ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳೇ ಆಯೋಜಿಸಿದ ಕಿರು ನಾಟಕೋತ್ಸವ

Last Updated 23 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ರಂಗಭೂಮಿಯಲ್ಲಿ ಸದಾ ಪ್ರಯೋಗಶೀಲವಾಗಿರುವ ವಿಜಯನಗರ ಬಿಂಬ ರಂಗಶಿಕ್ಷಣ ಕೇಂದ್ರ ಈ ಭಾರಿ ‘ಬೊಂಬೆಹಬ್ಬ 2018’ ಮಕ್ಕಳ ಕಿರು ನಾಟಕೋತ್ಸವಕ್ಕೆ ಸಿದ್ಧತೆ ಮಾಡಿಕೊಂಡಿದೆ. ವಿಶೇಷವೆಂದರೆ ಈ ನಾಟಕಗಳನ್ನು ಮಕ್ಕಳೇ ರಚಿಸಿ, ನಿರ್ದೇಶನ ಮಾಡಿದ್ದಾರೆ. ಒಂದೆರಡಲ್ಲ, ಒಟ್ಟು ಹತ್ತು ನಾಟಕಗಳು!

ಒಂದು ನಾಟಕ ನಿರ್ಮಾಣದ ಹಿಂದೆ ಎಷ್ಟೆಲ್ಲ ಶ್ರಮ ಇರುತ್ತದೆ ಎಂಬುದು ರಂಗಭೂಮಿಯಲ್ಲಿ ತೊಡಗಿಕೊಂಡವರಿಗಷ್ಟೇ ಗೊತ್ತು. ಒಂದೋ, ಎರಡೋ ಗಂಟೆ ವೇದಿಕೆಯ ಮೇಲೆ ಪ್ರದರ್ಶನಗೊಳ್ಳುವ ನಾಟಕ ರಚನೆಯ ಹಿಂದೆ ತಿಂಗಳುಗಳ ಶ್ರಮ ಇರುತ್ತದೆ. ನಾಟಕ ರಚನೆ, ಸಂಗೀತ, ಪ್ರಸಾಧನ, ವೇದಿಕೆ ಸಿದ್ಧಪಡಿಸುವುದು, ಕಾಸ್ಟ್ಯೂಮ್‌, ಬೆಳಕು ಇವೆಲ್ಲವೂ ಸೇರಿ ಒಂದು ನಾಟಕ ಸಿದ್ಧಗೊಳ್ಳುತ್ತದೆ. ಇದರ ನಡುವೆ ನಾಟಕದ ಅಭ್ಯಾಸ ನಡೆಯಬೇಕು. ಅದಕ್ಕಾಗಿ ಅಷ್ಟೂ ಕಲಾವಿದರು ಒಂದೇ ಸಮಯಕ್ಕೆ ಒಂದೆಡೆ ಸೇರಬೇಕು. ನಗರದಲ್ಲಿ ಇದೂ ದೊಡ್ಡ ಸವಾಲು.

ಇಂತದ್ದರಲ್ಲಿ ಆಟವಾಡುವ ವಯಸ್ಸಿನ ಮಕ್ಕಳೇ ಸೇರಿ ಹತ್ತು ನಾಟಕ ಸಿದ್ಧಪಡಿಸಿದ್ದಾರೆ ಎಂದರೆ ಭವಿಷ್ಯದ ರಂಗಭೂಮಿಯಲ್ಲಿ ಹುಲುಸಾದ ಬೆಳೆ ಸಿಗಲಿದೆ ಎಂಬ ಸೂಚನೆ ನೀಡುವಂತಿದೆ. ಇಲ್ಲಿ ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ್ರದ ಪರಿಶ್ರಮಎದ್ದು ಕಾಣುತ್ತದೆ. ಮಕ್ಕಳನ್ನು ಈ ಮಟ್ಟಿಗೆ ತರಬೇತುಗೊಳಿಸಿರುವುದು ಈ ಕೇಂದ್ರದ ಸಾಧನೆಯೇ ಸರಿ.

‘ಇಡೀ ಕಿರು ನಾಟಕೋತ್ಸವದ ರೂಪು ರೇಷೆಯನ್ನು ಮಕ್ಕಳೇ ರೂಪಿಸಿದ್ದಾರೆ.ಇಲ್ಲಿರುವ ಒಂದೇ ಸಭಾಂಗಣದಲ್ಲಿ ಹತ್ತು ನಾಟಕಗಳ ರಿಹರ್ಸಲ್‌ಗೆ ಮಕ್ಕಳೇ ಸಮಯ ನಿಗದಿ ಮಾಡಿ ನಮ್ಮ ಬಳಿ ಬರುತ್ತಾರೆ. ಶೆಡ್ಯೂಲ್ ನಿರ್ವಹಣೆ ಮಾಡುವ ಬೃಂದಾ ಅವರ ಬಳಿ ಮಕ್ಕಳೇ ಜಾಗದ ಬುಕಿಂಗ್ ಮಾಡುತ್ತಾರೆ. ಕಸ್ಟ್ಯೂಮ್‌ ಡಿಸೈನರ್‌ ಬಳಿ ಹೋಗಿ ಎಂಥಾ ಉಡುಗೆ ಬೇಕು ಎಂದು ವಿವರಿಸುತ್ತಾರೆ. ಸೆಟ್ಟಿಂಗ್‌ಗಳನ್ನು ಅವರೇ ಆಯ್ಕೆ ಮಾಡುತ್ತಾರೆ. ಹೀಗೆ ಇಡೀ ನಾಟಕೋತ್ಸವ ಅವರು ಅಂದುಕೊಂಡಂತೆ ನಡೆಯುತ್ತಿದೆ’ ಎಂದು ಕಿರುತೆರೆ ನಟ, ರಂಗ ನಿರ್ದೇಶಕ ಡಾ. ಎಸ್‌.ವಿ. ಕಶ್ಯಪ್‌ ವಿವರಿಸುತ್ತಾರೆ.

ಮಕ್ಕಳು ನಾಟಕ ರಚನೆಗೆ ಆಯ್ಕೆ ಮಾಡಿಕೊಂಡ ವಿಷಯ ಬಹಳ ಕುತೂಹಲಕಾರಿಯಾಗಿದೆ. ವೃದ್ಧಾಶ್ರಮಗಳಿಗೆ ಹಿರಿಯರನ್ನು ಕಳುಹಿಸುವ ಪಿಡುಗಿನ ಕುರಿತು, ಮಕ್ಕಳಿಗೆ ಮನೆಯಲ್ಲಿ ಪೋಷಕರು ನೀಡುವ ಕಿರುಕುಳದ ಕುರಿತು, ಗಡಿ ಪ್ರದೇಶದಲ್ಲಿ ಮಾನವೀಯತೆಯ ಪ್ರದರ್ಶನ ಮುಂತಾದ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.ಮಕ್ಕಳ ಮನಸಿನಲ್ಲಿ ಏನಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಇದು ಸಹಾಯವಾಗಿದೆ.

ಇಲ್ಲಿ ನಾಟಕ ತರಬೇತಿ ನೀಡುವಾಗ ನೃತ್ಯ, ನಟನೆ, ಹಾಡುಗಳನ್ನಷ್ಟೇ ಹೇಳಿಕೊಡುತ್ತೇವೆ. ಆದರೆ, ನಾಟಕ ರಚನೆ, ನಿರ್ದೇಶನ ಮಕ್ಕಳಿಗೆ ಹೊಸದು. ಮಕ್ಕಳ ನಾಟಕೋತ್ಸವ ಹೊಸದೇನಲ್ಲ. ಆದರೆ ಮಕ್ಕಳಿಂದಲೇ ಇಡೀ ನಾಟಕೋತ್ಸವ ಎಲ್ಲೂ ನಡೆದಿಲ್ಲ. ಅರದಲ್ಲೂ ಹತ್ತು ನಾಟಕವನ್ನು ಮಕ್ಕಳು ಸಿದ್ದಪಡಿಸಿದ್ದಾರೆ ಎಂದರೆ ನಿಜಕ್ಕೂ ಹೆಮ್ಮೆಯಾಗುತ್ತಿದೆ. ಪ್ರತಿ ನಾಟಕ ಹತ್ತರಿಂದ 20 ನಿಮಿಷ ಇದೆ. ಆದರೆ ಅದರ ಹಿಂದಿನ ಮಕ್ಕಳ ಶ್ರಮ ಅಳತೆಗೆ ಸಿಗದು ಎಂದು ಕಶ್ಯಪ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT