ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಲಕ್ಷ್ಮೀಗೆ ವೈಭವದ ಪೂಜೆಯೇ ಏಕೆ?

Last Updated 3 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಶ್ರಾವಣಮಾಸವು ಪ್ರಾರಂಭವಾದೊಡನೆ ಹಬ್ಬಗಳದ್ದೇ ಕಾರುಬಾರು. ಈ ಮಾಸದ ನಾಲ್ಕು (ಕೆಲವೊಮ್ಮೆ 5) ಶುಕ್ರವಾರಗಳಂದು ಲಕ್ಷ್ಮೀ ಪೂಜೆಯ ಸಂಭ್ರಮ ಮನೆ ಮಾಡಿರುತ್ತದೆ.

ಅಡುಗೆ ಮನೆ, ದೇವರ ಮನೆಗಳನ್ನು ಶುದ್ಧಗೊಳಿಸಿ ಸುಣ್ಣ ಬಣ್ಣಗಳಿಂದ ಅಲಂಕರಿಸಿ ಗೌರಿಯ ಪೂಜೆಗೆ ಅಣಿಯಾಗುತ್ತಾರೆ. ಶುಕ್ರವಾರ ಲಕ್ಷ್ಮೀ ಪೂಜೆಗೆ ಶ್ರೇಷ್ಠವಾದ ದಿನ. ಮರುದಿನ ಶನಿವಾರ ಸಂಪತ್ತು ಶನಿವಾರವೆಂದು ಪ್ರಸಿದ್ಧವಾಗಿದೆ.

ಸಂಪ್ರದಾಯವಿರುವ ಮನೆಗಳಲ್ಲಿ ಮಣ್ಣಿನ ಚಿಕ್ಕ ಗಡಿಗೆಗೆ ಗೌರಿಯ ಕಥೆ ಸಾರುವ ಚಿತ್ರಗಳನ್ನು ಬಿಡಿಸಿ ಅಲಂಕರಿಸಿ ಅದರಲ್ಲಿ ಧಾನ್ಯ. ಮಂಗಳ ವಸ್ತುಗಳನ್ನಿಟ್ಟು ಭಕ್ಷ್ಯಭೋಜನಗಳ ನೈವೇದ್ಯ ಮಾಡಿ ಆರತಿ ಮಾಡಿ ಮುತ್ತೈದೆಯರನ್ನು ಗೌರವಿಸುವರು. ಗೌರಿ ಪೂಜೆಯ ಸಂಪ್ರದಾಯದ ಹಾಡನ್ನು ಹಾಡುವರು.

ಪರಪ್ಪನಹಳ್ಳಿಯ ಭೀಮವ್ವನು ಬರೆದ ಹಾಡು ಅತ್ಯಂತ ಪ್ರಸಿದ್ಧವಾಗಿದೆ. ಅದರಲ್ಲಿ ಗೌರಿ ಪೂಜೆ ಮಾಡಿದ್ದು ಬಡತನ ನೀಗಿ ರಾಜ್ಯ ಮತ್ತೆ ಪಡೆದದ್ದು ಸುಂದರವಾಗಿ ಚಿತ್ರಿಸಲಾಗಿದ್ದು ಎಲ್ಲರೂ ಹಾಡುವುದು ಕಂಡುಬರುತ್ತದೆ. ಈಗೀಗ ತಾಮ್ರದ. ತಂಬಿಗೆ, ಬೆಳ್ಳಿ ತಂಬಿಗೆಗಳಲ್ಲೂ ಲಕ್ಷ್ಮೀದೇವಿಯ ಬೆಳ್ಳಿ ಮುಖಗಳನ್ನೇ ಮಾಡಿಸಿಕೊಂಡು ತಂಬಿಗೆ ಅಥವಾ ಚಿಕ್ಕ ಕೊಡಕ್ಕಿಟ್ಟು ಅಲಂಕರಿಸುತ್ತಾರೆ.

ಲಕ್ಷ್ಮೀಯನ್ನು ಮಹಾಲಕ್ಷ್ಮೀ, ಧನಲಕ್ಷ್ಮೀ, ವರಮಹಾಲಕ್ಷ್ಮೀ ಮೊದಲಾದ ಹೆಸರುಗಳಿಂದ ವ್ರತಗಳನ್ನಾಚರಿಸಿ ಪೂಜಿಸುವರು. ಲಕ್ಷ್ಮೀ ಮಂಗಳದೇವತೆ. ಸಂಪತ್ತಿನ ದೇವತೆ. ವಿಷ್ಣು ಬೇರೆ ಬೇರೆ ಅವತಾರ ಎತ್ತಿದಾಗ ಸೀತೆಯಾಗಿ ಶ್ರೀರಾಮನನ್ನು, ರುಕ್ಮಿಣಿಯಾಗಿ ಶ್ರೀಕೃಷ್ಣನನ್ನು ಪದ್ಮಾವತಿಯಾಗಿ ಶ್ರೀವೆಂಕಟೇಶನನ್ನು ಕೈ ಹಿಡಿದಳು. ಲಕ್ಷ್ಮೀಯನ್ನು ಪೂಜಿಸುವುದರಿಂದ ಆಯಸ್ಸು, ತೇಜಸ್ಸು, ಸಂಪತ್ತು ವರ್ಧಿಸುವುದು. ಲಕ್ಷ್ಮೀ ವರಪ್ರದಾಯಿನಿ ಎಂಬ ನಂಬುಗೆಯಿಂದ ಶ್ರದ್ಧಾಭಕ್ತಿಯಿಂದ ಪೂಜೆ ಮಾಡುವರು. ಶ್ರಾವಣಮಾಸದ ಎರಡನೇ ಶುಕ್ರವಾರವು ವರಮಹಾಲಕ್ಷ್ಮೀ ಎಂದು ಪ್ರಸಿದ್ಧವಾಗಿದೆ.

ಕೆಲವರು ಈ ದಿನದಷ್ಟೆ ವೈಭವದಿಂದ ಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ ಪೂಜಿಸುವರು. ಕೆಲವೆಡೆ ಮಹಿಳೆಯರು ಸಾಮೂಹಿಕವಾಗಿಯೂ ಈ ವರಮಹಾಲಕ್ಷ್ಮೀ ಪೂಜೆ ಮಾಡುವರು. ಶಿವನು ಪಾರ್ವತಿಗೆ ಹಣ, ಸುಖ ಸಮೃದ್ಧಿಯಾಗಿ ಈ ವ್ರತ ಆಚರಿಸಲು ಹೇಳಿದನು. ಇನ್ನೊಂದು ಕಡೆಯಿಂದ ಚಾರುಮತಿ ಎಂಬ ಸಾಧ್ವಿಯ ಕನಸಿನಲ್ಲಿ ದೇವಿ ವರಮಹಾಲಕ್ಷ್ಮೀ ಬಂದು ಈ ವ್ರತವನ್ನು ಆಚರಿಸಲು ಹೇಳಿದಳು.

ಚಾರುಮತಿ ಭಕ್ತಿ ಭಾವದಿಂದ ಎಲ್ಲ ಮಹಿಳೆಯರೊಂದಿಗೆ ಆಚರಿಸಿದಳು. ವ್ರತವು ಮುಗಿಯುವಷ್ಟರಲ್ಲೇ ಎಲ್ಲರಿಗೂ ಸಿರಿಸಂಪತ್ತು ದೊರೆತು ಆನಂದವಾಗಿ ದೇವಿಯ ಮಹಿಮೆ ತಿಳಿದರು. ಆದ್ದರಿಂದ ಎಲ್ಲರೂ ವರಮಹಾ ಲಕ್ಷ್ಮೀ ಪೂಜೆ ನೆರವೇರಿಸುವರು.

ಶ್ರೀದೇವಿ ಅಂದರೆ ಸಿರಿತನಕ್ಕೆ ಒಡತಿಯಾದ ಲಕ್ಷ್ಮೀ ಸುಮ್ಮನೆ ಒಲಿಯುವುದಿಲ್ಲ. ಶ್ರಮಪಡುವವರಿಗೆ ಈಕೆ ಕರುಣಿಸದೇ ಇರುವುದಿಲ್ಲ. ಈ ಲೋಕದಲ್ಲಿ ದೇವಿಯನ್ನು ಆರಾಧಿಸದವರೇ ಇಲ್ಲ. ಹಣವನ್ನು ಲಕ್ಷ್ಮೀ ಎನ್ನುತ್ತೇವೆ.

ಪುರಾಣದಲ್ಲೊಂದು ಕಥೆಯಿದೆ–ದೇವತೆಗಳು ಅಹಂಕಾರದಿಂದ ಲಕ್ಷ್ಮೀಯನ್ನು ತಿರಸ್ಕರಿಸಿದರು. ಎಲ್ಲರೂ ಮರೆತರು. ಶ್ರೀದೇವಿ ಸಮುದ್ರತಳದಲ್ಲಿ ಹೋಗಿ ಕುಳಿತುಬಿಟ್ಟಳು.

ಆಗ ಕಂಗಾಲಾದ ಸುರಾಸುರರು ದೇವಿಯನ್ನು ಹೇಗಾದರೂ ಮೇಲಕ್ಕೆ ಕರೆತರಲು ಯೋಚಿಸಿದರು. ಸಮುದ್ರಮಂಥನ ನಡೆಸಿದರು. ಅದಕ್ಕೆ ಅವರು ಅಪಾರ ಶ್ರಮ ಪಡೆಯಬೇಕಾಯಿತು. ಒಲಿದ ಲಕ್ಷ್ಮೀ ಮೇಲೆ ಬಂದು ನೆಲೆಸಿದಳು. ಅವರೊಂದಿಗೆ ವಿಪುಲ ಸಂಪತ್ತು ರತ್ನ, ಮಣಿ, ಔಷಧಿ, ಅಮೃತ, ವಿಷ, ಅಪ್ಸರೆಯರು ಹೀಗೆ ಒದಗಿ ಬಂದವು. ಹೀಗೆ ಲಕ್ಷ್ಮೀಯು ಸಮುದ್ರದಲ್ಲಿ ಹುಟ್ಟಿದ್ದರಿಂದ ಸಮುದ್ರವನ್ನು ಆಕೆಯ ತವರುಮನೆ ಎಂದೇ ಭಾವಿಸಲಾಯಿತು.

ಲಕ್ಷ್ಮೀ ಇದ್ದಲ್ಲಿಯೇ ವಿಷ್ಣುವಿನ ವಾಸ. ಆತ ಶೇಷಶಯನನಾಗಿ ಅಲ್ಲಿ ನೆಲೆಸಿದ. ಲಕ್ಷ್ಮೀ ಆತನ ಪಾದಸೇವೆಯಲ್ಲಿ ನಿರತಳಾದಳು. ಸತ್ಕಾರ್ಯ, ಸತ್ಯಪರಿ­ಪಾಲ­ನೆ­­ಯಲ್ಲಿ ನಿರತರಾದವರಿಗೆ ಮೇಲೆ ಲಕ್ಷ್ಮೀ ಸ್ವರ್ಣವೃಷ್ಟಿಗೈಯುತ್ತಾಳೆ.

ದೇವಿ ಅಂಗಗಳಿಂದಲೂ ದಿವ್ಯ ಸಂದೇಶವಿದೆ. ದೇವಿಯ ಆಭರಣಗಳು ಹಾಗೂ ಮಂದಹಾಸ ದೈವೀ ಗುಣಗಳನ್ನು ಮೈಗೂಡಿಸಿಕೊಂಡು ಆತ್ಮವಿಶ್ವಾಸದಿಂದ ಮುನ್ನಡೆಯಲು ತಿಳಿಸುತ್ತದೆ. ಕೈಯಲ್ಲಿಯ ತಾವರೆ, ಹೃನ್ಮನಗಳಲ್ಲಿ ಜ್ಞಾನಾನಂದವನ್ನು ಅರಳಿಸಿಕೊಳ್ಳಲು ಸೂಚಿಸುತ್ತದೆ.

ಕೈಯಲ್ಲಿಯ ಅಮೃತ ಕಲಶವು ಅಮೃತತ್ವಕ್ಕೆ ಅರ್ಹನಾಗಿ ಸಾಧನಶೀಲರಾಗಲು; ಅಭಯ ಹಸ್ತವು ಸಾಹಸ ಸಾಧನೆಗಳಲ್ಲಿ ನಿಶ್ಚಿಂತೆ, ನಿರ್ಭಯತೆಗಳಿಂದ ಹೆಜ್ಜೆ ಹಾಕಲು, ಕುಳಿತ ತಾವರೆ ಅಂತಃಕರಣ ಬೀರಿ ನೆಲೆ ನಿಲ್ಲಲು ತಿಳಿಸುತ್ತವೆ. ಇವೆಲ್ಲ ಇದ್ದಾಗ ದೇವಿಯೂ ಸಕಲ ಸಿರಿಸಂಪದದ ಹೊಳೆ ಹರಿಸಿ, ಜ್ಞಾನ, ಆತ್ಮವಿಶ್ವಾಸ ನೀಡಿ ಕೃಪೆ ತೋರಿ ಹೃದಯ ಕಮಲದಲ್ಲಿ ನೆಲೆ ನಿಂತು ವೃದ್ಧಿ, ಸಮೃದ್ಧಿಗಳ ಸೂತ್ರಧಾರಳಾಗಬಲ್ಲೆ ಎನ್ನುತ್ತಾಳೆ.

ಲಕ್ಷ್ಮೀಯರೊಂದಿಗೆ ಶ್ವೇತಗಜಗಳು ಸೌಭಾಗ್ಯದ ಪ್ರತೀಕ. ಅದಕ್ಕೆಂದೇ ವರಮಹಾಲಕ್ಷ್ಮೀಯನ್ನು ಎಲ್ಲರೂ ವೈಭವದಿಂದ ಪೂಜಿಸುವರು.
–ಮೇಘಾ ಗೊರವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT