ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಮ್ಮನಿಗೆ ಬಾಗಿನ ಸಿದ್ಧವೇ...

Last Updated 29 ಆಗಸ್ಟ್ 2019, 6:34 IST
ಅಕ್ಷರ ಗಾತ್ರ

ಗೌರಿಯನ್ನು ಬರಮಾಡಿಕೊಂಡ ದಿನ ಸುಮಂಗಲಿಯರಿಗೆ ಬಾಗಿನ ನೀಡುವುದು ಪದ್ಧತಿ. ಯಾವುದೇ ಆಚರಣೆ ಮಹತ್ವ ಪಡೆಯುತ್ತಿದ್ದಂತೆ ಅಥವಾ ಜನಪ್ರಿಯವಾಗುತ್ತಿದ್ದಂತೆ ಅದರ ಹಿಂದೆಯೇ ವಾಣಿಜ್ಯ ಚಟುವಟಿಕೆ ಸಹ ಬೆಳೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಬಾಗಿನ ಸಹ ಉದ್ಯಮವಾಗುತ್ತಿದೆ.

ನಗರದ ಜಯನಗರ ನಾಲ್ಕನೇ ಬ್ಲಾಕ್‌ಗೆ ಭೇಟಿಕೊಟ್ಟರೆ ಹದಿನೈದ್ಕಕೂ ಹೆಚ್ಚು ಬಾಗಿನ ಮಾರುವ ಅಂಗಡಿಗಳನ್ನು ಕಾಣಬಹುದು. ಅಲ್ಲದೆ ಬಸವನಗುಡಿ, ಮಲ್ಲೇಶ್ವರ ಇತರ ಮಾರುಕಟ್ಟೆಗಳಲ್ಲಿ ಸಿದ್ಧ ಬಾಗಿನ ದೊರೆಯುತ್ತವೆ.

ಹಬ್ಬದ ಆಚರಣೆಯ ಭಾಗವಾದ ಬಾಗಿನ ನೀಡುವುದನ್ನು ಮಹಿಳೆಯರು ಸಂಭ್ರಮಿಸುತ್ತಾರೆ. ಗೌರಿ ಹಬ್ಬ, ಹೆಣ್ಣು ಮಕ್ಕಳು ಮತ್ತು ತವರಿನ ಅವಿನಾಭಾವ ಸಂಬಂಧದ ಪ್ರತೀಕ. ತವರಿನಲ್ಲಿ ಸದಾ ಸೌಭಾಗ್ಯ ತುಂಬಿರಲಿ ಎಂದು ಮನಸಾರೆ ಹರಸುವ ಮಗಳು, ಮಗಳು ಸದಾ ನಗುತಿರಲೆಂದು ಬಯಸುವ ತವರು. ಭಾವನೆಗಳ ಮೇಲಾಟಕ್ಕೆ ಇದು ಪರ್ವ ಕಾಲ.

ತವರಿನ ಮನೆಯಿಂದ ಅಮ್ಮ, ಅತ್ತಿಗೆ ಅಥವಾ ನಾದಿನಿ ಯಾರನ್ನಾದರೂ ಕರೆದು ಬಾಗಿನ ನೀಡುತ್ತಾರೆ. ಬಾಗಿನ ನೀಡಿದರೆ ಸೌಭಾಗ್ಯ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಜತೆಗೆ ಹತ್ತಿರದ ಬಂಧು– ಬಳಗ, ಅಕ್ಕಪಕ್ಕದ ಮನೆಯವರನ್ನು ಕರೆದು ಬಾಗಿನ ನೀಡಲಾಗುತ್ತದೆ. ಬಾಗಿನ ನೀಡುವುದು ಹಬ್ಬದ ಆಚರಣೆಯ ಬಹುಮುಖ್ಯ ಭಾಗ ಎಂಬಂತಾಗಿದೆ. ನಗರ ಪ್ರದೇಶಗಳಲ್ಲಿ ಬಾಗಿನ ನೀಡುವ
ಸಂಪ್ರದಾಯ ಹೆಚ್ಚುತ್ತಿದೆ.

’ಸಂಪ್ರದಾಯದಂತೆ ಗೌರಿ ಪೂಜೆಗೆ ಸುಮಂಗಲಿಯರನ್ನು ಕರೆಯುತ್ತೇವೆ. ಮನೆಗೆ ಬಂದವರನ್ನು ಬರಿಗೈಯಲ್ಲಿ ಕಳುಹಿಸಬಾರದು ಎಂದು ಬಾಗಿನ ನೀಡುತ್ತೇವೆ. ನಾನು ಐದು ಜನರಿಗೆ ಬಾಗಿನ ಕೊಡುತ್ತೇನೆ’ ಎನ್ನುತ್ತಾರೆ ಹಲಸೂರಿನ ನಿವಾಸಿ ಉಷಾ.

’ಮೊದಲೆಲ್ಲ ಬಾಗಿನವನ್ನು ಮನೆಯಲ್ಲಿಯೇ ತಯಾರಿಸುತ್ತಿದ್ದೆವು. ಈಗ ಅಂಗಡಿಯಲ್ಲಿ ಬಾಗಿನ ಇಡಿ ಸೆಟ್ ಸಿಗುತ್ತದೆ. ಕಚೇರಿ, ಮನೆಕೆಲಸಗಳ ನಡುವೆ ಬಾಗಿನ ಸಿದ್ಧಪಡಿಸಲು ಸಮಯವಿಲ್ಲದವರಿಗೆ ಸಿದ್ಧ ಬಾಗಿನ ಸಿಗುತ್ತಿರುವುದು ಒಳ್ಳೆಯದೇ ಆಗಿದೆ’ ಎನ್ನುತ್ತಾರೆ ಜಯನಗರ ನಿವಾಸಿ ಆಶಾ.

ಸಿದ್ಧ ಬಾಗಿನದಲ್ಲಿರುವ ವಸ್ತುಗಳು
ಅಕ್ಕಿ ಕೇರುವ ಮರ, ಅಕ್ಕಿ, ಬೆಲ್ಲ ನವಧಾನ್ಯಗಳು (ಕಡಲೆಬೇಳೆ, ತೊಗರಿಬೇಳೆ, ಹೆಸರುಬೇಳೆ, ಉದ್ದಿನಬೇಳೆ, ರವೆ), ಉಪ್ಪು, ತೆಂಗಿನಕಾಯಿ, ಹಣ್ಣು, ಅರಿಶಿನ-ಕುಂಕುಮ, ವೀಳ್ಯದ ಎಲೆ, ಅಡಿಕೆ, ಬಳೆ ಪ್ಯಾಕೆಟ್‌ನಲ್ಲಿ ಲಭ್ಯವಿರುವ ವಸ್ತುಗಳು: ಕನ್ನಡಿ, ಕಾಡಿಗೆ, ಬಾಚಣಿಕೆ, ಕುಂಕುಮ, ಕಪ್ಪು ಬಳೆ, ಕಪ್ಪು ಮಣಿ.

*
ಚಿಕ್ಕದು ಸಾಕೆ? ದೊಡ್ಡದು ಬೇಕೆ?
‘ಗೌರಿ ಹಬ್ಬ ಆಚರಿಸುವ ಬಹುತೇಕರು ಬಾಗಿನ ನೀಡುತ್ತಾರೆ. ಕಡಿಮೆಯೆಂದರೆ, ಎರಡು ಬಾಗಿನ ಕೊಳ್ಳುತ್ತಾರೆ. ಕೆಲವರು ಹತ್ತಕ್ಕೂ ಹೆಚ್ಚು ಬಾಗಿನ ಕೊಳ್ಳುತ್ತಾರೆ’ ಎನ್ನುತ್ತಾರೆ ಜಯನಗರ ವ್ಯಾಪಾರಿ ರಾಜು.

‘ನಮ್ಮಲ್ಲಿ ದೊಡ್ಡ ಮೊರದ ಬಾಗಿನ, ಚಿಕ್ಕ ಮೊರದ ಬಾಗಿನ ಎಂಬ ವೈವಿಧ್ಯ ಇದೆ. ಜನರು ಅವರಿಗೆ ಬೇಕಾದ್ದು ಕೊಳ್ಳುತ್ತಾರೆ. ಬಾಗಿನಕ್ಕೆ ಕೊಡುವ ಇತರ ವಸ್ತುಗಳೂ ನಮ್ಮಲ್ಲಿ ಇವೆ. ಚಿಕ್ಕ ಮೊರದ ಬಾಗಿನ ₹ 250ರಿಂದ ₹300 ಇರುತ್ತದೆ. ದೊಡ್ಡದಾದರೆ ₹500. ಬಾಗಿನಕ್ಕೆ ಬಳಸುವ ಸಾಮಗ್ರಿಗಳೂ ನಮ್ಮ ಬಳಿ ಲಭ್ಯ ’ ಎನ್ನುತ್ತಾರೆ ವ್ಯಾಪಾರಿ ಜಗದೀಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT