ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ ಪಾರ್ಕಿಂಗ್ ಮಾಲೀಕರಿಗೆ ಮಾತ್ರ!

ಕಾರ್ ಪಾರ್ಕಿಂಗ್ ಪಡಿಪಾಟಲು
ಅಕ್ಷರ ಗಾತ್ರ

ಸುಮಾರು ಎರಡು ವರ್ಷದ ಹಿಂದೆ ನಡೆದ ಘಟನೆಯೊಂದನ್ನು ಇಲ್ಲಿ ಸ್ಮರಿಸಿಕೊಳ್ಳುತ್ತೇನೆ. ನಮ್ಮ ಕುಟುಂಬದವರು ಆಸ್ಪತ್ರೆಗೆ ಸೇರಿದ್ದರು. ಅವರನ್ನು ನೋಡುವ ಆತುರದಲ್ಲಿದ್ದೆ. ಆಸ್ಪತ್ರೆಯ ಪಕ್ಕದ ರಸ್ತೆಯಲ್ಲಿ ಕಾರು ನಿಲ್ಲಿಸಿ ಹೊರಡಲು ಅನುವಾದೆ.

ಆಗ ಅಲ್ಲಿಯ ಅಂಗಡಿಯವ, `ಕಾರು ನಿಲ್ಲಿಸಬೇಡಿ, ನಮ್ಮ ಅಂಗಡಿಗೆ ಮರೆಯಾಗುತ್ತೆ' ಎಂದು ಆಕ್ಷೇಪಿಸಿದ. ನಾನು ಸ್ವಲ್ಪ ಆತಂಕದಲ್ಲಿದ್ದಿದ್ದರಿಂದ `ಬೇಗ ಬಂದುಬಿಡುತ್ತೇನೆ ಸ್ವಾಮಿ' ಎಂದು ಸಮಜಾಯಿಸಿ ನೀಡಿ ಹೊರಡುವುದರಲ್ಲಿದ್ದೆ. `ಕಾರು ತೆಗಿಯದಿದ್ದರೆ ಚಕ್ರದ ಗಾಳಿ ತೆಗೀತೇನೆ' ಅಂತ ಅಂಗಡಿಯವ ಬಂದೇ ಬಿಟ್ಟ. ಅಲ್ಲೆಲ್ಲಾದರೂ `ನೋ ಪಾರ್ಕಿಂಗ್' ಬೋರ್ಡ್ ಇರಬಹುದೆ ಎಂದು ಕಣ್ಣಾಡಿಸಿದೆ. ಇರಲಿಲ್ಲ.

`ನೋಡಿ, ನಾನು ನಿಮ್ಮ ಅಂಗಡಿಯ ಒಳಗಡೆ ಕಾರು ನಿಲ್ಲಿಸಿಲ್ಲ, ರಸ್ತೆಯಲ್ಲಿ ನಿಲ್ಲಿಸಿದ್ದೇನೆ. ನೀವು ಈ ರೀತಿ ಆಕ್ಷೇಪ ಮಾಡುವುದು ಸರಿಯಲ್ಲ' ಅಂದಿದ್ದಕ್ಕೆ, `ರೀ, ಕಾನೂನು ಮಾತನಾಡಬೇಡಿ. ಸುಮ್ಮನೆ ಕಾರು ತೆಗೀತೀರೋ ಇಲ್ಲವೋ' ಅಂದ. ನಾನು ನಿರಾಕರಿಸಿದೆ. ಅವನು ಟೈರಿನ ಗಾಳಿ ತೆಗೆಯಲು ಕೈ ಹಾಕಿದ. ಕಪಾಳಕ್ಕೆ ಒಂದು ಬಿಟ್ಟೆ. ಆಗ ಅಕ್ಕಪಕ್ಕದಲ್ಲಿದ್ದವರೂ ನನಗೆ `ಭೇಷ್, ಒಳ್ಳೇ ಕೆಲಸ ಮಾಡಿದ್ರಿ ಸಾರ್, ಇವನು ಯಾವಾಗಲೂ ತರ್ಲೆ ಮಾಡ್ತಿರ್ತಾನೆ' ಅಂತ ನನ್ನ ಬೆಂಬಲಕ್ಕೆ ನಿಂತರು. ಅಂಗಡಿಯವ ಬಾಯಿ ಮುಚ್ಕೊಂಡು ಬಾಲ ಮುದುರಿಕೊಂಡು ಒಳಗೆ ಹೋದ. ನಾನು ನಿರಾತಂಕವಾಗಿ ಆಸ್ಪತ್ರೆಯೊಳಗೆ ಹೋಗಿ ನಮ್ಮವರನ್ನು ನೋಡಿಕೊಂಡು ಬಂದು ಸುರಕ್ಷಿತವಾಗಿದ್ದ ಕಾರನ್ನು ತೆಗೆದುಕೊಂಡು ಹೋದೆ.

ನಿನ್ನೆ ಗಾಂಧಿ ಬಜಾರಿನಲ್ಲಿ ಕೆಲಸಕ್ಕೆ ಅಂತ ಹೋಗಿದ್ದೆ. ನಾಲ್ಕು ಕಾರು ನಿಲ್ಲಿಸುವಷ್ಟು ಜಾಗ ರಸ್ತೆಯ ಪಕ್ಕ ಖಾಲಿ ಇದ್ದದ್ದು ನೋಡಿ ಬಹಳ ಖುಷಿಯಾಯಿತು. ಹತ್ತಿರ ಹೋಗಿ ನೋಡಿದರೆ, `ಕಾರ್ ಪಾರ್ಕಿಂಗ್ ಫಾರ್ ಹೌಸ್ ಓನರ್ಸ್‌ ಓನ್ಲಿ' ಅಂತ ಕಾಂಪೌಂಡಿನ ಮೇಲೆ ಬರೆದಿದ್ದರು. ಅದನ್ನೂ ಮೀರಿದ ಒಂದು ಜಾಗ ಇತ್ತು. ನಾನು ಕಾರು ನಿಲ್ಲಿಸಿ, ನನ್ನ ಕೆಲಸ ಮುಗಿಸಿಕೊಂಡು ಬಂದೆ. ಇಲ್ಲಿರುವ ಪ್ರಶ್ನೆ: ರಸ್ತೆಯನ್ನೂ ತಮ್ಮ ಆಸ್ತಿಯಂತೆ ಹಕ್ಕು ಚಲಾಯಿಸಲು ಅವರಿಗೆ ಯಾರು ಅನುಮತಿ ಕೊಟ್ಟಿದ್ದಾರೆ? ಬಿಬಿಎಂಪಿಯವರಾಗಲೀ ಅಥವಾ ಅಲ್ಲಿಯ ಪೊಲೀಸರಾಗಲೀ ಇಂತಹ `ಅಕ್ರಮ ರಸ್ತೆ ವಶ' ಮಾಡಿಕೊಳ್ಳುವವರ ವಿರುದ್ಧ ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ?

ಇನ್ನು ಕೆಲವು ಕಡೆ `ನೋ ಪಾರ್ಕಿಂಗ್' ಫಲಕ ಇರುವಲ್ಲಿ ಬೇರೆಯವರ ಕಾರುಗಳೂ ಇವೆಯಲ್ಲ ಅಂತ ನಮ್ಮ ಕಾರನ್ನೇನಾದರೂ ನಿಲ್ಲಿಸಿದೆವೋ ಎಲ್ಲೋ ಇರುವ ಪೊಲೀಸ್ ಇಲಾಖೆಯ ಗುತ್ತಿಗೆ ಛಾಯಾಗ್ರಾಹಕ ಬಂದು ಕಾರಿನ ಫೋಟೊ ತೆಗೆದು ನಮ್ಮ ಕಾರಿನ ಮೇಲೆ ನೋಟಿಸ್ ಅಂಟಿಸಿ ಹೋಗುತ್ತಾರೆ. ಆದರೆ ಗಂಟೆಗಟ್ಟಲೆ ಅದೇ ಜಾಗದಲ್ಲಿ ಕಾರುಗಳನ್ನು ನಿಲ್ಲಿಸಿರುವವರ ಮೇಲೆ ಯಾವ ಕ್ರಮವನ್ನೂ ತೆಗೆದುಕೊಳ್ಳುವುದಿಲ್ಲ.

ಇದು ಯಾವ ರೀತಿ ಚಮತ್ಕಾರ? ಅವರ ಜತೆ ಏನಾದರೂ ಡೀಲ್ ಮಾಡಿಕೊಂಡಿರುತ್ತಾರೆಯೇ? ಎರಡು ವಾರದ ಹಿಂದೆ ಜಯನಗರ ಕಾಂಪ್ಲೆಕ್ಸ್‌ನಲ್ಲಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಹೋದೆ. ಆದರೆ ಕಾಂಪ್ಲೆಕ್ಸ್ ಸುತ್ತ ಕಾರು ನಿಲ್ಲಿಸಲು ನಿಗದಿಯಾಗಿದ್ದ ಜಾಗಗಳಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದ್ದರು. ಇಡೀ ಕಾಂಪ್ಲೆಕ್ಸ್ ಸುತ್ತಿ ಬಂದರೂ ಕಾರು ಪಾರ್ಕಿಗ್‌ಗೆ ಜಾಗ ಸಿಗಲಿಲ್ಲ. ಅಂತೂ ಎಲ್ಲೋ ಒಂದು ಕಡೆ ನಿಲ್ಲಿಸಿ, ಕಾಂಪ್ಲೆಕ್ಸ್ ಒಳಗೆ ಹೋಗಿ ಹುಡುಕಿದರೆ ಅಲ್ಲಿ ಆರ್.ಟಿ.ಒ ಕಚೇರಿ ಇರಲಿಲ್ಲ. ಅಲ್ಲಿಂದ ಎಲ್ಲಿಗೆ ಬದಲಾಯಿಸಿದ್ದಾರೆ ಅಂತ ಎಲ್ಲೂ ಮಾಹಿತಿ ಇರಲಿಲ್ಲ.

ಅಲ್ಲಿಯ ಅಂಗಡಿಯವನೊಬ್ಬ ಹೇಳಿದ: `ಬಿಎಂಟಿಸಿ ಬಸ್ ಸ್ಟ್ಯಾಂಡ್ ಮೇಲಕ್ಕೆ ಹೋಗಿ, ಅಲ್ಲಿ ಇದೆ' ಅಂತ. ಆಗ ಮತ್ತೆ ಕಾರು ಪಾರ್ಕಿಂಗಿಗಾಗಿ ಹುಡುಕಾಟ ಶುರು. ಮರಳುಗಾಡಿನಲ್ಲಿ ಓಯಸಿಸ್ ಕಂಡಂತೆ ಬಿಎಂಟಿಸಿ ಸಂಕೀರ್ಣದ ಮೇಲಿನ ಮಹಡಿಯಲ್ಲಿ `ವಾಹನ ನಿಲುಗಡೆ ಇದೆ' ಅಂತ ಬೋರ್ಡ್ ಕಾಣಿಸಿತು. ಅಬ್ಬಾ, ಎಂದುಕೊಂಡು ಅಲ್ಲಿಗೆ ಹೋಗಿ, ಕಾರು ನಿಲ್ಲಿಸಿ ಆರ್.ಟಿ.ಒ ಕಚೇರಿಯ ಕೆಲಸ ಮುಗಿಸಿಕೊಂಡೆ.

ಕಾರು ನಿಲುಗಡೆಗೆ ಅನೇಕ ಕಡೆ ಈ ರೀತಿ ಕಟ್ಟಡದ ಮೇಲೆಯೋ, ನೆಲಮಹಡಿಯಲ್ಲೋ ವಾಹನ ನಿಲ್ಲಿಸುವ ವ್ಯವಸ್ಥೆ ಮಾಡಲಾಗಿದೆ. ಇದು ಮೆಚ್ಚುವಂಥ ಕೆಲಸ. ಆದರೆ ಈ ರೀತಿಯ ವಾಹನ ನಿಲುಗಡೆಯಲ್ಲೂ ಒಮ್ಮೆ ಕೆಟ್ಟ ಅನುಭವ ಆಗಿದೆ. ಕೆ.ಆರ್.ಮಾರ್ಕೆಟ್‌ನಲ್ಲಿ  ಖರೀದಿಗೆ ಎಂದು ಹೋಗಿ, ನೆಲ ಮಹಡಿಯಲ್ಲಿದ್ದ ನಿಲುಗಡೆಯಲ್ಲಿ ಬೀಗ ಹಾಕಿ ಕಾರು ನಿಲ್ಲಿಸಿ ವ್ಯಾಪಾರ ಮುಗಿಸಿ ಬರುವುದರೊಳಗಾಗಿ ಕಾರಿನಲ್ಲಿದ್ದ, ಅದಕ್ಕೂ ಮುಂಚೆ ಖರೀದಿ ಮಾಡಿದ್ದ ಒಂದು ಸಾವಿರ ರೂಪಾಯಿ ಮೌಲ್ಯದ ಸಿ.ಡಿ. ರೆಕಾರ್ಡರ್ ಕಳುವಾಗಿತ್ತು! ಭದ್ರತಾ ವ್ಯವಸ್ಥೆ ಅಷ್ಟು ಚೆನ್ನಾಗಿತ್ತು.

ನಾವು ಅಲ್ಲಿರುವ ಪಾರ್ಕಿಂಗ್‌ಗೆ ಶುಲ್ಕ ವಸೂಲು ಮಾಡುವವನನ್ನು ಕೇಳುವ ಹಾಗಿಲ್ಲ; ಏಕೆಂದರೆ `ಪಾರ್ಕಿಂಗ್ ಅಟ್ ಓನರ್ಸ್‌ ರಿಸ್ಕ್' ಅಂತ ಬೋರ್ಡ್ ನೇತಾಡುತ್ತಿರುತ್ತದೆ! ಅದರ ದುರ್ಬಳಕೆ ಮಾಡಿಕೊಂಡು ನಮ್ಮ ಕಾರು ಮತ್ತು ಅದರೊಳಗಿರುವ ವಸ್ತುಗಳನ್ನು ನಾಜೂಕಾಗಿ ಕಳವು ಮಾಡುವ ದೊಡ್ಡ ಜಾಲವೇ ನಗರದಲ್ಲಿ ವ್ಯಾಪಕವಾಗಿದೆ.

ಈ ಅವ್ಯವಸ್ಥೆಗಳು ಯಾವಾಗ ಸರಿಹೋಗಬಹುದು?


ಮೇ 14ರ `ಮೆಟ್ರೊ' ಸಂಚಿಕೆಯಲ್ಲಿ `ಕಾರ್ ಪಾರ್ಕಿಂಗ್ ಕಿರಿಕಿರಿ' ಲಹರಿ ಪ್ರಕಟವಾಗಿತ್ತು. ನಗರದ ಆಧುನಿಕ ಸಮಸ್ಯೆಗಳಲ್ಲಿ ಕಾರ್ ಪಾರ್ಕಿಂಗ್ ಕೂಡ ಒಂದು. ಅದರ ಮುಖಗಳು ಹಲವು. ಓದುಗರು ತಮ್ಮ ಅಪರೂಪದ ಅನುಭವ ಕಥನಗಳ ಮೂಲಕ ಈ ಸಮಸ್ಯೆಯ ಮೇಲೆ ಬೆಳಕು ಚೆಲ್ಲಬಹುದು. ಪರಿಹಾರದ ದಾರಿ ಗೊತ್ತಿದ್ದವರು ಅದನ್ನು ಸೂಚಿಸುವ ಅವಕಾಶವೂ ಇದೆ. ನಿಮ್ಮ ಬರಹ ಸಂಕ್ಷಿಪ್ತವಾಗಿದ್ದು, 300 ಪದಗಳ ಮಿತಿಯಲ್ಲಿರಲಿ. ಬರಹ ಅಥವಾ ನುಡಿ ತಂತ್ರಾಂಶ ಬಳಸಿ ಬರೆದವರು metropv@prajavani.co.in ಗೆ ಇ-ಮೇಲ್ ಮೂಲಕ ಕಳುಹಿಸಬಹುದು. ನಮ್ಮ ವಿಳಾಸ: `ಕಾರ್ ಪಾರ್ಕಿಂಗ್ ಪಡಿಪಾಟಲು', ಮೆಟ್ರೊ, ಪ್ರಜಾವಾಣಿ, ನಂ. 75, ಎಂ.ಜಿ.ರಸ್ತೆ, ಬೆಂಗಳೂರು- 560 001.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT