ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

40ರ ಸಂಭ್ರಮದಲ್ಲಿ ಫಿಲಾಟಲಿಕ್ ಸೊಸೈಟಿ

Last Updated 4 ಡಿಸೆಂಬರ್ 2015, 19:35 IST
ಅಕ್ಷರ ಗಾತ್ರ

ಅಂಚೆ ಚೀಟಿ ಸಂಗ್ರಹವನ್ನು ಉತ್ತೇಜಿಸಲು ನಮ್ಮ ನಾಡಿನಲ್ಲಿ ಆರಂಭಗೊಂಡ ಕರ್ನಾಟಕ ಫಿಲಾಟಲಿಕ್‌ ಸೊಸೈಟಿಗೆ (ಕೆ.ಪಿ.ಎಸ್‌. ) ಈಗ ನಲ್ವತ್ತು ವರ್ಷಗಳ ಪ್ರಾಯ.

ಅಂಚೆ ಚೀಟಿಗಳ ಉಪಯೋಗ ಶುರುವಾದ ಕೆಲವೇ ವರ್ಷಗಳಲ್ಲಿ ಈ ಬಣ್ಣದ ಮುದ್ರಿತ ಕಾಗದದ ತುಂಡುಗಳನ್ನು ಸಂಗ್ರಹ ಮಾಡುವ ಪರಿಪಾಠ ಆರಂಭವಾಗಿ ಈಗದು ಕೇವಲ ಹವ್ಯಾಸವಾಗಿ ಉಳಿಯದೇ ಉದ್ಯಮವಾಗಿ, ವಿಜ್ಞಾನವಾಗಿ ವಿಶ್ವವನ್ನೇ ಆವರಿಸಿದೆ.

ದೇಶ, ಭಾಷೆಯ ಗಡಿಗಳನ್ನು ಮೀರಿ ನಿಂತಿರುವ ಅಂಚೆ ಚೀಟಿ ಹವ್ಯಾಸ ಪ್ರವೃತ್ತಿಯನ್ನು ಇಟ್ಟುಕೊಂಡಿದ್ದು ವಿಮಾನ ಕಾರ್ಖಾನೆಯಲ್ಲಿ ಅಧಿಕಾರಿಯಾಗಿದ್ದ ಕರ್ನಲ್‌ ಎಲ್‌. ಜಿ. ಶೆಣೈ. ಸಮಾನಮನಸ್ಕ ಸ್ನೇಹಿತರೊಂದಿಗೆ ಕರ್ನಾಟಕ ಫಿಲಾಟಲಿಕ್‌ ಸೊಸೈಟಿಯನ್ನು ಅವರು ಹುಟ್ಟುಹಾಕಿದ್ದು 1975 ರಲ್ಲಿ.

ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡಿದ ಸೊಸೈಟಿ ಆಸಕ್ತರಲ್ಲಿ ವಿಶೇಷವಾಗಿ ವಿದ್ಯಾರ್ಥಿ ಸಮೂಹದಲ್ಲಿ ಅಂಚೆ ಚೀಟಿ ಸಂಗ್ರಹ ಹವ್ಯಾಸ ಬೆಳೆಸಲು ರಾಜ್ಯದಾದ್ಯಂತ ಕಾರ್ಯಾಗಾರ, ಪ್ರದರ್ಶನಗಳನ್ನು ಏರ್ಪಡಿಸುತ್ತ ಬಂದಿತ್ತು.

ಹುಮ್ಮಸ್ಸಿನಲ್ಲಿದ್ದ ಸೊಸೈಟಿ ಸದಸ್ಯರು ಏಷ್ಯಾ ಮಟ್ಟದಲ್ಲಿ ನಂತರ ರಾಷ್ಟ್ರಮಟ್ಟದಲ್ಲಿ ಅಂಚೆ ಚೀಟಿ ಪ್ರದರ್ಶನಗಳನ್ನು ನಮ್ಮ ರಾಜ್ಯದಲ್ಲಿ ವ್ಯವಸ್ಥೆ ಮಾಡಿದ್ದೊಂದು ವಿಶೇಷ. ನಗರದ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ರಾಷ್ಟ್ರೀಯ – ಅಂತರರಾಷ್ಟ್ರೀಯ ಅಂಚೆ ಚೀಟಿ ಸಂಗ್ರಹಕಾರರು ತಮ್ಮ ವೈವಿಧ್ಯಮಯ ಅಂಚೆ ಚೀಟಿಗಳನ್ನು ಪ್ರದರ್ಶಿಸಿದ್ದು ಇನ್ನೊಂದು ಗಮನಾರ್ಹ ಸಂಗತಿ (1977).

ನಾಲ್ಕು ದಶಕಗಳ ಅವಧಿಯಲ್ಲಿ ಕೆ.ಪಿ.ಎಸ್‌. ಅಂಚೆ ಚೀಟಿ ಹವ್ಯಾಸವನ್ನು ಶೈಕ್ಷಣಿಕವಾಗಿ ಬೆಳೆಸಲು ರೂಪಿಸಿರುವ ಕಾರ್ಯಕ್ರಮಗಳು ರಾಜ್ಯದಾದ್ಯಂತ ಹರಡಿತು. ಅಂಚೆ ಇಲಾಖೆ ಸಹಯೋಗದೊಂದಿಗೆ ಶಾಲಾ ಕಾಲೇಜುಗಳಲ್ಲಿ ಕೂಡ ಕಾರ್ಯಕ್ರಮಗಳನ್ನ ಆಯೋಜಿಸಿ, ವಿದ್ಯಾರ್ಥಿಗಳು ಇದರತ್ತ ಆಕರ್ಷಿತರಾದರು.

‘ಮೊದಲಿನಿಂದಲೂ ಪ್ರತಿ ತಿಂಗಳ ಮೊದಲ ಭಾನುವಾರ ಸದಸ್ಯರ ಸಭೆ ನಡೆಸಿ ಅಂಚೆ ಚೀಟಿ ಸಂಗ್ರಹಣಾ ಕ್ಷೇತ್ರದ ಆಗುಹೋಗುಗಳ ಕುರಿತಂತೆ ಚರ್ಚೆ ನಡೆಸುವುದನ್ನು ರೂಢಿ ಮಾಡಿಕೊಂಡಿರುವ ಕರ್ನಾಟಕ ಫಿಲಾಟೆಲಿಕ್‌ ಸೊಸೈಟಿಯಲ್ಲಿರುವ ಆಜೀವ ಸದಸ್ಯರ ಸಂಖ್ಯೆ 500ಕ್ಕೂ ಅಧಿಕ. ಮಂಗಳೂರು, ಮೈಸೂರು, ಸಾಗರ ಮೊದಲಾದ ಕಡೆಗಳಲ್ಲಿ ಅಂಚೆ ಚೀಟಿ ಸಂಘಗಳ ಸ್ಥಾಪನೆಗೆ ಪ್ರೇರಣೆ ನೀಡಿರುವ ಸೊಸೈಟಿ, ಇಡೀ ರಾಜ್ಯದಲ್ಲಿ ಸಂಗ್ರಹಕಾರರ ಜಾಲ ಹೆಣೆಯಬೇಕೆಂಬ ಹಿರಿಯಾಸೆ ಹೊಂದಿದೆ’ ಎನ್ನುತ್ತಾರೆ ಸೊಸೈಟಿ ಪ್ರಧಾನ ಕಾರ್ಯದರ್ಶಿ ನಿಖಿಲೇಶ್‌ ಮೇಲುಕೋಟೆ.

ಅಂತರರಾಷ್ಟ್ರೀಯ ಅಂಚೆ ಚೀಟಿ ಪ್ರದರ್ಶನಗಳಲ್ಲಿ ಪಾಲ್ಗೊಂಡ, ಅನುಭವಗಳಿಸಿಕೊಂಡಿದ್ದ ಕರ್ನಲ್‌ ಶೆಣೈ, ವೈ. ಆರ್‌. ಷಾ. ಡಾ. ಸೀತಾ ಬತೇಜಾ, ಡಿ. ಎನ್‌. ಜಾತೇಯ, ಸಂಗೋರಾಮ್‌, ದೀಕ್ಷಿತ್‌, ಜಂಬುಲಿಂಗಂ ಮೊದಲಾದವರು ಸೊಸೈಟಿಯ ಚುಕ್ಕಾಣಿಯನ್ನು ನಾಲ್ಕು ದಶಕಗಳ ಹಿಡಿದು ಮುನ್ನಡೆಸಿದ್ದು, ಅಂಚೆ ಚೀಟಿ ಸಂಗ್ರಹವನ್ನು ವ್ಯಾಪಕವಾಗಿ ಬೆಳೆಯುವಂತೆ ಮಾಡಿದ್ದರ ಪರಿಣಾಮ ಯುವಸಮುದಾಯದಲ್ಲಿ ಇದರ ಆಸಕ್ತಿ ಹೆಚ್ಚಾಗಿದೆ.

‘ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ನಿಯತ ಕಮ್ಮಟಗಳಿಗೆ ನಡೆಸುತ್ತ ಬಂದಿರುವ ಕೆ.ಪಿ.ಎಸ್‌. ಹಲವಾರು ಸ್ಟ್ಯಾಂಪ್‌ ಕ್ಲಬ್‌ಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಿದೆ. ಹೊಸ ಹೊಸ ಅಂಚೆ ಚೀಟಿ ಪ್ರಕಟಣಾ ಮಾಹಿತಿ, ವಿವಿಧೆಡೆ ಜರುಗುವ ಪ್ರದರ್ಶನಗಳ ವಿವರಗಳನ್ನು ತನ್ನ ಸದಸ್ಯರಿಗೆ ಹಾಗೂ ಆಸಕ್ತರಿಗೆ ತಲುಪಿಸುತ್ತಿದ್ದು, ಇದರಿಂದಾಗಿ ಕರ್ನಾಟಕದ ಅನೇಕ ಅಂಚೆ ಚೀಟಿ ಸಂಗ್ರಹಕಾರರು ಹಲವು ಗೌರವ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ’ ಎನ್ನುತ್ತಾರೆ ಕೆ.ಪಿ.ಎಸ್‌. ಅಧ್ಯಕ್ಷ ಕೆ. ಚೈತನ್ಯದೇವ್‌. ವಿದ್ಯಾರ್ಥಿಗಳಲ್ಲಿ ಅಂಚೆ ಚೀಟಿ ಸಂಗ್ರಹಣಾ ಪ್ರವೃತ್ತಿ ಬೆಳೆಸಲು ಅನುಕೂಲವಾಗುವಂತಹ ರಚನಾತ್ಮಕ ಕಾರ್ಯಕ್ರಮಗಳನ್ನು ಈ ವರ್ಷದಿಂದ ಆರಂಭಿಸಲಾಗುವುದು ಎಂದೂ ಅವರು ಹೇಳಿದರು.

ಅಂಚೆ ಚೀಟಿ ವಿನ್ಯಾಸ ಸ್ಪರ್ಧೆ, ಪತ್ರ ಬರವಣಿಗೆ, ಚಿತ್ರಕಲೆ ಮೊದಲಾದವುಗಳಿಗೆ ಅಂಚೆ ಇಲಾಖೆಗೆ ಸಹಕರಿಸುತ್ತಿರುವ ಫಿಲಾಟಲಿಕ್‌ ಸೊಸೈಟಿ, ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವಂತಹ ಅಂಚೆ ಚೀಟಿ ಸಂಗ್ರಹಗಳನ್ನು ಸಿದ್ಧಪಡಿಸಲು ಸದಸ್ಯರಿಗೆ ನೆರವಾಗುತ್ತದೆ.

ಕರ್ನಾಟಕ ಫಿಲಾಟಲಿಕ್‌ ಸೊಸೈಟಿ ಸದಸ್ಯರಾಗಿದ್ದು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರದರ್ಶನಗಳಲ್ಲಿ ಪಾಲ್ಗೊಂಡ ಕರ್ನಲ್‌ ಶೆಣೈ, ಸೀತಾ ಬತೇಜಾ, ಮಣಿ ಮುತ್ತುಕೃಷ್ಣನ್, ರಾಮು, ಜೆ.ಪಿ.  ಸರ್ದಾ, ವರಪ್ರಸಾದ್‌, ಮಣಿ ಜಗನ್ನಾಥ್‌, ಸರಗೋರಾಂ, ನಿಖಿಲೇಶ್‌ ಮೊದಲಾದವರು ಅನೇಕ ಪಾರಿತೋಷಕಗಳನ್ನು ಗಳಿಸುವುದರ ಮೂಲಕ ಕರ್ನಾಟಕಕ್ಕೆ ಗೌರವ ತಂದುಕೊಟ್ಟಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಅಂಚೆ ಚೀಟಿ ಹವ್ಯಾಸ ಪ್ರೋತ್ಸಾಹಿಸಲು ಶ್ರಮಿಸುತ್ತಿರುವ ಕರ್ನಾಟಕ ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘದ ಚಟುವಟಿಕೆಗಳಿಗೆ ಕೂಡ ಕೆ.ಪಿ.ಎಸ್‌. ಪ್ರೋತ್ಸಾಹ ನೀಡುತ್ತಿದೆ. 40ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ‘ಲಂಡನ್‌ನ ರಾಯಲ್‌ ಫಿಲಾಟಲಿಕ್‌ ಸೊಸೈಟಿ’ ಪರಿಣತರೂ ಸೇರಿದಂತೆ ಹಲವರ ಉಪನ್ಯಾಸಗಳನ್ನು ಡಿಸೆಂಬರ್‌ 6ರಂದು ಏರ್ಪಡಿಸಿದೆ.

ನಾಲ್ಕು ದಶಕಗಳ ಸೇವೆಯಲ್ಲಿರುವ ಕೆ.ಪಿ.ಎಸ್‌. ನೆನಪಿನಲ್ಲಿ ವಿಶೇಷ ಅಂಚೆ ಲಕೋಟೆಯನ್ನು ಹಾಗೂ ಸ್ಮರಣ ಸಂಚಿಕೆಯೊಂದನ್ನು ಹೊರತರಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT