ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಮ್ಮೊಮ್ಮೆ ವಿದ್ಯಾರ್ಥಿಗಳೂ ಪಾಠ ಕಲಿಸುತ್ತಾರೆ!

ಕ್ಯಾಂಪಸ್‌ ಕಲವರ
Last Updated 13 ಜುಲೈ 2015, 19:44 IST
ಅಕ್ಷರ ಗಾತ್ರ

ಪಿ.ಯು.ಸಿ. ಹಂತದ ವಿದ್ಯಾರ್ಥಿಗಳ ಮನಸ್ಥಿತಿಯನ್ನು ಅರ್ಥೈಸಿಕೊಳ್ಳುವುದು ಬಹಳ ಕಷ್ಟ. ಯಾವ ಕ್ಷಣದಲ್ಲಿ, ಹೇಗೆ ವರ್ತಿಸುತ್ತಾರೆ ಎಂದು ತಿಳಿಯಬೇಕಾದರೆ ಆ ವಿದ್ಯಾರ್ಥಿಯನ್ನು ಸಾಕಷ್ಟು ಅಧ್ಯಯನ ಮಾಡಬೇಕಾಗುತ್ತದೆ. ನೂರಾರು ಸಂಖ್ಯೆಯ ವಿದ್ಯಾರ್ಥಿಗಳಿರುವುದರಿಂದ, ಹಾಗೆ ಒಬ್ಬ ವಿದ್ಯಾರ್ಥಿಯನ್ನು ಗಮನಿಸಲು ಶಿಕ್ಷಕರಿಗೆ ಸಾಧ್ಯವೂ ಆಗುವುದಿಲ್ಲ.

ಕಳೆದ ಒಂದೆರೆಡು ವರ್ಷಗಳ ಹಿಂದಿನ ಮಾತು. ನಮ್ಮ ಕಾಲೇಜಿನ ಅರ್ಧ ವಾರ್ಷಿಕ ಪರೀಕ್ಷೆಗಳು ಆಗಷ್ಟೇ ಮುಗಿದಿದ್ದವು. ಉತ್ತರ ಪತ್ರಿಕೆಗಳ ಮೌಲ್ಯಮಾಪನವೂ ಮುಗಿದಿತ್ತು. ಸಾಮಾನ್ಯವಾಗಿ ಯಾವುದೇ ಪರೀಕ್ಷೆ ಮುಗಿದ ಮೇಲೆ ಮೌಲ್ಯಮಾಪನವಾಗಿರುವ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ಕೊಟ್ಟು, ಅವರಿಗೆ ಬಂದಿರುವ ಅಂಕಗಳು, ತಪ್ಪಾಗಿ ಉತ್ತರಿಸಿರುವ ಪ್ರಶ್ನೆಗಳು, ತಪ್ಪಾಗಲು ಕಾರಣಗಳು, ಮುಂದೆ ಹೇಗೆ ಅವುಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಚರ್ಚೆ ಮಾಡುವುದು ನನ್ನ ಪದ್ಧತಿ. ಹಾಗೆಯೇ ಆ ಸಾರಿಯೂ ತರಗತಿಯೊಂದರಲ್ಲಿ ಮೌಲ್ಯಮಾಪನ ಮಾಡಿರುವ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ಕೊಟ್ಟು ಚರ್ಚೆ ಮಾಡುತ್ತಿದ್ದೆ.

ಆ ತರಗತಿಯಲ್ಲಿ ಒಬ್ಬ ಎನ್.ಸಿ.ಸಿ. ಕೆಡೆಟ್ ವಿದ್ಯಾರ್ಥಿ ಇದ್ದ. ತುಂಬಾ ದಡ್ಡನೇನಲ್ಲ. ಹಾಗೆಯೇ ಅತೀ ಬುದ್ಧಿವಂತನೂ ಅಲ್ಲ. ಒಂದಷ್ಟು ಒಳ್ಳೆಯ ಅಂಕಗಳನ್ನು ಪಡೆದು ಉತ್ತೀರ್ಣನಾಗಬಲ್ಲ. ಆದರೆ ತಾನು ಎನ್.ಸಿ.ಸಿ. ಕೆಡೆಟ್, ತನಗೆ ತರಗತಿಯಲ್ಲಿ ವಿಶೇಷ ಮನ್ನಣೆ ಸಿಗಬೇಕು, ನೋಟ್ಸ್ ಬರೆಯುವುದು, ತರಗತಿಗಳಿಗೆ ಹಾಜರಾಗುವುದು, ಮುಂತಾದೆಡೆಯೆಲ್ಲಾ ತನಗೆ ವಿಶೇಷ ಮೀಸಲಾತಿ ಇರಬೇಕು, ಅದು ತನ್ನ ಹಕ್ಕು ಎಂದು ನಂಬಿಕೊಂಡಿದ್ದವನು. ಅದನ್ನು ಶಿಕ್ಷಕರೂ ಅರಿತುಕೊಂಡಿರಬೇಕು ಎಂದು ನಿರೀಕ್ಷಿಸುವವನು.

ನನಗೆ ಅವನ ಧೋರಣೆ ಇಷ್ಟವಾಗುತ್ತಿರಲಿಲ್ಲ. ವಿದ್ಯಾರ್ಥಿ ದೆಸೆಯಲ್ಲಿ ಮೀಸಲಾತಿಯನ್ನು ವಿರೋಧಿಸುವವನು ನಾನು. ಹಾಗಾಗಿ ಸಮಯ ಸಿಕ್ಕಾಗಲೆಲ್ಲಾ ಈ ಕುರಿತು ಅವನಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಿದ್ದೆ. ಅದು ಅವನಿಗೆ ಮುಜುಗರವನ್ನು ಉಂಟುಮಾಡುತ್ತಿತ್ತೇನೋ. ಆ ಕಾರಣದಿಂದಲೇ ವೈಯಕ್ತಿಕವಾಗಿ ಅವನಿಗೆ ನನ್ನನ್ನು ಕಂಡರೆ ಇಷ್ಟವಿಲ್ಲ ಎಂದು ಇತರ ಶಿಕ್ಷಕರ ಬಳಿ ಹೇಳಿಕೊಳ್ಳುತ್ತಿದ್ದನಂತೆ. ಅದು ನನಗೆ ಗೊತ್ತಿದ್ದರೂ, ನಾನೇ ಅದನ್ನು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ.

ಆ ಪರೀಕ್ಷೆಯ ಅವನ ಉತ್ತರ ಪತ್ರಿಕೆಯನ್ನು ಗಮನಿಸಿದೆ. 100ಕ್ಕೆ 25 ಅಂಕಗಳು ಬಂದಿದ್ದವು. ನನಗೆ ಇಷ್ಟವಾಗಲಿಲ್ಲ. ಈ ಹುಡುಗರು ಎಲ್ಲದಕ್ಕೂ ಮೀಸಲಾತಿ ಕೇಳುತ್ತಾರೆ. ಆದರೆ ಅಂತಿಮ ಪರೀಕ್ಷೆಯಲ್ಲಿ ಸರಿಯಾದ ಉತ್ತರ ಬರೆದರೆ ಮಾತ್ರ ಅಂಕಗಳು ಸಿಗುವುದು. ಇಲ್ಲದಿದ್ದರೆ ಅನುತ್ತೀರ್ಣ ರಾಗುತ್ತಾರಲ್ಲ ಎನ್ನುವ ಆತಂಕ ನನ್ನದು. ಸ್ವಲ್ಪ ಸಿಟ್ಟಿನಿಂದಲೇ ಪ್ರಶ್ನಿಸಿದೆ. ಅದಕ್ಕೆ ಅವನು ಪ್ರತಿಕ್ರಿಯಿಸಿದ ರೀತಿ ನನ್ನಲ್ಲಿ ಆಶ್ಚರ್ಯ ತಂದಿತು.

‘ಸರ್, ನಾನು ನೀವು ಮಾಡಿದ ಪಾಠದ ಪ್ರಶ್ನೆಗಳಿಗೆ ಉತ್ತರಿಸಿಲ್ಲ. ಬೇರೆ ಸರ್ ಮಾಡಿರುವ ಪಾಠದ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿದ್ದೇನೆ’ ಅಂದ. (ನಮ್ಮ ಕನ್ನಡ ವಿಭಾಗದಲ್ಲಿ ಇನ್ನೊಬ್ಬರು ಶಿಕ್ಷಕರಿದ್ದರು) ಅವನಿಂದ ಇಂತಹ ಉತ್ತರ ನಿರೀಕ್ಷಿಸರಲಿಲ್ಲ. ‘ಇವನ್ಯಾಕೆ ನನ್ನ ಮೇಲೆ ಇಷ್ಟೊಂದು ತಾತ್ಸಾರ ಬೆಳೆಸಿಕೊಂಡಿದ್ದಾನೆ? ಇದು ನಿಜವೇ ಆದರೆ ಅವನ ಫಲಿತಾಂಶದ ಗತಿ ಏನು?’ ಎಂದು ಆತಂಕವಾಯಿತು. ನನ್ನ ಆತಂಕವನ್ನು ತೋರಿಸಿಕೊಳ್ಳದೆ ಕೇಳಿದೆ.

‘ಯಾಕಪ್ಪಾ, ನಾನು ಮಾಡಿದ ಪಾಠದ ಪ್ರಶ್ನೆಗಳಿಗೆ ಯಾಕೆ ಉತ್ತರಿಸಿಲ್ಲ?’
ನನ್ನ ಈ ಪ್ರಶ್ನೆಗೆ ಅವನು ಕೊಟ್ಟ ಉತ್ತರ ಇನ್ನೂ ಅನಿರೀಕ್ಷಿತವಾಗಿತ್ತು.
‘ಸರ್, ನೀವು ತರಗತಿಯಲ್ಲಿ ಎಲ್ಲರ ಮುಖ ನೋಡಿಕೊಂಡು ಪಾಠ ಮಾಡುತ್ತೀರಿ, ಆದರೆ ನನ್ನ ಮುಖ ನೋಡುವುದಿಲ್ಲ. ಎಲ್ಲರನ್ನೂ ಪ್ರೀತಿಯಿಂದ ಪ್ರಶ್ನೆ ಕೇಳುತ್ತೀರಿ, ಆದರೆ ನನ್ನನ್ನು ಕೇಳುವುದಿಲ್ಲ. ಎಲ್ಲರ ಬಗ್ಗೆ ನಿಮಗೆ ಪ್ರೀತಿ ಇದೆ, ಆದರೆ ನನ್ನನ್ನು ನೀವು ಪ್ರೀತಿಸುವುದಿಲ್ಲ. ಅದಕ್ಕೇ ನಾನೂ ನೀವು ಮಾಡಿದ ಪಾಠಗಳ ಪ್ರಶ್ನೆಗಳಿಗೆ ಉತ್ತರಿಸಿಲ್ಲ’.
ಸೇಡು ತೀರಿಸಿಕೊಳ್ಳುತ್ತಿರುವ ಮುಖಭಾವದಲ್ಲಿ ಉತ್ತರಿಸಿದ.
ನಾನು ದಂಗಾದೆ. ‘ಹೌದೇ...?’ ನನ್ನನ್ನು ನಾನೇ ಪ್ರಶ್ನಿಸಿಕೊಂಡೆ.

ಎಲ್ಲೋ ಒಂದು ಕಡೆ ನನ್ನ ಮನಸ್ಸು ‘ಹೌದು’ ಎಂದು ಉತ್ತರಿಸಿತು. ಮೆಲ್ಲಗೆ  ಆ ತರಗತಿಯಲ್ಲಿ ನಾನು ಪಾಠ ಮಾಡಿದ ಚಿತ್ರಗಳು ಕಣ್ಣಮುಂದೆ ಸುಳಿದುಹೋದವು. ತಾನು ಎನ್.ಸಿ.ಸಿ. ಕೆಡೆಟ್ ಎಂಬ ಅಹಂಕಾರ ತೋರಿಸುತ್ತಿದ್ದ ಅವನನ್ನು ನಿರ್ಲಕ್ಷಿಸಿದರೆ ಸರಿಹೋಗುತ್ತಾನೆ ಎಂಬ ಉದ್ದೇಶದಿಂದ ನಾನು ಅವನನ್ನು ತರಗತಿಯಲ್ಲಿ ಕಡೆಗಣಿಸುತ್ತಿದ್ದೆ ಎಂಬ ಅಂಶ ನೆನಪಾಯಿತು. ಅವನ ಈ ಆಪಾದನೆಗಳಿಗೆ ಹೇಗೆ ಉತ್ತರಿಸಬೇಕು ಎಂಬುದು ಹೊಳೆಯಲಿಲ್ಲ. ನನ್ನಲ್ಲಿದ್ದ ಗೊಂದಲವನ್ನು ತೋರ್ಪಡಿಸಿಕೊಳ್ಳದೆ ಪಾಠ ಮುಂದುವರಿಸಿ ಬಂದೆ.

ಸ್ಟಾಫ್‌ ರೂಮ್‌ನಲ್ಲಿ ಕುತೂಹಲಕ್ಕೆ ಅವನ ಉತ್ತರ ಪತ್ರಿಕೆಯನ್ನು ತೆಗೆದು ಗಮನಿಸಿದೆ. ಆಶ್ಚರ್ಯವೆಂದರೆ, ನಾನು ಪಾಠ ಮಾಡಿದ್ದ ಬಹುತೇಕ ಎಲ್ಲ ಪ್ರಶ್ನೆಗಳಿಗೆ ಅವನು ಉತ್ತರಿಸಿದ್ದ. ನನಗೆ ಮತ್ತೂ ಕುತೂಹಲ ಎನ್ನಿಸಿತು.

‘ಅವನೇಕೆ ಈ ರೀತಿ ಪ್ರತಿಕ್ರಿಯಿಸಿದ?’ ಎಂಬುದೇ ನನಗೆ ಅರ್ಥವಾಗಲಿಲ್ಲ. ಆದರೆ ಶಿಕ್ಷಕರು ತಮ್ಮನ್ನು ಕಡೆಗಣಿಸುವುದನ್ನು ಕೆಲವು ವಿದ್ಯಾರ್ಥಿಗಳು ಭಾವನಾತ್ಮಕವಾಗಿ ಸ್ವೀಕರಿಸಿಬಿಡುತ್ತಾರೆಂಬ ಸತ್ಯ ಅಂದು ನನಗೆ ಅರಿವಾಯಿತು. ಅಂದಿನಿಂದ ಅಂತಹ ವಿದ್ಯಾರ್ಥಿಗಳನ್ನು ಬೇರೆಯದೇ ರೀತಿಯಲ್ಲಿ ಬದಲಾಯಿಸುವ ಹವ್ಯಾಸ ರೂಢಿಸಿಕೊಂಡೆ. ಈಗ ನನ್ನ ವಿದ್ಯಾರ್ಥಿಗಳು ನನ್ನನ್ನು ಗೌರವಿಸುತ್ತಾರೆ, ಪ್ರೀತಿಸುತ್ತಾರೆ, ನಾನೊಬ್ಬ ಯಶಸ್ವೀ ಶಿಕ್ಷಕ ಎಂಬ ಹೆಮ್ಮೆ ನನಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT