ಬಿಜೆಪಿಗರನ್ನು ಕೇಳಲಿ. ದಲಿತ ಬಲಗೈ ಸಮಾಜದ ಜತೆ ನಾವಿದ್ದೇವೆ’ ಎಂದು ಸಚಿವ ಶಿವಾನಂದ ಪಾಟೀಲ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಯಶವಂತರಾಯಗೌಡ ಪಾಟೀಲ ಮಾತನಾಡಿ ‘ಚಲವಾದಿ ಸಮಾಜವನ್ನು ಕಾಂಗ್ರೆಸ್ ಸದಾ ಗೌರವಿಸುತ್ತದೆ. ಚಲವಾದಿ ಸಮಾಜಕ್ಕೆ ಪ್ರಾತಿನಿಧ್ಯ ದೊರಕಿಸಬೇಕು ಎಂಬುದೇ ನಮ್ಮ ಆಶಯವಾಗಿತ್ತು. ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಪಕ್ಷ ಚಲವಾದಿ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಲಿದೆ’ ಎಂದರು.

‘ಸಾಲ ಮನ್ನಾ ಪ್ರಯೋಜನ ಉತ್ತರ ಕರ್ನಾಟಕಕ್ಕೆ ಸಿಂಹಪಾಲು ದೊರಕಿದೆ. ನಮ್ಮದು ಉದ್ರಿ ಸರ್ಕಾರವಲ್ಲ. ನಗದಿ ಸರ್ಕಾರ’ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ ‘ವರ್ಷದ ಹಿಂದೆ ನಾವು ನಾವೇ ಟೀಕೆ ಮಾಡಿಕೊಂಡಿದ್ದೆವು. ಆದರೆ ಇದೀಗ ರಾಷ್ಟ್ರ, ರಾಜ್ಯಕ್ಕಾಗಿ ಒಂದಾಗಿದ್ದೇವೆ. ವಿಜಯಪುರದ ಚಿತ್ರಣ ನಮ್ಮ ಪರವಾಗಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !