ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ನಲ್ಲಿ ಕನ್ನಡ ಕವಿಜನ!

Last Updated 22 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

‘ಫೇಸ್‌ಬುಕ್‌’ ಅಂದಾಕ್ಷಣ ಕಣ್ಣ ಮುಂದೆ ಸುಳಿಯು­ವುದು ಕಾಲಹರಣ, ಕೆಲಸಕ್ಕೆ ಬಾರದ ಚರ್ಚೆ­ಗಳು.. ಫೇಸ್‌ಬುಕ್‌ನಲ್ಲಿ ಕಾಣಸಿಗುವ ಬಹುತೇಕ ಸ್ಟೇಟಸ್‌, ಕಮೆಂಟ್‌ಗಳೂ ಈ ಮಾತಿಗೆ ಪುಷ್ಟಿ ನೀಡುತ್ತವೆ. ಆದರೆ ಅದರ ಸಕಾರಾತ್ಮಕ ಅಂಶಗಳನ್ನು ಗುರುತಿಸಿ ಸರಿಯಾಗಿ ಬಳಸಿಕೊಳ್ಳುವ ವಿವೇಚನೆ ಇರುವವರು ತುಂಬ ಅಪರೂಪ.

ಫೇಸ್‌ಬುಕ್‌ನಲ್ಲಿನ ‘3ಕೆ ಗ್ರೂಪ್’ ಇಂಥ ಅಪರೂಪದ ವಿದ್ಯಮಾನಕ್ಕೊಂದು ಉದಾಹರಣೆ.

ಏನಿದು 3ಕೆ ಗ್ರೂಪ್?
‘3ಕೆ– ಕನ್ನಡ ಕವನ, ಕಥನ’....ಇದು ಫೇಸ್‌ಬುಕ್‌ನಲ್ಲಿ ಇರುವ ಸಮಾನ ಮನಸ್ಕರ, ಹವ್ಯಾಸಿ ಕವಿಗಳ ಗ್ರೂಪ್. ಇದು ಪ್ರಕ­ಟಣೆಯ ಭಾಗ್ಯವಿಲ್ಲದ ಬರಹ­ಗಾರ­ರಿಗೆ, ಎಲೆಮರೆಯ ಕವಿಗಳಿಗೆ ತಮ್ಮ ಕಥೆ, ಕವನ ಪ್ರಕಟಣೆಗೆ ಮುಕ್ತ ವೇದಿಕೆ ನೀಡುತ್ತಿದೆ. ಜೀವನದ ಜಂಜಡ, ಅವಸರದಿಂದ ವ್ಯಕ್ತಿಯ ಕವಿ ಮನಸ್ಸನ್ನು ಎಚ್ಚರಿಸುವ, ಇಂಗ್ಲಿಷ್‌ ಪ್ರಭಾವದಿಂದ ಕನ್ನಡವನ್ನು ಉಳಿಸಿ ಬೆಳೆಸಲು ಕಿಂಚಿತ್ತಾದರೂ ಪ್ರಯತ್ನಪಡಬೇಕು ಎಂಬ ಉದ್ದೇಶದಿಂದ 2008ರಲ್ಲಿ ಫೇಸ್‌­ಬುಕ್‌­­ನಲ್ಲಿ ಈ ಗ್ರೂಪನ್ನು ಬೆಂಗಳೂರು ಮೂಲದ ರೂಪಾ ಸತೀಶ್‌ ಆರಂಭಿಸಿದರು.

ಈ ಗ್ರೂಪ್‌ನಲ್ಲಿ ಸದ್ಯ 2,686 ಸದಸ್ಯರಿದ್ದಾರೆ. ಇಲ್ಲಿ ಪ್ರತಿದಿನ 50ಕ್ಕೂ ಹೆಚ್ಚು ಕವಿತೆಗಳು ಪ್ರಕಟವಾಗುತ್ತವೆ. ಬೇರೆ ಬೇರೆ ಕ್ಷೇತ್ರಗಳಿಗೆ ಸೇರಿ­ದ­ವರು ಈ ಗ್ರೂಪ್‌ ಸದಸ್ಯರು. ಕವಿತೆ­ಗಳ ಬಗ್ಗೆ ವಿಮರ್ಶೆ ಮಾಡುವ ಆಪ್ತಭಾವ ಸದಸ್ಯರಲ್ಲಿದೆ.  ‘ಗ್ರೂಪ್ ಆರಂಭವಾದ ಆರು ತಿಂಗಳಲ್ಲೇ ಸುಮಾರು ೩೦೦ಕ್ಕೂ ಹೆಚ್ಚು ಮಂದಿ ಇದರ ಸದಸ್ಯರಾದರು. ಇವರಲ್ಲಿ ಹೆಚ್ಚಿನವರಿಗೆ ಕವಿತೆಯ ಆಳ, ಸತ್ವ ಗೊತ್ತಿರಲಿಲ್ಲ. ತಮ್ಮ ಮನಸ್ಸಿಗೆ

ತೋಚಿ­ದ್ದನ್ನು ಆರಂಭದಲ್ಲಿ ಬರೆದು ಪ್ರಕ­ಟಿ­ಸುತ್ತಾ ಬಂದರು. ಈಗ ಇವರು ಉತ್ತಮ ಕವಿತೆಗಳನ್ನು ಬರೆಯುತ್ತಿದ್ದಾರೆ. ಹಾಗೆಯೇ ಕೆಲವರು ಬರವಣಿಗೆ ಕ್ಷೇತ್ರ­ದಲ್ಲೂ ತೊಡಗಿಸಿಕೊಂಡಿದ್ದಾರೆ’ ಎಂದು ಹೇಳುತ್ತಾರೆ ಗ್ರೂಪ್‌ನ ಅಧ್ಯಕ್ಷೆ ರೂಪಾ.

ಸಾಮಾಜಿಕ ಚಟುವಟಿಕೆ
3ಕೆ ಗ್ರೂಪ್ ಬರೀ ಫೇಸ್‌ಬುಕ್‌ ಕವಿ­ಗಳಿಗಷ್ಟೇ ತನ್ನನ್ನು ಸೀಮಿತಗೊಳಿಸಿಕೊಳ್ಳದೆ ಸಾಹಿತ್ಯ ಜಗತ್ತಿನೊಂದಿಗೆ, ಸಾಮಾಜಿಕ ಚಟುವಟಿಕೆಗಳಲ್ಲಿಯೂ ತನ್ನನ್ನು ತೊಡಗಿಸಿ­ಕೊಂ­ಡಿದೆ. ತನ್ನ ಚಟುವಟಿಕೆಗಾಗಿ ಗ್ರೂಪ್‌ ಸದಸ್ಯರು ಒಂದು ಸಮಿತಿಯನ್ನು ರಚಿಸಿಕೊಂಡಿ­ದ್ದಾರೆ. ಇದರಲ್ಲಿ 15 ಜನ ಸದಸ್ಯ­ರಿದ್ದು, ಇವರೆಲ್ಲ ಮೂರು ತಿಂಗಳಿ­ಗೊಮ್ಮೆ ನಗರದ ರಂಗಶಂಕರದಲ್ಲಿ ಸಭೆ ನಡೆಸಿ ಚರ್ಚಿಸುತ್ತಾರೆ.
ಕಾವ್ಯ ಸಂಚಾರ

3ಕೆ– 'ಕಾವ್ಯ ಸಂಚಾರ' ಎಂಬ ಹೆಸರಿನಲ್ಲಿ ರಾಜ್ಯದ ವಿವಿಧ ಭಾಗಗಳಿಗೆ ತೆರಳಿ ಅಲ್ಲಿನ ಹಿರಿಯ ಸಾಹಿತಿ, ಬರಹಗಾರರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸುತ್ತಾರೆ. ಜಿಲ್ಲೆಗಳಲ್ಲಿರುವ ಸದಸ್ಯರು ಕವಿಗೋಷ್ಠಿ ಏರ್ಪಡಿಸಿ ಆ ಭಾಗದ ಯುವ ಕವಿಗಳಿಗೆ ತಮ್ಮ ಕಾವ್ಯ ವಾಚನಕ್ಕೆ ಅವಕಾಶ ನೀಡುತ್ತಾರೆ. ಇಲ್ಲಿಯ ತನಕ ಮಂಗಳೂರು, ಸುರತ್ಕಲ್‌, ಉಡುಪಿ, ಮಂಡ್ಯ ಮೊದಲಾದ ಕಡೆಗಳಲ್ಲಿ ಅನೇಕ ಕಾರ್ಯ­ಕ್ರಮಗಳು ನಡೆದಿವೆ.

ಕನ್ನಡಪರ ಹೋರಾಟಗಾರ, ಹಾಸ್ಯ ಸಾಹಿತಿ  ಎಚ್‌. ಗೋಪಾಲ ಭಟ್‌, ಚುಟುಕು ­ರತ್ನ ಅಕ್ಬರ್‌ ಅಲಿ, ಎಂ.ಜಿ.ಆರ್‌. ಅರಸು ಮೊದಲಾದವರನ್ನು ಈ ಗ್ರೂಪ್ ಸನ್ಮಾನಿಸಿ, ಗೌರವಿಸಿದೆ. ಪ್ರತಿವರ್ಷ ರಾಜ್ಯೋತ್ಸವದಂದು ಕನ್ನಡ ಕವನ, ಕಥೆ ಸ್ಪರ್ಧೆ ಏರ್ಪಡಿಸುತ್ತದೆ. ನೇತ್ರದಾನ ಶಿಬಿರ, ಅನಾಥ ಮಕ್ಕಳಿಗೆ ನೆರವು ನೀಡುವ ಮೂಲಕ ಸಮಾಜ­ಮುಖಿ ಎನಿಸಿದೆ.  

ಪುಸ್ತಕ ಪ್ರಕಟಣೆ
3ಕೆ ಸದಸ್ಯರಿಗೆ ಸಾಹಿತ್ಯ ಲೋಕದಲ್ಲಿ ಗಟ್ಟಿಯಾದ ನೆಲೆ ಲಭಿಸುವಂತೆ ಮಾಡುವ ನಿಟ್ಟಿನಲ್ಲಿ ಅವರು ಬರೆದ ಕವನಗಳಲ್ಲಿ ಉತ್ತಮವಾದುದನ್ನು ಆಯ್ದು ‘ಭಾವ ಸಿಂಚನ’ ಹಾಗೂ ‘ಶತಮಾನಂಭವತಿ’ ಎಂಬ ಎರಡು ಕವನ ಸಂಕಲನಗಳನ್ನು ಬಿಡುಗಡೆ ಮಾಡಿದೆ. ೨೦೧೦ರಲ್ಲಿ ಬಿಡುಗಡೆ­ಯಾದ ‘ಭಾವ ಸಿಂಚನ’ ೩ಕೆ ಗ್ರೂಪ್‌ನ ಮೊದಲ ಕವನ ಸಂಕಲನ.

ಒಂದೇ ವರ್ಷದಲ್ಲಿ ಎರಡು ಬಾರಿ ಮುದ್ರಣ­ಗೊಂಡದ್ದು ಈ ಸಂಕಲನದ ಹೆಗ್ಗಳಿಕೆ. 2013ರಲ್ಲಿ ನೂರು ಕವಿಗಳ ನೂರು ಕವಿತೆ­­ಗಳ­­ನ್ನೊಳಗೊಂಡ ‘ಶತಮಾನಂ­ಭವತಿ’ ಎಂಬ ಮತ್ತೊಂದು ಕವನ ಸಂಕಲನವನ್ನು ಬಿಡುಗಡೆ ಮಾಡಿದೆ. ಇದು ‘ನೂರು ಮನಸುಗಳ ಅನನ್ಯ ಭಾವಾಂಕುರ’ ಎನ್ನುತ್ತಾರೆ ರೂಪಾ ಸತೀಶ್‌. ಈ ಗ್ರೂಪ್ ಕುರಿತು ಹಂಸಲೇಖ, ಜಯಂತ ಕಾಯ್ಕಿಣಿ, ಕವಿರಾಜ್‌, ಹೃದಯಶಿವ, ಉದ್ಯಾವರ ಮಾಧವ ಆಚಾರ್ಯ, ರಘು ಇಡ್ಕಿದು, ಕು. ಗೋಪಾಲ ಭಟ್‌ ಮೊದ­­ಲಾದ­ವರು ಮೆಚ್ಚುಗೆ ವ್ಯಕ್ತಪಡಿಸಿ­ದ್ದಾರೆ.   

ಗ್ರೂಪ್‌ನ ಯೋಜನೆಗಳು
ನಗರದ ಮಕ್ಕಳು ಸಾಹಿತ್ಯದಿಂದ ವಿಮುಖರಾಗುತ್ತಿದ್ದಾರೆ. ಅವರ ಮನಸ್ಸನ್ನು ಸಾಹಿತ್ಯದ ಕಡೆ ಸೆಳೆಯುವ ಉದ್ದೇಶದಿಂದ ಗ್ರೂಪ್ ಸದಸ್ಯರು ನಗರದಲ್ಲಿನ ಹೈಸ್ಕೂಲ್‌ಗಳಿಗೆ ಕನಿಷ್ಠ ಮೂರು ತಿಂಗಳಿಗೊಮ್ಮೆ ಭೇಟಿ ನೀಡಿ, ಅಲ್ಲಿನ ಮಕ್ಕಳಿಗೆ ವಿಚಾರ ಗೋಷ್ಠಿ, ಸಂವಾದ ಕಾರ್ಯಕ್ರಮ ಏರ್ಪಡಿಸುವ ಯೋಜನೆ ಹಮ್ಮಿಕೊಂಡಿದ್ದಾರೆ.

ನೆಟ್‌ ಸಾಹಿತ್ಯದಲ್ಲಿ ಮೌಲ್ಯಯುತವಾಗಿ, ಗಂಭೀರವಾಗಿ ಯಾರೂ ಬರೆಯುವುದಿಲ್ಲ. ಬರೀ ತಮಾಷೆಗೆ ಬರೆಯುತ್ತಾರೆ ಎಂದುಕೊಂಡಿದ್ದವರಿಗೆ ಈ ಗ್ರೂಪ್ ವಿಭಿನ್ನವಾಗಿ ಕಾಣುತ್ತದೆ. ಇಲ್ಲಿ ಪ್ರಕಟವಾಗುವ ಸದಸ್ಯರ ಕವಿತೆಗಳಲ್ಲಿನ ಭಾವ, ಪ್ರೀತಿ, ಹಾಸ್ಯ, ದೇಶಪ್ರೇಮ, ಸಾಮಾಜಿಕ ಕಳಕಳಿ ಎಲ್ಲರನ್ನೂ ಆಶ್ಚರ್ಯಗೊಳಿಸುತ್ತದೆ.

ತೆಲುಗು ಯುವತಿಯ ಕನ್ನಡ ಪ್ರೇಮ
ಇಲೆಕ್ಟ್ರಾನಿಕ್‌ ಸಿಟಿಯಲ್ಲಿರುವ Brady India ಕಂಪೆನಿಯಲ್ಲಿ ಮಾರ್ಕೆಟಿಂಗ್‌ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ರೂಪಾ ಸತೀಶ್‌ ಹುಟ್ಟಿದ್ದು ಬೆಳೆದಿದ್ದು ಬೆಂಗಳೂರಿನಲ್ಲಿ. ಮಾತೃಭಾಷೆ ತೆಲುಗು. ಓದಿದ್ದು ಆಂಗ್ಲ ಮಾಧ್ಯಮದಲ್ಲಿ. ಆದರೆ ಅವರ ಸೃಜನಶೀಲತೆಯ ಅಭಿವ್ಯಕ್ತಿಗೆ ಒದಗಿಬಂದಿದ್ದು ಕನ್ನಡ. 

ರೂಪಾ ಅವರಿಗೆ ಚಿಕ್ಕಂದಿನಿಂದಲೂ ಕವಿತೆ ಬರೆಯುವ ಹವ್ಯಾಸವಿತ್ತು. ಕನ್ನಡ ಕವಿತೆ, ಕಾದಂಬರಿಗಳನ್ನು ಇಷ್ಟಪಡುವ ರೂಪಾ ಶಾಲಾ–ಕಾಲೇಜು ದಿನಗಳಲ್ಲಿ ಕವನ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಇವರಿಗೆ 3ಕೆ ಗ್ರೂಪ್‌ ಆರಂಭಿ­ಸಲು ಇದೇ ಪ್ರೇರಣೆ. 2007ರಲ್ಲಿ ಇವರು ಬೆಂಗಳೂರಿನ ಬಹುರಾಷ್ಟ್ರೀಯ ಕಂಪೆನಿಯೊಂದಕ್ಕೆ ಕೆಲಸಕ್ಕೆ ಸೇರಿದಾಗ ಸಹೋದ್ಯೋಗಿಗಳು ಇಂಗ್ಲಿಷ್‌, ಹಿಂದಿ ಬಿಟ್ಟರೆ ಬೇರೆ ಭಾಷೆ ಮಾತ­ನಾಡು­ತ್ತಿರಲಿಲ್ಲ. ಹೀಗಾಗಿ ಏಕಾಂತವನ್ನು ದೂರಮಾಡಲು ಇವರು ಫೇಸ್‌ಬುಕ್‌ನಲ್ಲಿ ‘೩ಕೆ– ಕನ್ನಡ ಕಥನ, ಕವನ’ ಗ್ರೂಪ್ ಆರಂಭಿಸಿದರು.

ಆರಂಭದಲ್ಲಿ ತಾವು ಬರೆದ ಸಣ್ಣ ಸಣ್ಣ ಕವಿತೆಗಳನ್ನು ಪ್ರಕಟಿಸಿದರು. ಅವುಗಳನ್ನು ಅನೇಕರು ಮೆಚ್ಚಿ, ಈ ಗ್ರೂಪ್‌ನ ಸದಸ್ಯರಾದರು. ಇದರಿಂದ ಉತ್ತೇಜಿತರಾದ ಅವರು ಸಮಾನ ಮನಸ್ಕರಿಗೆ ತಮ್ಮ ಕವಿತೆ ಪ್ರಕಟಿಸಲು ಮುಕ್ತ ಅವಕಾಶ ನೀಡಿದರು.
‘ಸದಸ್ಯರ ಪ್ರೋತ್ಸಾಹದಿಂದ ಗ್ರೂಪ್‌ ಬೆಳೆಯುತ್ತಾ ಹೋಯಿತು. ಗ್ರೂಪ್‌ನ ಅಧ್ಯಕ್ಷೆಯಾಗಿ ಎಲ್ಲಾ ಚಟು­ವಟಿಕೆ­­ಗಳನ್ನು ನಿರ್ವ­ಹಣೆ ಮಾಡುತ್ತೇನೆ. ಸಮಿತಿಯ ಎಲ್ಲಾ ಸದಸ್ಯರ ಪ್ರೋತ್ಸಾಹ, ಬೆಂಬಲ 3ಕೆ ಗ್ರೂಪ್‌ ಬೆಳವಣಿಗಗೆ ಕಾರಣ ’ ಎಂದು ರೂಪಾ ಹೇಳುತ್ತಾರೆ.

ಈ ಕಾಲ ಸುಲಭ
ನಮ್ಮ ಕಾಲದಲ್ಲಿ ಕವಿತೆ ಬರೆಯಲು, ಅದನ್ನು ಪತ್ರಿಕೆಗೆ ಕಳಿಸಿ ಮುದ್ರಣವಾಗಲು ಹೆಚ್ಚು ಸಮಯ  ತಗಲುತ್ತಿತ್ತು. ಆದರೆ ಅಂತರ್ಜಾಲ ಬಳಕೆ ಹೆಚ್ಚಾದ ಬಳಿಕ ಬ್ಲಾಗ್‌ಗಳ ಮೂಲಕ ಸುಲಭವಾಗಿ ಎಲ್ಲರೂ ಕವನಗಳನ್ನು ಪ್ರಕಟಿಸಿಕೊಳ್ಳಬಹುದು. ಸಾಹಿತ್ಯ ಜಗತ್ತಿನಲ್ಲಿ 3ಕೆಯದ್ದು ಉತ್ತಮ ಪ್ರಯತ್ನ. ಎರಡು ಕವನ ಸಂಕಲನಗಳನ್ನು ಪ್ರಕಟಿಸಿ ಎಲೆಮರೆಯ ಕಾಯಿಯಾಗಿರುವ ಹವ್ಯಾಸಿ ಬರಹಗಾರರಿಗೆ ಉತ್ತೇಜನ ನೀಡಿರುವುದು ಹೆಮ್ಮೆಯ ಸಂಗತಿ. ಈ ಗ್ರೂಪ್‌ ಇನ್ನಷ್ಟು ಬೆಳೆಯಲಿ.
– ಎಚ್‌.ಎಸ್‌. ವೆಂಕಟೇಶಮೂರ್ತಿ, ಹಿರಿಯ ಕವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT