ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಹಕ ಯುಗಳ ನೃತ್ಯಗಳು

Last Updated 10 ಮೇ 2016, 19:30 IST
ಅಕ್ಷರ ಗಾತ್ರ

ವರುಣನ ಕೃಪೆ, ಬಿಸಿಲತಾಪವನ್ನು ತಣಿಸಿದ ಕುಳಿರ್ಗಾಳಿಯ ಆಹ್ಲಾದಕರ ಸಂಜೆಯಲ್ಲಿ, ಪ್ರಸಿದ್ಧ ಒಡಿಸ್ಸಿ ನೃತ್ಯ ಕಲಾವಿದೆ ಮಧುಲಿತಾ ಮಹೋಪಾತ್ರ ಸ್ಥಾಪಿಸಿದ ‘ನೃತ್ಯಾಂತರ' ಸಂಸ್ಥೆಯು ಇತ್ತೀಚೆಗೆ ಮಲ್ಲೇಶ್ವರದ ಸೇವಾಸದನದಲ್ಲಿ ಪ್ರಸ್ತುತಪಡಿಸಿದ ‘ಸಮರಸ’ ಎಂಬ ಅಪೂರ್ವ ಕಾರ್ಯಕ್ರಮ ರಸಿಕರ ಮನಸೂರೆಗೊಂಡಿತು. ಪ್ರತಿವರ್ಷ ಹೊಸ ಪರಿಕಲ್ಪನೆಗಳಿಂದ ಭಾರತೀಯ ನೃತ್ಯ ಪ್ರಕಾರಗಳಲ್ಲಿ ಪ್ರಯೋಗಗಳನ್ನು ಸಾಕಾರಗೊಳಿಸಿ ಕಲಾಭಿವೃದ್ಧಿಗೆ ಶ್ರಮಿಸುತ್ತಿರುವ ಸಂಸ್ಥೆಯಿದು. ಹೊಸ ವರ್ಷದಲ್ಲಿ ಸಾದರಪಡಿಸಿದ ‘ಸಮರಸ’ ಮೈದುಂಬಿಕೊಳ್ಳಲು ಕಿಕ್ಕಿರಿದ ಸಭಾಂಗಣ ಸಜ್ಜಾಗಿತ್ತು.

ಶೀರ್ಷಿಕೆಯೇ ಸೂಚಿಸುವಂತೆ ವಿಶ್ವದೆಲ್ಲೆಡೆ ಶಾಂತಿ ಸಂದೇಶದ ಪ್ರಸಾರಕ್ಕಾಗಿ, ಜೀವನದ ಪರಮಮೌಲ್ಯವಾದ ಹೊಂದಾಣಿಕೆ, ಏಕತೆ, ಅದ್ವೈತ ಭಾವದ ಮಾರ್ಗದರ್ಶಿ ಸೂತ್ರಗಳನ್ನು ‘ಯುಗಳ’ ಎತ್ತಿ ತೋರಿಸಿತು. ಎರಡು ದಿನಗಳ ಕಾರ್ಯಕ್ರಮ ‘ವಿಷಯಾಧಾರಿತ’ವಾಗಿ ನಾಟಕೀಯ ಸನ್ನಿವೇಶಗಳ ಅಭಿನಯ ಕೇಂದ್ರೀಕರಿಸಿತ್ತು. ಪ್ರಥಮ ಭಾಗದಲ್ಲಿ ಪದ್ಮಶ್ರೀ ಗುರು ರಂಜನಾ ಗೌಹರ್ ಪ್ರತಿಭೆ ಮೆರೆದರು. ಒಡಿಸ್ಸಿಯೊಂದಿಗೆ ಕಥಕ್ ಮತ್ತು ಮಣಿಪುರಿ ನೃತ್ಯಪ್ರಕಾರಗಳಲ್ಲೂ ಪರಿಣತಿ ಪಡೆದ ಈಕೆ ತಮ್ಮ ಶಿಷ್ಯೆ ವೃಂದಾ ಛದಾ ಜೊತೆ ‘ಪ್ರತಿಬಿಂಬ’ ಎಂಬ ವಿಷಯಾಧಾರಿತ ಸುಂದರಬಂಧಗಳ ಒಡಿಸ್ಸಿ ನೃತ್ಯ ಪ್ರದರ್ಶನ ನೀಡಿ, ತಮ್ಮ ಪ್ರತಿಭೆಯಿಂದ ಬೆರಗು ಮೂಡಿಸಿದರು. 

ಮಹಾಕವಿ ಕಾಳಿದಾಸ ವಿರಚಿತ ‘ಮಾಣಿಕ್ಯ ವೀಣಾ ಮುಪಲಾಲಯಂತೀ...’ (ರಾಗ- ಭೋಪಾಲಿ, ಜತಿ ತಾಳ) ಸರಸ್ವತಿ ಸ್ತುತಿಯನ್ನು ಕಣ್ಣೆದುರು ಸಾಕಾರಗೊಳಿಸಿದರು. ವೀಣಾ ನಿನಾದಕ್ಕೆ ಅನುಗುಣವಾಗಿ ಮಾರ್ದವ ಭಾವದಲ್ಲಿ ಕೊರಳು ಕೊಂಕಿಸಿ, ಮಿಂಚಿನ ಕಣ್ಣೋಟ, ಬಾಗಿದ ಹುಬ್ಬುಗಳ ಲಾಸ್ಯದಲ್ಲಿ ವಿಶಿಷ್ಟ ಅಭಿನಯ ತೋರಿದರು. ನವಿರಾದ ಹೆಜ್ಜೆ, ಮೋಹಕ ಭಂಗಿಗಳಲ್ಲಿ ಭಕ್ತಿ ಪರವಶತೆಯ ತಾದಾತ್ಮ್ಯ ಭಾವ-ವಿಭಾವಗಳಿಂದ ಸೊಗಸಾಗಿ ನರ್ತಿಸಿದರು. ಅವರ ಜೊತೆಗಾತಿಯಾಗಿ ವೃಂದಾ ಕೂಡ ಗುರುವಿಗೆ ತಕ್ಕ ಶಿಷ್ಯೆಯಾಗಿ ಸಾಮರಸ್ಯ ಮೆರೆದರು. ಸೋಲೋ ನೃತ್ಯದಲ್ಲಿ ರಂಜನಾ, ಮೀರಾ ಭಜನೆಯ ‘ಝುಕಿ ಆಯಿ ಬಾದರಿಯಾ’ (ರಾಗ-ಮೇಘ) ಎಲ್ಲರ ಗಮನ ಸೆಳೆಯಿತು.

ಮಳೆಯಲ್ಲಿ ತೊಯ್ಯುವ, ಪಟಪಟನೆ ಬೀಳುವ ಹನಿಗಳನ್ನು ಅನುಭವಿಸುವ, ಹೆಜ್ಜೆಗಳನ್ನು ಚಿಮ್ಮಿಸುತ್ತಾ, ನವಿಲಿನ ಮೃದುಲಾಸ್ಯದ ಮಳೆಯ ನರ್ತನದಲ್ಲಿ ನಲಿವಿನ ಆಕರ್ಷಕ ಭಂಗಿಗಳನ್ನು ತೋರಿದರು. ಜೀವನದ ಸಂತಸವನ್ನು ಸಾರುವ ‘ಪಲ್ಲವಿ’ಯು ಸಂಕೀರ್ಣ ಪದಚಲನೆಯಿಂದ ಕೂಡಿದ ಶುದ್ಧ ನೃತ್ಯ ಭಾವಗೀತಾತ್ಮಕವಾಗಿತ್ತು. ಮಿಶ್ರ ಚರಣ ರಾಗದಲ್ಲಿದ್ದ ಇದರ ರಚನೆ ಪಂಕಜಚರಣ ದಾಸ್ ಅವರದು. ರಾಧಾಕೃಷ್ಣರ ಪ್ರಥಮ ಸಮಾಗಮದ ರಸರೋಮಾಂಚನವನ್ನು ತನ್ನ ಸಖಿಗೆ ನಿರೂಪಿಸುವ ರಾಧೆ, ‘ಸಖಿ ಹೇ...’ (ಜತಿ ತಾಳ-ಪಹಾಡಿ ರಾಗ) ಎಂದು ತನ್ನ ಇನಿಯನ ನಿರೀಕ್ಷೆ, ವಿರಹತಾಪ, ಅವನನ್ನು ಎದುರುಗೊಳ್ಳಲು ನಡೆಸುವ ಸಿದ್ಧತೆ ಪ್ರತಿಯೊಂದನ್ನೂ ನರ್ತಕಿ ತನ್ನ ವಿಶಿಷ್ಟ ಹಾವಭಾವ, ಅರೆ ನಿಮೀಲಿತ ನೇತ್ರಗಳ ಅಭಿನಯದಿಂದ ವ್ಯಕ್ತಪಡಿಸುವ ಪರಿ ಅನನ್ಯವಾಗಿತ್ತು.

ಎರಡನೆಯ ಭಾಗ ‘ಶೃಂಗಾರ ಲಹರಿ’ಯಲ್ಲಿ ‘ರಾಧಾ ಸಮೇತ ಕೃಷ್ಣ’ ಕನ್ನಡ ಜಾವಳಿ, ಅಷ್ಟಪದಿ ಮತ್ತು ಕೀರ್ತನೆಗಳ ಆಯ್ದ ಭಾಗಗಳನ್ನು ಒಂದರೊಳಗೊಂದನ್ನು ಮಿಳಿತಗೊಳಿಸಿ ಭರತನಾಟ್ಯದಲ್ಲಿ ರಂಗದ ಮೇಲೆ ಸಾಕ್ಷಾತ್ಕರಿಸಿದ ಅನುರೂಪದ ಜೋಡಿ ಸೌಂದರ್ಯ ಶ್ರೀವತ್ಸ ಮತ್ತು ಪಿ.ಪ್ರವೀಣ್‌ಕುಮಾರ್. ಸೌಂದರ್ಯ, ತಮ್ಮ ವೈವಿಧ್ಯಪೂರ್ಣ ಹಸ್ತಮುದ್ರಿಕೆ, ಕಡೆದಂಥ ಹೆಜ್ಜೆಗಳ ಕಲಾತ್ಮಕ ಪದಚಲನೆ, ಪರಿಣಾಮಕಾರಿ ಅಭಿನಯದಲ್ಲಿ ಪ್ರಬುದ್ಧತೆ ಮೆರೆದರು. ಪ್ರವೀಣ್ ಕುಮಾರ್ ಅವರು ಕೃಷ್ಣನ ಮುಗ್ಧ ತುಂಟಾಟ, ರಾಧಾಕೃಷ್ಣರ ಪ್ರಣಯದ ವಿವಿಧ ಸನ್ನಿವೇಶಗಳಲ್ಲಿ ಸಮರ್ಥ ಅಭಿನಯದಿಂದ ಮನಸೂರೆಗೊಂಡರು.

ಸೌಂದರ್ಯ, ಅವರಿಗೆ ಸರಿಸಾಟಿಯಾಗಿ ಹಟ-ಹುಸಿಗೋಪ, ಒಲವು-ತಾದಾತ್ಮ್ಯಗಳ ವೈವಿಧ್ಯತೆ ತೋರಿದರು. ಪ್ರೇಮಿಗಳು ಸರಸ ಸಲ್ಲಾಪ, ಲೀಲಾ ವಿನೋದಗಳನ್ನು ಮನಮುಟ್ಟುವಂತೆ ಅಭಿನಯಿಸುತ್ತ ಜತಿಸ್ವರಗಳಲ್ಲಿ ತಮ್ಮ ಛಾಪು ತೋರಿ ರಸಿಕರ ಚಪ್ಪಾಳೆ ಗಿಟ್ಟಿಸಿದರು. ಶ್ರೀವತ್ಸ ಅವರ ಸಿರಿಕಂಠದ ಗಾಯನಕ್ಕೆ ಮಹೇಶಸ್ವಾಮಿಯವರ ಅಪೂರ್ವ ಕೊಳಲ ಗಾನ ಮತ್ತು ಹರ್ಷ ಸಾಮಗ ಅವರ ಮೃದಂಗ ದನಿ ಇಂಬು ನೀಡಿದವು. ಕಾರ್ಯಕ್ರಮದ ಎರಡನೇ ದಿನವೂ ನೃತ್ಯರಸಿಕರ ಕಣ್ಮನಗಳಿಗೆ ರಸದೌತಣ. ತಮ್ಮ ಸಪೂರ ಅಂಗಸೌಷ್ಟವ, ಆಕರ್ಷಕ ಬಾಗು-ಬಳುಕುಗಳ, ಕಡೆದ ಶಿಲ್ಪದಂಥ ಮನೋಹರ ಮತ್ತು ಅಪೂರ್ವ ಭಂಗಿಗಳಿಂದ ಪುಳಕಗೊಳಿಸುವ ಕಲಾವಿದೆ ಮಧುಲಿತಾ ಮಹೋಪಾತ್ರ, ತಮ್ಮ ನೃತ್ಯಸಂಗಾತಿ ವಿಶ್ವಭೂಷಣ ಮಹೋಪಾತ್ರ ಅವರೊಂದಿಗೆ ಸಾದರಪಡಿಸಿದ ‘ಅರ್ಧನಾರೀಶ್ವರ’, ಸುಮನೋಹರ ದೈವೀಕಭಾವಗಳ ಸಂಗಮದಿಂದ ಪರಿಪೂರ್ಣವಾಗಿತ್ತು.

ಇಡೀ ಬ್ರಹ್ಮಾಂಡದ ಸಮರಸ ಮತ್ತು ಸಮನ್ವಯ ಭಾವಗಳನ್ನು ಸಂಕೇತಿಸುವ ಶಿವ-ಪಾರ್ವತಿಯರ ಸುಂದರಭಂಗಿಗಳು ಅಪೂರ್ವವೆನಿಸಿದವು. ಪರಸ್ಪರ ಹೆಣೆದುಕೊಡಂತೆ ಸಂಯೋಜಿಸಲಾದ ವಿಭಿನ್ನ, ದೃಶ್ಯವತ್ತಾದ ಭಾವ-ಭಂಗಿಗಳು ಲಲಿತ ಲಾಸ್ಯಭಾವಗಳಿಂದ ಹಾಗೇ ಸ್ತಬ್ಧವಾಗಿ ಪ್ರತಿಮೆಯಂತೆ ಭಾಸವಾಗುವ ನಾಟ್ಯದ ಬಹು ಆಕರ್ಷಕ ಅಂಶಗಳಾಗಿದ್ದವು. ವಿಶ್ವಭೂಷಣರ ಕ್ಷಿಪ್ರ ಪದಚಲನೆಯ ವಿಶಿಷ್ಟ ಶಿವತಾಂಡವ ನರ್ತನ ಮನ ಸೆಳೆಯಿತು. ‘ವರ್ಷ ಅಭಿಸಾಲ್’ (ನೃತ್ಯ ಸಂಯೋಜನೆ ಅರುಣಾ ಮೊಹಂತಿ) ಪ್ರೇಮಿಗಳ ಸಮ್ಮಿಲನದ ಸುತ್ತಲೂ ಭ್ರಮಿಸುವ ಕಥಾ ಸನ್ನಿವೇಶ. ಮುನಿಸಿಕೊಂಡ ಇನಿಯಳನ್ನು ರಮಿಸಲೆತ್ನಿಸುವ ಇನಿಯನ ಪ್ರಯತ್ನಗಳು, ಪರಸ್ಪರರ ಮಂದಸ್ಮಿತ, ಹಸನ್ಮುಖ ಪ್ರಣಯ ರಮ್ಯಭಾವಗಳಲ್ಲಿ ಧುಮ್ಮಿಕ್ಕಿದವು.

ಹಿನ್ನೆಲೆಯಲ್ಲಿ ತೇಲಿ ಬಂದ ಮದ್ದಲೆಯ ದನಿ ಪ್ರಭಾವಿಯಾಗಿತ್ತು. ಜಯದೇವ ಕವಿಯ ‘ರಾಸಲೀಲಾ’ ಕೃತಿಯ ಅಭಿನಯದಲ್ಲೂ ಕಲಾವಿದರಿಬ್ಬರು ಹೃದಯಸ್ಪರ್ಶಿಯಾಗಿ ನವರಸಗಳನ್ನು ಚಿಮ್ಮಿಸಿದರು. ‘ಹರಿರಭಿಸರತಿ’ಯಲ್ಲಿ ಮಧುಲಿತಾ ಅಭಿಸಾರಿಕೆಯಾಗಿ ಮಾಧವನ ಕುರಿತ ಆರ್ತಭಾವನೆಗಳನ್ನು ಅದ್ಭುತವಾಗಿ ಪ್ರದರ್ಶಿಸಿದರು. ಅರ್ಪಣಾ ಮನೋಭಾವ ಪ್ರದರ್ಶನದಲ್ಲಿ ಅಲೆಯಲೆಯಾದ, ನೀರಿನಂತೆ ಕರಗಿಹೋದ ಸುಕೋಮಲಕಾಯವನ್ನು ತ್ರಿಭಂಗಿಗಳ ಆಕರ್ಷಕ ಬಳುಕಿನಲ್ಲಿ ವರ್ತುಲಕಾರವಾಗಿ ಕೊಂಕಿಸುತ್ತ ವಿಲಾಪಗೈದ ಆರ್ತತೆ ಕಲಾವಿದೆಯ ಚೈತನ್ಯ ಮತ್ತು ಸಾಮರ್ಥ್ಯವನ್ನು ಎತ್ತಿಹಿಡಿಯಿತು. 

ಗೀತಗೋವಿಂದದ ‘ಹರಿಂ ಏಕರಸಂ’ನಲ್ಲೂ ಈ ಅನುರೂಪ ಜೋಡಿಯ, ಜೀವ-ಪರಮಾತ್ಮಗಳ ಮಿಲನದ ತಾದಾತ್ಮ್ಯಭಾವಗಳ ಅಪೂರ್ವ ಪ್ರದರ್ಶನ ಸೊಗಸಾಗಿ ಮೂಡಿ ಬಂತು. ಏಕತೆಯ ಸಂದೇಶ ಸಾರುವ ಈ ನೃತ್ಯ, ಸಾಮರಸ್ಯದ ಆಶಯವನ್ನು ರಸಾದ್ಭುತವಾಗಿ ಕಣ್ಮುಂದೆ ಕಡೆದು ನಿಲ್ಲಿಸಿತು. ಅಂತಿಮ ಭಾಗದಲ್ಲಿ ವಿದ್ವತ್ ಕಲಾವಿದರಾದ ಅನುರಾಧಾ ವಿಕ್ರಾಂತ್ ಮತ್ತು ಶೇಷಾದ್ರಿ ಅಯ್ಯಂಗಾರ್ ಮೊದಲಿಗೆ ‘ಪುಷ್ಪಾಂಜಲಿ’ ಮತ್ತು ಕೊನೆಯಲ್ಲಿ ‘ತಿಲ್ಲಾನ’ವನ್ನು ಖಚಿತ, ವೈವಿಧ್ಯ ಹಸ್ತಮುದ್ರೆಗಳಿಂದ ಮಿಂಚಿನ ಸಂಚಾರದ ಪದಗತಿಗಳಿಂದ, ಜತಿಗಳನ್ನು ಲೀಲಾಜಾಲವಾಗಿ ಅಷ್ಟೇ ಸೊಬಗಿನಿಂದ ನಿರ್ವಹಿಸಿದರು.

ಇದೇ ಜೋಡಿಯು ಭರತನಾಟ್ಯ ಪ್ರಕಾರದಲ್ಲಿ ಪ್ರಸ್ತುತಪಡಿಸಿದ ಸಾಮಾಜಿಕ ಅಂಶದ ನೃತ್ಯ ರೂಪಕ ‘ಉದ್ವಹ’ (ವಿವಾಹ ಬಂಧ, ರಾಗಮಾಲಿಕ, ಆದಿತಾಳ) ವಿವಾಹ ಸಂಬಂಧದ ಪಾವಿತ್ರ್ಯತೆಯನ್ನು ಮನವರಿಕೆ ಮಾಡಿಕೊಟ್ಟಿತು. ಅನನ್ಯ ಅನುಭವ ನೀಡಿ ರಂಜಿಸಿತು. ವೈವಾಹಿಕ ಜೀವನದ ಸವಾಲುಗಳು, ಸಾಮಾಜಿಕ ಬದ್ಧತೆಗಳನ್ನು ಭಾವಪ್ರಧಾನ ನೃತ್ಯದ ಆಂಗಿಕಾಭಿನಯದ ಮೂಲಕ ಈ ಜೋಡಿ ಪರಸ್ಪರ ಇಂಗಿತಜ್ಞತೆಯಿಂದ ಮನೋಜ್ಞವಾಗಿ ಪ್ರದರ್ಶಿಸಿತು.

ಶತಾವಧಾನಿ ಡಾ.ಆರ್.ಗಣೇಶ್ ವಿರಚಿತ ಈ ಪ್ರಾಯೋಗಿಕ ಕೃತಿ ಉತ್ತಮ ಚಿಂತನೆಯಿಂದ ಕೂಡಿದೆ. ಭರತನಾಟ್ಯ ಮಾಧ್ಯಮದಲ್ಲಿ ಪ್ರೌಢಿಮೆಯನ್ನು ತೋರಿದ ಈ ಜೋಡಿ ಪರಿಪಕ್ವ ಅಭಿನಯದಿಂದ ರಸಿಕರ ಮೆಚ್ಚುಗೆ ಪಡೆಯಿತು. ಸಾಮಾನ್ಯವಾಗಿ ಶಾಸ್ತ್ರೀಯ ನೃತ್ಯಗಳ ನೆಲೆಯಲ್ಲಿರುತ್ತಿದ್ದ ಪ್ರಸ್ತುತಿಗಳು ಈ ಬಾರಿ ‘ವಸ್ತುಕೇಂದ್ರಿತ’ವಾಗಿ ರೂಹು ಪಡೆದದ್ದು ನಿಜಕ್ಕೂ ಅನ್ವೇಷಕ ಹಾಗೂ ಆಕರ್ಷಣೀಯವಾಗಿದ್ದವು.ಇಂಥ ಹೊಸ ಹೊಸ ಪ್ರಯೋಗಗಳ ಸಾಹಸ ಮಾಡುತ್ತಿರುವ ನೃತ್ಯತಜ್ಞೆ ಮಧುಲಿತಾ ಕಲಾ ರಸಿಕರ ಅಭಿನಂದನೆಗೆ ಪಾತ್ರರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT