ಮಂಗಳವಾರ, ಏಪ್ರಿಲ್ 20, 2021
29 °C
ವೃತ್ತಿ ರಂಗಭೂಮಿ ಹಿರಿಯ ನಟಿ ಮಾಲತಿ ಸುಧೀರ್‌ ಜತೆ ಮಾತುಕತೆ

ಕಲೆಯ ಹಾದಿಯಲ್ಲಿ ಕಣ್ಣೀರ ಪಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ವೃತ್ತಿ ರಂಗಭೂಮಿ ಕಲಾವಿದರಿಗೊಂದು ಬದುಕು ಕಟ್ಟಿಕೊಡಲು ಪತಿ ಸುಧೀರ್‌ ‘ಕರ್ನಾಟಕ ಕಲಾ ವೈಭವ ಸಂಘ’ ಎಂಬ ಕಂಪನಿ ಸ್ಥಾಪಿಸಿದರು. ಅವರ ನಿಧನದ ನಂತರ, ಈ ಕಂಪನಿ ಉಳಿಸಿಕೊಳ್ಳಲು ನನ್ನ ಕೈಲಿದ್ದ ಹಣವನ್ನೆಲ್ಲ ಕಳೆದುಕೊಳ್ಳಬೇಕಾಯಿತು. ಆದರೂ, ಛಲಬಿಡದೆ ಕಂಪನಿ ಕಟ್ಟಿ ಬೆಳೆಸಿದೆ..’

ವೃತ್ತಿ ರಂಗಭೂಮಿ ಹಿರಿಯ ನಟಿ ಮಾಲತಿ ಸುಧೀರ್‌ ತಮ್ಮ ಕಲಾ ಪಯಣದ ಬಗ್ಗೆ ಹೇಳಿಕೊಂಡಿದ್ದು ಹೀಗೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ `ಮನೆಯಂಗಳದಲ್ಲಿ ಮಾತುಕತೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ಕಲಾಸಂಘ ಸ್ಥಾಪಿಸಿ ಒಂದು ವರ್ಷದಲ್ಲಿಯೇ ಸುಧೀರ್‌ ನಮ್ಮನ್ನು ಅಗಲಿದರು. ಆಗ ಕಂಪನಿ ಉಳಿಸಿಕೊಳ್ಳಲು ನಾನು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಮನೆ, ನಿವೇಶನ, ಆಸ್ತಿ ಕಳೆದುಕೊಳ್ಳಬೇಕಾಯಿತು. ನಾಟಕ ಕಂಪನಿಯೊಂದನ್ನು ಮಹಿಳೆ ಮುನ್ನಡೆಸಿಕೊಂಡು ಹೋಗುವುದು ಸುಲಭದ ಮಾತಲ್ಲ’ ಎನ್ನುತ್ತಾ ಅವರು ಭಾವುಕರಾದರು.

ಜಿರಲೆಗೆ ಹೆದರುತ್ತಿದ್ದ ಸುಧೀರ್‌!
ತೆರೆಯ ಮೇಲೆ ಖಳನಟನ ಪಾತ್ರದಲ್ಲಿ ಆರ್ಭಟಿಸುತ್ತಿದ್ದ ಸುಧೀರ್‌, ಜಿರಲೆ ಮತ್ತು ನಾಯಿಗೆ ತುಂಬಾ ಹೆದರುತ್ತಿದ್ದರು ಎಂಬ ಸ್ವಾರಸ್ಯಕರ ವಿಷಯವನ್ನು ಮಾಲತಿ ಹಂಚಿಕೊಂಡರು. ‘ಸುಧೀರ್‌ ಮುಗ್ಧ ಮನಸಿನವರಾಗಿದ್ದರು. ಅವರು ಎಂದೂ ಮದ್ಯಪಾನ ಮಾಡಿದವರಲ್ಲ. ಆದರೆ, ಕುಡುಕನ ಪಾತ್ರಗಳಲ್ಲಿಯೇ ಹೆಚ್ಚು ಗಮನ ಸೆಳೆದರು’ ಎಂದರು. 

ರಂಗಭೂಮಿ ಉಳಿವಿಗೆ ಶ್ರಮಿಸಬೇಕು: ‘ವೃತ್ತಿರಂಗಭೂಮಿ ಕ್ಷೇತ್ರ ಇಂದು ಅಪಾಯದಲ್ಲಿದೆ. ಅಲ್ಲಿ ಬಹುತೇಕರು ವಿದ್ಯಾವಂತರಲ್ಲ. ಆದರೆ, ಬುದ್ಧಿವಂತರು. ಅವರಿಗೆ ಒಂದು ಬದುಕು ಕಲ್ಪಿಸಲು ಸರ್ಕಾರ ಹೊಸ ಕಾರ್ಯಕ್ರಮ ರೂಪಿಸಬೇಕು. ವೃತ್ತಿ ರಂಗಭೂಮಿ ಉಳಿಸಲು, ಹವ್ಯಾಸಿ ರಂಗಭೂಮಿಯೊಂದಿಗೆ ಸಂಬಂಧ ಬೆಸೆಯಬೇಕು’ ಎಂದು ಮಾಲತಿ ಮನವಿ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು