ಗುರುವಾರ , ಸೆಪ್ಟೆಂಬರ್ 19, 2019
24 °C

ಸಂಸ್ಕೃತಿಯ ವೈಭವ

Published:
Updated:
Prajavani

ಪ್ರಕೃತಿಸಿದ್ಧವಾದ ಪದಾರ್ಥವನ್ನು ಮನುಷ್ಯವಿವೇಕದಿಂದ ಸೊಗಸುಗೊಳಿಸಿದರೆ ಅದು ಸಂಸ್ಕೃತಿ.

ಕಾಡುಬತ್ತ ಪ್ರಕೃತಿ, ಪಟ್ಟಿಸೋಮನ ಹಳ್ಳಿಯ ಸಣ್ಣ ನೆಲ್ಲು ಸಂಸ್ಕೃತಿ. ಬತ್ತ ಪ್ರಕೃತಿ, ಅಕ್ಕಿ ಸಂಸ್ಕೃತಿ. ಅಕ್ಕಿ ಪ್ರಕೃತಿ, ಅನ್ನ ಪರಮಾನ್ನ ಪೊಂಗಲುಗಳು ಸಂಸ್ಕೃತಿ. ಕಲ್ಲುಬಂಡೆ ಪ್ರಕೃತಿ, ಮನೆಯ ಅಂಗಳದಲ್ಲಿ ಹಾಸಿರುವ ಚಪ್ಪಡಿ ಸಂಸ್ಕೃತಿ. ಅಮೃತಶಿಲೆ ಪ್ರಕೃತಿ, ಶಿಲ್ಪಿ ಕೊರೆದ ವಿಗ್ರಹ ಸಂಸ್ಕೃತಿ. ಮರದ ದಿಮ್ಮಿ ಪ್ರಕೃತಿ, ಮೇಜು ಕುರ್ಚಿ ಸಂಸ್ಕೃತಿ. ಮೃಗ ಪಕ್ಷಿಗಳ ಕೂಗು ಪ್ರಕೃತಿ, ಅದರಲ್ಲಿಯ ಸ್ವರಪ್ರಬೇಧಗಳನ್ನು ಗುರುತಿಸಿ ಜೋಡಿಸಿ, ರಾಗವಿನ್ಯಾಸ ಮಾಡಿದ್ದು ಸಂಸ್ಕೃತಿ.

ಸರಿಗಮಪಧನಿ – ಎಂಬ ಸಪ್ತಸ್ವರಗಳ ಹೆಗ್ಗುರುತುಗಳು ಹೀಗಂತೆ:

ಷಡ್ಜಂ ಮಯೂರೋ ವದತಿ ಗಾವಸ್ತ್ವೃಷಭ ಭಾಷಣಃ |

ಅಜಾವಿಕಂ ತು ಗಾಂಧಾರಂ ಕ್ರೌಂಚಃ ಕ್ವಣತಿ ಮಧ್ಯಮಮ್ ||

ಪುಷ್ಪಸಾಧಾರಣೆ ಕಾಲೇ ಪಿಕಃ ಕೂಜತಿ ಪಂಚಮಮ್ |

ಧೈವತಂ ಹೇಷತೇ ವಾಜೀ ನಿಷಾದಮ್ ಬೃಂಹತೇ ಗಜಃ ||

(ನವಿಲಿನದು ಷಡ್ಜಸ್ವರ; ಗೂಳಿಯದು ಋಷಭ; ಆಡಿನದು ಗಾಂಧಾರ; ಕ್ರೌಂಚಪಕ್ಷಿಯದು ಮಧ್ಯಮ; ಕೋಗಿಲೆಯದು ಪಂಚಮ; ಕುದುರೆಯದು ಧೈವತ; ಆನೆಯದು ನಿಷಾದ.)

ಬೀದಿಯಲ್ಲಿ ನಾವು ಆಡುವ, ಕೇಳುವ ಮಾತು ಪ್ರಕೃತಿ. ಅದೇ ಮಾತುಗಳನ್ನು ಒಂದು ಹದವರಿತು ಜೋಡಿಸಿದ ಕಾವ್ಯವು ಸಂಸ್ಕೃತಿ. ಮಾತನಾಡಬೇಕೆನಿಸುವುದು ಪ್ರಕೃತಿ; ಅದರಲ್ಲಿ ಮಿತಿ–ಮರ್ಯಾದೆಗಳು ಸಂಸ್ಕೃತಿ. ತೋಟದಲ್ಲಿ ಬಗೆಬಗೆಯ ರೂಪರೇಖೆಗಳ, ಬಣ್ಣಬಣ್ಣಗಳ ಎಲೆಹೂ ಮೆರೆದಾಗ ಪ್ರಕೃತಿ; ಅವನ್ನು ಬಿಡಿಸಿ ಹಾರತುರಾಯಿ ಕಟ್ಟಿದಾಗ ಸಂಸ್ಕೃತಿ. ಪ್ರಕೃತಿ ನಮ್ಮ ಜೀವನಕ್ಕಾಗಿ ಮೂಲಸಾಮಗ್ರಿಯನ್ನು ಒದಗಿಸುತ್ತಾಳೆ. ನಾವು ಅದನ್ನು ಪಕ್ವ ಯೋಜನೆಯರಿತು ಉಪಯೋಗಿಸಿಕೊಳ್ಳುತ್ತೇವೆ. ಅದೇ ಸಂಸ್ಕೃತಿ. ಕಾಡನ್ನು ತೋಟವಾಗಿ ಮಾಡುವುದು ಸಂಸ್ಕೃತಿ. ತಲೆಯ ಮೇಲೆ ಸೊಟ್ಟುಸೊಟ್ಟಾಗಿ ಸಿಕ್ಕು ಸಿಕ್ಕಾಗಿ ಕೂದಲಿರುವುದು ಪ್ರಕೃತಿ. ಕೆದರಿದ ಕೂದಲನ್ನು ಬಾಚಿ ಜಡೆ ಹಾಕಿ ಹೂ ಮುಡಿಸುವುದು ಸಂಸ್ಕೃತಿ. ತಾವಾಗಿ ಆಗಿರುವುದು ಪ್ರಕೃತಿ. ಆ ಪ್ರಕೃತಿಯನ್ನು ಮನುಷ್ಯಬುದ್ಧಿಯು ಹದಪಡಿಸಿದಾಗ ಆಗುವುದು ಸಂಸ್ಕೃತಿ. ನಮ್ಮ ದೇಹದ ಬಗೆಬಗೆಯ ಹಸಿವುಗಳು ಪ್ರಕೃತಿ; ಆಹಾರ ವಿಹಾರಗಳಿಗೆ ಯುಕ್ತಾಯುಕ್ತಾ ಸ್ಥಾನಸ್ಥಾನ ಕಾಲಾಕಾಲ ನಿಶ್ಚಯವು ಸಂಸ್ಕೃತಿ.

ಸಂಸ್ಕೃತಿಯು ಮೈಸೊಗಸು ಬಾಯಿಮಾತಿನ ಸೊಗಸುಗಳಿಗೆ ಮಾತ್ರ ಸೇರಿದುದ್ದಲ್ಲ; ಅದು ಬಹಿರಂಗದ ಸಂಸ್ಕೃತಿ. ಅದಕ್ಕಿಂತ ಮೇಲ್ಪಟ್ಟದ್ದು ಅಂತರಂಗದ ಸಂಸ್ಕೃತಿ. ಆಶೆ ಮೋಹಗಳು ಪ್ರಕೃತಿ; ನ್ಯಾಯ ವಿವೇಕಗಳು ಸಂಸ್ಕೃತಿ. ರೋಷಾಸೂಯೆಗಳು ಪ್ರಕೃತಿ; ಕ್ಷಮ ಸಹನೆಗಳು ಸಂಸ್ಕೃತಿ. ಹೀಗೆ ಮಾನಸ ವಾಚಕಗಳೆಂಬ ತ್ರಿಕರಣಗಳ ವ್ಯಾಪಾರದಲ್ಲಿಯೂ ಸಂಸ್ಕೃತಿಗೆ ಅವಕಾಶವುಂಟು.

ಗ್ರಂಥಕೃಪೆ: ಡಿವಿಜಿ ಅವರ ‘ಸಂಸ್ಕೃತಿ’

Post Comments (+)