ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸ್ತ್ರ ವಿನ್ಯಾಸದ ಚುಂಗು ಹಿಡಿದು...

Last Updated 27 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಫ್ಯಾಷನ್ ಬಗೆಗಿನ ನಿಮ್ಮ ನಿಲುವು?
ಫ್ಯಾಷನ್ ಬಗ್ಗೆ ಒಬ್ಬೊಬ್ಬರದ್ದು ಒಂದೊಂದು ಅಭಿಪ್ರಾಯವಿರುತ್ತದೆ. ನಾವು ಮಾಡಿದ ವಿನ್ಯಾಸದ ಬಗ್ಗೆ ಮೊದಲು ನಮಗೆ ಖುಷಿ ಇರಬೇಕು. ನನ್ನ ಪ್ರಕಾರ ಫ್ಯಾಷನ್ ಎಂದರೆ ಬಣ್ಣಗಳೊಂದಿಗೆ ಆಟವಾಡುವುದು.

ನಿಮ್ಮೂರು? ಆಸಕ್ತಿ?
ಬೆಂಗಳೂರು ನನ್ನ ಹುಟ್ಟೂರು. ವಸ್ತ್ರವಿನ್ಯಾಸವೇ ನನ್ನ ಆಸಕ್ತಿ, ಅಭಿರುಚಿ. ಹಾಗಾಗಿ ಬೇರೆ ಕಡೆ ನಾನು ಹೆಚ್ಚು ಗಮನ ಹರಿಸಿಲ್ಲ. ಫ್ಯಾಷನ್‌ಗೆ ಸಂಬಂಧಪಟ್ಟ ವಿಷಯಗಳನ್ನು ದಿನಪತ್ರಿಕೆ, ಗೂಗಲ್‌ನಲ್ಲಿ ಹೆಚ್ಚು ಹೆಚ್ಚು ಗಮನಿಸುತ್ತಿದ್ದೆ. ಇವೇ ನನ್ನ ಸಾಧನೆಗೆ ಪೂರಕ.

ವಿನ್ಯಾಸಕಿಯಾಗಿ ಎಷ್ಟು ವರ್ಷದ ಅನುಭವ? ಈ ಕ್ಷೇತ್ರದ ಆಯ್ಕೆ ಮಾಡಿಕೊಂಡಿದ್ದು ಯಾಕೆ?
ಏಳು ವರ್ಷದ ಅನುಭವ. ಸಣ್ಣ ವಯಸ್ಸಿನಿಂದಲೂ ನನಗೆ ಈ ಬಣ್ಣಗಳತ್ತ ಆಸಕ್ತಿಯಿತ್ತು. ನನ್ನ ಬಟ್ಟೆಗೆ ನಾನೇ ವಿನ್ಯಾಸ ಮಾಡಿಕೊಳ್ಳುತ್ತಿದ್ದೆ. ಆಗ ಎಲ್ಲರೂ ನಿನ್ನ ಡ್ರೆಸ್ ಎಷ್ಟು ಚೆನ್ನಾಗಿದೆ ಎನ್ನುತ್ತಿದ್ದರು. ನನಗೋ  ಖುಷಿಯೋ ಖುಷಿ. ವಸ್ತ್ರ ವಿನ್ಯಾಸವೆನ್ನುವ ವೃತ್ತಿ ಕ್ಷೇತ್ರವೇ ಒಂದು ಇದೆ ಎಂಬ ಪರಿಕಲ್ಪನೆಯೂ ಆಗ ಇರಲಿಲ್ಲ. ಆದರೆ ಹೀಗೇ ಡ್ರೆಸ್‌ಗಳನ್ನು ಡಿಸೈನ್ ಮಾಡುತ್ತಿರಬೇಕು ಎಂದುಕೊಳ್ಳುತ್ತಿದ್ದೆ.
ಆದರೆ ಆ ಕನಸನ್ನೇ ಪೂರ್ಣಪ್ರಮಾಣದಲ್ಲಿ ವೃತ್ತಿಯಾಗಿ ಸ್ವೀಕರಿಸಿದ್ದು ಮದುವೆಯಾದ ನಂತರ.

ಪ್ರೇರಣೆ ಕೊಟ್ಟವರು ಯಾರು?
ನನಗೆ ಸ್ಫೂರ್ತಿ ತುಂಬಿದ್ದು ನನ್ನ ಗಂಡ. ಹಾಗಾಗಿ ನನ್ನ ಬದುಕಿಗೆ ಅವರೇ ಸ್ಫೂರ್ತಿ. ಮದುವೆಗಿಂತ ಮುಂಚೆ ನಾನು ಸ್ಪೈಸ್ ಟೆಲಿಕಾಂನಲ್ಲಿ ಉದ್ಯೋಗ ಮಾಡುತ್ತಿದ್ದೆ. ಮದುವೆಯಾದ ನಂತರ ಕೆಲಸ ಬಿಡಬೇಕಾಯಿತು. ಆದರೆ ನನ್ನ ಪತಿ ವಸ್ತ್ರವಿನ್ಯಾಸದಲ್ಲಿ ನನಗಿರುವ ಆಸಕ್ತಿಯನ್ನು ಮನಗಂಡು ಪ್ರೋತ್ಸಾಹ ನೀಡಿದರು. ಹೆಣ್ಣುಮಕ್ಕಳ ಬೆಳವಣಿಗೆಗೆ ಪತಿಯ ಬೆಂಬಲ ಅವಶ್ಯ. ಇಂದು ನಾನು ಏನೇ ಸಾಧನೆ ಮಾಡಿದ್ದರೂ ಅದಕ್ಕೆ `ನನ್ನವರು' ಕಾರಣ.

ವಿನ್ಯಾಸಗಳಿಗೆ ಸ್ಫೂರ್ತಿ?
ವಿಶ್ವವಿಖ್ಯಾತ ವಸ್ತ್ರ ವಿನ್ಯಾಸಕ, ಮುಂಬೈನ ಸವ್ಯಸಾಚಿ ಮುಖರ್ಜಿ. ಬಾಲಿವುಡ್ ನಟಿಯ ನೆಚ್ಚಿನ ಡಿಸೈನರ್ ಅವರು. ಅಸಾಮಾನ್ಯವಾದ ವಿನ್ಯಾಸಗಳನ್ನು ಪರಿಚಯಿಸಿದವರು ಅವರು.

ಯಾವ ರೀತಿಯ ವಸ್ತ್ರವಿನ್ಯಾಸ ಮಾಡುತ್ತೀರಾ?
ಪಾರ್ಟಿವೇರ್, ಘಾಗ್ರಾ ಮತ್ತು ಸೀರೆ.

ನಿಮ್ಮದೇ ಆದ `ಕಾನ್ಸೆಪ್ಟ್' ಇದೆಯೇ?
ಇಂಡೋ-ವೆಸ್ಟರ್ನ್ ಶೈಲಿಯಲ್ಲಿ ವಿನ್ಯಾಸ  ಮಾಡುವುದು ನನ್ನ ಕಾನ್ಸೆಪ್ಟ್. ಸೀರೆ ನನ್ನಿಷ್ಟದ ಉಡುಗೆ. ನಾವು ಆಧುನಿಕ ಯುಗದವರು ಎಂದು ಎಷ್ಟೇ ಹೇಳಿಕೊಂಡರೂ ಮರಳಿ ಮಣ್ಣಿಗೆ ಎಂಬಂತೆ ಮನಸ್ಸು ಸೀರೆಯತ್ತ ವಾಲುತ್ತದೆ. ಹೆಣ್ಣಿಗೆ ಸೀರೆಯಿಂದ ಶೋಭೆ ಬರುತ್ತದೆ. ಹಾಗಾಗಿ ಅದರಲ್ಲೇ ವಿಭಿನ್ನವಾದ, ವಿಶಿಷ್ಟವಾದ ವಿನ್ಯಾಸಗಳನ್ನು ಮಾಡುವುದು ನನಗಿಷ್ಟ.

ಸಿನಿಮಾಗಳಿಗೆ ವಸ್ತ್ರವಿನ್ಯಾಸ ಶುರುಮಾಡಿದ್ದು ಯಾವಾಗ, ಯಾಕೆ?
ನನಗೆ ಕೇವಲ ಒಂದು ಕ್ಷೇತ್ರಕ್ಕೆ ಅಂಟಿಕೊಳ್ಳಲು ಮನಸ್ಸಿರಲಿಲ್ಲ. ಮೊದಲು ರೂಪದರ್ಶಿಯರಿಗೆ ವಿನ್ಯಾಸ ಮಾಡುತ್ತಿದ್ದೆ. ನಂತರ ಸಿನಿಮಾಕ್ಕೆ ಯಾಕೆ ಹೋಗಬಾರದು ಎಂಬ ಯೋಚನೆ ಬಂತು. ಅದಕ್ಕೆ ಸರಿಯಾಗಿ ಉಪೇಂದ್ರ ಅವರ `ಟೋಪಿವಾಲಾ' ಸಿನಿಮಾಕ್ಕೆ ವಸ್ತ್ರ ವಿನ್ಯಾಸಕಿಯಾಗುವ ಅವಕಾಶ ಸಿಕ್ಕಿತು.

ನನ್ನ ಮೊದಲ ಸಂದರ್ಶನ ಇನ್ನೂ ಮನಸ್ಸಿನಲ್ಲಿ ಹಚ್ಚಹಸಿರಾಗಿದೆ. ತುಂಬಾ ಭಯದಿಂದ ಉಪೇಂದ್ರ ಅವರ ಎದುರಿಗೆ ಕುಳಿತಿದ್ದೆ. ಅವರು, ನೀರು ಕುಡಿಯಿರಿ ಆಮೇಲೆ ಮಾತನಾಡಿ ಎಂದು ನನ್ನ ಭಯ ಕಡಿಮೆ ಮಾಡಿದರು. ಯಾವುದೇ ರೀತಿಯ ಸಂದರ್ಶನವನ್ನೂ ಮಾಡದೇ ನೀವು ಆಯ್ಕೆ ಆಗಿದ್ದೀರಿ  ಎಂದು ಹೇಳಿದಾಗ ನನಗಾದ ಖುಷಿಯನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಉಪೇಂದ್ರ ಅವರ ಜತೆ ಕೆಲಸ ಮಾಡುವುದು ಒಂದು ವಿಶ್ವವಿದ್ಯಾಲಯದಲ್ಲಿ ಕಲಿತಂತೆ. ಸರಳ ವ್ಯಕ್ತಿ. ಆದರೆ ಸಿನಿಮಾದ ವಿಷಯದಲ್ಲಿ ಅಷ್ಟೇ ಪ್ರಾಕ್ಟಿಕಲ್.

ಯಾವುದೇ ಬಣ್ಣದ ಉಡುಪು ತೊಟ್ಟರೂ ಅವರು ಚೆನ್ನಾಗಿ ಕಾಣುತ್ತಾರೆ. ಹಾಗಾಗಿ ನನ್ನ ವಿನ್ಯಾಸದ ಜತೆ ಸ್ಟೈಲಿಂಗ್‌ಗೂ ಅಲ್ಲಿ ಬೆಲೆ ಸಿಕ್ಕಿತು.

ಎಷ್ಟು ಸಿನಿಮಾಗಳಿಗೆ ವಸ್ತ್ರವಿನ್ಯಾಸ ಮಾಡಿದ್ದೀರಿ?
`ಟೋಪಿವಾಲಾ'ಕ್ಕಾಗಿ ವಿನ್ಯಾಸ ಮಾಡುತ್ತಲೇ `ಕಲ್ಪನಾ' ಚಿತ್ರಕ್ಕೂ ಕೆಲಸ ಮಾಡಿದೆ. ಸುದೀಪ್ ಅಭಿನಯದ `ಬಚ್ಚನ್' ಸಿನಿಮಾ ಮತ್ತು ಉಪೇಂದ್ರ ಅವರ ಲೂನಾರ್ಸ್‌ ಜಾಹೀರಾತಿಗೂ ನನ್ನದೇ ವಸ್ತ್ರವಿನ್ಯಾಸ.

ನಿಮ್ಮ ಆದ್ಯತೆಯ ಬಣ್ಣ?
ಕಪ್ಪು ಮತ್ತು ಗಾಢ ಮೆಜೆಂಟಾ.

ಕಿರಿಯ ಫ್ಯಾಷನ್ ವಿನ್ಯಾಸಕಾರರಿಗೆ ನಿಮ್ಮ ಕಿವಿಮಾತು?
ಯಾವುದೇ ವೃತ್ತಿ ಆಯ್ಕೆ ಮಾಡುವಾಗ ಮೊದಲು ಯೋಚನೆ ಮಾಡಿ. ನಿಮ್ಮ ಆಸಕ್ತಿಯ ಕ್ಷೇತ್ರದತ್ತ ಹೆಚ್ಚು ಗಮನ ಹರಿಸಿ.

ನಿಮ್ಮ ಮುಂದಿನ ಗುರಿ ಏನು?
ಸ್ಯಾಂಡಲ್‌ವುಡ್‌ನ ಎಲ್ಲಾ ನಟ ನಟಿಯರಿಗೂ ವಸ್ತ್ರ ವಿನ್ಯಾಸ ಮಾಡಬೇಕು. ಜತೆಗೆ ಡಿಸೈನರ್‌ವೇರ್‌ಗಳನ್ನು ಮಧ್ಯಮವರ್ಗದವರ ಕೈಗೆಟುಕುವಂತೆ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT