ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮವಿಲ್ಲದ ಸದ್ಯ

Last Updated 23 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಕೇರಳದಲ್ಲಿ ಓಣಂ ತಯಾರಿ ಆರಂಭವಾಗುತ್ತಿರುವಂತೆಯೇ ಇಲ್ಲೂ ಸಿದ್ಧತೆಗಳು ಪ್ರಾರಂಭವಾಗುತ್ತವೆ. `ಓಣಂ ಸದ್ಯ~ ಉಣ್ಣಲು ತುದಿಗಾಲಲ್ಲಿ ನಿಲ್ಲುವ ಕೇರಳೀಯರು ಮಾತ್ರವಲ್ಲ, ಇತರರನ್ನೂ ಸಂತೋಷಪಡಿಸಲು ಇಲ್ಲಿನ ರೆಸ್ಟೋರೆಂಟ್‌ಗಳಿಗೆ ಈ ಹಬ್ಬವೇ ನೆಪ. `ಸದ್ಯ~ ಉಂಡರೆ ಮಾತ್ರ ಓಣಂ ಪರಿಪೂರ್ಣ ಎಂಬಂತಿರುವಾಗ ರುಚಿಯಾದ `ಸದ್ಯ~ ಹುಡುಕಿಕೊಂಡು ಜನ ತುಂಬಾ ದೂರ ಹೋಗಲೂ ಹಿಂದುಮುಂದು ನೋಡುವುದಿಲ್ಲ.

ನಾನಾ ಕಾರಣಗಳಿಂದಾಗಿ ನಗರಕ್ಕೆ ಬಂದು ನೆಲೆಸಿರುವವರಿಗೆ ಹಾಗೂ `ಓಣಂ ಸದ್ಯ~ ತಯಾರಿಸಲು ಅವಕಾಶ ಇಲ್ಲದೇ ಇರುವವರಿಗೆ ಇಂಥ ರೆಸ್ಟೋರೆಂಟ್‌ಗಳು ವರದಾನ. ಸಾಮಾನ್ಯವಾಗಿ ಕೆಲವು ರೆಸ್ಟೋರೆಂಟ್‌ಗಳು ಓಣಂ ಆರಂಭವಾಗುತ್ತಿದ್ದಂತೆಯೇ `ಸದ್ಯ~ ಮಾಡಲು ಸಜ್ಜಾದರೆ, ಮತ್ತೆ ಕೆಲವು ತಿರುವೋಣಂಗೆ ಎರಡು ದಿನ ಮುಂಚಿತವಾಗಿ `ಸದ್ಯ~ ನೀಡಲು ಮುಂದಾಗುತ್ತವೆ. ಒಂದಿಷ್ಟು ರೆಸ್ಟೊರೆಂಟ್‌ಗಳು `ತಿರುವೋಣಂ~ ದಿನಕ್ಕೆ ಮಾತ್ರ `ಸದ್ಯ~ವನ್ನು ಸೀಮಿತವಾಗಿಸುತ್ತವೆ.

ಈ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಹಲಸೂರಿನ `ಎಂದೆ ಕೇರಳಂ~ ರೆಸ್ಟೋರೆಂಟ್ ಆಗಸ್ಟ್ 20ರಿಂದ ಸೆಪ್ಟೆಂಬರ್ 3ರವರೆಗೆ ಓಣಂ `ಎಲ ಸದ್ಯ~ (ಬಾಳೆ ಎಲೆಯ ಮೇಲೆ ಬಡಿಸುವ ಸದ್ಯ) ಉಣಬಡಿಸಲು ನಿರ್ಧರಿಸಿದ್ದು, ಮಾಧ್ಯಮದವರನ್ನು ಇತ್ತೀಚೆಗೆ ಆಹ್ವಾನಿಸಿತ್ತು.

`ಬಲ್ಲವನೇ ಬಲ್ಲ ಬೆಲ್ಲದ ರುಚಿಯ~ ಎಂಬ ಮಾತಿದೆ. ಅಂತೆಯೇ `ಓಣಂ ಸದ್ಯ~ ಸವಿಯಲೆಂದೇ `ಎಂದೆ ಕೇರಳಂ~ಗೆ ತೆರಳಿದಾಗ ರೆಸ್ಟೋರೆಂಟ್‌ನ ಪ್ರವೇಶದ್ವಾರದಲ್ಲೇ ಬಿಡಿಸಿಟ್ಟ ಕೇರಳದ ವರ್ಣರಂಜಿತ ಕೊಡೆಗಳು ಸ್ವಾಗತಿಸಿದವು. ಬಾಗಿಲು ದಾಟಿ ಒಳಗೆ ಪ್ರವೇಶಿಸಿದಾಗ ನೆಲದ ಮೇಲೆ ಬಿಡಿಸಿದ್ದ `ಪೂಕ್ಕಳಂ~ (ಹೂವಿನ ರಂಗೋಲಿ) ಆಕರ್ಷಣೆ. ಬಿಳಿ ಪಂಚೆ ಮತ್ತು ಜುಬ್ಬಾ ಧರಿಸಿದ ಹೋಟೆಲ್‌ನ ಬೆರಳೆಣಿಕೆಯಷ್ಟು ಸಿಬ್ಬಂದಿ ಹೊರತುಪಡಿಸಿದರೆ ಓಣಂ ಸಂಭ್ರಮ ಅಲ್ಲಿ ಅಷ್ಟಾಗಿ ಎದ್ದುಕಾಣಲಿಲ್ಲ.

ಕೇರಳದಲ್ಲಿ ಖ್ಯಾತಿ ಹೊಂದಿದ ಬಾಣಸಿಗ ಹಾಗೂ ಅರ್ಚಕ ತಿರುಮೇನಿ ಉಣ್ಣಿಕೃಷ್ಣನ್ ನಂಬೂದಿರಿ ಅವರನ್ನು ನಿರೀಕ್ಷಿಸಿ ಅವರ ಕೈ ಅಡುಗೆಯ ರುಚಿ ಸವಿಯಲು ತೆರಳಿದ್ದವರಿಗೆ ನಿರಾಸೆಯಾದರೂ ಅವರ ತಂಡ ತಯಾರಿಸಿದ `ಸದ್ಯ~ ಸವಿಯಲು ಮುಂದಾದೆವು.

`ಪರಿಪ್ಪು, ಸಾಂಬಾರ್, ರಸಂ, ಅನ್ನ, ಪಚಡಿ, ಕಿಚಡಿ, ಇಂಜಿಪುಳಿ, ತೋರನ್, ಕಾಳನ್, ಪಪ್ಪಡಂ, ಚಿಪ್ಸ್, ಶರ್ಕರವರಟ್ಟಿ, ಪಾಯಸಂ, ಪ್ರಥಮನ್ ಸೇರಿದಂತೆ 26 ಬಗೆಯ ತಿನಿಸುಗಳನ್ನು ಬಾಳೆಎಲೆಯಲ್ಲಿ ಬಡಿಸಿದ `ಸದ್ಯ~ ಉಣ್ಣುತ್ತಿದ್ದಂತೆ ರೆಸ್ಟೋರೆಂಟ್‌ನ ಮುಖ್ಯ ಬಾಣಸಿಗ ಅಜಿ ಜೋಸೆಫ್ ನಮ್ಮ ಮುಂದೆ ಹಾಜರಾದರು.

`ಪ್ರತಿವರ್ಷ ಓಣಂ ಹಬ್ಬದ ಸಂದರ್ಭದಲ್ಲಿ ನಾವು ಬೆಂಗಳೂರು ಹಾಗೂ ಚೆನ್ನೈಯಲ್ಲಿನ `ಎಂದೆ ಕೇರಳಂ~ ರೆಸ್ಟೋರೆಂಟ್‌ಗಳಿಗೆ ತಿರುಮೇನಿಯವರನ್ನು ಆಹ್ವಾನಿಸುತ್ತೇವೆ. ಈ ಬಾರಿ ಅವರು ಚೆನ್ನೈಯಲ್ಲಿರುವ ಕಾರಣ ಇಲ್ಲಿಗೆ ಬರಲು ಸಾಧ್ಯವಾಗಲಿಲ್ಲ. ಬದಲಾಗಿ ಅವರ ತಂಡದ ಸದಸ್ಯರು `ಸದ್ಯ~ ತಯಾರಿಸುತ್ತಿದ್ದು, ಅಗತ್ಯವಾದ ವಸ್ತುಗಳನ್ನು ಅವರೇ ಕೇರಳದಿಂದ ತರುತ್ತಾರೆ. ಪ್ರತಿದಿನ ನಾಲ್ಕು ಬಗೆಯ ಚಿಪ್ಸ್‌ಗಳು, ಉಪ್ಪಿನಕಾಯಿಗಳು ಹಾಗೂ ಪಾಯಸಂಗಳು ಮೆನುವಿನಲ್ಲಿರುತ್ತವೆ. ಪಾಯಸಂ ಮತ್ತು ಚಿಪ್ಸ್‌ನ ಬಗೆ ನಿತ್ಯವೂ ಬದಲಾಗುತ್ತಿರುತ್ತದೆ~ ಎಂದರು.

ಕೇವಲ ಮಾಧ್ಯಮದವರಿಗೆ ಮಾತ್ರ `ಸದ್ಯ~ ಏರ್ಪಡಿಸಿದ್ದರಿಂದಲೋ ಏನೋ ರೆಸ್ಟೋರೆಂಟ್‌ಗಳಿಗೆ ಬಂದ ಗ್ರಾಹಕರಿಗೆ `ಎಲ ಸದ್ಯ~ದ ಬಗ್ಗೆ ಮಾಹಿತಿ ಇದ್ದಂತೆ ಕಂಡುಬರಲಿಲ್ಲ. ತಿರುವೋಣಂ ಹತ್ತಿರ ಬರುತ್ತಿದ್ದಂತೆ ಸಂಭ್ರಮ ಕಂಡುಬರಬಹುದೇನೋ? ಆದರೂ ನಿಜವಾದ `ಸದ್ಯ~ದ ಸವಿ ಸವಿಯಲು ತೆರಳಿದವರಿಗೆ ಅದ್ಭುತ ಅನುಭವ ನೀಡಲಿಲ್ಲ ಎನ್ನುವುದಂತೂ ಸತ್ಯ.

ಅಂದಹಾಗೆ ಉಳಿದ ದಿನಗಳಲ್ಲಿ `ಓಣಂ ಸದ್ಯ~ದ ಬೆಲೆ ರೂ. 395. ಅಂತೆಯೇ ತಿರುವೋಣಂ ದಿನ `ಸದ್ಯ~ದ ಬೆಲೆ 525 ರೂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT