ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಮುಟ್ಟುವುದೇ ಅರ್ಥಪೂರ್ಣ ಮಾತು

Last Updated 2 ಜುಲೈ 2012, 19:30 IST
ಅಕ್ಷರ ಗಾತ್ರ

ಚಿಕ್ಕವಳಿದ್ದಾಗ ಕಪ್ಪು ಕೋಟು ಧರಿಸಿ ಮಾತಿನಲ್ಲಿ ಚಾಣಾಕ್ಷತನ ತೋರುತ್ತ್ದ್ದಿದೆ. ವಕೀಲಿ ವೃತ್ತಿಯಲ್ಲಿ ಮುಂದುವರಿಯಬೇಕು ಎಂಬ ಆಸೆಯಿತ್ತು. ಧೈರ್ಯವನ್ನು ಅರೆದು ಕುಡಿದಂತೆ ನಟಿಸುತ್ತಿದ್ದ ಮಾಲಾಶ್ರೀ ತೆರೆಮೇಲೆ ಬರುತ್ತಿದ್ದಂತೆ ಬಹಳ ಉತ್ಸುಕಳಾಗಿ ಅವರ ಸಿನಿಮಾ ಎಂಜಾಯ್ ಮಾಡುತ್ತಿದ್ದೆ.

ಆದರೆ ಹೆಣ್ಣುಮಕ್ಕಳು ಹೆಚ್ಚು ಮಾತನಾಡುವ ಕೆಲಸ ಆಯ್ದುಕೊಳ್ಳುವುದು ಒಳ್ಳೆಯದಲ್ಲವೆಂಬ ಎಂಬ ಅಜ್ಜನ ಸಲಹೆಗೆ ಬದ್ಧಳಾಗಿ ಎಪಿಎಸ್ ಕಾಲೇಜಿನ ಬಿ.ಕಾಂ ಪದವಿ ಗಳಿಸಿದೆ.

ಕಾಲೇಜು ದಿನಗಳಲ್ಲಿ ಮಾತನಾಡಿದ್ದಕ್ಕಿಂತ ಹಾಡಿದ್ದೇ ಹೆಚ್ಚು. ಆರನೇ ವಯಸ್ಸಿನಿಂದಲೇ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿ ಮಾತೇ ಆಡದೇ ಹಾಡಲು ಶುರುಹಚ್ಚಿಕೊಳ್ಳುತ್ತಿದ್ದೆ. ಅಮ್ಮನಂತೂ ಯಾವ ನೆಂಟರ ಮನೆಗೆ ಹೋದರೂ ದೇವರನಾಮ ಹೇಳು ಎಂದು ಹುರಿದುಂಬಿಸುತ್ತಿದ್ದರು.

ಇವತ್ತಿಗೂ ನನ್ನ ಕಾಲೇಜು ಸಹಪಾಠಿಗಳು ನಾ ಇಷ್ಟು ಮಾತನಾಡುತ್ತೇನೆಂದರೆ ನಂಬುವುದಿಲ್ಲ. ಸುಗಮ ಸಂಗೀತವನ್ನು ಮಂಜುಳಾ ಗುರುರಾಜ್ ಅವರಲ್ಲಿ ಕಲಿತಿದ್ದೆ. ಸಾವಿರಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದೇನೆ. ಬಿಗ್ ಎಫ್‌ಎಂ ನಲ್ಲಿ ಆರ್‌ಜೆ ಆಗದೇ ಹೋಗಿದ್ದರೆ ದೊಡ್ಡ ಗಾಯಕಿ ಆಗಿರುತ್ತಿದ್ದೆ. 

 ಮಾತೆಂದರೆ ಎದುರಿಗಿರುವ ವ್ಯಕ್ತಿಯ ಮನಸ್ಸನ್ನು ಮುಟ್ಟುವುದು ಮತ್ತು ತಟ್ಟುವುದು. ಕೇಳುಗರ ಮನಸ್ಸಿನ ಮಿಡಿತ ಅರಿತು ಅದಕ್ಕೆ ತಕ್ಕಂತೆ ಮಾತನಾಡುವುದಿದೆಯಲ್ಲ, ಅದು ಆರ್‌ಜೆಗಳ ನಿಜವಾದ ಕಸುಬುದಾರಿಕೆ ಮತ್ತು ಕಲೆಗಾರಿಕೆ.

ಆರ್‌ಜೆ ಆಗಿ ವೃತ್ತಿ ಆರಂಭಿಸಿ ಅದರಲ್ಲಿ ಯಶಸ್ಸು ಸಾಧಿಸಿರುವುದಕ್ಕೆ ತೃಪ್ತಿ ಇದೆ. ಕಳೆದ ಆರು ವರ್ಷಗಳಿಂದ ಬಿಗ್ ಎಫ್‌ಎಂನಲ್ಲಿ ರೆಟ್ರೋ ಹಾಡುಗಳ ಸವಾರಿಯಲ್ಲಿ ಜನರನ್ನು ನಗಿಸುವ ಯತ್ನವೇ ನನ್ನ ಪಾಲಿಗೆ ಮೈಲಿಗಲ್ಲು. ನಾ ಎಲ್ಲೇ ಹೋದರೂ ಜನ ನನ್ನ ಧ್ವನಿಯನ್ನು ಗುರುತಿಸುತ್ತಾರೆ. ಈ ಖುಷಿಯ ಮುಂದೆ ಎಲ್ಲವೂ ನಗಣ್ಯ.

ನನ್ನ ಶೋನಲ್ಲಿ ಹೆಂಗಸರು ಹೇಳುವ ಸುಳ್ಳಿನ ಬಗ್ಗೆ ಗಂಡಸರಲ್ಲಿ ಕೇಳುತ್ತಾ ಇರುತ್ತೇನೆ. ಆದರೆ ನನ್ನ ಪ್ರಕಾರ ಗಂಡಸರು ಮನೆಗೆ ತಡವಾಗಿ ಬರುವ ವಿಚಾರದಲ್ಲಿ, ಸಂಬಳ ಹೆಚ್ಚಳದ ಬಗ್ಗೆ, `ನೀನೆ ಸುಂದರಿ, ನಾ ನಿನ್ನ ಬಿಟ್ಟು ಬೇರೆ ಯಾರನ್ನು ನೋಡಲ್ಲ~ ಅನ್ನುವಲ್ಲಿ ಅತಿ ಹಸಿ ಸುಳ್ಳುಗಳನ್ನು ಆಗಾಗ ಹೇಳುತ್ತಾ ಇರುತ್ತಾರೆ ಅಂತ ಅನಿಸುತ್ತಪ್ಪ.

ರೆಟ್ರೋ ಸವಾರಿ ಹಳೆ ಹಾಡುಗಳ ಆಯ್ಕೆಯಲ್ಲಿ ಹಂಸಲೇಖ, ರವಿಚಂದ್ರನ್, ಸುಧಾರಾಣಿ ಅವರಂತಹ ಸಿನಿತಾರೆಯರನ್ನು ಸಂದರ್ಶಿಸಿ, ಸಾಮಾನ್ಯ ಕೇಳುಗರನ್ನು ಕಾಲೆಳೆಯುವಂತೆ ಅವರೊಂದಿಗೂ ತಲೆ ಹರಟೆ ಮಾಡಿ ಸಂದರ್ಶನ ನಡೆಸಿದ್ದು ಎಂದೂ ಮರೆಯದ ಹಾಡಿನಂತೆ. ನನಗೆ ಈಗಲೂ ಮಾಲಾಶ್ರೀ ಅಂದರೆ ತುಂಬಾ ಇಷ್ಟ. `ನಿನ್ನ ದನಿ ವಿಶೇಷವಾಗಿದೆ. ನೀ ಹೀಗೇ ಇರು~ ಅಂತ ಅವರು ನನಗೆ ಸಲಹೆ ನೀಡಿದ್ದಾರೆ.

ನನಗನಿಸುವಂತೆ ಪ್ರೀತಿ ಎಂದರೆ ಭೀತಿ ಇರಬಾರದು. ನಿಜವಾಗಿ ಪ್ರೀತಿಸುವವರು ಯಾವ ವ್ಯವಸ್ಥೆಗೂ ಅಂಜದೆ ಮಧುರ ಅನುಭವವನ್ನು ಪಡೆಯಲು ಇಚ್ಛಿಸುತ್ತಾರೆ. ಬಾಲ್ಯದ ಗೆಳತಿ ಮತ್ತು ಗೆಳೆಯರೇ ಜೀವನದುದ್ದಕ್ಕೂ ನಿಲ್ಲುತ್ತಾರೆ.

ಈ ವೃತ್ತಿಗೆ ಬಂದಮೇಲೆ ತಿಳಿಯಿತು ಮಾತಿಗೆ ಇಷ್ಟೊಂದು ಶಕ್ತಿ ಇದೆ ಅಂತ. ಆರ್‌ಜೆಗಳು ವೈಯಕ್ತಿಕ ನೋವು-ನಲಿವು ಮರೆತು ಕೇಳುಗರೊಂದಿಗೆ ಸಂವಾದ ನಡೆಸುತ್ತಾರೆ. ಕಾರ್ಯಕ್ರಮಕ್ಕಾಗಿ ವಿಶೇಷ ಸಿದ್ಧತೆಯನ್ನೇನೂ ಮಾಡಿಕೊಳ್ಳುವುದಿಲ್ಲ. ಮನೆಯಿಂದ ಆಫೀಸ್‌ಗೆ ಬರುವಾಗ ಮಾರ್ಗಮಧ್ಯೆ ದೊರೆಯುವ ಸಣ್ಣ ಪುಟ್ಟ ವಿಚಾರಗಳೇ ಕಾರ್ಯಕ್ರಮಕ್ಕೆ ಸ್ಫೂರ್ತಿ.

ಆರ್‌ಜೆ ಆಗುವ ಮುಂಚೆ ಉದಯ ಟೀವಿಯ `ನಿಮ್ಮಿಂದ ನಿಮಗಾಗಿ~ ಕಾರ್ಯಕ್ರಮ ಹಾಗೂ ಈಟಿವಿಯಲ್ಲಿ ನೇರಪ್ರಸಾರದ ಕಾರ್ಯಕ್ರಮಗಳ ನಿರೂಪಕಿಯಾಗಿಯೂ ಕೆಲಸ ಮಾಡಿದ್ದೇನೆ. ಈಗ ಕೆಲಸ ಮುಗಿದ ತಕ್ಷಣ ಜಿಮ್‌ಗೆ ಹೋಗಿ ಬೆವರಿಳಿಸ್ತೀನಿ. ನನಗೆ ಅತಿಯಾದ ಶಾಪಿಂಗ್ ಹುಚ್ಚಿದೆ. ಅದರಲ್ಲೂ ಚಿನ್ನ ಖರೀದಿಸುವುದು ಒಂದು ಮೇನಿಯಾ ಆಗಿದೆ. ಆದರೆ ಚಿನ್ನ ಖರೀದಿ ಉಳಿತಾಯದ ಭಾಗವೂ ಹೌದಲ್ಲವಾ?

ದೇಶ ಸುತ್ತುತ್ತಾ ಅನುಭವ ಪಡೆಯುವುದಿದೆಯಲ್ಲ ಅದೇ ಸೂಪರ್. ಸದ್ಯಕ್ಕೆ ಬಂಡೀಪುರ, ಸಿಂಗಾಪುರ, ಮಲೇಷ್ಯಾ, ಬ್ಯಾಂಕಾಕ್ ಸೇರಿದಂತೆ ಹಲವು ಕಡೆ ಸುತ್ತಿದ್ದೇನೆ. ವರ್ಷಕೊಮ್ಮೆಯಾದರೂ ದೂರದ ಊರಿಗೆ ಹೋಗಬೇಕು, ಹೊಸ ಅನುಭವಗಳಿಗೆ ತೆರೆದುಕೊಳ್ಳಬೇಕು.

ಮಾತು ಇದ್ದರೂ ಗಾಯನ ಕ್ಷೇತ್ರಕ್ಕೆ ಹೊರಳುವ ಕನಸು ಇದ್ದೇಇದೆ. ಸಂಗೀತ ನಿರ್ದೇಶಕರಾದ ಗುರುಕಿರಣ್ ಮತ್ತು ಹರಿಕೃಷ್ಣ ಅವರು ಈ ಕನಸಿಗೆ ಪ್ರೋತ್ಸಾಹ ನೀಡಿದ್ದಾರೆ. ಅಲ್ಲೂ ಮಿಂಚುತ್ತೇನೆ ಎಂಬ ಭರವಸೆಯಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT