ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕರ್ಷಕ ಅರುಂಧತಿ

Last Updated 3 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ದುಂಡನೆ ಮುಖ, ಮುದ್ದಾದ ನಗು, ಆಕರ್ಷಕ ನಯನಗಳು... ನಟಿ ಅರುಂಧತಿಗೆ ಚೆಲುವೆ ಎಂಬ ಪಟ್ಟ ಕೊಟ್ಟಿವೆ. ಇಂಥ ಸುಂದರಿ ತಮ್ಮ ದೇಹಾಕಾರವನ್ನು ನಿಭಾಯಿಸುವ ಬಗೆಯನ್ನು ಇಲ್ಲಿ ಹಂಚಿಕೊಂಡಿದ್ದಾರೆ.

`ದಕ್ಷಿಣ ಭಾರತೀಯರಿಗೆ ದುಂಡನೆ ಸುಂದರಿಯರೇ ಇಷ್ಟ. ಅದರಿಂದ ಅತಿಯಾಗಿ ಸಣ್ಣಗಾಗಲು ನಾನು ಇಷ್ಟಪಡುವುದಿಲ್ಲ' ಎನ್ನುವ ಈ ದುಂಡುಮಲ್ಲಿಗೆ ಬೆಂಗಳೂರಿನವರು. `ಆಂತರ‌್ಯ' ಚಿತ್ರದಲ್ಲಿ ನಟಿಸಿ `ಅಗ್ರಜ' ಚಿತ್ರದಲ್ಲಿ ದರ್ಶನ್‌ಗೆ ಜೊತೆಯಾಗಿರುವ ಇರುವ ತಮಿಳಿನಲ್ಲಿ ಬಿಜಿ. ಕನ್ನಡವನ್ನು ಸುಲಲಿತವಾಗಿ ಮಾತನಾಡಬಲ್ಲ ಅರುಂಧತಿ ನಿಯಮಿತವಾಗಿ ವ್ಯಾಯಾಮವನ್ನು ನೆಚ್ಚಿಕೊಂಡವರಲ್ಲ.

ಬದಲಿಗೆ ಸಣ್ಣಂದಿನಿಂದ ರೂಢಿಯಾದ ನೃತ್ಯ ಅವರ ಕೈ ಹಿಡಿದಿದೆ. `ನಾನು ಪ್ರತಿದಿನ ತಪ್ಪದೇ ಡಾನ್ಸ್ ಮಾಡ್ತೀನಿ. ಅದರಿಂದಲೇ ಹೀಗಿರೋದು. ನನಗೆ ಎಲ್ಲಾ ರೀತಿಯ ಡಾನ್ಸ್ ಬರುತ್ತೆ. ಶಾಸ್ತ್ರೀಯವಾಗಿ ಯಾವ ಡಾನ್ಸನ್ನು ಕಲಿತಿಲ್ಲ. ಆದರೆ ಎಲ್ಲವನ್ನೂ ಮಾಡಬಲ್ಲೆ. ಅದರಲ್ಲೂ ನನಗೆ ಜಾನಪದ ನೃತ್ಯ ಎಂದರೆ ಬಲುಮೆಚ್ಚು' ಎನ್ನುವ ಈ ಸುಂದರಿಗೆ ಡಾನ್ಸ್ ಕಲಿಸಿದವರು ಅವರಕ್ಕ ಆದಿಲಕ್ಷ್ಮಿಯಂತೆ.

`ನನ್ನಕ್ಕ ನನಗೆ ಡಾನ್ಸ್ ಕಲಿಸದಿದ್ದರೆ ನಾನು ನಟನಾಲೋಕಕ್ಕೆ ಆತ್ಮವಿಶ್ವಾಸದಿಂದ ಕಾಲಿಡಲು ಆಗುತ್ತಿರಲಿಲ್ಲ. ಇನ್ನು ಮೈಕಟ್ಟಿಗಾಗಿ ಜಿಮ್‌ಗೆ ಹೋಗಬೇಕಿತ್ತೇನೋ? ಅಕ್ಕನ ಸಲಹೆಯಂತೆ ಡಾನ್ಸ್ ಒಲಿಯಿತು. ಅದೇ ನನ್ನ ಕೈ ಹಿಡಿದಿದೆ' ಎಂದು ನುಡಿಮುತ್ತು ಉದುರಿಸುತ್ತಾರೆ.

ಇನ್ನು ಮಾಂಸಾಹಾರಿಯಾದ ಅರುಂಧತಿಗೆ ಕೋಳಿಯ ಲಿವರ್, ಮೇಕೆಯ ಹೃದಯ ತಿನ್ನುವುದು ಎಂದರೆ ಖುಷಿ. `ಹೌದು ನಾನು ಮಾಂಸಾಹಾರಿ. ಅದೇ ನನಗಿಷ್ಟ. ಮೀನೂಟವೂ ಇಷ್ಟ. ವಂಜ್ರಂ ಮೀನನ್ನು ತುಂಬಾ ಇಷ್ಟಪಟ್ಟು ತಿನ್ನುತ್ತೇನೆ' ಎನ್ನುವ ಅವರು ರಾಗಿಮುದ್ದೆ ಪ್ರಿಯೆ.

`ಗೋಧಿ ಮತ್ತು ರಾಗಿ ಮುದ್ದೆಗಳನ್ನು ಅಮ್ಮ ಮಾಡುತ್ತಾರೆ. ಅದನ್ನು ಪ್ರತಿದಿನ ತಿನ್ನುತ್ತೇನೆ. ಅಮ್ಮ ಮಾಡುವ ಜೋಳದ ರೊಟ್ಟಿ, ಪುರಿ ಉಪ್ಪಿಟ್ಟು ತುಂಬಾ ಇಷ್ಟ. ಅಪರೂಪಕ್ಕೆ ಅಮ್ಮನ ಕೈಯಿಂದ ಅವುಗಳನ್ನು ಮಾಡಿಸಿಕೊಂಡು ಸವಿಯುತ್ತೇನೆ. ಎಣ್ಣೆಯಲ್ಲಿ ಕರಿದ ಪದಾರ್ಥಗಳು ನನಗೆ ಮೊದಲಿನಿಂದಲೂ ಇಷ್ಟವಾಗುವುದಿಲ್ಲ.

ಆದರೆ ಗೋಬಿ ಮಂಚೂರಿ ಎಂದರೆ ಪಂಚಪ್ರಾಣ. ದಪ್ಪಗಾಗುವೆ ಎಂಬ ಕಾರಣಕ್ಕೆ ಅದನ್ನು ತ್ಯಜಿಸಿರುವೆ. ತಿನ್ನಲೇಬೇಕು ಎನಿಸಿದ ದಿನ ಎರಡು ಪೀಸ್ ತಿಂದು ಸುಮ್ಮನಾಗುವೆ' ಎಂದು ವಿವರಿಸುತ್ತಾರೆ. ಇನ್ನು `ಆರೋಗ್ಯವಾಗಿರಲು ಯಾವಾಗಲೂ ನಗುನಗುತ್ತಾ ಇರುವುದು ಅತಿ ಮುಖ್ಯ' ಎನ್ನುವ ಈ ಹುಡುಗಿಗೆ ಆದರ್ಶ ನಟಿ ಎನಿಸಿಕೊಳ್ಳಬೇಕೆಂಬಾಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT