ಭಾನುವಾರ, ಏಪ್ರಿಲ್ 11, 2021
21 °C
ಸಂದರ್ಶನ

‘ರಾಜಾಹುಲಿ’ ನಟಿ ‘ಒಂಟಿ’ಯಲ್ಲ

ಕೆ.ಎಂ. ಸಂತೋಷ್‌ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ನಟ ಚಿರಂಜೀವಿ ಸರ್ಜಾ ಮಡದಿ, ‘ರಾಜಾಹುಲಿ’ ಖ್ಯಾತಿಯ ಮೇಘನಾರಾಜ್‌ ಕನ್ನಡ ಚಿತ್ರರಂಗದಲ್ಲಿ ಎರಡನೇ ಇನಿಂಗ್ಸ್‌ ಶುರು ಮಾಡಿದ್ದಾರೆ. ಈಗ ಅವರು ಒಂದು ರೀತಿಯಲ್ಲಿ ಬಿಡುವಿಲ್ಲದ ನಟಿ ಎನ್ನಲೂಬಹುದು. ಮದುವೆಯ ನಂತರ ಸ್ವಲ್ಪ ಕಾಲ ನಟನೆ, ನಿರ್ಮಾಣದಿಂದ ದೂರವಿದ್ದಂತೆ ಇದ್ದರು. ನಟಿಯರು ಮದುವೆಯಾದ ತಕ್ಷಣ ಅವರ ವೃತ್ತಿ ಬದುಕು ಬಹುತೇಕ ಮುಗದೇ ಹೋಯಿತು, ಮದುವೆಯಾದ ನಟಿಗೆ ನಾಯಕಿ ಪಾತ್ರ ಮರೀಚಿಕೆ, ಏನಿದ್ದರೂ ಅಕ್ಕ, ತಂಗಿ, ಅಥವಾ ಇನ್ಯಾವುದೋ ಪೋಷಕ ನಟಿ ಪಾತ್ರಕ್ಕೆ ಸೀಮಿತಗೊಳಿಸುವ ಮನಸ್ಥಿತಿಯೂ ಚಿತ್ರರಂಗ ಆವರಿಸಿಕೊಂಡಿದೆ. ಅಂತಹ ಟ್ರೆಂಡ್‌ ಅನ್ನು ಮುರಿದು ಮುನ್ನುಗ್ಗುತ್ತಿರುವ ನಟಿಯರ ಪೈಕಿ ಮೇಘನಾ ರಾಜ್‌ ಕೂಡ ಒಬ್ಬರಾಗಿ, ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಸ್ವತಃ ನಿರ್ಮಾಪಕಿಯೂ ಆಗಿರುವ ಮೇಘನಾರಾಜ್‌ ಅಭಿನಯದ ಒಂಟಿ ಸಿನಿಮಾ ಈ ವಾರ ತೆರೆಗೆ ಬರಲು ಸಜ್ಜಾಗಿದೆ. ಅದರ ಜತೆಗೆ ಮತ್ತೆರಡು ಹೊಸ ಸಿನಿಮಾಗಳು ಅವರ ಮುಂದೆ ಇವೆ. ತಮ್ಮ ಸಿನಿ ಕೆರಿಯರ್‌ನ ಎರಡನೇ ಇನಿಂಗ್ಸ್‌ ಬಗ್ಗೆ ಮೇಘನಾರಾಜ್‌ ‘ಸಿನಿಮಾ ಪುರವಣಿ’ಯೊಂದಿಗೆ ಅನಿಸಿಕೆ ಹಂಚಿಕೊಂಡಿದ್ದಾರೆ.

ಮದುವೆಯಾದರೆ ಅವಕಾಶಗಳು ಕ್ಷೀಣಿಸುತ್ತವೆಯೇ? ಎನ್ನುವ ಬಗ್ಗೆಯೇ ಮಾತಿಗಿಳಿದ ಮೇಘನಾರಾಜ್‌, ಅಂತಹ ಟ್ರೆಂಡ್‌ ಇರುವುದು ಸುಳ್ಳಲ್ಲ. ಜನರಿಗೂ ಅದೇ ಕಲ್ಪನೆ ಇದೆ. ಆ ಕಲ್ಪನೆಯನ್ನು ಹುಸಿಗೊಳಿಸಿದ, ಆ ಟ್ರೆಂಡ್‌ ಅನ್ನು ಮುರಿದ ಹೆಮ್ಮೆ ನನಗೂ ಇದೆ. ನಟಿಸಲು ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಸಿನಿಮಾ ನಿರ್ಮಿಸಲು ಸಾಕಷ್ಟು  ಅವಕಾಶಗಳೂ ಇವೆ ಎಂದು ಹೇಳಿಕೊಳ್ಳಲು ಖುಷಿಯೂ ಇದೆ ಎನ್ನುತ್ತಾರೆ.

ಈ ವಾರ ತೆರೆಗೆ ಬರಲಿರುವ ‘ಒಂಟಿ’ ಸಿನಿಮಾದ ಬಗ್ಗೆಯೂ ಮಾತು ವಿಸ್ತರಿಸಿದ ಈ ನಟಿ, ‘ಇದರಲ್ಲಿ ನನ್ನದು ಕೆಳ ಮಧ್ಯಮ ವರ್ಗದ ಮಹಿಳೆಯ ಪಾತ್ರ. ತಂದೆ ಇಲ್ಲದ, ತಾಯಿ ಮಡಿಲಲ್ಲಿ ಬೆಳೆದ ಹೆಣ್ಣುಮಗಳ ಪಾತ್ರ. ಮೇಲ್ವರ್ಗದ ಹೆಣ್ಣುಮಕ್ಕಳು ಏನೂ ಮಾಡಿದರೂ ಅದು ಓಕೆ, ಆದರೆ, ಅದೇ ಕೆಳಮಧ್ಯಮ ವರ್ಗದ ಹೆಣ್ಣುಮಕ್ಕಳು ಆ ರೀತಿ ನಡೆದುಕೊಂಡರೆ ಸಮಾಜ ಹೇಗೆ ನೋಡುತ್ತದೆ, ಒಂಟಿತನದ ತೊಳಲಾಟಗಳು ಹೇಗಿರುತ್ತವೆ ಎನ್ನುವುದನ್ನು ಈ ಪಾತ್ರ ಕಟ್ಟಿಕೊಡುತ್ತದೆ. ಇದು ಮಾಸ್‌ ಎಂಟರ್‌ಟೈನ್‌ಮೆಂಟ್‌ ಸಿನಿಮಾ. ಪ್ರೇಕ್ಷಕರಿಗೆ ಖಂಡಿತಾ ಇಷ್ಟವಾಗುತ್ತದೆ’ ಎನ್ನುತ್ತಾರೆ.

‘ನನ್ನ ಕೈಯಲ್ಲಿ ಇನ್ನೂ ಎರಡು ಪ್ರಾಜೆಕ್ಟ್‌ಗಳಿವೆ. ಉಪೇಂದ್ರ ನಟನೆಯ ಬುದ್ಧಿವಂತ–2 ಸಿನಿಮಾದಲ್ಲಿ ನನ್ನದು ವಕೀಲೆಯ ಪಾತ್ರ. ನಮ್ಮ ಕುಟುಂಬದ ವಕೀಲರೊಂದಿಗೂ ಪಾತ್ರದ ಬಗ್ಗೆ ಚರ್ಚಿಸಿದ್ದೇನೆ. ಅದು ಸಾಮಾನ್ಯ ವಕೀಲೆಯ ಪಾತ್ರವಾಗಬಾರದು. ಅದೊಂದು ಪರಿಣಾಮಕಾರಿ ಪಾತ್ರವಾಗಬೇಕೆನ್ನುವುದು ನನ್ನಾಸೆ. ಹಾಗಾಗಿ ಅದಕ್ಕೆ ಸಾಕಷ್ಟು ತಯಾರಿ ಮಾಡುತ್ತಿದ್ದೇನೆ’ ಎಂದು ಹೇಳುವುದನ್ನು ಮರೆಯಲಿಲ್ಲ.

ಸಿನಿಮಾ ನಿರ್ಮಾಣದತ್ತ ಮಾತು ಹೊರಳಿದಾಗ, ‘ಸಿನಿಮಾ ನಿರ್ಮಾಣ ಬಹಳ ದೊಡ್ಡ ಜವಾಬ್ದಾರಿಯ ಕೆಲಸ. ನನ್ನದೇ ಪ್ರೊಡಕ್ಷನ್‌ ಹೌಸ್‌ ಇದೆ. ನಾನು ಮಾಡುವ ಸಿನಿಮಾಗಳು ಕಮರ್ಷಿಯಲ್‌ ಸಿನಿಮಾಗಳೇ ಆಗಿರುತ್ತವೆ. ನಾನಂತು ಅವಾರ್ಡ್‌ಗಾಗಿ ಸಿನಿಮಾ ಮಾಡುವ ಉದ್ದೇಶವಿಟ್ಟುಕೊಂಡಿಲ್ಲ. ಒಂದು ವೇಳೆ ನಾನು ಮಾಡಿದಂತಹ ಸಿನಿಮಾಗಳಿಗೆ ಅವಾರ್ಡ್‌ ಬಂದರೆ ಅದು ಬೋನಸ್‌ ಎಂದು ಭಾವಿಸುತ್ತೇನೆ’ ಎಂದರು.

ನಟಿಯಾಗಿ ರೂಪುಗೊಂಡ ಗುಟ್ಟನ್ನು ಬಿಚ್ಚಿಟ್ಟ ಮೇಘನಾರಾಜ್, ‘ ನನ್ನ ಅಪ್ಪ ಸುಂದರ್‌ ರಾಜ್‌, ಅಮ್ಮ ಪ್ರಮಿಳಾ ಜೋಷಾಯ್‌ ಇಬ್ಬರೂ ರಂಗಭೂಮಿ ಕಲಾವಿದರು. ನಟನೆ ನನಗೆ ರಕ್ತಗತವಾಗಿದೆ. ಹಾಗಾಗಿ ಚಿಕ್ಕಂದಿನಿಂದಲೇ ಅಭಿನಯದತ್ತ ಆಸಕ್ತಿ ಮೂಡಿತ್ತು. ಅದಕ್ಕೆ ರಂಗಭೂಮಿ ನಂಟು ನೀರೆರೆಯಿತು. ರಂಗಭೂಮಿಯನ್ನು ಯಾವತ್ತೂ ಒಂದು ವೃತ್ತಿಯಾಗಿ ನೋಡಲೇ ಇಲ್ಲ. ಇವತ್ತಿಗೂ ರಂಗವೇದಿಕೆ ಮೇಲೆ ನಿಂತು ಒಂದು ನಾಟಕದಲ್ಲಿ ಅಭಿನಯಿಸಬೇಕೆಂದರೆ ಮೈನಡುಕ ಬರುತ್ತದೆ. ನನಗೆ ಸಿನಿಮಾ ನಟಿಯಾಗಬೇಕೆನ್ನುವ ಆಸೆ, ಗುರಿ ಚಿಕ್ಕಂದಿನಿಂದಲೇ ಮನಸಿನಲ್ಲಿತ್ತು. ಆದರೆ, ನಾನು ಡಾಕ್ಟರ್‌ ಆಗ್ತೀನಿ ಅಂಥಾ ಎಲ್ಲರ ಎದುರು ನಾಟಕ ಮಾಡುತ್ತಿದ್ದೆ’ ಎನ್ನುತ್ತಾರೆ.

ತವರುಮನೆ ಮತ್ತು ಗಂಡನಮನೆ ಎರಡೂ ಸೆಲೆಬ್ರಿಟಿಗಳಿಂದ ತುಂಬಿರುವ ಕುಟುಂಬಗಳು. ಇದನ್ನು ಹೇಗೆ ನಿರ್ವಹಿಸುತ್ತೀರಿ ಎನ್ನುವ ಪ್ರಶ್ನೆ ಮುಂದಿಟ್ಟಾಗ, ‘ನಾವು ಸೆಲೆಬ್ರಿಟಿಗಳಾಗಿದ್ದರೂ, ಮನೆಯ ಮೆಟ್ಟಿಲು ತುಳಿದ ತಕ್ಷಣ ಸೆಲೆಬ್ರಿಟಿಗಳೆನ್ನುವ ಹಮ್ಮುಬಿಮ್ಮು ಇರುವುದಿಲ್ಲ. ಮನೆಯಲ್ಲಿ ಎಲ್ಲರೂ ಸಾಮಾನ್ಯರೇ. ಆದರೆ, ಬೆಳಿಗ್ಗೆ ಹಾಸಿಗೆಯಿಂದ ಏಳುವಾಗಿನಿಂದ ರಾತ್ರಿ ಮಲಗುವವರೆಗೂ ಬರೀ ಸಿನಿಮಾ ಸಿನಿಮಾ ಸಿನಿಮಾ. ಸಿನಿಮಾ ಬಗ್ಗೆಯೇ ನಮ್ಮೆಲ್ಲರ ಚರ್ಚೆ, ಆಲೋಚನೆಗಳು ಆವರಿಸುತ್ತವೆ. ಪತಿ ಚಿರಂಜೀವಿ ಸರ್ಜಾ ಮನೆಯಲ್ಲಿ ಇದ್ದರೆ ದಿನಕ್ಕೆ ಕನಿಷ್ಠ ಎರಡು ಸಿನಿಮಾ ನೋಡುತ್ತಾರೆ. ನಾನೂ ಸಹ ಕನಿಷ್ಠ ಒಂದಾದರೂ ಸಿನಿಮಾ ನೋಡಿಯೇ ನೋಡಿರುತ್ತೇನೆ. ಅದು ಯಾವುದೇ ಭಾಷೆಯ ಸಿನಿಮಾ ಆಗಿರಲಿ, ಮನೆಮಂದಿ ಎಲ್ಲರೂ ಸಿನಿಮಾ ನೋಡಿರಲೇಬೇಕು’ ಎನ್ನುವ ಉತ್ತರ ಮೇಘನಾರಾಜ್‌ ಅವರದ್ದು.

‘ಇತ್ತೀಚೆಗೆ ನಾನು ಮತ್ತು ಚಿರು ಕೈಗೊಂಡ ಯುರೋಪ್‌ ಪ್ರವಾಸ ನನ್ನ ಬದುಕಿನಲ್ಲಿ ಅತ್ಯಂತ ಸ್ಮರಣೀಯವಾಗಿರಲಿದೆ. ಚಿರುಗೆ ದೂರ ಪ್ರಯಾಣ, ಪ್ರವಾಸವೆಂದರೆ ಸ್ವಲ್ಪ ನಿರಾಸಕ್ತಿ. ಪ್ರವಾಸ ಹೋಗೋಣವೆಂದರೆ ಇಲ್ಲೇ ಮೈಸೂರಿಗೆ ಹೋಗಿ ಬಂದುಬಿಡೋಣ ಎನ್ನುತ್ತಿದ್ದರು. ಅಂತಹದರಲ್ಲಿ ನಾವಿಬ್ಬರೂ ಏಕಾಂತ ಅರಸಿ ದೂರ ದೇಶಕ್ಕೆ ಹೋಗಿಬಂದೆವು. ಅಲ್ಲಿ ಅವರು ನನಗೆ ಸಾಕಷ್ಟು ಸರ್ಪೈಜ್‌ಗಳನ್ನು ನೀಡಿದರು’ ಎಂದ ಮೇಘನಾರಾಜ್‌, ವಿದೇಶ ಪ್ರವಾಸದ ನೆನಪುಗಳ ಬಗ್ಗೆಯೂ ಮೆಲುಕು ಹಾಕಿದರು.

‘ನನಗೆ ಇಂಥದ್ದೇ ಪಾತ್ರಗಳನ್ನು ಮಾಡಬೇಕೆಂಬುದಿಲ್ಲ. ಆಯಾ ಸಂದರ್ಭಕ್ಕೆ ಸಿಕ್ಕ ಪಾತ್ರಗಳು ಅದು ಯಾವುದೇ ಆಗಿರಲಿ. ನಾನೊಬ್ಬಳು ಕಲಾವಿದೆಯಾಗಿ ನಟಿಸಲು ಇಷ್ಟಪಡುತ್ತೇನೆ’ ಎನ್ನುವ ಈ ನಟಿಯ ಮಾತಿನಲ್ಲಿ, ಪಾತ್ರಗಳ ಆಯ್ಕೆಯಲ್ಲಿ ಅಷ್ಟೇನು ಚ್ಯೂಸಿಯಲ್ಲ ಎನ್ನುವ ಧ್ವನಿ ಹೊಮ್ಮಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು