ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯೋತ್ಸವ; ಇದು ಸಂಕ್ರಮಣ ಕಾಲ

Last Updated 14 ಆಗಸ್ಟ್ 2019, 14:31 IST
ಅಕ್ಷರ ಗಾತ್ರ

ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಸ್ವಾತಂತ್ರ್ಯದ ಬಗ್ಗೆ ವಿಭಿನ್ನ ವ್ಯಾಖ್ಯಾನಗಳಿವೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನ ರದ್ದಾಗಿರುವ ಸಂದರ್ಭದಲ್ಲಿ ಈ ಸ್ವಾತಂತ್ರ್ಯೋತ್ಸವ ಹಿಂದಿನದಕ್ಕಿಂತ ಹೆಚ್ಚು ಮಹತ್ವ ಪಡೆದುಕೊಂಡಿದೆ. ಸ್ವಾತಂತ್ರ್ಯ ಕಲ್ಪನೆಯ ಆತ್ಮಶೋಧವೂ ನಡೆಯುತ್ತಿದೆ. ಸಂವಿಧಾನ ತಜ್ಞರು, ನಿವೃತ್ತ ನ್ಯಾಯಮೂರ್ತಿಗಳು ಮತ್ತಿತರರು ‘ಮೆಟ್ರೊ’ ಜತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

**

ಈ ಸಲದ ಸ್ವಾತಂತ್ರ್ಯೋತ್ಸವವನ್ನು ಒಂದು ನಿರ್ದಿಷ್ಟ ರಾಜಕೀಯ ಸನ್ನಿವೇಶದ ಹಿನ್ನೆಲೆಯಲ್ಲಿ ವಿಮರ್ಶಿಸಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370 ಮತ್ತು 35ಎ ವಿಧಿಯನ್ನು ರದ್ದು ಪಡಿಸಲಾಗಿದೆ. ರಾಷ್ಟ್ರೀಯ ಏಕತೆಯ ಪ್ರಶ್ನೆಯ ಸವಾಲು ಎದುರಾದಾಗ ಸಹಜವಾಗಿ ಸರ್ಕಾರದ ಈ ನಿರ್ಧಾರದ ಆಧಾರದ ಮೇಲೆ ಚರ್ಚೆಗಳು ನಡೆಯುತ್ತಿವೆ.

ಸಂವಿಧಾನದ 370ನೇ ವಿಧಿ ರದ್ದು ವಿಚಾರದಲ್ಲಿ ಯಾರ ನಂಬಿಕೆ ಗಳಿಸಬೇಕಾಗಿತ್ತೋ ಅವರ ವಿಶ್ವಾಸವನ್ನು ಗಳಿಸಿದ್ದಾರೆಯೇ ಎಂಬ ಪ್ರಶ್ನೆಗೆ ಬಹುಶಃ ಇನ್ನೆರಡು ತಿಂಗಳಲ್ಲಿ ಉತ್ತರ ಸಿಗ ಗಲಿದೆ.

- ಪ್ರೊ. ಸಂದೀಪ್‌ ಶಾಸ್ತ್ರಿ,ಜೈನ್ ವಿಶ್ವವಿದ್ಯಾಲಯದ ಕುಲಪತಿ

**

ಏಳು ದಶಕಗಳ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಬಾರಿಗೆಧ್ವಜ ಹಾರುತ್ತಿರುವುದು ಈ ಬಾರಿಯ ವಿಶೇಷ.

- ಡಾ.ಎಚ್.ರಾಮಕೃಷ್ಣ,ಪ್ರಾಂಶುಪಾಲರು, ಸಪ್ತಗಿರಿ ಎಂಜಿನಿಯರಿಂಗ್‌ ಕಾಲೇಜ್‌

**

ಪ್ರಜೆಗಳು ಅಳಿದುಳಿದ ಸ್ವಾತಂತ್ರ್ಯವನ್ನೂ ಕಳೆದುಕೊಳ್ಳಿತ್ತಿದ್ದಾರೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿಜನರ ಮೂಲಭೂತ ಸ್ವಾತಂತ್ರ್ಯ ಪುನರ್‌ ಸ್ಥಾಪಿಸಬೇಕಾಗಿದ್ದ ಸುಪ್ರೀಂ ಕೋರ್ಟ್ ಕೂಡ ಜಮ್ಮು ಮತ್ತು ಕಾಶ್ಮೀರ ಸಹಜ ಸ್ಥಿತಿಗೆ ಬರಲಿ ಎಂದು ಹೇಳಿರುವುದು ಆಘಾತಕಾರಿ. ಜಮ್ಮು ಮತ್ತು ಕಾಶ್ಮೀರದ ಜನತೆ ಸೇರಿದಂತೆ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ, ಸಂಘಶಕ್ತಿ, ಮುಕ್ತವಾಗಿ ಸಂಚರಿಸುವ ಸ್ವಾತಂತ್ರ್ಯ, ಉದ್ಯೋಗ ಸ್ವಾತಂತ್ರ್ಯಗಳಂತಹ ಮೂಲಭೂತ ಸ್ವಾತಂತ್ರ್ಯ ದೊರೆಯಬೇಕು. ರಕ್ಷಣೆಗೆ ಸರ್ಕಾರ ಸೇರಿದಂತೆ ಎಲ್ಲರೂ ದೃಢ ಸಂಕಲ್ಪ ಮಾಡಬೇಕಿದೆ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಬೇಕಾದರೆ ಇನ್ನುಳಿದ ಭಾರತೀಯರಂತೆ ಕಾಶ್ಮೀರಿಗಳಿಗೂ ಮುಕ್ತ ಅವಕಾಶ, ಸಮಾನತೆ ಮತ್ತು ಸ್ವತಂತ್ರ ಲಭಿಸಬೇಕು. ಸ್ವಾತಂತ್ರ್ಯ ಕೊಡದೆ ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂದು ಹೇಳಿದರೆ ನಾವು ಆಷಾಢಭೂತಿಗಳಾಗುತ್ತೇವೆ. ಇದು ಬಹಳ ಮುಖ್ಯವಾದ ಕಾಲಘಟ್ಟ. ಎಲ್ಲ ಜಾತಿ, ಧರ್ಮ, ಕೋಮುಗಳಿಗೂ ಸಮಾನತೆ, ಸ್ವಾತಂತ್ರ್ಯ ಲಭಿಸಬೇಕು. ಅದು ಇಲ್ಲದಿದ್ದರೆ ಸ್ವಾತಂತ್ರ್ಯಕ್ಕೆ ಅರ್ಥ ಇರುವುದಿಲ್ಲ.

ಪ್ರೊ. ರವಿವರ್ಮಕುಮಾರ್, ಸಂವಿಧಾನ ತಜ್ಞ ಮತ್ತು ವಕೀಲರು

**

ಪ್ರತಿದಿನ ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ, ಆಚರಿಸುತ್ತಿದ್ದೇವೆ.ದೇಶದ ಪ್ರಗತಿ ಮತ್ತು ನಾಗರಿಕರ ಶಾಂತಿಯುತ ಜೀವನಕ್ಕೆ ಸ್ವಾತಂತ್ರ್ಯ ರಕ್ಷಣೆ ಎಲ್ಲರ ಹೊಣೆ. ಸರ್ಕಾರ ಮಾತ್ರವಲ್ಲ, ನಾಗರಿಕರೂ ಉತ್ತರದಾಯಿಯಾಗಿರುತ್ತಾರೆ.

– ನಂಜಪ್ಪ, ನಿವೃತ್ತ ಮೇಜರ್‌ ಜನರಲ್‌

**

ಸ್ವಾತಂತ್ರ್ಯ ಬಂದ ನಂತರ ನಾವು ಒಂದಿಷ್ಟು ಸಾಧನೆ ಮಾಡಿದ್ದೇವೆ. ಪಾಳೆಗಾರಿಕೆ ಕೊನೆಗೊಳಿಸಿ ಪ್ರಜಾಪ್ರಭುತ್ವ ಸ್ಥಾಪಿಸಿದ್ದೇವೆ. ಸ್ವಾತಂತ್ರ್ಯಕ್ಕೂ ಮೊದಲು ಗುಲಾಮರಂತೆ ಬದುಕುತ್ತಿದ್ದ ದಲಿತರು, ಮಹಿಳೆಯರು, ಬುಡಕಟ್ಟು ಜನಾಂಗದವರು ಮತ್ತು ಅಲ್ಪಸಂಖ್ಯಾತರ ಜೀವನ ಗುಣಮಟ್ಟ ಸ್ವಲ್ಪಮಟ್ಟಿಗೆ ಸುಧಾರಿಸಿದೆ. ಚಮ್ಮಾರನ ಮಗ ರಾಷ್ಟ್ರಪತಿಯಾಗಿದ್ದಾರೆ. ಸಾಮಾನ್ಯ ಕುಟುಂಬದಿಂದ ಬಂದ ವ್ಯಕ್ತಿಯೊಬ್ಬರು ಪ್ರಧಾನಿ ಪಟ್ಟ ಅಲಂಕರಿಸಿದ್ದಾರೆ. ಇದೆಲ್ಲಾ ಸಾಧ್ಯವಾದದ್ದು ನಾವು ಗಳಿಸಿದ ಸ್ವಾತಂತ್ರ್ಯ ಮತ್ತು ಸಂವಿಧಾನ ಕೊಟ್ಟ ಅಧಿಕಾರದಿಂದ. ಆ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಸಂದಿಗ್ಧ ಮತ್ತು ಸಂಕ್ರಮಣ ಸ್ಥಿತಿಯಲ್ಲಿ ನಾವಿದ್ದೇವೆ. ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯತೀತ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಅಪ್ರಸ್ತುತಗೊಳಿಸುವ, ಮೂಲಭೂತ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿವೆ. ದೇಶದಲ್ಲಿ ಬಹುತ್ವ ದೊಡ್ಡ ಗಂಡಾಂತರ ಎದುರಿಸುತ್ತಿದೆ. ಏಕ ಸಂಸ್ಕೃತಿ, ಏಕ ಭಾಷೆ ಮತ್ತು ಒಂದು ಧರ್ಮವನ್ನು ಹೇರುವ ಕೆಲಸ ನಡೆಯುತ್ತಿದೆ. ಆರ್ಥಿಕ ವಿಷಯಗಳು ಮತ್ತು ಅನ್ನ, ಬಟ್ಟೆ, ಉದ್ಯೋಗ, ಆರೋಗ್ಯದಂಥ ಬದುಕಿನ ಸಮಸ್ಯೆಗಳಿಗೆ ಆದ್ಯತೆ ಸಿಗದೆ, ಭಾವನಾತ್ಮಕ ವಿಚಾರಗಳಿಗೆ ಪ್ರಾಧ್ಯಾನತೆ ಸಿಗುತ್ತಿದೆ. ಈ ಸಂಕ್ರಮಣ ಕಾಲಘಟ್ಟದಲ್ಲಿ ಸ್ವಾತಂತ್ರ್ಯದ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.

– ಎಚ್‌.ಎನ್‌. ನಾಗಮೋಹನ ದಾಸ್‌, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ

**

ಸಂವಿಧಾನದ 370 ಮತ್ತು 35 ಎ ವಿಧಿ ರದ್ದು ಪಡಿಸಿರುವುದರಿಂದ ಕಾಶ್ಮೀರಿಗಳಾದ ನಮಗೆ ಈಗ ನಿಜವಾದ ಸ್ವಾತಂತ್ರ್ಯ ಲಭಿಸಿದೆ. ಕಾಶ್ಮೀರ ಕಣಿವೆ ಮತ್ತು ಲಡಾಖ್‌ನಲ್ಲಿ ತ್ರಿವರ್ಣ ಧ್ವಜ ಹಾರುವುದನ್ನು ಈ ಬಾರಿ ಕಣ್ತುಂಬಿಕೊಳ್ಳಬಹುದು. ಇದನ್ನು ಯಾರಿಂದಲೂ ತಡೆಯುವುದು ಸಾಧ್ಯವಿಲ್ಲ. ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿ ಈ ಬಾರಿಯ ಸ್ವಾತಂತ್ರ್ಯೋತ್ಸವ ಹೆಚ್ಚು ವಿಶೇಷ ಮತ್ತು ಬಹಳ ದಿನ ನೆನಪಿನಲ್ಲಿ ಉಳಿಯಲಿದೆ.

– ಆರ್‌.ಕೆ. ಮಟ್ಟೂ, ಕಾಶ್ಮೀರ ಪಂಡಿತ, ಸಮುದಾಯ ಸಂಘಟನೆಯ ಮುಖ್ಯಸ್ಥ

**

ವಿಶ್ವದ ಬಲಿಷ್ಠ ದೇಶಗಳ ಸಾಲಿನಲ್ಲಿ ಭಾರತ ಗೌರವ ಸ್ಥಾನ ಪಡೆದಿದೆ. ದೇಶದ ವಿಕಾಸ, ಭದ್ರತೆ ಮತ್ತು ಏಕತೆಯನ್ನು ಸಾಧಿಸಲಾಗಿದೆ. ಮುಂಬರುವ ವರ್ಷಗಳಲ್ಲಿ ನಾಡು ಹಲವು ರಂಗಗಳಲ್ಲಿ ಇನ್ನಷ್ಟು ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಸಂಕಲ್ಪ ತೊಡಲು ಸುಸಂದರ್ಭ ಇದೆ.

– ವಿ. ನಾಗರಾಜ್‌, ಆರ್‌ಎಸ್ಎಸ್‌ , ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT