ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಮಾಯೆ

ಕ್ಯಾಂಪಸ್‌ ಕಲರವ
Last Updated 26 ಜನವರಿ 2015, 19:30 IST
ಅಕ್ಷರ ಗಾತ್ರ

ಕಲಾ ಕಾಲೇಜಿನಲ್ಲಿ ಪದವಿ ಓದುತ್ತಿದ್ದ ದಿನಗಳವು. ಆಗಷ್ಟೇ ಮೊಬೈಲ್‌ಗಳು ಎಲ್ಲರ ಜೇಬುಗಳಲ್ಲಿ ಕಿಣಿಗುಡಲು ಆರಂಭಿಸಿದ ಕಾಲವದು. ಕಾಲೇಜಿಗೆ ಹೋಗುವ ಎಲ್ಲರ ಕೈಗಳಲ್ಲೂ ಮೊಬೈಲ್‌ಗಳು ಮಿಸುಕಾಡುತ್ತಿದ್ದವು. ಜೇಬು ಹಗುರವಿದ್ದವರು ಬೇಸಿಕ್ ಸೆಟ್‌ಗಳನ್ನು ಕೊಂಡರೆ, ಜೇಬು ಭಾರವಿದ್ದವರು ಕ್ಯಾಮೆರಾ ಇದ್ದ ಮೊಬೈಲ್ ಸೆಟ್ ಖರೀದಿಸುತ್ತಿದ್ದರು.

ಕಾಲೇಜಿನಲ್ಲಿ ಉಪನ್ಯಾಸಕರಿಗಿಂತ ವಿದ್ಯಾರ್ಥಿಗಳ ಕೈಯಲ್ಲೇ ಹೆಚ್ಚು ಮೊಬೈಲ್‌ಗಳಿದ್ದವು. ಕೆಲ ಉಪನ್ಯಾಸಕರಿಗೆ ಆಗ ಮೊಬೈಲ್ ಬಳಕೆ ಗೊತ್ತಿಲ್ಲದ ಕಾರಣ ಹಣವಿದ್ದರೂ ಮೊಬೈಲ್ ಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಆದರೆ, ನಾವೆಲ್ಲ ಆಗಲೇ ಚಾಟ್‌ಗೆ ಹೊಂದಿಕೊಂಡು ಬೇಸಿಕ್ ಸೆಟ್‌ಗಳಲ್ಲೇ ಅಂತರ್ಜಾಲ ಲೋಕಕ್ಕೆ ದಾಂಗುಡಿ ಇಡುತ್ತಿದ್ದೆವು.

ತರಗತಿ ನಡೆಯುವಾಗ ಮೊಬೈಲ್‌ಗಳು ಕುಂಯ್‌ಗುಡುವುದನ್ನು ಉಪನ್ಯಾಸಕರು ಸಹಿಸುತ್ತಿರಲಿಲ್ಲ. ಮೊಬೈಲ್ ಸೈಲೆಂಟ್ ಮೋಡ್‌ಗೆ ಇಡದ ವಿದ್ಯಾರ್ಥಿಗಳಿಗೆ ಉಪನ್ಯಾಸಕರಿಂದ ಸಹಸ್ರನಾಮಾರ್ಚನೆಯಾಗುತ್ತಿತ್ತು ‘ಎದೆ ಸೀಳಿದ್ರೆ ನಾಲ್ಕಕ್ಷರ ಇಲ್ಲ, ಈ ಮೊಬೈಲ್ ಷೋಕಿ ಬೇರೆ’ ಎಂದು ಆರಂಭವಾಗುತ್ತಿದ್ದ ನಿಂದನೋಪಾಖ್ಯಾನ ಅವರ ತರಗತಿ ಮುಗಿಯುವವರೆಗೂ ಮುಂದುವರಿಯುತ್ತಿತ್ತು. ತರಗತಿಯಲ್ಲಿ ಮೊಬೈಲ್‌ಗಳು ಸೈಲೆಂಟ್ ಮೋಡಿನಲ್ಲಿದ್ದರೂ ಚಾಟ್ ಮಾತ್ರ ನಿರಂತರವಾಗಿ ಸಾಗುತ್ತಿತ್ತು. ಉಪನ್ಯಾಸಕರ ಉಡುಪು, ಪಾಠ ಮಾಡಲು ನಿಂತಿರುವ ಭಂಗಿ, ಅವರ ಕ್ರಾಪು, ಬೋರು ಹೊಡೆಸುವ ಪಾಠ ಎಲ್ಲವೂ ಚಾಟಿಂಗ್‌ಗೆ ಆಹಾರವಾಗುತ್ತಿದ್ದವು.

ವಿದ್ಯಾರ್ಥಿಗಳ ಕೈಯಲ್ಲಿ ಮೊಬೈಲ್‌ಗಳು ಕುಣಿಯುವುದನ್ನು ಕಂಡು ಸಹಿಸದ ಉಪನ್ಯಾಸಕರು ಬೈಯ್ಯುವುದು ಮಾತ್ರವಲ್ಲ ಈ ವಿಷಯವಾಗಿ ಪ್ರಾಂಶುಪಾಲರ ಬಳಿ ದೂರನ್ನೂ ತೆಗೆದುಕೊಂಡು ಹೋಗುತ್ತಿದ್ದರು. ಒಮ್ಮೆ ಇಂಗ್ಲಿಷ್ ತರಗತಿಯಲ್ಲಿ ಹುಡುಗಿಯೊಬ್ಬಳ ಬ್ಯಾಗ್‌ನಲ್ಲಿದ್ದ ಮೊಬೈಲ್ ಕಿಣಿಕಿಣಿ ಮಾಡಿತು. ಆ ಉಪನ್ಯಾಸಕರೋ ಮಹಾಕೋಪಿ. ಮೊಬೈಲ್ ಕಿಣಿಕಿಣಿ ಎನ್ನುತ್ತಲೇ ಅವರ ಕೋಪ ನೆತ್ತಿಗೆ ಬಡಿದು ಕೊಠಡಿಯ ಸೂರನ್ನೂ ದಾಟಿ ಮೇಲಕ್ಕೆ ಹೋಗಿತ್ತು.

‘ಡಾಫುಡಿಲ್ಸ್’ನ ಹೂಲೋಕದಲ್ಲಿದ್ದ ಅವರು ಕ್ಷಣದಲ್ಲೇ ಉಗ್ರನರಸಿಂಹನಾಗಿ ಬದಲಾದರು. ಆ ಹುಡುಗಿಯನ್ನು ತಾರಾಮಾರಿ ಬೈಯ್ದರು. ಅವಳ ಬ್ಯಾಗ್ ಕಸಿದುಕೊಂಡು ಅದರಲ್ಲಿದ್ದ ಮೊಬೈಲ್ ತೆಗೆದುಕೊಂಡು, ಆ ಹುಡುಗಿಯನ್ನೂ ಕರೆದುಕೊಂಡು ಧುಮುಧುಮನೆ ಸೀದಾ ಪ್ರಾಂಶುಪಾಲರ ಕೊಠಡಿಗೆ ಹೊರಟರು. ತರಗತಿಯಲ್ಲೇ ಬೈಗುಳ ತಿಂದು ಬಳಲಿದ್ದ ಆ ಹುಡುಗಿ ‘ಒಥೆಲೊ’ನನ್ನು ಕಳೆದುಕೊಂಡ ಡೆಸ್ಡಿಮೋನಾಳಂತೆ ಕಂಗಾಲಾಗಿದ್ದಳು.

ಮುಂಗೋಪಿ ಮಾಸ್ತರ ಗಲಾಟೆ ಇಡೀ ಕಾಲೇಜಿಗೇ ಹಬ್ಬಿತ್ತು. ‘ಅಲಲೇ, ಇಷ್ಟನ್ನ ಅಷ್ಟು ಮಾಡಿಬಿಟ್ಟ’ ಎಂಬ ಮಾತೇ ಎಲ್ಲೆಲ್ಲೂ. ಪ್ರಾಂಶುಪಾಲರ ಕೊಠಡಿಯಲ್ಲಿ ಆ ಹುಡುಗಿಯ ಕಥೆ ಏನಾಯಿತೊ ಎಂಬುದು ಎಲ್ಲರ ಆತಂಕ ಸಹಿತ ಕುತೂಹಲ. ಪ್ರಾಂಶುಪಾಲರ ಕೊಠಡಿಯಿಂದ ಅಸ್ಪಷ್ಟ ಜೋರು ಮಾತು ಮಾತ್ರ ಈಚೆಗೆ ಕೇಳುತ್ತಿತ್ತೇ ಹೊರತು ನಿಜವಾಗಿ ಒಳಗೆ ಯಾವ ನಾಟಕ ನಡೆಯುತ್ತಿದೆ ಎಂಬುದು ಸ್ಪಷ್ಟವಾಗಲಿಲ್ಲ. ಮೂರ್ನಾಲ್ಕು ನಿಮಿಷ ಹೀಗೇ ಕಳೆದ ಮೇಲೆ ಆ ಹುಡುಗಿ ಕಣ್ಣೀರು ಹರಿಸುತ್ತಾ ಕೊಠಡಿಯಿಂದ ಈಚೆಗೆ ಬಂದು ಸೀದಾ ತರಗತಿಗೆ ನಡೆದು ಡೆಸ್ಕ್ ಮೇಲೆ ಮುಖ ಬೋರಲು ಹಾಕಿಕೊಂಡು ಅಳಲು ಶುರು ಮಾಡಿದಳು.

ಪ್ರಾಂಶುಪಾಲರ ಕೊಠಡಿಯ ಹೊರಗೆ ಸೇರಿದ್ದ ಗುಂಪನ್ನು ಆ ಉಪನ್ಯಾಸಕರೇ ಚದುರಿಸಿ ಕಳಿಸುವ ಪ್ರಯತ್ನ ಮಾಡಿದರು. ವಿದ್ಯಾರ್ಥಿಗಳು ಅವರ ಮೇಲಿನ ಭಯ- ಭಕ್ತಿಗೆ ಅಲ್ಲಿಂದ ಕಾಲ್ತೆಗೆದರೆ, ಪ್ಯೂನ್, ಅಟೆಂಡರ್ ಇನ್ನೊಂದಷ್ಟು ಮಂದಿ ಚಲನಚಿತ್ರ ಮುಗಿದರೂ ಕೊನೆಯ ಟೈಟಲ್ ಕಾರ್ಡ್ ನೋಡುತ್ತಾ ನಿಲ್ಲುವ ಪ್ರಾಮಾಣಿಕ ಪ್ರೇಕ್ಷಕರ ಹಾಗೆ ಅಲ್ಲೇ ನಿಂತಿದ್ದರು. ಪ್ರಾಂಶುಪಾಲರ ಕೊಠಡಿಯಲ್ಲಿ ಏನು ನಡೆಯಿತು ಎಂಬುದನ್ನು ಆ ಹುಡುಗಿಯೂ ಸೇರಿದಂತೆ ಯಾರೂ ಹೇಳಲಿಲ್ಲ. ಬಳಿಕ ಅವಳು ಕಾಲೇಜಿಗೆ ಮೊಬೈಲ್ ತರುವುದನ್ನೇ ಬಿಟ್ಟಳು. ಮೊಬೈಲ್ ಕಸಿದುಕೊಂಡಿದ್ದ ಆ ಉಪನ್ಯಾಸಕರು ಅವಳ ಮೊಬೈಲ್ ವಾಪಸ್ ಕೊಡಲೇ ಇಲ್ಲ ಎಂಬ ಮಾತುಗಳು ಹರಿದಾಡಿದವು. ಆದರೆ, ನಿಜ ಏನು ಎಂಬುದು ಕೊನೆಗೂ ಗೊತ್ತಾಗಲಿಲ್ಲ.

ದಿನಗಳು ಉರುಳಿದವು. ಕಾಲೇಜಿಗೆ ಹೊಸ ಪ್ರಾಂಶುಪಾಲರು ಬಂದರು. ಅಂದಿನವರೆಗಿದ್ದ ಪ್ರಾಂಶುಪಾಲರ ಪರಂಪರೆಗೇ ವಿರುದ್ಧ ಎನ್ನುವಂತಿದ್ದರು ಹೊಸ ಪ್ರಾಂಶುಪಾಲರು. ಫಾರ್ಮಲ್ ಬದಲಿಗೆ ಸ್ಪೋರ್ಟ್ ಶೂ, ಜೀನ್ಸ್, ಟೀಶರ್ಟ್, ಗಾಗಲ್ಸ್‌ ಹಾಕಿಕೊಂಡಿದ್ದ ಪ್ರಾಂಶುಪಾಲರು ಕಾಲೇಜಿನ ಹುಡುಗರನ್ನೇ ನಾಚಿಸುವಂತಿದ್ದರು. ಹಿಂದಿನ ಪ್ರಾಂಶುಪಾಲರು ಮೊಬೈಲ್ ವಿರೋಧಿಗಳಂತೆ ಕಂಡರೆ, ಇವರು ಮೊಬೈಲ್ ಪ್ರಿಯರಾಗಿದ್ದರು. ಅವರ ಕರಸ್ಥಲದಲ್ಲಿ ಕ್ಯಾಮೆರಾ ಇದ್ದ ಕಪ್ಪೆ ಗಾತ್ರದ ಜಂಗಮವಾಣಿ ಸದಾ ಕಿಂಕಿಣಿ ಮಾಡುತ್ತಿತ್ತು. ಅವರು ಕಾಲೇಜಿನ ಸಭೆ, ಸಮಾರಂಭದಲ್ಲಿದ್ದರೂ ಅವರ ಮೊಬೈಲ್ ಕಿಂಕಿಣಿ ಮಾಡುತ್ತಿತ್ತು. ವಿದ್ಯಾರ್ಥಿಗಳ ಮೊಬೈಲ್ ಹಾವಳಿ ತಪ್ಪಿಸಲು ಕಾಲೇಜಿನ ಉಪನ್ಯಾಸಕರು ಪ್ರಯತ್ನಿಸುತ್ತಿದ್ದ ಸಂಧಿಕಾಲದಲ್ಲಿ ಹೊಸ ಪ್ರಾಂಶುಪಾಲರು ಅವರಿಗೆಲ್ಲ ಸವಾಲಾಗಿ ನಿಂತಿದ್ದರು.

ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ. ಸಮಾರಂಭಕ್ಕೆ ತಿಂಗಳಿಗೆ ಮೊದಲೇ ನೋಟಿಸ್ ಬೋರ್ಡ್‌ನಲ್ಲಿ ನೇತಾಡುತ್ತಿದ್ದ ಆಹ್ವಾನ ಪತ್ರಿಕೆಯಲ್ಲಿ ಅಂದಿಗೆ ನಮ್ಮೆಲ್ಲರ ನಿದ್ದೆಗೆಡಿಸಿದ್ದ ಖ್ಯಾತ ನಟಿಯ ಹೆಸರು! ಅದೂ ಮುಖ್ಯ ಅತಿಥಿಯಾಗಿ. ‘ಹೊಸ ಪ್ರಿನ್ಸಿಪಲ್ ಕಾಗೆ ಹಾರಿಸ್ತಾವ್ರೆ, ‘ಅವ್ಳು ದೇವ್ರಾಣೆಗೂ ಬರಲ್ಲ’, ‘ಇದೆಲ್ಲ ಸುಮ್ನೆ ಗಿಮಿಕ್’ -ಕಾಲೇಜಿನ ತುಂಬೆಲ್ಲಾ ಬರೇ ಇವೇ ಮಾತುಗಳು. ಈ ಮಾತುಗಳು ಪ್ರಾಂಶುಪಾಲರ ಕಿವಿಗೂ ಬಿದ್ದು, ಅವರು ಮುಖವನ್ನು ಆಗಸದ ಕಡೆಗೆ ಇನ್ನಷ್ಟು ಎತ್ತಿ ನಡೆಯುವಂತೆ ಮಾಡಿದ್ದವು.

ಅಂತೂ ಆ ದಿನವೂ ಬಂತು. ಸಮಾರಂಭಕ್ಕೆ ನಟೀಮಣಿಯೂ ಬಂದಾಯಿತು. ಪ್ರಾಂಶುಪಾಲರು ತಮ್ಮ ಪ್ರತಿಷ್ಠೆ ಕಾಪಾಡಿಕೊಂಡ ಹುಮ್ಮಸ್ಸಿನಲ್ಲಿ ಬೀಗುತ್ತಿದ್ದರು. ಕಾರ್ಯಕ್ರಮದ ನಿರೂಪಣೆಗೆ ನಿಂತಿದ್ದ ಮುಂಗೋಪಿ ಮಾಸ್ತರು ಮೊದಲಿಗೆ ಮೈಕನ್ನು ಐದಾರು ಬಾರಿ ಬಡಿದು, ‘ಎಲ್ರೂ ಮೊಬೈಲ್ ಸೈಲೆಂಟಿಗೆ ಇಡಿ. ಇಲ್ಲ ಅಂದ್ರೆ ಇಲ್ಲಿಂದ ಓಡಿಸ್ಬಿಡ್ತೀನಿ’ ಎಂದು ತರಗತಿಯಲ್ಲಿರುವ ಮೂಡಿನಲ್ಲೇ ಹೇಳಿದರು. ‘ಎಲ್ರೂ’ ಎಂಬುದು ತಮಗಲ್ಲ ಎಂಬುದು ವೇದಿಕೆಯ ಮೇಲಿದ್ದವರ ತಿಳಿವಳಿಕೆ. ಹೀಗಾಗಿ ಕೆಲ ಅತಿಥಿಗಳು ಕೈಯಿಂದ ಬಾಯಿ ಅಡ್ಡಮಾಡಿಕೊಂಡು ಮೊಬೈಲ್ ಮಾತುಕತೆಯಲ್ಲಿ ನಿರತರಾಗಿದ್ದರು.

ಶಾಸಕರು ಅನುದಾನದ ವಿಷಯ ಮಾತನಾಡುತ್ತಿರುವಾಗ ಪ್ರಾಂಶುಪಾಲರ ಮೊಬೈಲ್ ಎರಡು ಮೂರು ಬಾರಿ ಕಿರುಗುಟ್ಟಿತು. ಶಾಸಕರು, ‘ಪರವಾಗಿಲ್ಲ. ಸೈಲೆಂಟ್ಗೆ ಹಾಕಿ’ ಎಂದ ಬಳಿಕವೂ ಪ್ರಾಂಶುಪಾಲರ ಮೊಬೈಲ್ ಹಾವಳಿ ತಪ್ಪಲಿಲ್ಲ. ‘ಪ್ರಿನ್ಸಿಪಲ್ಗೆ ಮೊಬೈಲ್ ಅನ್ನು ಸೈಲೆಂಟ್ ಮೋಡ್‌ಗೆ ಹಾಕೋಕೆ ಬರಲ್ಲ’ ಎಂದು ಯಾರೋ ಕೂಗಿದ. ಪ್ರಾಂಶುಪಾಲರಿಗೆ ಕೆಟ್ಟ ಕೋಪ ಬಂತು. ಎದ್ದು ನಿಂತವರೇ, ‘ನನ್ ಹತ್ರ ಕ್ಯಾಮೆರಾ ಮೊಬೈಲ್ ಇದೆ. ನೀವು ಏನೇ ಮಾಡಿದ್ರೂ ನನಗೆ ಗೊತ್ತಾಗುತ್ತೆ. ಈಗ ಕಮೆಂಟ್ ಮಾಡಿದವನ ಫೋಟೊನೂ ರೆಕಾರ್ಡ್ ಆಗಿದೆ’ ಎಂದು ಚೀರಿದರು. ‘ಹಂಗಾದ್ರೆ ತೋರ್ಸಿ ಸಾರ್’ ಎಂದು ಮತ್ತೊಬ್ಬ ಕೂಗಿದ. ಅದೇ ವೇಳೆಗೆ ಅವರ ಮೊಬೈಲ್ ಕಿಂಕಿಣಿ ಆರಂಭಿಸಿತು. ಮೊಬೈಲ್ ಕಿಂಕಿಣಿ ನಿಲ್ಲಿಸಲು ಅವರು ಒಂದು ಕ್ಷಣ ಪರದಾಡಿದರು. ಅವರ ಸ್ಥಿತಿ ಕಂಡು ವಿದ್ಯಾರ್ಥಿಗಳೆಲ್ಲ ಗೊಳ್ಳ್ ಎಂದೆವು. ನಟೀಮಣಿಯ ಮುಂದೆ ತಮ್ಮ ಮಾನ ಹೋಗುತ್ತಿರುವುದಕ್ಕೆ ಪ್ರಾಂಶುಪಾಲರಿಗೆ ಅಪಮಾನ, ಮುಜುಗರ, ಕೋಪ ಎಲ್ಲವೂ ಒಟ್ಟೊಟ್ಟಿಗೇ ಆಗಿ ಅವರ ಕೆಂಪು ಮುಖ ಇನ್ನಷ್ಟು ಕೆಂಪುಗಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT