ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಮ್ಮದಿಯ ದೀಪ ಬೆಳಗಿದ ದೀಪಿಕಾ

Last Updated 13 ಅಕ್ಟೋಬರ್ 2017, 5:13 IST
ಅಕ್ಷರ ಗಾತ್ರ

‘ದ ಲಿವ್‌, ಲವ್, ಲಾಫ್‌ ಫೌಂಡೇಷನ್‌’ ಹುಟ್ಟುಹಾಕಲು ಪ್ರೇರಣೆಯಾಗಿದ್ದು ಏನು?

'ಪ್ರಸಿದ್ಧ ನಟಿಯಾಗಿ ಪತ್ರಿಕೆಗಳಿಗೆ, ಟಿ.ವಿ. ವಾಹಿನಿಗಳಿಗೆ ಸಂದರ್ಶನ ಕೊಟ್ಟರೆ ನನ್ನ ಜವಾಬ್ದಾರಿ ಮುಗಿಯಿತೇ? ಸ್ವತಃ ಖಿನ್ನತೆಗೆ ಸಿಲುಕಿ ಹೊರಬಂದ ಬಳಿಕವೂ ಸುಮ್ಮನಿರಲು ಸಾಧ್ಯವೇ?' ಹೀಗೆ, ಯೋಚಿಸುತ್ತಿರುವಾಗ ಹೊಳೆದದ್ದು ‘ದ ಲಿವ್, ಲವ್, ಲಾಫ್‌ ಪೌಂಡೇಷನ್‌’. ಖಿನ್ನತೆ ಗಂಭೀರ ಕಾಯಿಲೆಯಲ್ಲ, ಯಾರಿಗೆ ಬೇಕಾದರೂ ಬರಬಹುದು. ನನ್ನ ಜೀವನವನ್ನೇ ಉದಾಹರಣೆ ನೀಡುತ್ತಾ ಜಾಗೃತಿ ಮೂಡಿಸುತ್ತಿದ್ದೇನೆ. ನನ್ನಂತೆಯೇ ಯೋಚಿಸುವ ಹಲವು ಮಂದಿ ಕೈಜೋಡಿಸಿದ್ದಾರೆ.

ಸಂಸ್ಥೆಯ ಚಟುವಟಿಕೆಗಳಿಗೆ ತೊಡಕುಗಳು, ಸವಾಲುಗಳು ಎದುರಾಗಿವೆಯೇ?

ಇಲ್ಲಿಯವರೆಗೂ ಸಮಸ್ಯೆಗಳು ಎದುರಾಗಿಲ್ಲ. ಗುರಿ ಸ್ಪಷ್ಟವಾಗಿದ್ದರೆ, ಉದ್ದೇಶ ಒಳಿತಾಗಿದ್ದರೆ ಅಡೆತಡೆಗಳು ಬರುವುದಿಲ್ಲ ಎಂಬುದು ನನ್ನ ಬಲವಾದ ನಂಬಿಕೆ. ಅದೃಷ್ಟವಶಾತ್ ನನ್ನ ಆಲೋಚನೆಗಳಿಗೆ ತಕ್ಕಂತೆ ಕೆಲಸ ಮಾಡುವ ಸಿಬ್ಬಂದಿ ಜತೆಗಿದ್ದಾರೆ. ಗ್ರಾಮೀಣ ಮಟ್ಟದಲ್ಲಿ ಮಾನಸಿಕ ಆರೋಗ್ಯಕ್ಕೆ ಶ್ರಮಿಸುತ್ತಿರುವ ಸಂಸ್ಥೆಗಳ ಸಹಯೋಗವೂ ದೊರೆಯುತ್ತಿದೆ. ಫೌಂಡೇಷನ್‌ ವಿಷಯಕ್ಕೆ ಬಂದರೆ ಎಲ್ಲರೂ ಸೇರಿ ಒಮ್ಮತದ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಾನು ಸಂಸ್ಥಾಪಕಿಯಾದರೂ ತಂಡದ ಶ್ರಮ ಅಪಾರ.

ಸಂಸ್ಥೆಯ ಕಾರ್ಯಚಟುವಟಿಕೆಗಳು ಸೀಮಿತವಾಗಿವೆಯೇ?

ಫೌಂಡೇಷನ್‌ ಸೇವೆ ಆರಂಭದಲ್ಲಿ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿತ್ತು. ಬಳಿಕ ಗ್ರಾಮೀಣ ಭಾಗಕ್ಕೂ ವಿಸ್ತರಿಸಲು ನಿರ್ಧರಿಸಿ, ಮಾನಸಿಕ ಆರೋಗ್ಯ ಸುಧಾರಣೆಗೆ ಶ್ರಮಿಸುತ್ತಿರುವ ಸಂಸ್ಥೆಗಳನ್ನು ಗುರುತಿಸಲಾಯಿತು. ರಾಜ್ಯದಲ್ಲಿ ಎಪಿಡಿ ಹಾಗೂ ರಾಜ್ಯ ಸರ್ಕಾರದ ನೆರವು ಪಡೆಯಲಾಗಿದೆ. ಎಪಿಡಿ ಸಂಸ್ಥೆಗೆ ಆರ್ಥಿಕ ನೆರವು ನೀಡಿ, ಕಾರ್ಯ ಚಟುವಟಿಕೆಗಳ ಬಗ್ಗೆ ನಿರಂತರ ಮೌಲ್ಯಮಾಪನ ನಡೆಸಲಾಗುತ್ತದೆ. ಪ್ರಸ್ತುತ 6 ತಾಲ್ಲೂಕುಗಳಲ್ಲಿ 800ಕ್ಕೂ ಹೆಚ್ಚು ಮಂದಿ ಮಾನಸಿಕ ಆರೋಗ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇತರ ಎನ್‌ಜಿಒಗಳ ಸಹಾಯ ಪಡೆಯುವ ಯೋಚನೆ ಇದೆಯೇ?

ಖಂಡಿತವಾಗಿಯೂ. ನಮಗೆ ಫಲಿತಾಂಶ ಮುಖ್ಯ. ಎಲ್ಲ ಕಡೆ ‘ಟಿಎಲ್‌ಎಲ್‌ಎಲ್‌ಎಫ್‌’ ತಲುಪುವುದು ಕಷ್ಟ ಸಾಧ್ಯ. ಇದಕ್ಕೆ ತುಂಬಾ ಸಮಯ ಬೇಕು. ಹಾಗಾಗಿ, ಎನ್‌ಜಿಒಗಳ ಸಹಯೋಗ ಅಗತ್ಯ.

ಮಾನಸಿಕ ಖಿನ್ನತೆಯೇ ಪ್ರಧಾನವಾಗಿರುವ ಚಿತ್ರಗಳಲ್ಲಿ ನಟಿಸುವಿರಾ ?

ಚಲನಚಿತ್ರ ಹಾಗೂ ಕ್ರೀಡೆ ಪರಿಣಾಮಕಾರಿ ಮಾಧ್ಯಮಗಳು. ಜನರನ್ನು ವೇಗವಾಗಿ ತಲುಪುತ್ತವೆ. ಚಿತ್ರದ ವಿಷಯವಸ್ತು, ಸಂದೇಶ, ಎಲ್ಲ ಅಂಶಗಳು ಸರಿಯಾಗಿದ್ದರೆ ನಟಿಸುವ ಬಗ್ಗೆ ಚಿಂತನೆ ನಡೆಸಬಹುದು.

ಗ್ರಾಮೀಣ ಭಾಗಗಳಲ್ಲಿ ಖಿನ್ನತೆಯು ಮೌಢ್ಯಗಳ ಜತೆ ಬೆಸೆದುಕೊಂಡಿದೆ. ಈ ಸವಾಲನ್ನು ಹೇಗೆ ಎದುರಿಸುತ್ತೀರಿ?

ನಮ್ಮ ಗುರಿ, ಉದ್ದೇಶ ಸ್ಪಷ್ಟವಾಗಿದೆ. ಜನರ ಬಳಿಗೆ ತೆರಳಿ ಖಿನ್ನತೆಗೆ ವೈಜ್ಞಾನಿಕ ಕಾರಣಗಳನ್ನು ನೀಡಿದರೆ ಅವರು ಖಂಡಿತ ಒಪ್ಪುತ್ತಾರೆ. ಇದಕ್ಕೆ ಸ್ವಲ್ಪ ಸಮಯ ಹಿಡಿಯಬಹುದು. ಜಗಳೂರು ತಾಲ್ಲೂಕಿನ ಲ್ಲಾಗಿರುವ ಬದಲಾವಣೆ ಕಣ್ಮುಂದೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT