ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಸಂತ ಮೇರಿ ಜಯಂತಿ

Last Updated 6 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಶಿವಾಜಿನಗರದ ಸಂತ ಮೇರಿ ಬೆಸಿಲಿಕಾದಲ್ಲಿ ಸೆಪ್ಟೆಂಬರ್ 8ರಂದು ಮೇರಿ ಜಯಂತಿ ವೈಭವೋಪೇತವಾಗಿ ನಡೆಯಲಿದೆ. ಸಂತ ಮೇರಿಯನ್ನು ಆರೋಗ್ಯ ಮಾತೆ, ನಿರ್ಮಲ ಮಾತೆ, ಲೂರ್ದುಮಾತೆ, ನಿತ್ಯ ಸಹಾಯ ಮಾತೆ, ವ್ಯಾಕುಲ ಮಾತೆ, ದೀನ ಮಾತೆ, ವಿಜಯ ಮಾತೆ ಮುಂತಾದ ನಾನಾ ಗುಣ ವಿಮರ್ಶಾತ್ಮಕ ನಾಮಧೇಯಗಳಿಂದ ಸಂಬೋಧಿಸುವುದುಂಟು.

ಚರಿತ್ರೆಯ ಪುಟದಲ್ಲಿ
ಈ ದೇವಾಲಯಕ್ಕೆ ಸುಮಾರು 300 ವರ್ಷಗಳಷ್ಟು ಹಿಂದಿನ ಇತಿಹಾಸವಿದೆ. ಕಾಲಘಟ್ಟದ ಸಂದಿಗ್ಧ್ದತೆಗಳಿಗೆ ಪ್ರಕೃತಿ ವೈಪರೀತ್ಯಗಳಿಗೆ, ದುಷ್ಕರ್ಮಿಗಳ ಆಕ್ರಮಣಕ್ಕೆ ಇದು ತುತ್ತಾದರೂ, ದೇವಾಲಯವು ಮೂಲ ಅಸ್ತಿತ್ವದಲ್ಲೇ ಶ್ವಾಶ್ವತವಾಗಿ ಇನ್ನೂ ನೆಲೆ ನಿಂತಿರುವುದು ಇತಿಹಾಸಕ್ಕೆ ಹಿಡಿದ ಕನ್ನಡಿಯಾಗಿದೆ. 17ನೇ ಶತಮಾನದಲ್ಲಿ ತಮಿಳು ನಾಡಿನ ಗಿಂಜಿ ಎಂಬ ಪ್ರದೇಶದಿಂದ ಕ್ರೈಸ್ತರು ಇಲ್ಲಿಗೆ ಆಗಮಿಸಿದ್ದು, ಆಗ ಇಲ್ಲಿನ ಪರಿಸರ, ನೈರ್ಮಲ್ಯ ಮತ್ತು ಸಾರವತ್ತಾದ ನೆಲವು ಉತ್ತಮ ಗುಣಮಟ್ಟದ ಭತ್ತ ಬೆಳೆಯುವುದಕ್ಕೆ ಸೂಕ್ತವಾಗಿದೆ ಎಂದು ಅವರಿಗೆ ಕಂಡುಬಂತು.

ಕ್ರೈಸ್ತರ ಬೆಳವಣಿಗೆಯನ್ನು ಕಂಡು ಕ್ರಿ.ಶ. 1811ರಲ್ಲಿ ಜೀನ್ ದುಬೋಯಿಸ್ ಎಂಬ ಯೂರೋಪಿಯನ್ ಪಾದ್ರಿ ಇಲ್ಲಿ ದೇವಾಲಯ ನಿರ್ಮಿಸಿದ. ನಂತರ ಪುದುಚೇರಿಯಿಂದ ಬಂದ ಭಾರತೀಯ ಪಾದ್ರಿ ಆಂಡ್ರಿಯಾಸ್, ದೇವಾಲಯವನ್ನು ಭಕ್ತರ ಅಗತ್ಯಕ್ಕೆ ತಕ್ಕಂತೆ ವಿಸ್ತರಣೆ ಮಾಡಿದರು. 1832ರಲ್ಲಿ ಮತೀಯ ಗಲಭೆಗಳು ಪ್ರಾರಂಭಗೊಂಡು ದೇವಾಲಯ ದುಷ್ಕರ್ಮಿಗಳ ದಾಳಿಗೆ ತುತ್ತಾಯಿತು.

ಆಗ ಆಡಳಿತದಲ್ಲಿದ್ದ ಬ್ರಿಟಿಷ್ ಸರ್ಕಾರ ನೆರವಿಗೆ ಧಾವಿಸಿ ಬಂದು ದೇವಾಲಯಕ್ಕೆ ಮತ್ತು ಕ್ರೈಸ್ತರಿಗೆ ಭದ್ರತೆ ಒದಗಿಸಿತು. ಸೈನಿಕ ಪಡೆಗಳು ಅಲ್ಲೇ ಕೆಲವು ತಿಂಗಳುಗಳ ಕಾಲ ಬೀಡುಬಿಟ್ಟು ಶಾಂತಿ ಮರಳುವವರೆಗೆ ಶಸ್ತ್ರಧಾರಿಗಳಾಗಿ ಕಾವಲಿದ್ದವು. ಇದಾದ ಕೆಲವು ವರ್ಷಗಳಲ್ಲೇ ಭೀಕರ ಪ್ಲೇಗ್ ರೋಗ ಕಾಣಿಸಿಕೊಂಡಿತು. ಪ್ಲೇಗ್‌ನ ಕಪಿಮುಷ್ಟಿಯಿಂದ ಪಾರಾಗಲು ಭಕ್ತರು ಮೇರಿ ಮಾತೆಯ ಮೊರೆಹೋದರು. ಪ್ಲೇಗ್ ತಹಬಂದಿಗೆ ಬಂದು, ಜನರು ಭಯಂಕರ ವಿಪತ್ತಿನಿಂದ ಪಾರಾದರು.

ಅಂತಹ ಆಪತ್ತಿನಿಂದ ಪಾರುಮಾಡಿದ ಮೇರಿಯನ್ನು ಜನರು ‘ಅನ್ನೈ ಆರೋಕ್ಯಮೇರಿ’ ಎಂದು ಕರೆಯತೊಡಗಿದರು. ಕ್ರೈಸ್ತರ ಸಂಖ್ಯೆ ವೃದ್ಧಿಸಿದಂತೆ 1875ರಲ್ಲಿ ಪ್ರಸ್ತುತ ಚರ್ಚ್ ನಿರ್ಮಾಣವು ಆರಂಭಗೊಂಡಿತು. ಸತತ ಏಳು ವರ್ಷಗಳ ಕಾಲ ನಿರ್ಮಾಣದ ಕಾರ್ಯ ಮುಂದುವರೆದು, 1882ರಲ್ಲಿ ಪೂರ್ಣಗೊಂಡಿತು.  ಅಂದಿನ ಪಾದ್ರಿ ರೆವ. ಕ್ಲೇನರ್ ಸೆಪ್ಟೆಂಬರ್ 8ರಂದು ನೂತನ ಚರ್ಚ್‌ನ್ನು ಪವಿತ್ರೀಕರಿಸಿ ಭಕ್ತಾಧಿಗಳಿಗೆ ಸಮರ್ಪಿಸಿದರು.

1947ರವರೆಗೂ ಅಂದಿನ ಬ್ರಿಟಿಷ್ ಸರ್ಕಾರ ಚರ್ಚ್ ನಿರ್ವಹಣೆಗೆ ಅನುದಾನ ನೀಡುತ್ತಿತ್ತು. ಚರ್ಚ್‌ಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಿದ್ದರಿಂದ ಕ್ರೈಸ್ತ ವರಿಷ್ಠಾಧಿಕಾರಿಗಳು  ಈ ದೇವಾಲಯವನ್ನು ಸೆಪ್ಟೆಂಬರ್ 24, 1973ರಂದು ‘ಅನ್ನೈ ಆರೋಕ್ಯಮೇರಿ ಬೆಸಿಲಿಕ’ ಎಂದು ಘೋಷಿಸಿದರು. 

ಗಾಥಿಕ್ ಶೈಲಿಯಲ್ಲಿ ನಿರ್ಮಿಸಿರುವ ಈ ಚರ್ಚ್ 172 ಅಡಿ ಉದ್ದವಿದ್ದು, 50 ಅಡಿ ಅಗಲವಿದೆ. 160 ಅಡಿ ಎತ್ತರಕ್ಕೆ ಸೊಗಸಾದ ಆಕರ್ಷಕ ಗೋಪುರವನ್ನು ನಿರ್ಮಿಸಲಾಗಿದೆ. ಪುಟ್ಟ ಶಿಶು ಯೇಸುವನ್ನು ಕರಗಳಲ್ಲಿ ತಬ್ಬಿರುವ ಆರು ಅಡಿ ಎತ್ತರದ ಸುಂದರ ಮೇರಿಯ ವಿಗ್ರಹವನ್ನು  ಸ್ಥಾಪಿಸಲಾಗಿದೆ. 

ಇಲ್ಲಿಯ ವೇಷ ಭೂಷಣ
ಭಾರತೀಯ ನಾರಿ ವೇಷ ಭೂಷಣಗಳಲ್ಲಿ ಮೇರಿಯ ವಿಗ್ರಹಕ್ಕೆ ಪ್ರತಿ ದಿನ ಸೀರೆ ತೊಡಿಸಲಾಗುತ್ತಿದೆ. ಚರ್ಚ್ ನಿರ್ಮಾಣದ ಸಮಯದಲ್ಲಿ ಈ ವಿಗ್ರಹವನ್ನು ಸ್ಥಳಾಂತರಿಸಲು ಮಾಡಿದ ಪ್ರಯತ್ನಗಳೆಲ್ಲ ವಿಫಲವಾದವು ಎಂಬ ಪವಾಡದ ಪ್ರತೀತಿಯೂ ಇದೆ. ಇಂದಿಗೂ ವಿಗ್ರಹ ಅದೇ ಸ್ಥಳದಲ್ಲಿ ನೆಲೆಗೊಂಡಿರುವುದರಿಂದ ಭಕ್ತಾದಿಗಳಿಗೆ ಅದೊಂದು ಸೋಜಿಗ ಹಾಗೂ ಪವಾಡ ಎನಿಸಿದೆ.  ಪ್ರತಿವರ್ಷ ಸೆಪ್ಟೆಂಬರ್ 8ರಂದು ವಾರ್ಷಿಕ ದಿನಾಚರಣೆ (ಮೇರಿ ಜಯಂತಿ) ಅತ್ಯಂತ ಆಡಂಬರದಿಂದ ನಡೆಯುತ್ತದೆ.

ಜಾತಿ, ಮತ ಭೇದವಿಲ್ಲದೆ ಬಡವ, ಶ್ರೀಮಂತರು ಎಂಬ ಅಂತಸ್ಥಿನ ಭಾವನೆಯಿಲ್ಲದೆ ಎಲ್ಲಾ ವರ್ಗದವರು, ಎಲ್ಲಾ ಕೋಮಿನವರು ಚರ್ಚ್‌ಗೆ ಭೇಟಿ ನೀಡುವುದು ವಿಶೇಷ. ಅಂದು ಬೆಳಿಗ್ಗೆಯಿಂದ ಸಂಜೆಯವರೆಗೂ ಬಿಡುವಿಲ್ಲದೆ ಪೂಜೆ ಪುನಸ್ಕಾರಗಳು ಜರುಗುತ್ತವೆ. ಭಕ್ತರು ಸಾಲಿನಲ್ಲಿ ನಿಂತು ಮೇರಿಗೆ ಹೂವು ಬತ್ತಿಗಳನ್ನು ಅರ್ಪಿಸುತ್ತಾರೆ. ಅಂದು ಸಂಜೆ ನಡೆಯುವ ವೈಭವೋಪೇತವಾದ ತೇರು ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ನೆರೆದು ಮೇರಿಗೆ ಭಕ್ತಿಭಾವದಿಂದ ಗೌರವ ಸೂಚಿಸುತ್ತಾರೆ. ಇದು ಭಕ್ತರ ನಂಬಿಕೆಗೆ ಪ್ರತ್ಯಕ್ಷ ಸಾಕ್ಷಿಯೂ ಹೌದು.

ಕ್ರೈಸ್ತರ ದೇವಮಾತೆ ಮೇರಿ ಹಾಗೂ ಹಿಂದು ಭಕ್ತರ ‘ಮಾರಿಯಮ್ಮ’ ದೇವತೆಗಳ ನಡುವೆ ಎರಡೂ ಧರ್ಮದವರ ಕೆಲವು ಮೂಲ ತತ್ವಾದರ್ಶಗಳು, ನಿದರ್ಶನಗಳು, ಪಾರಂಪರ್ಯ ಸಂಸ್ಕೃತಿಗಳು ಪರಸ್ಪರ ತಳುಕು ಹಾಕಿಕೊಂಡಿವೆ. ಕ್ರೈಸ್ತರು ಪೂಜಿಸುವ ಮೇರಿಯ ಭಾವಚಿತ್ರವು ಹಿಂದು ಭಕ್ತರು ಪೂಜಿಸುವ ‘ಮಾರಿಯಮ್ಮ’ ದೇವತೆಯ ಪ್ರತೀಕವಾಗಿದ್ದು, ರೋಗ ರುಜಿನಗಳನ್ನು,ದುಷ್ಟಶಕ್ತಿಗಳನ್ನು ದಮನಗೊಳಿಸುವ ದೈವ ಶಕ್ತಿಗಳೆಂದು ಎರಡೂ ಧರ್ಮದವರು ಹೊಂದಿರುವ  ಧಾರ್ಮಿಕ ನಂಬಿಕೆಯಾಗಿದೆ.

ಆದ್ದರಿಂದ ಹಿಂದು ಭಕ್ತರು ತಮ್ಮ ದೇವತೆಯಾದ ‘ಶಕ್ತಿ ದೇವತೆ’ ಅಥವಾ ‘ಮಾರಿಯಮ್ಮ’ನ ಹೋಲಿಕೆಯಲ್ಲಿ ಮೇರಿಯನ್ನು ಪೂಜಿಸುತ್ತಾರೆ. ಭಕ್ತರು ತಮ್ಮ ಸಮಸ್ಯೆಗಳು ನಿವಾರಣೆಯಾಗಲೆಂದು, ಅಸ್ವಸ್ಥರು ಗುಣಮುಖರಾಗಲೆಂದು ಹರಸಿಕೊಂಡು ಮೊಣಕಾಲಿನಲ್ಲಿ ನಡೆಯುವುದು, ದೇವಾಲಯದಲ್ಲಿ ಉರುಳು ಸೇವೆ ಮಾಡುವುದು, ಕಾವಿ ಬಟ್ಟೆಗಳನ್ನು ತೊಡುವುದು, ಮೇಣದ ಬತ್ತಿ, ಹೂ ಹಾಗು ಇತರೆ ವಸ್ತುಗಳನ್ನು ಮೇರಿಗೆ ಅರ್ಪಿಸುವ ಮುಂತಾದ ಹರಕೆಗಳನ್ನು ಹೊತ್ತು ಅವುಗಳನ್ನು ಉತ್ಸವದ ಸಮಯದಲ್ಲಿ ಪೂರೈಸುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT