ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಡ್ಸ್‌ ಜಾಗೃತಿಗಾಗಿ ವಿಶ್ವ ಪರ್ಯಟನೆ

ಹವ್ಯಾಸ
Last Updated 4 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

1967ನೇ ಇಸವಿ, ಬೆಂಗಳೂರಿನ ಮಾಗಡಿ ರಸ್ತೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮ್ಯಾನ್ಮಾರ್‌ನ ದಂಪತಿಗೆ ಗಂಡು ಮಗು ಹುಟ್ಟುತ್ತದೆ. ಎರಡನೇ ದಿನ ಅವರು ತಮ್ಮೂರಿಗೆ ಹೊರಡುತ್ತಾರೆ. ಮಗುವನ್ನು ಜೊತೆಯಲ್ಲಿ ಕರೆದೊಯ್ಯಲು ಪಾಸ್‌ಪೋರ್ಟ್‌ ಮಾಡಿಸಬೇಕು.  ಮಗುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ದಂಪತಿ ತೆರಳುತ್ತಾರೆ...ರಾಜಾಜಿನಗರದ ಭಾಷ್ಯಂ ವೃತ್ತದ ಬಳಿ ವಾಸವಿದ್ದ ಯತಿರಾಜಮ್ಮ ರೆಡ್ಡಿ ದಂಪತಿಗೆ ಮಕ್ಕಳಿರುವುದಿಲ್ಲ. ಆಸ್ಪತ್ರೆಯ ಸಿಬ್ಬಂದಿ ಈ ಮಗುವನ್ನು ರೆಡ್ಡಿ ದಂಪತಿಗೆ ನೀಡುತ್ತಾರೆ.

ಮಗುವನ್ನು ಚೆನ್ನಾಗಿಯೇ ನೋಡಿಕೊಂಡ ಅವರು ರಾಜಾಜಿನಗರದ ಇಂಗ್ಲಿಷ್‌ ಶಾಲೆಯಲ್ಲಿ ಹತ್ತನೇ ತರಗತಿಯವರೆಗೆ ಓದಿಸುತ್ತಾರೆ. ಅದೇ ಹೊತ್ತಿಗೆ ರೆಡ್ಡಿ ದಂಪತಿಗೆ ಮಗು ಹುಟ್ಟುತ್ತದೆ. ದಂಪತಿಯ ಪ್ರೀತಿ ತಮ್ಮ ಸ್ವಂತ ಮಗುವಿನ ಕಡೆ ಹೊರಳುತ್ತದೆ. ಇತ್ತ ಹೆತ್ತವರೂ ಇಲ್ಲ, ಅತ್ತ ಸಾಕಿದವರೂ ಇಲ್ಲ ಎಂಬ  ಬೇಸರ ಕಾಡಿದಾಗ ಆ ಹುಡುಗ ಸೈಕಲ್‌ನಲ್ಲಿ  ವಿಶ್ವ ಪರ್ಯಟನೆ ಹೊರಡುತ್ತಾನೆ. 

2000ನೇ ಇಸವಿಯಿಂದ ನಿರಂತರವಾಗಿ ದೇಶದೆಲ್ಲೆಡೆ ಮಾತ್ರವಲ್ಲ ಪಕ್ಕದ ಚೀನಾ, ನೇಪಾಳ, ಪಾಕಿಸ್ತಾನಕ್ಕೆ ಬೈಕ್‌ನಲ್ಲಿ ಸಂಚರಿಸುತ್ತಾ ಎಚ್ಐವಿ ಏಡ್ಸ್‌ ಬಗ್ಗೆ ಜಾಗೃತಿ ಮೂಡಿಸುತ್ತಿರುವ ರವಿ ರೆಡ್ಡಿ ಅವರ ಕತೆಯಿದು. ಅವರು ತಮ್ಮ ಪರ್ಯಟನೆಯ ಬಗ್ಗೆ  ಹೇಳುವುದು ಹೀಗೆ...

‘ನನ್ನ ಬಳಿ ಹಣವಿಲ್ಲ. ಆಸ್ತಿ, ಮನೆ, ಸಂಬಂಧಿಕರು ಇಲ್ಲ. ದಾನಿಯೊಬ್ಬರು ನೀಡಿದ ಬೈಕ್‌ ಇದೆ. ಒಂದೆರಡು ಜೊತೆ ಬಟ್ಟೆ, ರಗ್ಗು ಬಿಟ್ಟರೆ ಬೇರೇನೂ ಇಲ್ಲ. ನಾನು ಯಾವುದೇ ರಾಜ್ಯ ಪ್ರವೇಶಿಸಿದ ಕೂಡಲೇ ಹತ್ತಿರದ ಪೊಲೀಸ್‌ ಠಾಣೆಗೆ ಹೋಗಿ ನನ್ನ ಮಾಹಿತಿ ನೀಡುತ್ತೇನೆ. ನನ್ನ ಬಳಿ ಸಿಂಗಲ್‌ ಬ್ಯಾರೆಲ್‌ ಗನ್‌ ಇದೆ. ಅದನ್ನು ಠಾಣೆಯಲ್ಲಿ ಇರಿಸುತ್ತೇನೆ.

ಪೊಲೀಸರೇ ಉಳಿಯುವ ವ್ಯವಸ್ಥೆ ಮಾಡುತ್ತಾರೆ. ಊರಿನ ಪ್ರಮುಖರನ್ನು ಭೇಟಿ ಮಾಡಿ ನನ್ನ ಉದ್ದೇಶ ತಿಳಿಸುತ್ತೇನೆ.   ಊಟ, ಖರ್ಚಿಗೆ ಒಂದಷ್ಟು ಕಾಸು ನೀಡಿ ಬೀಳ್ಕೊಡುತ್ತಾರೆ. ಪಂಜಾಬಿಗೆ ಹೋದರೆ ಗುರುದ್ವಾರದಲ್ಲಿ ಉಳಿದುಕೊಳ್ಳುತ್ತೇನೆ. ಚೀನಾ ಗಡಿ ದಾಟಲು ಬಿಎಸ್‌ಎಫ್‌ನವರು  ಪಾಸ್‌ ನೀಡಿ ಕಳುಹಿಸುತ್ತಾರೆ. ವಾಘಾ ಗಡಿಯಿಂದ ಪಾಕಿಸ್ತಾನಕ್ಕೆ ಹೋಗಲು ತಾತ್ಕಾಲಿಕ  ವೀಸಾ ನೀಡುತ್ತಾರೆ.

ಮುಂಬೈ, ಪುಣೆ ಕೋಲ್ಕತ್ತಾ, ನಾಗಾಲ್ಯಾಂಡ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ. ಅಲ್ಲಿನ ರೆಡ್‌ಲೈಟ್‌ ಏರಿಯಾಗಳಲ್ಲಿ  ಜಾಗೃತಿ ಮೂಡಿಸುತ್ತೇನೆ.  ಅಂಥ ಪ್ರದೇಶಗಳಿಗೆ ಹೋಗುವಾಗ ಸ್ಥಳೀಯ  ಪೊಲೀಸರಿಗೆ ಮಾಹಿತಿ ನೀಡುತ್ತೇನೆ. ಜೆಮಿನಿ ಸರ್ಕಸ್‌ನ ಕ್ಯಾಂಪ್‌ ಇದ್ದಲ್ಲಿಗೆ  ಹೋಗುತ್ತೇನೆ. ಸರ್ಕಸ್‌ನಲ್ಲಿ ಬೈಕ್‌ ಸ್ಟಂಟ್‌ ಕೂಡಾ ಮಾಡಿದ್ದೇನೆ.

ಮಂಗಳೂರು, ಉಡುಪಿ ಜಿಲ್ಲೆಗಳಿಗೆ ಹೋದಾಗ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ನನಗೊಂದು ಮೊಬೈಲ್‌ ನೀಡಿದ್ದಾರೆ.  ಬೈಕ್‌ ನೀಡಿದ್ದು ಶಿರಸಿಯ ವ್ಯಕ್ತಿಯೊಬ್ಬರು.  ಮಹಾರಾಷ್ಟ್ರದಲ್ಲಿ ಎಷ್ಟೇ ಬಾರಿ ಸಂಚರಿಸಿದರೂ ಬಾಳ್‌ ಠಾಕ್ರೆ ಅವರ ಮೊಮ್ಮಗ  ನನ್ನ ಅಗತ್ಯಗಳನ್ನು ನೋಡಿಕೊಳ್ಳುತ್ತಾರೆ. ಹೀಗೆ ಎಲ್ಲೆಡೆಯೂ ಜನರ ಪ್ರೀತಿ ಸಿಕ್ಕಿದೆ.

ಬೇರೆ ರಾಜ್ಯಗಳಿಗೆ ಹೋಗುವಾಗ ಆಯಾ ರಾಜ್ಯದ ಭಾಷೆ ಗೊತ್ತಿದ್ದರೆ ಅನುಕೂಲ. ನನಗೆ ಕನ್ನಡ, ಹಿಂದಿ, ಇಂಗ್ಲಿಷ್‌, ತೆಲುಗು, ಮಲಯಾಳಂ, ತಮಿಳು, ಮರಾಠಿ ಬರುತ್ತದೆ.   ಇನ್ನು, ಸಾಮಾಜಿಕ ಉದ್ದೇಶದಿಂದ ತೆರಳುವವರಿಗೆ ಎಲ್ಲೇ ಹೋದರೂ ಉತ್ತಮ ಸಹಕಾರ ಸಿಗುತ್ತದೆ’.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT