ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಸ್ಕೃತ ಎಲ್ಲ ಭಾರತೀಯರ ಭಾಷೆ’

Last Updated 10 ನವೆಂಬರ್ 2016, 19:30 IST
ಅಕ್ಷರ ಗಾತ್ರ

lಸಂಸ್ಕೃತ ಏಕೆ ಕಲಿಯಬೇಕು?
ಸಂಸ್ಕೃತ ಕೇವಲ ಕೊರಳಿನ ಭಾಷೆಯಲ್ಲ. ಸಂಸ್ಕೃತದ ಶಬ್ದಗಳು ದೇಹದಲ್ಲಿ ಧನಾತ್ಮಕ ಕಂಪನ ಉತ್ಪತ್ತಿ ಮಾಡುತ್ತವೆ. ಇದರಿಂದ ವ್ಯಕ್ತಿಯ ಏಕಾಗ್ರತೆ, ನೆನಪಿನ ಶಕ್ತಿ ಹೆಚ್ಚುತ್ತದೆ. ಎಲ್ಲಾ ಭಾರತೀಯ ಭಾಷೆಗಳಲ್ಲಿ ಶೇ 50ಕ್ಕೂ ಹೆಚ್ಚು ಸಂಸ್ಕೃತದ ಶಬ್ದಗಳು ಅಡಕವಾಗಿವೆ. ಸಂಸ್ಕೃತ ಕಲಿಯುವ ವಿದ್ಯಾರ್ಥಿ ಇತರ ಭಾಷೆಗಳನ್ನು ಸುಲಭವಾಗಿ ಕಲಿಯಬಲ್ಲ. ಸಂಸ್ಕೃತ ಕೇವಲ ಅಧ್ಯಾತ್ಮದ ಭಾಷೆಯಲ್ಲ. ಅದು ವಿಜ್ಞಾನ, ತತ್ವಶಾಸ್ತ್ರದ ಭಾಷೆಯೂ ಹೌದು. ಹೀಗಾಗಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಬಹು ಮುಖ್ಯ ಎನಿಸುತ್ತದೆ.

lವಾರಾಂತ್ಯ ಸಂಸ್ಕೃತ ತರಗತಿಯ ವಿವರ ತಿಳಿಸಿ?
ತರಗತಿಗಳು ನವೆಂಬರ್ 12ರಿಂದ ಆರಂಭವಾಗಲಿವೆ. 12 ದಿನಗಳ ಕೋರ್ಸ್‌ ರೂಪಿಸಲಾಗಿದೆ. ಪ್ರತಿ ಶನಿವಾರ ಸಂಜೆ 6 ರಿಂದ 8ರವರೆಗೆ ಸಂಸ್ಕೃತ ಬೋಧನೆ ಮಾಡಲಾಗುವುದು. ಇದು ಸಂಪೂರ್ಣ ಉಚಿತ. ಆಸಕ್ತಿಯುಳ್ಳವರಿಗೆ ಸಂಸ್ಕೃತದ ಪರಿಚಯ ಮಾಡಿಸುವುದು, ಭಾಷೆಯ ಬಗ್ಗೆ ಆಸಕ್ತಿ ಮೂಡಿಸುವುದು ನಮ್ಮ ಉದ್ದೇಶ.

lಸಂಸ್ಕೃತ ಉಳಿದೀತೆ?
ಸಂಸ್ಕೃತದ ಪ್ರಾಮುಖ್ಯತೆಯನ್ನು ಜರ್ಮನಿಯಂಥ ಪಾಶ್ಚಾತ್ಯ ದೇಶಗಳು ಅರಿತಿವೆ. ಅಲ್ಲಿ ಸಂಸ್ಕೃತ ತರಗತಿಗಳು ಆರಂಭವಾಗುತ್ತಿವೆ. ಆದರೆ ತನ್ನದೇ ದೇಶದಲ್ಲಿ ಸಂಸ್ಕೃತ ಬಡವಾಗಿದೆ. ಈ ಭಾಷೆಯನ್ನು ಮಾತನಾಡುವ ಜನ ದೊಡ್ಡ ಸಂಖ್ಯೆಯಲ್ಲಿ ಇಲ್ಲದಿರುವುದೇ ಸಂಸ್ಕೃತದ ಹಿನ್ನಡೆಗೆ ಕಾರಣ.
ಸರ್ಕಾರದ ಮಟ್ಟದಲ್ಲಿ ಸಂಸ್ಕೃತದ ಬೆಳವಣಿಗೆಗೆ ಸಹಕಾರ ಬೇಕಿದೆ. ಇತರೆ ಭಾಷೆಗಳಿಗಿರುವಂತೆ ಸಂಸ್ಕೃತ ಮಾಧ್ಯಮದ ಕಲಿಕೆಯೂ ಆರಂಭವಾಗಬೇಕಿದೆ. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಸಂಸ್ಕೃತ ಕಲಿಕೆಗೆ ಸರ್ಕಾರ ಪ್ರೋತ್ಸಾಹಿಸಬೇಕು.

lನಿಮ್ಮ ಸಂಸ್ಕೃತ ಪ್ರೀತಿಯ ಬಗ್ಗೆ ತಿಳಿಸಿ?
ಶೃಂಗೇರಿಯ ರಾಜೀವ್ ಗಾಂಧಿ ಕೇಂದ್ರೀಯ ಸಂಸ್ಕೃತ ವಿದ್ಯಾಪೀಠದಲ್ಲಿ  ಸಂಸ್ಕೃತವನ್ನು ಪಠ್ಯವಾಗಿ ಅಭ್ಯಾಸ ಮಾಡಿದ್ದೇನೆ. ಸಂಸ್ಕೃತದ ಮೇಲೆ ವಿಶೇಷ ಪ್ರೀತಿ ಬರಲು ಕಾರಣವಾದದ್ದು ಗಿರಿನಗರದಲ್ಲಿರುವ  ‘ಸಂಸ್ಕೃತ ಭಾರತಿ’ ಸಂಸ್ಥೆ.
ಸಂಸ್ಕೃತ ಪಂಡಿತರಾದ ಶಂಭೂ ಕೃಷ್ಣ ಶಾಸ್ತ್ರಿಗಳು, ಡಾ.ಜನಾರ್ಧನ ಹೆಗಡೆ, ಡಾ.ವಿಶ್ವ ಅವರ ಪ್ರಭಾವ ನನ್ನ ಮೇಲೆ ಆಗಿದೆ. ಸಂಸ್ಕೃತ ಉಪನ್ಯಾಸಕಿಯಾಗಿ ಹಲವು ವರ್ಷ ಕೆಲಸ ಮಾಡಿದ್ದೇನೆ. ಮೈತ್ರಿ ಸಂಸ್ಕೃತ ಅಧ್ಯಯನ ಕೇಂದ್ರದ ವತಿಯಿಂದ 24 ವರ್ಷಗಳಿಂದಲೂ ಪತಿ ಸಂಸ್ಕೃತ ಉಪನ್ಯಾಸಕ ಗಣಪತಿ ಭಟ್‌ ಒಡಗೂಡಿ ಸಂಸ್ಕೃತದ ಪ್ರಚಾರ ಮತ್ತು ಪ್ರಸಾರದ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆ. ಸಂಸ್ಕೃತ ಭಾಷೆಯ ಪ್ರಾಮುಖ್ಯತೆ ಸಾರುವ ಮತ್ತು ಕಲಿಕೆಗೆ ಸಹಕರಿಸುವ ಹಲವು ಪುಸ್ತಕಗಳು ಮತ್ತು ಸೀಡಿಗಳನ್ನು ಹೊರ ತಂದಿದ್ದೇನೆ, ಸಂಸ್ಕೃತದ ಹಾಡುಗಳನ್ನೂ ಹಾಡುತ್ತೇನೆ.

lಸಂಸ್ಕೃತ ಕೇವಲ ಒಂದು ಜಾತಿಯ ಭಾಷೆ ಎಂಬ ಆರೋಪ ಇದೆಯಲ್ಲ...
ಇದನ್ನು ನಾನು ಒಪ್ಪುವುದಿಲ್ಲ. ಸಂಸ್ಕೃತ ಬ್ರಾಹ್ಮಣರೊಬ್ಬರ ಸ್ವತ್ತಲ್ಲ, ಅದು ಎಲ್ಲ ಭಾರತೀಯರ ಭಾಷೆ. ಈ ಹಿಂದೆಯೂ ಬ್ರಾಹ್ಮಣರು ಮಾತ್ರ ಸಂಸ್ಕೃತ ಬಳಸುತ್ತಿದ್ದರು ಎನ್ನಲು ಯಾವುದೇ ಆಧಾರ ಇಲ್ಲ. ವೇದಗಳ ಕಾಲದಲ್ಲಿ ಎಲ್ಲರೂ ಸಂಸ್ಕೃತ ಬಳಸುತ್ತಿದ್ದರು, ರಾಮಾಯಣ, ಮಹಾಭಾರತಗಳು ಸಂಸ್ಕೃತದಲ್ಲಿಯೇ ರಚನೆ ಆಗಿರುವುದನ್ನು ಗಮನಿಸಿ.
ಕಾಲಾಂತರದಲ್ಲಿ ಪೌರೋಹಿತ್ಯಕ್ಕೆ ಇಳಿದ ಬ್ರಾಹ್ಮಣರು ಸಂಸ್ಕೃತ ಶ್ಲೋಕಗಳನ್ನು ಹೇಳುತ್ತಿದ್ದರು. ಹೀಗಾಗಿ ಉಳಿದ ಜಾತಿಗಳವರು ‘ಸಂಸ್ಕೃತ ಬ್ರಾಹ್ಮಣರ ಭಾಷೆ’ ಎಂಬ ತಪ್ಪು ಕಲ್ಪನೆಯನ್ನು ಇರಿಸಿಕೊಂಡರು. ಈ ತಪ್ಪು ಕಲ್ಪನೆಯನ್ನು ಹೋಗಲಾಡಿಸಬೇಕಿದೆ. ಸಂಸ್ಕೃತ ಎಲ್ಲ ಭಾರತೀಯರ ಭಾಷೆ ಎಂಬ ಸತ್ಯವನ್ನು ಸಾರಿ ಹೇಳಬೇಕಿದೆ.

ಸಂದರ್ಶನ: ಮಂಜುನಾಥ ಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT