ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ಯಾನದಿಂದೆದ್ದ ಕೊಳದ ಬಕ

Last Updated 25 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಜನ ವಸತಿ ಇರುವ ಸಣ್ಣಪುಟ್ಟ ನೀರಿನ ತಾಣಗಳಲ್ಲಿ, ಕೆರೆಗಳಲ್ಲಿ, ಗದ್ದೆಗಳಲ್ಲಿ ಕೂಡಾ ಆಹಾರ ಹುಡುಕುತ್ತಾ ಗುಮ್ಮನಂತೆ ಧ್ಯಾನಾವಸ್ಥೆಯಲ್ಲಿ ಮುದುಡಿ ಕುಳಿತಿರುತ್ತದೆ.

ನೋಡಿದವರಿಗೆ ಅದು ನಿದ್ರಿಸುತ್ತಿರುವಂತೆ ಕಾಣುತ್ತದೆ. ಆದರೆ ಮೀನು ಮತ್ತು ಇತರ ಸಣ್ಣ ಜಲಚರಗಳು ಕಂಡೊಡನೇ ರೆಕ್ಕೆ ಬಿಚ್ಚಿ ರಭಸದಿಂದ ಮುನ್ನುಗ್ಗಿ ಕತ್ತು ಚಾಚಿ ಕೊಕ್ಕಿನಿಂದ ಚಕ್ಕನೆ ಬೇಟೆಯಾಡುವ ಈ ನೀರು ಹಕ್ಕಿಯ ಹೆಸರು ಕೊಳದ ಬಕ ಅಥವಾ ಪಾಂಡ್ ಹೆರಾನ್, ವೈಜ್ಞಾನಿಕ ತಳಿ Ardeola Gray.

ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಬರ್ಮಾ, ಪಾಕಿಸ್ತಾನ, ಇರಾನ್ ದೇಶಗಳಲ್ಲಿ ಹೇರಳವಾಗಿ ಕಂಡುಬರುವ ಈ ಹಕ್ಕಿ ದೂರದಿಂದ ಕಂದು ಬಣ್ಣದ ಹೊರಮೈಯ್ಯಲ್ಲಿ ನೋಡುಗರ ಕಣ್ಣಿಗೆ ಆಕರ್ಷಕವಾಗಿ ಕಾಣುತ್ತದೆ.

ನೀಳವಾದ ನವಿರಾದ ಬೆಳ್ಳಗಿನ ಒಳಪದರಿನ ರೆಕ್ಕೆಗಳನ್ನು ಬಿಚ್ಚಿ ಕಾಲು ಕೆದರಿ ಹಾರಿದಾಗ ಬಲು ಸುಂದರವಾಗಿ ಕಾಣುತ್ತದೆ.

ಬೆಂಗಳೂರಿಗರಿಗೆ ಆಸುಪಾಸಿನ ಕೆರೆದಂಡೆಗಳಲ್ಲಿ, ಲಾಲ್‌ಬಾಗ್‌ನಲ್ಲೂ ಇವು ಚಿರಪರಿಚಿತ. ಜ್ಞಾನಭಾರತಿ ವಿಶ್ವವಿದ್ಯಾಲಯದ ಹಸಿರು ಪ್ರದೇಶದಲ್ಲಿ ಸಣ್ಣಪುಟ್ಟ ಜಲಚರಗಳಿಗೆ ಆಶ್ರಯನಿಡುವ ಸಣ್ಣ ಪುಟ್ಟ ನೀರಿನ ಹೊಂಡಗಳು ಇವುಗಳಿಗೆ ಆಹಾರ ತಾಣಗಳೇ. ಹತ್ತಾರು ಪಾಂಡ್ ಹೆರಾನ್‌ಗಳು ಗುಂಪಾಗಿ ಹಾರಿ ಬಂದು ಆಹಾರ ಆರಿಸುವುದು ಅಲ್ಲಿ ಸಾಮಾನ್ಯ.

ಇತ್ತೀಚೆಗೊಂದು ಮುಂಜಾನೆ ಅಂತಹುದ್ದೊಂದು ಭಂಗಿಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದವರು ನಾಗರಬಾವಿ ಎರಡನೇ ಹಂತದ ಪಾಪರೆಡ್ಡಿಪಾಳ್ಯ ನಿವಾಸಿ ಸಂತೋಷ ಎನ್. ಅವರು. ಕಚ್ಚಿ ಹಿಡಿದದ್ದು ಮೀನು ಆಗಿರದೇ ಮರದ ಬೇರಿನ ತುಂಡು ಎಂದು ಬಿಸಾಕಿದ ಕ್ಷಣ ಚಿಮ್ಮಿದ ನೀರಿನ ಹನಿಗಳನ್ನೂ ಅವರು ಸೆರೆಹಿಡಿದಿದ್ದಾರೆ. ಅಲ್ಲೆಜಿಸ್ ಟೆಕ್ನಾಲಜಿಸ್ ಸಂಸ್ಥೆಯಲ್ಲಿ ಕಂಪ್ಯೂಟರ್ ಇಂಜಿನಿಯರ್ ಆಗಿರುವ ಅವರು ನಾಲ್ಕು ವರ್ಷಗಳಿಂದ ಪ್ರಕೃತಿ, ಪಕ್ಷಿ, ಮ್ಯಾಕ್ರೋ, ವನ್ಯಜೀವಿ ಛಾಯಾಗ್ರಹಣದ ಹವ್ಯಾಸ ಬೆಳೆಸಿಕೊಂಡಿದ್ದಾರೆ.

ಅವರು ಬಳಸಿರುವ ಕ್ಯಾಮೆರಾ, ನಿಕಾನ್ ಡಿ 5100. ಜೊತೆಗೆ 55–300 ಎಂ.ಎಂ. ಜೂಂ ಲೆನ್ಸ್. ಅವರ ಎಕ್ಸ್‌ಪೋಷರ್ ವಿವರ ಇಂತಿವೆ:

ಜೂಂ ಫೋಕಲ್ ಲೆಂಗ್ತ್ 300 ಎಂ.ಎಂ.ನಲ್ಲಿ, ಅಪರ್ಚರ್‌ ಈ 5.6 ಶಟರ್ ವೇಗ 1/750 ಸೆಕೆಂಡ್, ಐ.ಎಸ್.ಒ 800; ಟ್ರೈಪಾಡ್ , ಫ್ಲಾಶ್ ಬಳಕೆಯಾಗಿಲ್ಲ. ಈ ಚಿತ್ರದೊಂದಿಗೆ ತಾಂತ್ರಿಕ ಮತ್ತು ಕಲಾತ್ಮಕ ಅನುಸಂಧಾನದ ಕೆಲವು ಅಂಶಗಳು ಇಂತಿವೆ:

* ಮುಂಜಾನೆಯ ಸಮಯವಾಗಿದ್ದು ದೂರದಿಂದ ತೆಗೆದ ಕೊಳದ ಬಕದ ಭಾಗ, ನೀರಿನಲ್ಲಿ ಅದರ ಪ್ರತಿಬಿಂಬ, ಚಿಮ್ಮಿದ ನೀರಿನ ಹನಿಗಳು, ತುಂಡುಬೇರನ್ನೇ ಮೀನು ಎಂದು ಭಾವಿಸಿ ಹೆಕ್ಕಿದ ಜಾಗದಲ್ಲಿ ಮೂಡಿದ್ದ ನೀರಿನ ಸುರುಳಿ ಅಲೆಗಳು ಕೂಡಾ ಇನ್ನೂ ಕಾಣಿಸುತ್ತಿದ್ದಂತೆಯೇ ಸಮಪರ್ಕವಾದ ಹೆಚ್ಚಿನ ಶಟರ್ ವೇಗವನ್ನು ಅಳವಡಿಸಿರುವುದು ಸೂಕ್ತವಾಗಿದೆ. ಅದರ ವೇಗ ನಿಧಾನವಾಗಿದ್ದರೆ, ಚಲನೆಯಲ್ಲಿರುವ ನೀರಿನ ಮೇಲ್ಭಾಗ, ಹನಿಗಳು ಹಾಗೂ ರೆಕ್ಕೆಯ ಪದರುಗಳೂ ಮಂದವಾಗಿ (ಔಟ್ ಆಫ್ ಫೋಕಸ್) ಚಿತ್ರದ ಪ್ರಭಾವಕ್ಕೆ (ಇಂಪ್ಯಾಕ್ಟ್) ಚ್ಯುತಿ ಬರುತ್ತಿತ್ತು.

* ಅಪರ್ಚರ್‌ ರಂಧ್ರ ದೊಡ್ಡದಾಗಿರುವುದರಿಂದ ಫೋಕಸ್ ಸಂಗಮ ವಲಯವನ್ನು ( ಡೆಪ್ತ್ ಆಫ್ ಫೀಲ್ಡ್ ) ಕಿರಿದಾಗಿಸಿದೆ. ಅದರ ದೆಸೆಯಿಂದ, ಪಕ್ಷಿಯ ಹಿನ್ನೆಲೆ ಮತ್ತು ಮುಂಭಾಗದ ಜಾಗಗಳು ಮಂದವಾಗಿ (ಬ್ಲರ್) ಕಾಣಿಸುವಂತಾಗಿ, ಮುಖ್ಯವಸ್ತುವಾದ ಪಕ್ಷಿಯ ಕೊಕ್ಕು, ರೆಕ್ಕೆಯ ಪದರುಗಳು, ಮೂಡಿರುವ ನೀರಿನ ಅಲೆ, ಹನಿಗಳು, ಮತ್ತು ಬೇರಿನ ತುಂಡು ಮಾತ್ರ ಸ್ಪಷ್ಟವಾಗಿ ಮೂಡಿದ್ದು ಚಿತ್ರಣದ ಔಚಿತ್ಯಕ್ಕೆ ಪೂರಕವಾಗಿದೆ. ಸಣ್ಣ ಅಪರ್ಚರ್‌ ಆಗಿಬಿಟ್ಟಿದ್ದರೆ, ಚೌಕಟ್ಟಿನಲ್ಲಿರುವ ಎಲ್ಲ ಭಾಗಗಳೂ ಪೂರ್ತಿ ಫೋಕಸ್ ಆಗಿ, ಅದೊಂದು ದಾಖಲೆಯ ಫೋಟೋವಷ್ಟೇ ಆಗಿ ಭಾವಸ್ಪಂದನೆಗೆ ಅವಕಾಶವೇ ಇರುತ್ತಿರಲಿಲ್ಲ.

ಕಲಾತ್ಮಕವಾಗಿ ಅವಲೋಕಿಸುವಾಗ, ತಟ್ಟನೆ ನೋಡುಗನ ಕಣ್ಣಿಗೆ ತಾಟುವುದು, ಚಿತ್ರಣದ ಪ್ರಭಾವ (ಇಂಪ್ಯಾಕ್ಟ್). ಬಿಚ್ಚಿರುವ ಬಿಳುಪಾದ ರೆಕ್ಕೆಗಳು, ಆ್ಯಕ್ಷನ್ ಭರಿತ ಮೈಮಾಟ ಮತ್ತು ಅವುಗಳ ಯಥಾವತ್ತು ನೀರಲ್ಲಿನ ಪತಿಬಿಂಬ (ಮಿರರ್ ಇಮೇಜ್). ಧ್ಯಾನಸ್ಥವಾಗಿ ಮುದುಡಿ ಕುಳಿತು ನೀರನ್ನು ಕದಡದೇ ಹೊಂಚು ಹಾಕುವ ಪಕ್ಷಿಯ ಸಂದರ್ಭವನ್ನು ಅಲುಗಾಡದ ನೀರಿನ ಮೇಲ್ಮೆ ಮತ್ತು ನೀರಿನಲ್ಲಿ ಮೂಡಿರುವ ಪರಿಸರವನ್ನೂ ಸೇರಿ ಎಲ್ಲದರ ಪ್ರತಿಬಿಂಬವು ಇಡೀ ಚೌಕಟ್ಟಿನ ಸೌಂದರ್ಯವನ್ನು ಹೆಚ್ಚಿಸಿದೆ.

ಈ ಪಕ್ಷಿಯ ಕಂದು ಮೈ ಬಣ್ಣ ಮತ್ತು ತೆರೆದ ರೆಕ್ಕೆಗಳ ಅಚ್ಚ ಬಿಳುಪು, ಚೌಕಟ್ಟಿನಲ್ಲಿನ ಇತರ ಎಲ್ಲ ಅಂಶಗಳ ತಿಳಿಹಸಿರು ಮಿಶ್ರಿತ ಕಂದು ಬಣ್ಣ ಉತ್ತಮವಾದ ವರ್ಣಸಾಮರಸ್ಯವನ್ನು (ಟೋನಲ್ ಹಾರ್ಮನಿ) ಹೊಂದಿದೆ. ಅವೆಲ್ಲವೂ ಬೇರೆ ಬೇರೆ ಬಣ್ಣಗಳಿಂದ ಕೂಡಿದ್ದರೆ, ನೋಡುಗನ ಕಣ್ಣು ಮತ್ತು ಮನಸ್ಸಿಗೆ ಈಗಿನಂತೆ ಭಾವಸ್ಪಂದನ (ಎಮೋಶನ್) ಉಂಟುಮಾಡುವಲ್ಲಿ ಗೊಂದಲವಾಗುತ್ತಿತ್ತು.

* ಕಲಾತ್ಮಕ ಅಂಶಗಳಿಗೆ ಪೂರಕವಾದ ಸಂಯೋಜನಾ ಕೌಶಲ್ಯವೂ (ಕಂಪೋಸಿಶನ್) ಇಲ್ಲಿ ಉತ್ತಮವಾಗಿದೆ. ಮುಖ್ಯವಾಗಿ ‘ರೂಲ್ ಆಫ್ ಥರ್ಡ್‌‘ ಅಥವಾ ‘ಗೋಲ್ಡನ್ ಕ್ರಾಸ್ ರೂಲ್’ ಇಲ್ಲಿ ಸಮರ್ಪಕವಾಗಿ ಅಳವಡಿಸಲ್ಪಟ್ಟಿದೆ. ಹಕ್ಕಿಯ ಕೊಕ್ಕಿನ ಭಾಗ ಚೌಕಟ್ಟಿನ ಬಲ ಬದಿಯ ಒಂದು ಮೂರಾಂಶದ ಬಿಂದುವಿನ ಸಮೀಪ ನೆಟ್ಟಿದೆ. ಅಂತೆಯೇ ಅದರ ಮುಂಭಾಗದಲ್ಲಿ ಎರಡು ಮೂರಾಂಶದಷ್ಟು ನೀರಿನ ಜಾಗ ಕಾಣಿಸುತ್ತಿದೆ. ಇದಕ್ಕೇ ‘ರಿಲೀಫ್’ ಎನ್ನುವುದು. ಈ ಅಂಶ ಕೂಡಾ ಚಿತ್ರದ ಸಮರ್ಪಕ ನಿರೂಪಣೆಗೆ (ಪ್ರಸೆಂಟೇಶನ್‌) ಸಹಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT