ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾತ್ರಿ ಸಂಭ್ರಮ: ಎಲ್ಲೆಲ್ಲೂ ಶಿವನಾಮ

Last Updated 20 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ
ADVERTISEMENT
""

ನಗರದಲ್ಲಿ ಶಿವನಿಗೆ ಪ್ರಿಯವಾದ ‘ಮಹಾ ಶಿವರಾತ್ರಿ’ ಸಂಭ್ರಮ ಮನೆ ಮಾಡಿದೆ. ಇದು ಜಗವೆಲ್ಲ ಶಿವಮಯವಾಗುವ ಸಮಯ.ಭಕ್ತಿ, ಭಾವದಿಂದ ಮಹಾ ಶಿವರಾತ್ರಿ ಜಾಗರಣೆಗೆ ಶಿವಭಕ್ತರು ಸಜ್ಜಾಗುತ್ತಿದ್ದಾರೆ.

ನಗರದ ಪುರಾತನ ಶಿವಾಲಯಗಳಾದ ಗವಿಪುರಂನ ಗವಿ ಗಂಗಾಧರೇಶ್ವರ, ಮಲ್ಲೇಶ್ವರದಕಾಡು ಮಲ್ಲೇಶ್ವರ, ಟೆಂಪಲ್‌ ಸ್ಟ್ರೀಟ್‌ನ ದಕ್ಷಿಣಮುಖ ನಂದಿ ತೀರ್ಥ, ಹಲಸೂರಿನ ಸೋಮೇಶ್ವರ,ಜರಗನಹಳ್ಳಿ ಗಂಗಾಧರೇಶ್ವರ ಸ್ವಾಮಿ,ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದ ಶ್ರೀಕಂಠೇಶ್ವರ ಸ್ವಾಮಿ, ಕೋಣನಕುಂಟೆ ಚಂದ್ರಚೂಡೇಶ್ವರ,ಜರಗನಹಳ್ಳಿ ಗಂಗಾಧರೇಶ್ವರ ಸ್ವಾಮಿ, ಎಚ್‌ಎಎಲ್ ಏರ್‌ಪೋರ್ಟ್ ರಸ್ತೆಯಬೃಹತ್‌ ಶಿವನ ಮೂರ್ತಿ,ಚಾಮರಾಜಪೇಟೆ ಮಲೆ ಮಹದೇಶ್ವರ ದೇವಸ್ಥಾನ ಸೇರಿದಂತೆ ನಗರದಲ್ಲಿ ನೂರಾರು ಶಿವಾಲಯಗಳು ಮಹಾ ಶಿವರಾತ್ರಿ ಆಚರಣೆಗೆ ಸಜ್ಜಾಗಿವೆ.

ಶಿವರಾತ್ರಿ ಪ್ರಯುಕ್ತ ನಗರದ ನೂರಾರು ಶಿವಾಲಯಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ ಮತ್ತು ರುದ್ರಾಭಿಷೇಕ, ಕ್ಷೀರಾಭಿಷೇಕಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.ಕೆಲವು ದೇವಾಲಯಗಳಲ್ಲಿ ಶಿವಲಿಂಗಕ್ಕೆ ಕ್ಷೀರಾಭಿಷೇಕ ಮಾಡಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.’ಓಂ ನಮಃ ಶಿವಾಯ’ ಮಂತ್ರಗಳು, ಶಿವನಾಮ ಸ್ಮರಣೆ, ಜಪ, ತಪಗಳಿಗೆ ವ್ಯವಸ್ಥೆ ಮಾಡಲಾಗಿದೆ.

ಮಾಘ ಮಾಸ ಶುಕ್ಲ ಪಕ್ಷದಂದು ಶಿವರಾತ್ರಿ ಬಂದಿದ್ದು, ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಖರೀದಿಗೆ ಜನರು ಮುಗಿ ಬಿದ್ದಿದ್ದಾರೆ.ದೇವಸ್ಥಾನಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಕಾಡು ಮಲ್ಲೇಶ್ವರ ದೇವಸ್ಥಾನದ ಎದುರು ನಿಲ್ಲಿಸಲಾಗಿರುವ ಬೃಹತ್‌ಶಿವನ ವಿಗ್ರಹ ಗಮನ ಸೆಳೆಯುತ್ತಿದೆ.

ಜಾಗರಣೆ ಹಿನ್ನೆಲೆಯಲ್ಲಿಸಂಜೆಯ ನಂತರ ನಗರದ ನಾನಾ ದೇವಸ್ಥಾನ, ಮೈದಾನಗಳಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು, ದೇವಸ್ಥಾನ ಆಡಳಿತ ಮಂಡಳಿಗಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿವೆ.ರಾತ್ರಿಯಿಡೀಶಿವ ಸಂಗಮ, ಶಿವ ಅಂತ್ಯಾಕ್ಷರಿ, ಶಿವ ಧ್ವನಿ, ಶಿವ ಸಂಗಂ ಭಜನೆ, ಭಕ್ತಿಗೀತೆಗಳ ಕಾರ್ಯಕ್ರಮ ನಡೆಯಲಿವೆ.

ಉಪವಾಸ ಮತ್ತು ಜಾಗರಣೆಶಿವರಾತ್ರಿಯ ಮುಖ್ಯ ಅಂಗ. ದಿನವಿಡೀ ಉಪವಾಸ ಮತ್ತು ಜಾಗರಣೆ ಇಂದ್ರೀಯ ನಿಗ್ರಹ ಮತ್ತುವೈರಾಗ್ಯ ಭಾವ ಮೂಡಲು ಸಹಾಯ. ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯನ್ನು ಪೂಜೆಗೆ ಬಳಸುವುದರಿಂದ ಹೆಚ್ಚು ಆಮ್ಲಜನಕ ಹೊರ ಸೂಸುತ್ತದೆ. ಇದರಿಂದ ಉಸಿರಾಟದ ತೊಮದರೆ ನಿವಾರಣೆಯಾಗುತ್ತದೆ ಎಂದು ಕಾಡುಮಲ್ಲೇಶ್ವರ ದೇವಸ್ಥಾನದ ಅರ್ಚಕ ಗಂಗಾಧರ ದೀಕ್ಷಿತ್‌ ಶಿವರಾತ್ರಿಯ ಮಹತ್ವ ವಿವರಿಸಿದರು.

ನಗರದ ಶಿವಾಲಯಗಳು

ಮಲ್ಲೇಶ್ವರದ ಕಾಡು ಮಲ್ಲೇಶ್ವರ ಮತ್ತು ನಂದಿತೀರ್ಥ ದೇವಸ್ಥಾನ

ಮಲ್ಲೇಶ್ವರ ಟೆಂಪಲ್‌ ಸ್ಟ್ರೀಟ್‌ನಲ್ಲಿರುವ 17ನೇ ಶತಮಾನದ ಕಾಡು ಮಲ್ಲೇಶ್ವರ ಮತ್ತು ನಂದಿತೀರ್ಥ ದೇವಸ್ಥಾನಗಳು ಬೆಂಗಳೂರಿನ ಪುರಾತನ ದ್ರಾವಿಡ ಶೈಲಿಯ ಶಿವ ದೇವಾಲಯಗಳು. ಕಾಡು ಮಲ್ಲೇಶ್ವರದ ಎದುರಿಗಿರುವ ನಂದೀಶ್ವರ ದೇವಸ್ಥಾನ ಇಲ್ಲಿಯ ಪ್ರಮುಖ ಆಕರ್ಷಣೆ. ನಂದಿ ಬಾಯಿಂದ ನಿರಂತರವಾಗಿ ಝರಿಯಾಗಿ ಹರಿಯುವ ನೀರು ಲಿಂಗದ ಮೇಲೆ ಬೀಳುತ್ತದೆ. ವರ್ಷವಿಡಿ ಶಿವಲಿಂಗಕ್ಕೆ ಜಲಾಭಿಷೇಕ ನಡೆಯುತ್ತದೆ. ಶಿವಾಜಿ ಮಹಾರಾಜದ ಸಹೋದರ ಎಕ್ಕೋಜಿ (ವೆಂಕೋಜಿ) ಈ ದೇವಾಲಯ ನಿರ್ಮಿಸಿದ ಎಂಬ ಪ್ರತೀತಿ ಇದೆ. ಶಿವನನ್ನು ಮಲ್ಲೇಶ್ವರ ಎಂದು ಪೂಜಿಸಲಾಗುತ್ತದೆ. ಮಲ್ಲೇಶ್ವರನಿಂದಲೇ ಈ ಪ್ರದೇಶಕ್ಕೆ ಮಲ್ಲೇಶ್ವರ ಎಂಬ ಹೆಸರು ಬಂದಿದೆ.

ಹಲಸೂರಿನ ಸೋಮೇಶ್ವರ ದೇವಸ್ಥಾನ

ಹಲಸೂರಿನ ಸೋಮೇಶ್ವರ ಬೆಂಗಳೂರಿನ ಪುರಾತನ ಶಿವ ದೇವಾಲಯ. ಹೊಯ್ಸಳ ಶೈಲಿಯಲ್ಲಿರುವ ಶಿವ ದೇವಾಲಯವನ್ನು 13ನೇ ಶತಮಾನದಲ್ಲಿ ಹೊಯ್ಸಳರು ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಬೆಂಗಳೂರು ನಿರ್ಮಾತ ಕೆಂಪೇಗೌಡರು ದೇವಸ್ಥಾನ ಜೀರ್ಣೋದ್ಧಾರ ಮಾಡಿರುವುದಾಗಿ ಇತಿಹಾಸ ಹೇಳುತ್ತದೆ. ಶಿವರಾತ್ರಿಯ ದಿನ ಬೆಂಗಳೂರಿನ ಅನೇಕ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.

ಗವಿಪುರಂನ ಗವಿ ಗಂಗಾಧರೇಶ್ವರ ದೇವಾಲಯ

ಕಾಡು ಮಲ್ಲೇಶ್ವರ ಮತ್ತು ಸೋಮೇಶ್ವರದಂತೆ ಬಸವನಗುಡಿಯ ಗವಿಪುರಂನ ಗವಿ ಗಂಗಾಧರೇಶ್ವರ ದೇವಸ್ಥಾನ ಕೂಡ ಬೆಂಗಳೂರಿನ ಅತ್ಯಂತ ಪುರಾತನ ಶಿವನ ದೇವಸ್ಥಾನ. 9ನೇ ಶತಮಾನದಲ್ಲಿ ಇದನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಮಕರ ಸಂಕ್ರಾಂತಿಯಂದು ವಿಶಿಷ್ಟ ವಿದ್ಯಮಾನಕ್ಕೆ ಈ ದೇವಸ್ಥಾನ ಸಾಕ್ಷಿಯಾಗುತ್ತದೆ. ಸೂರ್ಯನ ಮೊದಲ ಕಿರಣಗಳು ನಂದಿಯ ಕೊಂಬುಗಳ ಮೂಲಕ ಹಾಯ್ದು ಶಿವಲಿಂಗವನ್ನು ಸ್ಪರ್ಶಿಸುತ್ತವೆ. ದಕ್ಷಿಣ ಬೆಂಗಳೂರು ಭಾಗದ ಶಿವಭಕ್ತರು ಶಿವರಾತ್ರಿಯಂದು ಇಲ್ಲಿ ಸೇರುತ್ತಾರೆ.

ಕಲಾಸಿಪಾಳ್ಯದ ಜಲಕಂಠೇಶ್ವರ

ಕಲಾಸಿಪಾಳ್ಯದಲ್ಲಿರುವ ಕೋಟೆ ಜಲಕಂಠೇಶ್ವರ ದೇವಸ್ಥಾನ ಕೂಡ ಶಿವ ದೇವಸ್ಥಾನವಾಗಿದ್ದು ಚೋಳರು ನಿರ್ಮಿಸಿದ್ದಾರೆ. ಕೆಂಪೇಗೌಡರ ಕಾಲಕ್ಕೆ ಪುನರುಜ್ಜೀವನಗೊಂಡಿದೆ. ಇಲ್ಲಿ ಶಿವನನ್ನು ಜಲಕಂಠೇಶ್ವರ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ.

ಮಂಜುನಾಥ ಸ್ವಾಮಿ ದೇವಸ್ಥಾನ

ಬನಶಂಕರಿಯ ಬಿಡಿಎ ವಾಣಿಜ್ಯ ಕಾಂಪ್ಲೆಕ್ಸ್‌ ಬಳಿ ಇರುವ ಧರ್ಮಗಿರಿಯ ಮಂಜುನಾಥ ಸ್ವಾಮಿ ದೇವಸ್ಥಾನ ಅತ್ಯಂತ ಪ್ರಸಿದ್ಧ ಶಿವ ದೇವಾಲಯಗಳಲ್ಲಿ ಒಂದು. ಶಿವಲಿಂಗವನ್ನು ಮಂಜುನಾಥ ಸ್ವಾಮಿ ಎಂದು ಕರೆಯಲಾಗುತ್ತದೆ.

ಬಳಪೇಟೆಯ ಕಾಶಿ ವಿಶ್ವನಾಥ

ಬೆಂಗಳೂರಿನ ಹೃದಯಭಾಗವಾದ ಬಳೆಪೇಟೆಯಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನ ಪುರಾತನ ಶಿವ ದೇವಸ್ಥಾನ. ಇಲ್ಲಿ ಶಿವನನ್ನು ಕಾಶಿಯ ವಿಶ್ವನಾಥನ ರೂಪದಲ್ಲಿ ಪೂಜಿಸಲಾಗುತ್ತದೆ.

ಕೆಂಪ್ ಫೋರ್ಟ್ ಶಿವೋಹಂ

ಶಿವನ ದೇವಾಲಯಗಳಲ್ಲಿ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಎಚ್‌ಎಎಲ್ ಏರ್‌ಪೋರ್ಟ್ ರಸ್ತೆಯಲ್ಲಿರುವ ಕೆಂಪ್‌ಫೋರ್ಟ್‌ ಬಳಿಯ ಶಿವೋಹಂ. ಆಕಾಶಕ್ಕೆ ಮುಖ ಮಾಡಿ ನಿಂತ ಬಿಳಿ ಬಣ್ಣದ 65 ಅಡಿ ಎತ್ತರದ ಶಿವನ ಬೃಹತ್‌ ಪ್ರತಿಮೆ. ಬೆಂಗಳೂರಿನ ಜನಪ್ರಿಯ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ.

ದ್ವಾದಶ ಜ್ಯೋತಿರ್ಲಿಂಗ

ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನ ಶ್ರೀನಿವಾಸ ಪುರದ ಓಂಕಾರ ಬೆಟ್ಟದ ಓಂಕಾರ ಆಶ್ರಮದಲ್ಲಿದೆ. ಭವ್ಯ ಮತ್ತು ಬೃಹತ್‌ ಶಿವಾಲಯದಲ್ಲಿ ಓಂಕಾರೇಶ್ವರ ಸೇರಿದಂತೆ 12 ಜ್ಯೋತಿರ್ಲಿಂಗಗಳಿವೆ. ಶಿವರಾತ್ರಿ ಸಮಯದಲ್ಲಿ ಸಾವಿರಾರು ಶಿವಭಕ್ತರು ಇಲ್ಲಿಗೆ ಬರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT