ಬುಧವಾರ, ಸೆಪ್ಟೆಂಬರ್ 23, 2020
20 °C
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಕೆ

ವಿಜಯಪುರ: ಜಿ.ಪಂ. ಅಧ್ಯಕ್ಷೆ ಸ್ಥಾನದಿಂದ ನೀಲಮ್ಮ ನಿರ್ಗಮನ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Deccan Herald

ವಿಜಯಪುರ: ವಿಜಯಪುರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಬೆಂಗಳೂರಿನಲ್ಲಿ ರಾಜೀನಾಮೆ ಸಲ್ಲಿಸುವ ಮೂಲಕ ನೀಲಮ್ಮ ಮೇಟಿ ಅಧಿಕಾರದಿಂದ ನಿರ್ಗಮಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಅತೀಕ್‌ ಅವರನ್ನು ಇಲಾಖೆಯ ಕಚೇರಿಯಲ್ಲೇ, ಸಂಜೆ 4 ಗಂಟೆಗೆ ಕೆಲ ಸದಸ್ಯರೊಂದಿಗೆ ಭೇಟಿ ಮಾಡಿದ ನೀಲಮ್ಮ ಮೇಟಿ, ರಾಜೀನಾಮೆ ಪತ್ರ ಸಲ್ಲಿಸಿದರು ಎಂಬುದು ತಿಳಿದು ಬಂದಿದೆ.

ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಇಂಡಿ ತಾಲ್ಲೂಕಿನ ಸಾಲೋಟಗಿ ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಕಾಂಗ್ರೆಸ್‌ ಸದಸ್ಯ ಶಿವಯೋಗೆಪ್ಪ ನೇದಲಗಿ ಸೇರಿದಂತೆ ಬೆರಳೆಣಿಕೆಯ ಕಾಂಗ್ರೆಸ್‌ ಸದಸ್ಯರು ಈ ಸಂದರ್ಭ ಮೇಟಿ ಜತೆಯಲ್ಲಿದ್ದರು ಎಂಬುದು ಖಚಿತ ಪಟ್ಟಿದೆ.

ಮೇಟಿ ಅಧಿಕಾರದ ಹಾದಿ: ಗೋವಾ ಕನ್ನಡಿಗರ ಸಂಘದ ಅಧ್ಯಕ್ಷ ಸಿದ್ದಣ್ಣ ಮೇಟಿ ಪತ್ನಿ ನೀಲಮ್ಮ ಮೇಟಿ. ಗೋವಾದಲ್ಲೇ ರಾಜಕೀಯ ಬದುಕಿನ ಕನಸು ಕಂಡಿದ್ದ ಸಿದ್ದಣ್ಣ ಮೇಟಿಯನ್ನು ಜಿಲ್ಲಾ ಪಂಚಾಯ್ತಿ ರಾಜಕಾರಣದ ಅಖಾಡಕ್ಕೆ ಕೈ ಹಿಡಿದು ಕರೆ ತಂದವರು ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಆಗಿನ ಶಾಸಕ ಸಿ.ಎಸ್‌.ನಾಡಗೌಡ.

ಕುರುಬ ಮತಗಳನ್ನು ತಮ್ಮ ಭವಿಷ್ಯದ ದೃಷ್ಟಿಯಿಂದ ಗಟ್ಟಿ ಮಾಡಿಕೊಳ್ಳಲಿಕ್ಕಾಗಿಯೇ ಸಿದ್ದಣ್ಣ ಪತ್ನಿ ನೀಲಮ್ಮ ಮೇಟಿಯನ್ನು ರಕ್ಕಸಗಿ ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ಕಣಕ್ಕಿಳಿಸಿ, ಗೆಲ್ಲಿಸಿಕೊಳ್ಳುವಲ್ಲೂ ನಾಡಗೌಡ ಸಫಲರಾಗಿದ್ದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನ 2 ಎಗೆ ಮೀಸಲಾಗುತ್ತಿದ್ದಂತೆ, ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಹಠ ಹಿಡಿದು ನೀಲಮ್ಮ ಮೇಟಿಯನ್ನು 2016ರ ಮೇ 7ರಂದು ಅಧ್ಯಕ್ಷ ಗಾದಿಗೆ ಕೂರಿಸುವಲ್ಲಿ ನಾಡಗೌಡ ಯಶಸ್ವಿಯಾಗಿದ್ದರು.

‘ಇದೇ ಸಂದರ್ಭ ಅಧಿಕಾರ ಸೂತ್ರ ಹಂಚಿಕೆಯಾಗಿತ್ತು. ನನ್ನ ವಿಧಾನಸಭಾ ಕ್ಷೇತ್ರಕ್ಕೆ ಯಾವೊಂದು ಅಧಿಕಾರದ ಸ್ಥಾನಮಾನ ಸಿಕ್ಕಿಲ್ಲ. ನಮಗೆ ಅಧ್ಯಕ್ಷ ಸ್ಥಾನ ಕೊಡಬೇಕು ಎಂದು ಪಟ್ಟು ಹಿಡಿದಿದ್ದ ಯಶವಂತರಾಯಗೌಡ ಪಾಟೀಲರನ್ನು ಸ್ವತಃ ಸಿದ್ದರಾಮಯ್ಯ ಸಂಭಾಳಿಸಿ, ಕೊನೆಯ 30 ತಿಂಗಳ ಅವಧಿ ನಿಮ್ಮ ಕ್ಷೇತ್ರಕ್ಕೆ ಎಂಬ ವಾಗ್ದಾನ ನೀಡಿದ್ದರು’ ಎಂದು ಮಾತುಕತೆ ಸಂದರ್ಭದಲ್ಲಿ ಉಪಸ್ಥಿತರಿದ್ದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬದಲಾದ ಕಾಲಘಟ್ಟದಲ್ಲಿ ಸಿದ್ದಣ್ಣ ಮೇಟಿ ಹಲ ಬಾರಿ ತಮ್ಮ ನಿಷ್ಠೆ ಬದಲಿಸಿದ್ದರು, ಯಾರೊಬ್ಬರೂ ನೀಲಮ್ಮ ಮೇಟಿ ಕೆಳಗಿಳಿಸಲು ಮುಂದಾಗಿರಲಿಲ್ಲ. ಒಡಂಬಡಿಕೆಯ ಅವಧಿ ಸಮೀಪಿಸುತ್ತಿದ್ದಂತೆ ನೀಲಮ್ಮ ಮೇಟಿ ರಾಜೀನಾಮೆಗೆ ಪಕ್ಷದೊಳಗೆ ಒತ್ತಡ ಹೆಚ್ಚಿತ್ತು. ಅದರಂತೆ ನೀಲಮ್ಮ ಇದೀಗ ಅಧಿಕಾರದಿಂದ ನಿರ್ಗಮಿಸಿದ್ದಾರೆ.

ವಾಪಸ್‌ ಪಡೆಯಲು ಅವಕಾಶವಿದೆ..!
‘ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು ರಾಜೀನಾಮೆ ಸಲ್ಲಿಸಿದ ಬಳಿಕವೂ; ವಾಪಸ್‌ ಪಡೆಯಲು 15 ದಿನ ಅವಕಾಶವಿರುತ್ತದೆ. ಈ ಅವಧಿಯಲ್ಲಿ ಅವರು ವಾಪಸ್ ಪಡೆಯದಿದ್ದರೆ, ರಾಜೀನಾಮೆ ಪತ್ರ ಪಂಚಾಯತ್‌ರಾಜ್‌ ಕಾಯ್ದೆಗೆ ಅನುಗುಣವಾಗಿ ಸಲ್ಲಿಕೆಯಾಗಿದ್ದರೆ ಮಾತ್ರ ಅಂಗೀಕಾರವಾಗಲಿದೆ’ ಎಂದು ವಿಜಯಪುರ ಜಿಲ್ಲಾ ಪಂಚಾಯ್ತಿ ಸಿಇಒ ವಿಕಾಸ್‌ ಕಿಶೋರ್‌ ಸುರಳಕರ್ ತಿಳಿಸಿದರು.

‘ರಾಜೀನಾಮೆ ಸಲ್ಲಿಸಿದ 15 ದಿನದವರೆಗೂ ಹಾಲಿ ಇದ್ದವರೇ ಅಧ್ಯಕ್ಷ ಹುದ್ದೆ ನಿಭಾಯಿಸಲಿದ್ದಾರೆ. ರಾಜೀನಾಮೆ ಅಂಗೀಕಾರವಾದ ಬಳಿಕ, ಸರ್ಕಾರದ ನಿರ್ದೇಶನದಂತೆ ಉಪಾಧ್ಯಕ್ಷರು, ನೂತನ ಅಧ್ಯಕ್ಷರ ಆಯ್ಕೆಯಾಗುವ ತನಕ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ನಿರ್ವಹಿಸಲಿದ್ದಾರೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು