ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯಾಂಕ್‌ ನೀರಿಗೆ ಸ್ಮಾರ್ಟ್‌ ಕಣ್ಣು!

Last Updated 3 ಜೂನ್ 2019, 19:45 IST
ಅಕ್ಷರ ಗಾತ್ರ

ನೀರು ಇದೆಯಾ ಅಥವಾ ಖಾಲಿಯಾಗಿದೆಯಾ ಎಂದು ಇನ್ನು ಮುಂದೆ ಪದೇ ಪದೇ ನೀರಿನ ತೊಟ್ಟಿಗೆ ಇಣುಕಿ ಮತ್ತು ಮೇಲ್ಛಾವಣಿ ಏರಿ ಓವರ್‌ಹೆಡ್‌ ಟ್ಯಾಂಕ್‌ ಪರೀಕ್ಷಿಸುವ ಅಗತ್ಯ ಇಲ್ಲ. ಜನರ ಈ ಪಡಿಪಾಟ ತಪ್ಪಿಸಲು ಬೆಂಗಳೂರಿನ ಯುವ ಎಂಜಿನಿಯರ್‌ಚಿನ್ನಯ್ಯ ಮಠ ಅವರು ಸ್ಮಾರ್ಟ್‌ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.

ಟ್ಯಾಂಕ್‌ಗಳಲ್ಲಿ ಎಷ್ಟು ನೀರು ಇದೆ, ಎಷ್ಟು ಖಾಲಿಯಾಗಿದೆ ಎಂಬ ಮಾಹಿತಿ ಜತೆಗೆ ಒಂದು ಹನಿ ನೀರು ವ್ಯರ್ಥವಾಗದಂತೆ ದಿನದ 24 ಗಂಟೆಯೂ ನೀರಿನ ವೆಚ್ಚದ ಮೇಲೆ ಈ ಸ್ಮಾರ್ಟ್‌ ಸಾಧನ ನಿಗಾ ಇಡಲಿದೆ. ನೀರಿನ ಸಂಗ್ರಹದ ಬಗ್ಗೆ ಪ್ರತಿ ಹತ್ತು ನಿಮಿಷಕ್ಕೊಮ್ಮೆ ಮೊಬೈಲ್‌ಗೆ ಸಂದೇಶ ರವಾನಿಸುತ್ತದೆ.

ಭವಿಷ್ಯದ ತಂತ್ರಜ್ಞಾನ

ಭವಿಷ್ಯದ ತಂತ್ರಜ್ಞಾನ ಎಂದು ಬಣ್ಣಿಸಲಾದ ಇಂಟರ್‌ನೆಟ್‌ ಆಫ್‌ ಥಿಂಗ್ಸ್‌ (ಐಒಟಿ) ತಂತ್ರಜ್ಞಾನ ಆಧಾರಿತ ಈ ಪುಟ್ಟ ಸಾಧನದಲ್ಲಿ ವೈಫೈ ಚಿಪ್‌ ಅಳವಡಿಸಿದ ಎಲೆಕ್ಟ್ರಾನಿಕ್‌ ಬೋರ್ಡ್‌, ಕಂಟ್ರೋಲರ್‌, ಮೋಟರ್‌ ಆಫ್‌, ಆನ್‌ ಘಟಕ ಮತ್ತು ಎರಡು ಸಬ್‌ಮರ್ಸಿಬಲ್‌ ಸೆನ್ಸರ್‌ಗಳಿರುತ್ತವೆ. ಸೆನ್ಸರ್‌ಗಳನ್ನು ನೀರಿನ ತೊಟ್ಟಿ ಮತ್ತು ಟ್ಯಾಂಕ್‌ಗೆ ಅಳವಡಿಸಲಾಗುತ್ತದೆ. ನೀರಿನ ಸಂಗ್ರಹದ ಬಗ್ಗೆಸೆನ್ಸರ್‌ ನಿಂಬಲ್‌ ವಿಷನ್‌ ಸರ್ವರ್‌ಗೆ ಮಾಹಿತಿ ರವಾನಿಸುತ್ತವೆ. ಅಲ್ಲಿಂದ ಗ್ರಾಹಕರ ಮೊಬೈಲ್‌ಗೆ ಸಂದೇಶ ಬರುತ್ತದೆ. ಆಂಡ್ರಾಯ್ಡ್‌ ಮತ್ತು ಐಒಎಸ್‌ ಆಧಾರಿತ ಆ್ಯಪ್‌ ಅನ್ನು ಗ್ರಾಹಕರು ಮೊಬೈಲ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡರೆ ಸಾಕು.

ಅಂಗೈಯಲ್ಲಿ ನೀರು ಬಳಕೆ ಇತಿಹಾಸ

ಒಂದು ದಿನಕ್ಕೆ ಎಷ್ಟು ನೀರು ಖರ್ಚಾಗಿದೆ ಮತ್ತು ಯಾವ ಸಮಯದಲ್ಲಿ ಹೆಚ್ಚು ನೀರು ಖರ್ಚಾಗಿದೆ ಎಂಬುವುದು ಸೇರಿದಂತೆ ದಿನದ 24 ಗಂಟೆ ನೀರು ಬಳಕೆಯ ಮಾಹಿತಿ ಸುಲಭವಾಗಿ ಅರ್ಥವಾಗುವಂತೆ ಗ್ರಾಫ್‌, ಚಿತ್ರಗಳ ಮೂಲಕ ಗ್ರಾಹಕರ ಮೊಬೈಲ್‌ಗೆ ರವಾನಿಸುತ್ತದೆ. ದಿನ, ತಿಂಗಳು, ವರ್ಷದ ನೀರು ಬಳಕೆ ಇತಿಹಾಸವೂ ಇಲ್ಲಿ ಸಿಗುತ್ತದೆ.

ಟ್ಯಾಂಕ್‌ ಅಥವಾ ನಲ್ಲಿಯಿಂದ ನೀರು ಸೋರಿಕೆ ಪತ್ತೆ ಮಾಡಬಹುದು. ಅಷ್ಟೇ ಅಲ್ಲ ನೀರಿನ ಗುಣಮಟ್ಟ, ಅದರಲ್ಲಿರುವ ಖನಿಜಾಂಶ, ಗಡಸುತನದ ಬಗ್ಗೆ ನಿಖರ ಮಾಹಿತಿ ಸಿಗುತ್ತದೆ. ಮನೆಯಿಂದ ಹೊರಗಿದ್ದರೂ ಟ್ಯಾಂಕ್‌ನಲ್ಲಿರುವ ನೀರಿನ ಸಂಗ್ರಹದ ಮೇಲೆ ಕಣ್ಣಿಡಬಹುದು. ನೀರು ಖಾಲಿಯಾದರೆ ಮತ್ತು ತುಂಬಿದರೆ ತನ್ನಿಂದ ತಾನೇ ಮೋಟಾರ್‌ ಆನ್‌ ಮತ್ತು ಆಫ್‌ ಆಗುತ್ತದೆ.ಮೊಬೈಲ್‌ ಆ್ಯಪ್‌ನಿಂದಲೇ ಮೋಟರ್‌ ಆನ್ ಮತ್ತು ಆಫ್‌ ಮಾಡಬಹುದು. ನೀರು ಖಾಲಿಯಾದರೆ ಟ್ಯಾಂಕರ್‌ ನೀರು ಪೂರೈಕೆದಾರರಿಗೆ ತನ್ನಿಂದ ತನಾಗಿಯೇ ಸಂದೇಶ ರವಾನೆಯಾಗುತ್ತದೆ.

ಮನೆ, ಹೋಟೆಲ್‌, ಹಾಸ್ಟೆಲ್‌, ಅಪಾರ್ಟ್‌ಮೆಂಟ್, ಪೇಯಿಂಗ್‌ ಗೆಸ್ಟ್‌ (ಪಿ.ಜಿ) ಹೌಸ್‌ಗಳಿಗೆ ಇದು ಅತ್ಯಂತ ಸೂಕ್ತ. ಎ.ಸಿ ವಿದ್ಯುತ್‌ ಕೂಡ ಬೇಕಾಗಿಲ್ಲ. ಡಿ.ಸಿ. ವಿದ್ಯುತ್‌ನಿಂದ ಸಾಧನ ಕೆಲಸ ಮಾಡುತ್ತದೆ. ಇದರಿಂದ ವಿದ್ಯುತ್‌ ಉಳಿತಾಯ ಮತ್ತು ವಿದ್ಯುತ್‌ ಶುಲ್ಕದ ಮೇಲೂ ಗಣನೀಯ ನಿಯಂತ್ರಣ ಸಾಧಿಸಬಹುದು ಎನ್ನುತ್ತಾರೆ ಸಾಧನ ಅಭಿವೃದ್ಧಿಪಡಿಸಿರುವ ಎಂಜಿನಿಯರ್‌ ಚಿನ್ನಯ್ಯ ಮಠ.

ಎರಡು ಮಾದರಿಯಲ್ಲಿ ಈ ಸಾಧನ ಲಭ್ಯವಿದೆ. ಪ್ಲಾಸ್ಟಿಕ್‌ ಟ್ಯಾಂಕ್‌ಗೆ ಅಳವಡಿಸುವ ಸಾಧನದ ಬೆಲೆ ₹10 ಸಾವಿರ ಮತ್ತು ಸಿಮೆಂಟ್‌ ಟ್ಯಾಂಕ್‌ ಸಾಧನದ ಬೆಲೆ ₹20 ಸಾವಿರ.

ಬಂಡವಾಳ ಹೂಡಿಕೆ ಮತ್ತು ಸಾಧನ ಖರೀದಿಸಲು ಸಂಪರ್ಕಿಸುವ ಸಂಖ್ಯೆ ಮತ್ತು ಇ–ಮೇಲ್ ವಿಳಾಸ: 9535271529/ nimblevision.in

ನಾಲ್ಕು ತಿಂಗಳ ಹಿಂದೆ ಮಾರುಕಟ್ಟೆಗೆ

ಎಂಜಿನಿಯರಿಂಗ್‌ ಸ್ನಾತಕೋತ್ತರ ಪದವೀಧರರಾದವಿಜಯಪುರ ಜಿಲ್ಲೆಯ ಸಿಂದಗಿಯವರಾದ ಚಿನ್ನಯ್ಯ ಮಠ ಅವರಿಗೆ ಬೆಂಗಳೂರಿನಲ್ಲಿ 15 ವರ್ಷ ಐ.ಟಿ ವಲಯದಲ್ಲಿ ಕೆಲಸ ಮಾಡಿದ ಅನುಭವ ಇದೆ. ಎರಡು ವರ್ಷದ ಹಿಂದೆ ಪತ್ನಿ ವೈಶಾಲಿ ಜತೆಗೂಡಿ ನಿಂಬಲ್‌ ವಿಷನ್‌ ಎಂಬ ನವೋದ್ಯಮ ಸಂಸ್ಥೆ ಹುಟ್ಟು ಹಾಕಿದರು.

ಸದ್ಯ ಮನೆಯಲ್ಲಿಯೇ ಕಚೇರಿ ಆರಂಭಿಸಿದ್ದು ಅವರ ಪತ್ನಿ ವಹಿವಾಟು ನಿರ್ವಹಿಸುತ್ತಿದ್ದಾರೆ. ನಾಲ್ಕು ತಿಂಗಳ ಹಿಂದೆ ಕೆಲಸಕ್ಕೆ ರಾಜೀನಾಮೆ ನೀಡಿ ಪೂರ್ಣಪ್ರಮಾಣದಲ್ಲಿ ಸ್ಮಾರ್ಟ್‌ ಸಾಧನದ ಮಾರುಕಟ್ಟೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ವಂತ ₹25 ಲಕ್ಷ ಆರಂಭಿಕ ಬಂಡವಾಳ ತೊಡಗಿಸಿದ್ದು, ಹತ್ತು ಸ್ನೇಹಿತರು ₹15 ಲಕ್ಷ ತೊಡಗಿಸಿದ್ದಾರೆ. ವಹಿವಾಟು ವಿಸ್ತರಿಸಲು ಹೂಡಿಕೆದಾರರಿಗೆ ಎದುರು ನೋಡುತ್ತಿದ್ದಾರೆ.

ನಾಲ್ಕು ತಿಂಗಳ ಹಿಂದೆ ಈ ಸ್ಮಾರ್ಟ್‌ ಸಾಧನ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಬೆಂಗಳೂರು, ಪುಣೆ, ದೆಹಲಿ, ಚೆನ್ನೈ ಸೇರಿದಂತೆ 70 ಗ್ರಾಹಕರಿದ್ದಾರೆ. ಬೆಂಗಳೂರು ಒಂದರಲ್ಲಿಯೇ 30 ಗ್ರಾಹಕರಿದ್ದಾರೆ. ನೂರು ಸಂಪರ್ಕ ನೀಡಿದರೂ ಒಂದೇ ಆ್ಯಪ್‌ನಲ್ಲಿ ಟ್ರ್ಯಾಕ್‌ ಮಾಡಬಹುದು. ಬೆಂಗಳೂರಿನಲ್ಲಿ ಒಂದು ಪಿ.ಜಿಗೆ ಅನೇಕ ಸಂಪರ್ಕ ನೀಡಲಾಗಿದೆ.

ಮನೆಯಲ್ಲಿ ದಿನವೊಂದಕ್ಕೆ ಕನಿಷ್ಠ 600 ಲೀಟರ್ ನೀರು ಬಳಕೆಯಾಗುತ್ತಿತ್ತು. ಪ್ರಾಯೋಗಿಕವಾಗಿ ಮೊದಲು ಮನೆಯಲ್ಲಿ ಈ ಸ್ಮಾರ್ಟ್‌ ಸಾಧನ ಅಳವಡಿಸಿಕೊಂಡ ಮೇಲೆ 300 ಲೀಟರ್‌ಗೆ ಇಳಿಕೆಯಾಗಿದೆ. ವಿದ್ಯುತ್‌ ಬಿಲ್‌ ಕೂಡ ಗಣನೀಯವಾಗಿ ಇಳಿಕೆಯಾಗಿದೆ ಎನ್ನುತ್ತಾರೆ ಚಿನ್ನಯ್ಯ ಮಠ.

ಏನೆಲ್ಲಾ ಕೆಲಸ ಮಾಡುತ್ತದೆ?

* ರಿಯಲ್‌ ಟೈಮ್‌ ನೀರಿನ ಗುಣಮಟ್ಟ ವಿವರ

* ನೀರಿನ ಮಿತಿ ಮೀರಿದ ಬಳಕೆ ಪತ್ತೆ ಮತ್ತು ಕಡಿವಾಣ

* ಮಲೀನ ಮತ್ತು ಗಡಸು ನೀರು ಗುರುತಿಸುವಿಕೆ

* ನೀರಿನ ಕಳ್ಳತನ ಪತ್ತೆ

* ನೀರಿನ ಮಿತ ಬಳಕೆ ಮತ್ತು ನಿರ್ವಹಣೆಗೆ ನೆರವು

* ಮೊಬೈಲ್‌ಗೆ ನೀರಿನ ಬಳಕೆ ಶುಲ್ಕದ ವಿವರ

* ವಿದ್ಯುತ್‌ ಶುಲ್ಕದ ಮೇಲೆ ಕಡಿವಾಣ

ಕನ್ನಡ ಪ್ರೀತಿ

‘ಪತ್ರಿಕೆಗಳಲ್ಲಿ ಬಂದ ಪದಬಂಧ ತುಂಬುವುದು ತಾಯಿಯ ಮುಖ್ಯ ಹವ್ಯಾಸ. ಅದಕ್ಕಾಗಿ ಅವರು ಹಳೆಯ ಪತ್ರಿಕೆಗಳನ್ನು ತಡಕಾಡುತ್ತಿದ್ದರು. ಅದಕ್ಕಾಗಿ ಕನ್ನಡದಲ್ಲಿ ಪದಬಂಧ ಆ್ಯಪ್‌ ಅಭಿವೃದ್ಧಿಪಡಿಸಿದೆ’ ಎಂದು ಚಿನ್ನಯ್ಯ ಮಠ ಹೇಳುತ್ತಾರೆ.

ಐದು ವರ್ಷಗಳ ಹಿಂದೆ(2014ರಲ್ಲಿ) ಕನ್ನಡ ಪದಬಂಧ ಆ್ಯಪ್‌ ಬಿಡುಗಡೆ ಮಾಡಿದ್ದು 40 ಸಾವಿರ ಜನರು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಆ್ಯಂಡ್ರಾಯ್ಡ್‌ ಮತ್ತು ಐಒಎಸ್‌ ಆಧಾರಿತ ಆ್ಯಪ್‌ 21 ಪದಬಂಧಗಳಿವೆ. ಅದೇ ರೀತಿ ಅಂಕಿಗಳ ಆಟ ಸುಡುಕೊ ಆಟಕ್ಕೆ ಕನ್ನಡ ಅಕ್ಷರ ರೂಪ ನೀಡಿದ್ದಾರೆ. ಇದನ್ನು 10 ಸಾವಿರ ಜನರು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಇದು ಕೂಡ ಉಚಿತ.

ಕನ್ನಡದಲ್ಲಿ ಒತ್ತಕ್ಷರ, ದೀರ್ಘಗಳು, ಕೊಂಬುಗಳು ಜಾಸ್ತಿ. ಹೀಗಾಗಿ ಕನ್ನಡ ಅಕ್ಷರಗಳನ್ನು ಮೊಬೈಲ್ ಫ್ರೇಮ್‌ ಒಳಗೆ ಮತ್ತು ಪದಬಂಧದ ಚಿಕ್ಕ ಚೌಕದೊಳಗೆ ಕೂಡಿಸುವುದು ಸವಾಲಾಗಿತ್ತು. ಅದಕ್ಕಾಗಿ ಮೂರ‍್ನಾಲ್ಕು ತಿಂಗಳು ಶ್ರಮಿಸಿದೆ ಎನ್ನುತ್ತಾರೆ ಮಠ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT