ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ಕಾನ್‌ನಿಂದ ಹೈಟೆಕ್ ಅಡುಗೆ ಮನೆ

Last Updated 20 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ವಿಶಾಲವಾದ ಅಡುಗೆ ಮನೆ, ಸಾವಿರಾರು ಜನರಿಗೆ ಅಡುಗೆ ಮಾಡುವಷ್ಟು ದೊಡ್ಡದಾದ ಪಾತ್ರೆಗಳು, ಸಮಯಕ್ಕೆ ಸರಿಯಾಗಿ ಅಡುಗೆ ಮಾಡಲು ನೆರವಾಗುವ ಯಂತ್ರಗಳು, ದೊಡ್ಡದಾದ ಫ್ರಿಜ್‌, ಬಳಸಿದ ನೀರನ್ನು ಶುದ್ಧೀಕರಿಸುವ ನೀರಿನ ಘಟಕ.

ಸಾವಿರಾರು ಮಕ್ಕಳಿಗೆ ಊಟ ತಯಾರಿಸುತ್ತಿರುವ ಅಕ್ಷಯ ಪಾತ್ರೆ ಫೌಂಡೇಷನ್‌ ಜಿಗಣಿ ಬಳಿ ಹೊಸದಾಗಿ ನಿರ್ಮಿಸಿರುವ ಅತ್ಯಾಧುನಿಕ ಹಾಗೂ ಹೈಟೆಕ್‌ ಅಡುಗೆ ಮನೆಯ ಚಿತ್ರಣವಿದು!

2017ರ ನವೆಂಬರ್‌ನಲ್ಲಿ ಈ ನೂತನ ಅಡುಗೆ ಮನೆ ಕಾರ್ಯಾರಂಭ ಮಾಡಿದೆ. ಇದು ಬಹುತೇಕ ಯಾಂತ್ರೀಕೃತ ಅಡುಗೆ ಮನೆ. ಇಲ್ಲೀಗ ನಿತ್ಯ 12,400ಕ್ಕೂ ಹೆಚ್ಚು ಮಕ್ಕಳಿಗೆ ಬಿಸಿಯೂಟವ‌ನ್ನು ಸಿದ್ಧಪಡಿಸಲಾಗುತ್ತದೆ. ಜಿಗಣಿ ಸುತ್ತಮುತ್ತಲ ಸುಮಾರು 18 ಕಿ.ಮೀ ವ್ಯಾಪ್ತಿಯೊಳಗಿನ 78 ಸರ್ಕಾರಿ ಶಾಲೆಗಳಿಗೆ ಈ ಅಡುಗೆ ಮನೆಯಿಂದಲೇ ಊಟ ಸರಬರಾಜಾಗುತ್ತಿದೆ. ‌‌

2001ರಲ್ಲಿ ಆರಂಭವಾದ ಅಕ್ಷಯ ಪಾತ್ರೆ ಫೌಂಡೇಷನ್‌ ನಗರದಲ್ಲಿ ಎರಡು ವ್ಯವಸ್ಥಿತವಾದ ಆಹಾರ ತಯಾರಿಕಾ ಕೇಂದ್ರಗಳನ್ನು ಹೊಂದಿತ್ತು. ಆ ಮೂಲಕವೇ ಸಹಸ್ರಾರು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಪೂರೈಸುತ್ತಿತ್ತು. ಜಿಗಣಿ ಬಳಿಯ ಹೊಸ ಕೇಂದ್ರವೂ ಅಕ್ಷಯ ಪಾತ್ರೆಯ ಬಿಸಿಯೂಟ ತಯಾರಿಸುವ ಸಾಮರ್ಥ್ಯವನ್ನು ಹೆಚ್ಚಿಸಿದೆ.

ಎಡಬಿಡದೇ ಯಂತ್ರಗಳಿಗೆ ಸರಿಸಮವಾಗಿ ಕೆಲಸ ಮಾಡುವ ಇಲ್ಲಿನ ಕಾರ್ಮಿಕರ ಚಾಕಚಕ್ಯತೆ ವಿಶೇಷವಾದದ್ದು. ಬೆಳಿಗ್ಗೆ 4 ಗಂಟೆಯಿಂದಲೇ ಅಡುಗೆ ತಯಾರಿ ಕೆಲಸಗಳು ಆರಂಭವಾಗುತ್ತವೆ. ಇಲ್ಲಿ ಸ್ಥಳೀಯರಿಗೆ ಒತ್ತು ನೀಡಿ ಉದ್ಯೋಗ ಒದಗಿಸಲಾಗಿದೆ. ಬೆಳಿಗ್ಗೆಯಿಂದಲೇ ಆರಂಭವಾಗುವ ಅಡುಗೆ ತಯಾರಿ ಕೆಲಸಗಳು ಎರಡು ಪಾಳಿಗಳಲ್ಲಿ ಸಂಜೆ 5 ಗಂಟೆವರೆಗೂ ನಡೆಯುತ್ತದೆ.

ಅಡುಗೆ ಮಾಡುವ ವಿಧಾನ
ದಿನಸಿ ಹಾಗೂ ತರಕಾರಿಯನ್ನು ಇಡಲು ಪ್ರತ್ಯೇಕ ಸ್ಥಳವಿದ್ದು, ಆಲೂಗಡ್ಡೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ರೀತಿಯ ತರಕಾರಿಗಳನ್ನು ಫ್ರಿಜ್‌ನಲ್ಲಿ ಇಟ್ಟಿರಲಾಗುತ್ತದೆ. ಮೂರು ಹಂತದಲ್ಲಿ ತರಕಾರಿ ಸ್ವಚ್ಚತೆ ಕೆಲಸ ನಡೆಯುತ್ತದೆ. ತರಕಾರಿಗಳನ್ನು ಕತ್ತರಿಸಲು ಅತ್ಯಾಧುನಿಕ ಯಂತ್ರಗಳಿದ್ದು, ಅಗತ್ಯವಿದ್ದಲ್ಲಿ ಕಾರ್ಮಿಕರು ಅದಕ್ಕೆ ಕೈ ಜೋಡಿಸುತ್ತಾರೆ.

120 ಕೆ.ಜಿ ಅಕ್ಕಿ ಹಿಡಿಯುವಷ್ಟು ದೊಡ್ಡದಾದ ನಾಲ್ಕು ಕುಕ್ಕರ್‌ಗಳಿದ್ದು ಸಾವಿರಾರು ಮಕ್ಕಳಿಗೆ ಕೇವಲ 20– 30 ನಿಮಿಷದಲ್ಲಿ ಅನ್ನ ತಯಾರಾಗುತ್ತದೆ. ಹಾಗೆಯೇ 3,000 ಲೀಟರ್‌ ನೀರು ಹಿಡಿಸುವಷ್ಟು ದೊಡ್ಡದಾದ ಸಾಂಬರ್‌ ತಯಾರಿಸಲು ಬಳಸುವ ಪಾತ್ರೆಯಿದೆ. ಇವೆಲ್ಲವೂ ಕಾರ್ಮಿಕ ಸ್ನೇಹಿ ಯಂತ್ರಗಳಾಗಿವೆ.ಅಡುಗೆ ಮಾಡಲು ಶುದ್ಧೀಕರಿಸಿದ ನೀರನ್ನೇ ಬಳಸಲಾಗುತ್ತದೆ.

ಚಪಾತಿ ಮೇಕರ್‌: ಒಂದು ಗಂಟೆಗೆ ಸಾವಿರಕ್ಕೂ ಹೆಚ್ಚು ಚಪಾತಿ ತಯಾರಿಸುವ ಯಂತ್ರವೂ ಇದ್ದು, ಕಾರ್ಮಿಕರ ಕೆಲಸವನ್ನು ಕಡಿಮೆ ಮಾಡಿದೆ.

ಗುಣಮಟ್ಟ ಹಾಗೂ ತಾಪಮಾನ ಪರೀಕ್ಷೆ: ಪ್ರತಿದಿನ ಅಡುಗೆಯಾದ ನಂತರ ಅದರ ಗುಣಮಟ್ಟ ಪರೀಕ್ಷೆ ನಡೆಸಲಾಗುತ್ತದೆ. ಊಟದ ಸ್ಯಾಂಪಲ್‌ ಅನ್ನು ಹತ್ತಿರದಲ್ಲೇ ಇರುವ ಲ್ಯಾಬ್‌ಗೆ ಕಳುಹಿಸಿ ಗುಣಮಟ್ಟ ಪರೀಕ್ಷೆ ನಡೆಸಲಾಗುತ್ತದೆ. ಅದಾದ ನಂತರವೇ ಶಾಲೆಗಳಿಗೆ ಕಳುಹಿಸಲು, ಪ್ಯಾಕಿಂಗ್‌ ಮಾಡಲು ಆರಂಭಿಸುತ್ತಾರೆ.

ಇಲ್ಲಿ ಸಿದ್ಧವಾಗುವ ಅಡುಗೆಯನ್ನು ಸಂಸ್ಥೆಯಲ್ಲಿ ಇಟ್ಟಿರುವ ದೇವರಿಗೆ ನೈವೇದ್ಯೆ ಮಾಡುವುದು ಇವರು ನಡೆಸಿಕೊಂಡು ಬಂದಿರುವ ರಿವಾಜು. ಸಂಸ್ಥೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ವರ್ಗದವರೂ ಇದೇ ಊಟವನ್ನು ಮಾಡುತ್ತಾರೆ.

ಬಿಸಿಯಾದ ಅಡುಗೆ ಶಾಲೆ ತಲುಪುವ ಹೊತ್ತಿಗೆ ತಣ್ಣಗಾಗಬಹುದು. ಹಾಗಾಗಿ ಶಾಲೆಗೆ ಬರುವಷ್ಟರಲ್ಲಿ ಊಟದ ತಾಪಮಾನ 65 ಡಿಗ್ರಿ ಸೆಲ್ಸಿಯಸ್‌ ಇರುವಂತೆ ನೋಡಿಕೊಳ್ಳುವುದು ಸವಾಲಿನ ಕೆಲಸ ಎನ್ನುತ್ತಾರೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು. ಈ ಸವಾಲನ್ನು ಸ್ವೀಕರಿಸಿರುವ ಅಲ್ಲಿನ ಕಾರ್ಮಿಕ ವರ್ಗ ಶಾಲೆಗಳ ದೂರ ಮತ್ತು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಮಧ್ಯಾಹ್ನ ಊಟದ ವಿರಾಮ ಆರಂಭವಾಗುವ ಹೊತ್ತಿಗೆ ಬಿಸಿಊಟ ಶಾಲೆ ತಲುಪುವಂತೆ ಯೋಜನೆ ರೂಪಿಸಿಕೊಂಡಿದ್ದಾರೆ.ಶಾಲೆ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬಾಕ್ಸ್‌ಗಳಿಗೆ ಊಟ ತುಂಬಲಾಗುತ್ತದೆ.

ಬಗೆಬಗೆ ಊಟದ ಮೆನು: ಪಲಾವ್‌, ಚಪಾತಿ, ಅನ್ನ–ಸಾಂಬರ್‌, ರಸಂ, ಪೊಂಗಲ್‌, ಕಾರಾ ಪೊಂಗಲ್‌ ಇದು ವಾರದ ದಿನಗಳ ಮೆನು. ಬುಧವಾರ ಮತ್ತು ಶನಿವಾರ ಸಿಹಿ ಊಟ ಇರುತ್ತದೆ. ವಾರಕ್ಕೆ ಒಮ್ಮೆ ಚಪಾತಿ, ಅನ್ನ ರಸಂ ಕೊಡಲಾಗುತ್ತದೆ. ಇದರೊಟ್ಟಿಗೆ ಪ್ರತಿದಿನ ಊಟಕ್ಕೆ ಮೊಸರು ಇರುತ್ತದೆ.

ಶುಚಿತ್ವ:ಅಡುಗೆ ಮನೆಯಲ್ಲಿ ಕೆಲಸ ಮಾಡುವವರೆಲ್ಲರೂ ಕಡ್ಡಾಯವಾಗಿ ತಲೆಗೆ ಮಾಸ್ಕ್‌ ಬಳಸುತ್ತಾರೆ. ಅಡುಗೆ ಮನೆಯಲ್ಲಿ ಮಾತ್ರ ಬಳಸಲು ಪ್ರತ್ಯೇಕ ಚಪ್ಪಲಿಗಳು ಇವೆ.

ಪಾತ್ರೆ ತೊಳೆಯಲು ವಿಶಾಲವಾದ ಸ್ಥಳವಿದೆ. ಇದೆಲ್ಲದ್ದಕ್ಕೂ ಬಳಸಿದ ನೀರನ್ನು ಪುನರ್ಬಳಸಲು ನೀರು ಶುದ್ಧೀಕರಣ ಘಟಕವೂ ಇದೆ. ಕಟ್ಟಡದ ಆವರಣದಲ್ಲಿ ಬೆಳೆಸಿರುವ ಗಿಡಗಳಿಗೆ ಈ ನೀರುಣಿಸಲಾಗುತ್ತದೆ. ಒಂದು ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ ಈ ಅಡುಗೆ ಮನೆಯನ್ನು ಬಾಷ್‌ ಕಂಪನಿ ನಿರ್ಮಿಸಿಕೊಟ್ಟಿದೆ.
***
ಅಕ್ಷಯ ಪಾತ್ರೆ ಫೌಂಡೇಷನ್‌ ಬಗ್ಗೆ ಒಂದಿಷ್ಟು
ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದೊಂದಿಗೆ ಪೌಷ್ಟಿಕ ಆಹಾರ ಒದಗಿಸುವ ಮೂಲಕ ವಿದ್ಯಾರ್ಥಿಗಳ ಬೌದ್ಧಿಕ ಹಾಗೂ ದೈಹಿಕ ಬೆಳವಣಿಗೆಗೆ ಸಹಕಾರಿಯಾದ ಸಂಸ್ಥೆ ಅಕ್ಷಯ ಫೌಂಡೇಷನ್‌. 2001ರಲ್ಲಿ ಆರಂಭವಾದ ಈ ಸಂಸ್ಥೆಯು ಹಲವಾರು ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸರ್ಕಾರಿ ಶಾಲೆಗಳ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟ ಸರಬರಾಜು ಮಾಡುತ್ತಿದೆ.ಇದು ಮುಂದುವರೆದು ದೇಶದ 12 ರಾಜ್ಯಗಳಲ್ಲಿ ಒಟ್ಟು 38 ಅಡುಗೆ ಮನೆಗಳಲ್ಲಿ 14,264 ಶಾಲೆಗಳ ಒಟ್ಟು 17.49 ಲಕ್ಷ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಪೂರೈಸುತ್ತಿದೆ. ಈ ಬಾರಿ ಭಿನ್ನ ಪ್ರಯತ್ನದೊಂದಿಗೆ ಮಾನವ ಸಂಪನ್ಮೂಲಕ್ಕಿಂತ ಹೆಚ್ಚಾಗಿ ಯಂತ್ರಗಳನ್ನು ಬಳಸಿ ಹೆಚ್ಚಿನ ಶಾಲೆಗಳು ಹಾಗೂ ವಿದ್ಯಾರ್ಥಿಗಳಿಗೆ ಬಿಸಿಯೂಟ ಪೂರೈಸಲು ಅಕ್ಷಯ ಪಾತ್ರೆ ಸಜ್ಜಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT