ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಅಮ್ಮ ಹಿಂಗ್ಯಾಕೆ?

Last Updated 6 ಮೇ 2016, 19:30 IST
ಅಕ್ಷರ ಗಾತ್ರ

ಈ ಅಮ್ಮ ಇರೋದೇ ಹೀಗೆ. ಬೆಳ್ಳಂಬೆಳಿಗ್ಗೆ ಕಣ್ಣು ಬಿಡುವ ಮೊದಲೇ ಅವಳಿಗೆ ಚಿಂತೆ.

ಮಗ/ಮಗಳ ಟಿಫನ್‌ ಬಾಕ್ಸ್‌ಗೆ ಏನೆಂದು ನಿನ್ನೆ ರಾತ್ರಿಯೇ ನಿರ್ಧರಿಸಿಕೊಂಡಿದ್ದರೂ, ಬೆಳಿಗ್ಗೆ ಕಣ್ಣು ಬಿಟ್ಟೊಡನೇ ಒಂದಿನಿತೂ ತಡ ಮಾಡದೇ ಅಡುಗೆ ಮನೆಯತ್ತ ಓಟ.

ಅಲ್ಲಿ ಒಂದಷ್ಟು ತಯಾರಿ ಮುಗಿಸಿಟ್ಟರೆ ನೇರ ಬಾತ್‌ರೂಮ್‌ಗೆ ಹೋಗಿ ಬಿಸಿನೀರು ಬಿಟ್ಟು. ಟವಲ್‌–ಯುನಿಫಾರ್ಮ್‌ ಸಿದ್ಧಪಡಿಸಿ, ಮತ್ತೆ ಬೆಡ್‌ರೂಮ್‌ನತ್ತ ತಿರುಗುತ್ತಾಳೆ. ಅವಳು ಎಬ್ಬಿಸಿದೊಡನೆಯೇ ಪುಟ್ಟ ಕಂದ ಕಣ್ಣರಳಿಸಿ ಎದ್ದು ಕೂರಬೇಕು. ಅಲ್ಲಿಯೂ ಒಂದಿಷ್ಟೂ ತಡವಾಗಬಾರದು. ಸ್ನಾನ ಮುಗಿಸಿ, ಬಾಯಿಗೆ ತಿಂಡಿ ತುರುಕುವಾಗ ಮತ್ತದೇ ರಾಗ...

‘ಸ್ಕೂಲಲ್ಲಿ ಜಗಳ ಮಾಡಬೇಡ, ಪೆನ್ಸಿಲ್‌, ನೋಟ್ಸ್‌ ಕಳೆದುಕೊಂಡು ಬಂದೆಯೊ ನೋಡು... ಮಿಸ್‌ ಹೇಳೋದೆಲ್ಲ ಸರಿಯಾಗಿ ಕೇಳಿಸಿಕೊ, ನೋಟ್ಸ್ ಪೂರ್ತಿ ಮಾಡ್ಕೊಂಡು ಬಾ... ಯುನಿಫಾರ್ಮ್‌ ಗಲೀಜು ಮಾಡ್ಕೊಬೇಡ...’

ಬಾಯಲ್ಲಿ ಇಷ್ಟು ಮಾತು ಆಡುತ್ತಲೇ ಇಸ್ತ್ರಿ ಮಾಡಿಟ್ಟ ಯುನಿಫಾರ್ಮ್‌ ತೊಡಿಸಿ ಒಪ್ಪವಾಗಿ ಕ್ರಾಪ್ ತೆಗೆಯುತ್ತಾಳೆ... ಅಷ್ಟೊತ್ತಿಗೆ ವ್ಯಾನ್‌ ಬಂದು ಹಾರ್ನ್‌ ಮಾಡುತ್ತದೆ. ಮಗುವನ್ನು ವ್ಯಾನ್‌ಗೆ ಹತ್ತಿಸಿದರೆ ಎರಡನೇ ಇನ್ನಿಂಗ್ಸ್‌ ಆರಂಭ.

ಮೆಟ್ರೊ ಅಮ್ಮನ ಬವಣೆ ಎಂದರೂ ಇದೇ, ಸಾರ್ಥಕ್ಯ ಎಂದರೂ ಇದೇ. ಅವಳು ದುಡಿಯುವ ಮಹಿಳೆಯಾ, ಗೃಹಿಣಿಯಾ ಎನ್ನುವುದು ಇಲ್ಲಿ ನಗಣ್ಯ. ಯಾರೇ ಆಗಿದ್ದರೂ ಅವರ ಮೊಟ್ಟ ಮೊದಲ ಮತ್ತು ಕಟ್ಟ ಕಡೆಯ ಆದ್ಯತೆ ತನ್ನ ಕಂದ, ಅದರ ಯೋಗಕ್ಷೇಮ ಹಾಗೂ ಶಿಕ್ಷಣ ಆಗಿ ಬದಲಾಗಿದೆ.

ಇದರಾಚೆಗೂ ಅವಳಿಗೊಂದು ಬದುಕಿದೆ. ಇನ್ನೂ ಹಲವಾರು ಪಾತ್ರಗಳನ್ನು ಅವಳು ಮಾತ್ರವೇ ನಿಭಾಯಿಸಬೇಕಾದ ಅನಿವಾರ್ಯತೆಯೂ ಇದೆ. ಅಮ್ಮ ಮಾತ್ರವಲ್ಲ, ಅವಳು ಪತ್ನಿ, ಸೊಸೆ, ಮಗಳೂ ಹೌದು.

ದುಡಿಮೆಯ ಕ್ಷೇತ್ರದಲ್ಲಿಯೂ ಅವಳಿಗೆ ತನ್ನದೇ ಆದ ಹೊಣೆಗಾರಿಕೆಗಳುಂಟು. ಅಲ್ಲಿನ ಜವಾಬ್ದಾರಿಗಳು ಕೆಲವೊಮ್ಮೆ ಮನೆಯವರೆಗೂ ಅವಳ ಬೆನ್ನಿಗಂಟಿ ಬರುತ್ತವೆ. ಆದರೆ ಈ ಯಾವ ಒತ್ತಡದಲ್ಲಿಯೂ ತಾನು ಮೊದಲು ‘ಅಮ್ಮ’ ಎನ್ನುವುದನ್ನು ಮಾತ್ರ ಅವಳು ಮರೆಯುವುದಿಲ್ಲ.

ಶಾಲೆ ಆರಂಭವಾದೊಡನೆ ಮಕ್ಕಳ ಜೀವನ ಕ್ರಮದೊಂದಿಗೆ ಅಮ್ಮನ ಬದುಕೂ ಬದಲಾಗುತ್ತದೆ. ಮಲಗುವ, ಏಳುವ, ಉಣ್ಣುವ, ಟಿವಿ ನೋಡುವ ವೇಳಾಪಟ್ಟಿ ಸಿದ್ಧಗೊಳ್ಳುತ್ತದೆ. ನೆಂಟರ ಮನೆಗೆ ಹೋಗುವುದು, ಸ್ನೇಹಿತರನ್ನು, ಬಂಧುಗಳನ್ನು ಮನೆಗೆ ಆಹ್ವಾನಿಸುವ ಶಿಷ್ಟಾಚಾರಗಳೆಲ್ಲ ರಜೆಯಲ್ಲಿಯೇ ಮುಗಿಯುತ್ತವೆ.

ಇನ್ನು ಪರೀಕ್ಷಾ ಸಮಯದಲ್ಲಂತೂ ಈ ಮೆಟ್ರೊ ಅಮ್ಮ ಅಕ್ಷರಶಃ ತಾನೂ ಪರೀಕ್ಷೆ ಎದುರಿಸುವ ವಿದ್ಯಾರ್ಥಿಯೇ ಆಗುತ್ತಾಳೆ. ತಾನು ವಿದ್ಯಾರ್ಥಿನಿಯಾಗಿದ್ದ ಕಾಲದಲ್ಲಿ ತಪ್ಪಿಹೋದ ಕಷ್ಟಗಳನ್ನೆಲ್ಲಾ ಆಕೆ ಈಗ ಅನುಭವಿಸಬೇಕು.

ಮಗುವನ್ನು ಬೆಳೆಸಲು ಇಷ್ಟೆಲ್ಲ ತ್ಯಾಗಗಳು ಬೇಕಾ? ಶಾಲೆ–ಪರೀಕ್ಷೆಯೇ ಮಕ್ಕಳ ಭವಿಷ್ಯದ ನಿರ್ಣಾಯಕ ಘಟ್ಟ ಎಂದು ಪರಿಭಾವಿಸುವುದು ಸೂಕ್ತವೇ? ಈ ವರ್ತನೆ ಮಕ್ಕಳಲ್ಲಿ ತೀರಾ ಸೂಕ್ಷ್ಮ ಮನೋಭೂಮಿಕೆಯನ್ನು ಸೃಷ್ಟಿಸುವುದಿಲ್ಲವೇ? ಅವರ ಸಾಮಾನ್ಯ ಬಾಲ್ಯಕ್ಕೆ ಅಡೆ–ತಡೆಯುಂಟಾಗುವುದಿಲ್ಲವೇ, ಅವರು ಸ್ವತಂತ್ರವಾಗಿ ಆಲೋಚಿಸುವುದನ್ನು, ವರ್ತಿಸುವುದನ್ನು ಕಲಿಯುವುದು ಯಾವಾಗ?

ಮಕ್ಕಳ ಪೋಷಣೆಯ ಹಲವು ಪ್ರಶ್ನೆಗಳಿಗೆ ಮೆಟ್ರೊ ಅಮ್ಮಂದಿರು ಕೊಡುವ ಉತ್ತರ ಇಲ್ಲಿದೆ...

ಸ್ಪರ್ಧೆಯ ಒತ್ತಡ ಬೇಡ
ತನ್ನ ಕಂದನಿಗೆ ಏನಾದರೂ ಆದೀತು ಎನ್ನುವ ಆತಂಕ, ಸ್ಪರ್ಧಾತ್ಮಕ ಜಗತ್ತಿನಲ್ಲಿ ತನ್ನ ಮಗು ಎಲ್ಲದರಲ್ಲೂ ಮುಂದಿರಬೇಕು ಎನ್ನುವ ತುಡಿತ, ತನ್ನ ಕೈಗೂಡದ ಕನಸುಗಳನ್ನು ತನ್ನ ಮಗ/ಮಗಳ ಮೂಲಕ ಕೈಗೂಡಿಸಿಕೊಳ್ಳುವ ಬಯಕೆ ತಾಯಂದಿರಲ್ಲಿ ಇಂಥ ವರ್ತನೆ ಹುಟ್ಟುಹಾಕುತ್ತದೆ.

ಆದರೆ ಮಕ್ಕಳ ಮನಸ್ಸು, ಆಸೆ– ಆಲೋಚನೆಗಳಿಗೂ ಅವಕಾಶ ಕೊಡಬೇಕು. ಸ್ಪರ್ಧೆಯ ಒತ್ತಡ ಬೇಡ. ಹೆಚ್ಚು ಅಂಕ ಗಳಿಸುವುದು, ಚಟುವಟಿಕೆಗಳಲ್ಲಿ ವಿಜೇತರಾಗುವುದೇ ಬದುಕಿನ ಅಂತಿಮ ಗುರಿ ಎನ್ನುವುದನ್ನು ಮಕ್ಕಳ ಮನದಲ್ಲಿ ತುಂಬಬಾರದು. ಮುಕ್ತ ವಾತಾವರಣ ಕಲ್ಪಿಸಿಕೊಡಬೇಕು. ಮಕ್ಕಳನ್ನು ಅತ್ಯುತ್ತಮ ನಾಗರಿಕನನ್ನಾಗಿ ಮಾಡುವುದು ಮುಖ್ಯ ಗುರಿಯಾಗಬೇಕು. ಆಗ ಮಾತ್ರ ‘ಬೆಸ್ಟ್‌ ಮದರ್‌’ ಆಗಲು ಸಾಧ್ಯ.
-ಶಾಲಿನಿ ರಾವ್‌,
ಮಕ್ಕಳ ತಜ್ಞೆ


ಮಕ್ಕಳಿಗೆ ಸ್ವಾತಂತ್ರ್ಯ ನೀಡಿ
ಮಕ್ಕಳು ಅವರ ಬಾಲ್ಯವನ್ನು ಮುಕ್ತವಾಗಿ ಅನುಭವಿಸಲು ಆದಾಗ್ಯೂ ನಮ್ಮ ಕಾಳಜಿಯಲ್ಲಿ ನಾವಿರುವುದೇ ಒಬ್ಬ ಆದರ್ಶ ತಾಯಿಯ ಲಕ್ಷಣ ಎನ್ನುವುದು ನನ್ನ ಅನಿಸಿಕೆ.

ಜೀವನ ಬಹಳ ದೊಡ್ಡದು, ಅಷ್ಟೇ ಜಟಿಲವೂ ಹೌದು. ಎಲ್ಲ ಸಂದರ್ಭ, ಪರಿಸ್ಥಿತಿಗಳಲ್ಲಿ ಮಕ್ಕಳೊಂದಿಗೆ ನಾವು ಇದ್ದೇ ಇರುತ್ತೇವೆ ಎನ್ನುವಂತಿಲ್ಲ. ಹೀಗಾಗಿ ಜೀವನದಲ್ಲಿ ಎದುರಾಗುವ ಕಷ್ಟ–ನಷ್ಟ, ಸವಾಲು, ಅವಮಾನಗಳನ್ನು ಎದುರಿಸಿ ನಡೆಯುವುದನ್ನು ಅವರಿಗೆ ಚಿಕ್ಕಂದಿನಿಂದಲೇ ಕಲಿಸಿಕೊಡಬೇಕು. ಅವರ ಜವಾಬ್ದಾರಿ–ಹೊಣೆಗಾರಿಕೆಗಳನ್ನು ತೋರಿಸಿಕೊಡಬೇಕು.
-ಶ್ರೀಲತಾ ಕಿರಣ್‌

ನಗರ ಜೀವನದ ಅನಿವಾರ್ಯತೆ
ನಗರ ಸಂಸ್ಕೃತಿ ನಮ್ಮ ಮುಂದೆ ತಂದೊಡ್ಡಿದ ಹೊಸ ಸವಾಲುಗಳಲ್ಲಿ ಇದೂ ಒಂದು. ನಮ್ಮ ಮಕ್ಕಳಿಗೆ ಇಲ್ಲಿ ಸುರಕ್ಷಿತ ವಾತಾವರಣವಿಲ್ಲ. ಮನೆಯಲ್ಲಿ ಅವರನ್ನು ನೋಡಿಕೊಳ್ಳಲು ಅಜ್ಜ–ಅಜ್ಜಿ ಇರುವುದಿಲ್ಲ. ಅವರಿಗೆ ಎಲ್ಲವೂ ನಾವೇ ಆಗಬೇಕಾದ ಅನಿವಾರ್ಯತೆ ಇದೆ.

ಇಂದಿನ ಸ್ಪರ್ಧಾ ಜಗತ್ತಿಗೆ ಅವರನ್ನು ಸಜ್ಜುಗೊಳಿಸಬೇಕಾದ ಜವಾಬ್ದಾರಿ, ತಪ್ಪು ದಾರಿಗೆ ಎಳೆಯಬಲ್ಲ ವ್ಯಾಕುಲತೆಗಳಿಂದ ಅವರನ್ನು ಉಳಿಸಿಕೊಳ್ಳಬೇಕಾದ ಹೊಣೆ, ನಾಳಿನ ಅವರ ಭವಿಷ್ಯತ್ತನ್ನು ಉಜ್ವಲಗೊಳಿಸಬೇಕೆನ್ನುವ ತುಡಿತ, ನಮ್ಮ ಅಪೂರ್ಣ ಕನಸುಗಳನ್ನು ಅವರು ಪೂರೈಸಲಿ ಎನ್ನುವ ಹಂಬಲ ನಮ್ಮದು.

ಈ ಎಲ್ಲ ಕಾರಣಗಳಿಂದಾಗಿ ಮಕ್ಕಳ ಬದುಕಿನಲ್ಲಿ ಬಗ್ಗೆ ಒಂದಿಷ್ಟು ಹೆಚ್ಚೇ ಅನ್ನುವಷ್ಟು ಆಳಕ್ಕೆ ಇಳಿದು ಬಿಡುತ್ತೇವೆ ಎನ್ನುವುದು ನಿಜ.
-ವಂದನಾ ಹೆಗಡೆ,
ಟಾಟಾ ಕನ್ಸಲ್ಟನ್ಸಿ ಉದ್ಯೋಗಿ

ಜೀವನಶೈಲಿಯೇ ಕಾರಣ

ಮಕ್ಕಳ ಸ್ವಾತಂತ್ರ್ಯ ಕಸಿದುಕೊಂಡು ಅವರನ್ನು ನಮ್ಮ ಅಂಗೈ ಬೊಂಬೆಯಾಗಿ ಮಾಡಿಕೊಳ್ಳಬೇಕು ಎನ್ನುವ ಉದ್ದೇಶ ಯಾವ ತಾಯಿಗೂ ಇರುವುದಿಲ್ಲ. ಆದರೆ ಯಾವಾಗಲೂ ಮಕ್ಕಳ ಹಿಂದೆಯೇ ಇರುವುದು, ಅವರ ಪರವಾಗಿ ಎಲ್ಲ ನಿರ್ಧಾರಗಳನ್ನೂ ನಾವೇ ತೆಗೆದುಕೊಳ್ಳುವ ಧೋರಣೆಗೆ ಮೆಟ್ರೊ ನಗರದ ಜೀವನ ಶೈಲಿಯೇ ಕಾರಣ. ನಗರ ಜೀವನ ಹುಟ್ಟು ಹಾಕಿದ ಭಯ, ಕಳವಳ, ಅಭದ್ರತೆಯ ವಾತಾವರಣದಿಂದಾಗಿ ನಾವು ಮಕ್ಕಳ ಬಗ್ಗೆ ಅತಿ ಎನಿಸುವಷ್ಟು ಕಾಳಜಿ ವಹಿಸಬೇಕಾಗಿದೆ.

-ಶಾಲಿನಿ ಕೊಟ್ರೇಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT