ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಗಮ ಸಂಗೀತದ ಕಂಪು

ಅಂದಿನಿಂದ ಇಂದಿನವರೆಗೆ...
Last Updated 6 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಸುಗಮ ಸಂಗೀತ ಪ್ರಸಾರ ಮತ್ತು ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿ, ಅದಕ್ಕೆ ರಾಜ್ಯಮಟ್ಟದ ವ್ಯಾಪ್ತಿಯನ್ನು ಗಳಿಸಿಕೊಟ್ಟಿರುವ ಸಂಸ್ಥೆ ‘ಧ್ವನಿ’. ಸುಗಮ ಸಂಗೀತ ಕ್ಷೇತ್ರದ ಎಲ್ಲಾ ಗಾಯಕ–ಗಾಯಕಿಯರನ್ನು, ಕವಿಗಳನ್ನು, ಮತ್ತು ವಾದ್ಯಗಾರರನ್ನು ಒಗ್ಗೂಡಿಸುವ ಸಿ.ಅಶ್ವಥ್ ಅವರ ಕಲ್ಪನೆಗೆ ಒತ್ತಾಸೆಯಾಗಿ ನಿಂತವರು ಮ್ಯೆಸೂರು ಅನಂತಸ್ವಾಮಿ. ಎಚ್.ಎಸ್. ವೆಂಕಟೇಶಮೂರ್ತಿ ವಿಶೇಷವಾಗಿ ರಚಿಸಿದ ‘ಧ್ವನಿ’ಯ ಧ್ಯೇಯ ಗೀತೆ ೩೫ ಮಂದಿ ನಾಡಿನ ಪ್ರಮುಖ ಗಾಯಕರು ಒಟ್ಟಾಗಿ ಹಾಡುವುದರ ಮೂಲಕ ಡಿಸೆಂಬರ್‌ 20, ೧೯೯೧ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ‘ಧ್ವನಿ’ಯ ಉದ್ಘಾಟನೆಯಾಯಿತು.

ಕೊಪ್ಪಳದಲ್ಲಿ ೧೯೯೩ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಹಾಗೆಯೇ ಅದೇ ವರ್ಷ ಮೈಸೂರಿನ ದಸರಾ ಅಂಗವಾಗಿ ಅರಮನೆಯ ಆವರಣದಲ್ಲಿ ನಡೆದ ಸಂಗೀತೋತ್ಸವದಲ್ಲಿ ಮೊಟ್ಟ ಮೊದಲ ಬಾರಿಗೆ ಸುಗಮ ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸಿದ ಹೆಗ್ಗಳಿಕೆ ‘ಧ್ವನಿ’ ಸಂಸ್ಥೆಯದು.

ಡಿಸೆಂಬರ್ 30, ೧೯೯೯ರಂದು ಕುವೆಂಪು ಜನ್ಮದಿನೋತ್ಸವದ ಅಂಗವಾಗಿ ನಗರದ ನ್ಯಾಷನಲ್ ಕಾಲೇಜು ಮ್ಯೆದಾನದಲ್ಲಿ ಹಮ್ಮಿಕೊಂಡಿದ್ದ ‘ಮನುಜ ಮತ- ವಿಶ್ವಪಥ’ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತರಬೇತಿ ಪಡೆದು ಬಂದಿದ್ದ ೧೦೦೦ ಗಾಯಕರಿಂದ ಪ್ರಸ್ತುತ ಪಡಿಸಿದ ಕ್ರಾಂತಿಕಾರಿ ಗೀತೆಗಳ ಕಾರ್ಯಕ್ರಮ ಇತಿಹಾಸ ಸೃಷ್ಟಿಮಾಡಿತು. ಸುಮಾರು ಒಂದು ದಶಕ ರಾಜ್ಯದ ಶಿವಮೊಗ್ಗ, ದಾವಣಗೆರೆ, ಬೆಳಗಾವಿ, ಬಿಜಾಪುರ, ಗುಲ್ಬರ್ಗ, ತುಮಕೂರು, ಮಂಡ್ಯ, ಮ್ಯೆಸೂರು, ಹಂಪಿ, ಹಳೇಬೀಡು, ನಂಜನಗೂಡು, ಹಾಸನ, ಪಟ್ಟದಕಲ್ಲು, ನವರಸಪುರ ಮುಂತಾದ ಸ್ಥಳಗಳಲ್ಲಿ ಕವಿಗಳು, ಕಲಾವಿದರ ಜೊತೆ ಪ್ರವಾಸ ಮಾಡಿ ಸುಗಮ ಸಂಗೀತದ ಸವಿಯನ್ನು ನಾಡಿನ ಮೂಲೆ ಮೂಲೆಗೂ ಪರಿಚಯಿಸಿದೆ.

ಸುಗಮ ಸಂಗೀತದ ಅಭಿವೃದ್ಧಿಗೆ ಸಮೂಹ ಶಕ್ತಿಯ ಸಕ್ಷಮವಾದ ಧ್ವನಿ ಅನಿವಾರ್ಯ ಎನ್ನುವ ಸಂದರ್ಭದಲ್ಲಿ ಮೂಡಿಬಂದದ್ದೆ ‘ಕರ್ನಾಟಕ ಸುಗಮ ಸಂಗೀತ ಪರಿಷತ್ತು’. ಸುಗಮ ಸಂಗೀತ ಕ್ಷೇತ್ರದ ಸಮಸ್ತರನ್ನು ಏಪ್ರಿಲ್ 20, -೨೦೦೩ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪಂಪಸಭಾಂಗಣದಲ್ಲಿ ಪರಿಷತ್ತಿನ ಪ್ರವರ್ತಕರ ಮೊದಲ ಸಭೆ ನಡೆಸಲಾಯಿತು.

ಜಿ.ಎಸ್.ಶಿವರುದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೊದಲಿಗೆ ಸುಗಮ ಸಂಗೀತ ಪರಿಷತ್ತಿನ ಅಗತ್ಯದ ಬಗ್ಗೆ ಪ್ರಸ್ತಾವನೆ ಮಂಡಿಸುವ ಜವಾಬ್ದಾರಿ ನನ್ನದಾಗಿತ್ತು. ಸುಗಮ ಸಂಗೀತ ಅಂದು ಪಡೆದುಕೊಳ್ಳುತ್ತಿದ್ದ ಪ್ರಾಮುಖ್ಯ, ಜನಪ್ರಿಯತೆ ಹಿನ್ನಲೆಯಲ್ಲಿ ಹಾಗೂ ಅಂದಿನ ಪರಿಸ್ಥಿತಿಯಲ್ಲಿ ಸುಗಮ ಸಂಗೀತದ ಅಭಿವೃದ್ಧಿಗೆ ಸಮೂಹ ಶಕ್ತಿಯ ಸಕ್ಷಮವಾದ ಧ್ವನಿಯ ಅನಿವಾರ್ಯವನ್ನು ಮಂಡಿಸಲಾಯಿತು. ಬಳಿಕ ಈ ಸಂಘಟನೆಗೆ ‘ಕರ್ನಾಟಕ ಸುಗಮ ಸಂಗೀತ ಪರಿಷತ್ತು’ ಎಂದು ನಾಮಕರಣ ಮಾಡಲಾಯಿತು.

ನಂತರ ಸಭೆಯಲ್ಲಿ ಮೂಡಿಬಂದ ಅಭಿಪ್ರಾಯಗಳ ಹಿನ್ನಲೆಯಲ್ಲಿ ಸಭಾಧ್ಯಕ್ಷರಾದ ಜಿ.ಎಸ್.ಎಸ್.ಅವರನ್ನು ನಿರ್ಣಯಗಳನ್ನು ಮಂಡಿಸುವಂತೆ ಕೋರಲಾಯಿತು. ಸುಗಮ ಸಂಗೀತದ ಅಭಿವೃದ್ಧಿಗೆ ಪೂರಕವಾದ ಮೂರು ನಿರ್ಣಯಗಳನ್ನು ಅವರು ಬರೆದುಕೊಟ್ಟರು. ಪರಿಷತ್ತು ಗರಿಗೆದರಿದ್ದೇ ಆಗ. ನನ್ನ ಜೊತೆಗೆ ಪ್ರಧಾನ ಸಂಚಾಲಕರಾಗಿ ಎಸ್.ಬಾಲಿ, ಎಚ್.ಫಲ್ಗುಣ, ಸಂಘಟನಾ ಕಾರ್ಯದರ್ಶಿಯಾಗಿ ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ಸದಸ್ಯರಾಗಿ  ರೋಹಿಣಿ ಮೋಹನ್ ಮತ್ತು ರಾಜು ಅನಂತಸ್ವಾಮಿ ಅವರನ್ನು ಆಗ ಆಯ್ಕೆ ಮಾಡಲಾಯಿತು.

ಜೊತೆಗೆ ಜಿ.ಎಸ್.ಎಸ್., ಎಚ್.ಎಸ್.ವಿ, ಸಿ.ಅಶ್ವಥ್, ಶಿವಮೊಗ್ಗ ಸುಬ್ಬಣ್ಣ ಮತ್ತು ಶ್ರೀನಿವಾಸ್ ಜಿ.ಕಪ್ಪಣ್ಣ ಅವರನ್ನು ಸಲಹಾ ಸಮಿತಿಗೆ ಆಯ್ಕೆ ಮಾಡಲಾಯಿತು. ೧೯೮೭ರಲ್ಲಿ ‘ಕರ್ನಾಟಕ ಸುಗಮ ಸಂಗೀತ ಪರಿಷತ್ತು’ ಉದಯವಾದದ್ದು ಹೀಗೆ. ಪರಿಷತ್ತು ಅಸ್ತಿತ್ವಕ್ಕೆ ಬಂದ ತಾರುಣ್ಯದಲ್ಲಿ ಇಟ್ಟ ಮೊದಲ ಹೆಜ್ಜೆ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನ. ಮಂಡ್ಯದಲ್ಲಿ ೨೦೦೩ರ ಮೇ ೧೦ ಮತ್ತು ೧೧ರಂದು ನಡೆದ ಈ ಸಮ್ಮೇಳನಕ್ಕೆ ಶುಭ ಹಾರೈಸಿದವರು ಕವಿ ಕೆ.ಎಸ್. ನರಸಿಂಹಸ್ವಾಮಿ. ಜಿ.ಎಸ್.ಎಸ್, ಕಣವಿಯವರನ್ನೂ ಒಳಗೊಂಡಂತೆ ನಾಡಿನ ಪ್ರಸಿದ್ಧ ಕವಿಗಳು, ಸುಗಮ ಸಂಗೀತ ಕಲಾವಿದರು ಅತ್ಯಂತ ಸಂಭ್ರಮದಿಂದ ಆಚರಿಸಿದ ಈ ಗೀತೋತ್ಸವ ಅಪೂರ್ವ ಯಶಸ್ಸನ್ನು ಕಂಡಿತು.

ಎರಡನೇ ಸಮ್ಮೇಳನರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರ ಅಧ್ಯಕ್ಷತೆ ಹಾಗೂ ಕವಿ ಚನ್ನವೀರಕಣವಿಯವರ ಉದ್ಘಾಟನೆಯೊಂದಿಗೆ ಶಿವಮೊಗ್ಗದಲ್ಲಿ ನಡೆಯಿತು. ೩ನೇ ಸಮ್ಮೇಳನ ಚಿಕ್ಕಮಗಳೂರಿನಲ್ಲಿ ನಡೆಯಿತು. ಪ್ರಥಮ ಬಾರಿಗೆ ಗಾಯಕಿ ಎಚ್.ಆರ್. ಲೀಲಾವತಿ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ೪ನೇ ಸಮ್ಮೇಳನ ಬಳ್ಳಾರಿಯಲ್ಲಿ. ಗಾಯಕ ಸಂಯೋಜಕ ಸಿ. ಅಶ್ವಥ್ ಅವರು ಸಮ್ಮೇಳನಾಧ್ಯಕ್ಷರಾಗಿದ್ದರು. ೫ನೇ ಸಮ್ಮೇಳನ ನಡೆದದ್ದು ಹಾಸನದಲ್ಲಿ. ಗಾಯಕ ಎಚ್.ಕೆ. ನಾರಾಯಣ ಅವರು ಸಮ್ಮೇಳನಾಧ್ಯಕ್ಷರಾಗಿದ್ದರು. ಬಳಿಕ ೨೦೦೮ರಲ್ಲಿ ಮಂಗಳೂರಿನಲ್ಲಿ ೬ನೇ ಸಮ್ಮೇಳನವನ್ನು ಹಮ್ಮಿಕೊಳ್ಳಲಾಯಿತು.

ಗಾಯಕಿ ಬಿ.ಕೆ. ಸುಮಿತ್ರ ಸಮ್ಮೇಳನಾಧ್ಯಕ್ಷರಾಗಿದ್ದರು. ೨೦೦೯ರಲ್ಲಿ ೭ ನೇ ಸಮ್ಮೇಳನ ನಡೆದಿದ್ದು ತುಮಕೂರಿನಲ್ಲಿ. ಗಾಯಕ ಶಿವಮೊಗ್ಗ ಸುಬ್ಬಣ್ಣ ಸಮ್ಮೇಳನಾಧ್ಯಕ್ಷರು. ಮೈಸೂರಿನಲ್ಲಿ ನಡೆದ ೮ನೇ ಸಮ್ಮೇಳನಾಧ್ಯಕ್ಷರು ಹಿರಿಯ ಗಾಯಕಿ ಶ್ಯಾಮಲಾ ಜಾಗೀರದಾರ್. ಜೋಡಿ ಅಶ್ವಗಳ ಸಾರೋಟಿನಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆದಿದ್ದು ಈ ಸಮ್ಮೇಳನದ ಒಂದು ವೈಶಿಷ್ಟ್ಯ. ೯ನೇ ಸಮ್ಮೇಳನ ದಾವಣಗೆರೆಯಲ್ಲಿ ೨೦೧1ರಲ್ಲಿ ನಡೆಯಿತು. ವಿದುಷಿ ಡಾ.ಶಾಮಲಾಜಿ ಜಿ ಭಾವೆಯವರು ಸಮ್ಮೇಳನಾಧ್ಯರಾಗಿ ಈ ಸಮ್ಮೇಳನಕ್ಕೆ ಒಂದು ಮೆರಗು ತಂದು ಕೊಟ್ಟರು. ಗೀತೋತ್ಸವ-–೨೦೧೩  ನಡೆದಿದ್ದು ಸಾಹಿತ್ಯ- ಸಂಗೀತದ ತವರಾದ ಧಾರವಾಡದಲ್ಲಿ. ಅನುರಾಧಾ ಧಾರೇಶ್ವರ ಅವರು ಈ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಶಿರೂರು ರಂಗಮಂದಿರ ಹಾಗೂ ಕರ್ನಾಟಕ ಕಾಲೇಜಿನ ಮೈದಾನದಲ್ಲಿ ಜರುಗಿದ ಗೀತಸಂಗೀತ ಕಾರ್ಯಕ್ರಮಗಳು ಸಹಸ್ರಾರು ಜನರನ್ನು ಆಕರ್ಷಿಸಿದ್ದು ಒಂದು ವೈಶಿಷ್ಟ್ಯ.

ಈ ಎಲ್ಲಾ ಸಮ್ಮೇಳನಗಳು ನಾಡಿನ ಹಿರಿಯ ಕಲಾವಿದರ ಜೊತೆಗೆ ನೂರಾರು ಯುವ ಪ್ರತಿಭೆಗಳು ಹಾಗೂ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆಯಾಗಿವೆ. ನಿರಂತರವಾಗಿ ರಾಜ್ಯದ ನಾನಾ ಭಾಗಗಳಲ್ಲಿ ತರಬೇತಿ ಶಿಬಿರಗಳು, ವಿಚಾರ ಸಂಕಿರಣಗಳು ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಕಲಾವಿದರ ಸಂಭಾವನೆ ಹೆಚ್ಚಿಸುವ ನಿಟ್ಟಿನಲ್ಲಿ, ರಾಜ್ಯೋತ್ಸವ ಪ್ರಶಸ್ತಿ ನೀಡುವಿಕೆಯಲ್ಲಿ ನಡೆದ ತಾರತಮ್ಯಗಳ ಬಗ್ಗೆ ಪರಿಷತ್ತು ನಡೆಸಿರುವ ಹೋರಾಟಗಳು ದಾಖಲಾರ್ಹ.

ಇದೀಗ ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ೧೧ ನೇ ಸುಗಮ ಸಂಗೀತ ಸಮ್ಮೇಳನವನ್ನು ಇದೇ ಫೆಬ್ರುವರಿ ೭,೮ ಮತ್ತು ೯ರಂದು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಕವಿಗಳು, ಸುಗಮ ಸಂಗೀತ ಕ್ಷೇತ್ರದ ಖ್ಯಾತನಾಮರು, ಕಿರಿಯ ಕಲಾವಿದರು ಈ ಮೂರು ದಿನಗಳ ಸಮ್ಮೇಳನದಲ್ಲಿ ರಾಜಧಾನಿಯ ಶ್ರೋತೃಗಳಿಗೆ ಕಾವ್ಯಗಾಯನದ ರಸದೌತಣ ಉಣಬಡಿಸಲಿದ್ದಾರೆ.

ಸುಗಮ ಸಂಗೀತ ಸಮ್ಮೇಳನದಲ್ಲಿ ಇಂದು
ಕರ್ನಾಟಕ ಸುಗಮ ಸಂಗೀತ ಪರಿಷತ್ತು: ಜಿ.ಎಸ್‌.ಎಸ್‌.ವೇದಿಕೆ, ನ್ಯಾಷನಲ್‌್ ಕಾಲೇಜು ಮೈದಾನ, ಬಸವನಗುಡಿ. ‘ಯಾವುದೀ ಪ್ರವಾಹ: ಗೀತೋತ್ಸವ 2014’ 11ನೇ ಸುಗಮ ಸಂಗೀತ ಸಮ್ಮೇಳನ ಉದ್ಘಾಟನೆ. ಅಧ್ಯಕ್ಷತೆ: ಗಾಯಕಿ ರತ್ನಮಾಲಾ ಪ್ರಕಾಶ್‌. ಬಸವನಗುಡಿ ದೊಡ್ಡಗಣೇಶ ದೇವಸ್ಥಾನದಿಂದ ಮೆರವಣಿಗೆ ಉದ್ಘಾಟನೆ: ಮೇಯರ್‌ ಬಿ.ಎಸ್‌. ಸತ್ಯನಾರಾಯಣ. ಬೆಳಿಗ್ಗೆ 9.

ಕಾರ್ಯಕ್ರಮ ಉದ್ಘಾಟನೆ: ಮುಖ್ಯಮಂತ್ರಿ ಸಿದ್ದರಾಮಯ್ಯ. ಪ್ರಸ್ತಾವನೆ: ವೈ.ಕೆ.ಮುದ್ದುಕೃಷ್ಣ. ಗೌರವ ನುಡಿ: ಬಿ.ಆರ್‌. ಲಕ್ಷ್ಮಣರಾವ್‌. ಗೀತಸಂಗಮ ಬಿಡುಗಡೆ ಮತ್ತು ಸಮ್ಮೇಳನಾಧ್ಯಕ್ಷರಿಗೆ ಗೌರವಾರ್ಪಣೆ: ಲೇಖಕಿ ವೈದೇಹಿ. ಸಮ್ಮೇಳನಾಧ್ಯಕ್ಷರ ಭಾಷಣ: ರತ್ನಮಾಲಾ ಪ್ರಕಾಶ್‌. ಉಪಸ್ಥಿತಿ: ಕವಿ ಚನ್ನವೀರ ಕಣವಿ. ಅತಿಥಿ: ನಟಿ ತಾರಾ ಅನುರಾಧ, ಶಾಸಕ ಆರ್‌.ವಿ. ದೇವರಾಜ್‌, ಕನ್ನಡ ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಕೆ.ಆರ್.ನಿರಂಜನ್‌. ಬೆಳಿಗ್ಗೆ 10ರಿಂದ 11.30.

ಮಧ್ಯಾಹ್ನ 12.30ರಿಂದ 1 ನವಶೋಧ, 1ರಿಂದ 1.30 ಸಮೂಹ ಗಾಯನ, ಸಂಜೆ 4ರಿಂದ ಕವಿಗೋಷ್ಠಿ, 4ರಿಂದ 5 ಮರೆಯಲಾಗದ ಮಾಧುರ್ಯ, 5ರಿಂದ6 ಯಾವುದೀ ಪ್ರವಾಹ ರಾಷ್ಟ್ರಕವಿ ಜಿ.ಎಸ್‌ಎಸ್‌, ಅವರ ನೆನಪು ಡಾ.ಎಚ್‌.ಎಸ್‌. ವೆಂಕಟೇಶ ಮೂರ್ತಿ ಅವರಿಂದ. ರಾತ್ರಿ 8ರಿಂದ 9.30. ಗೀತ ಸಂಗೀತ ಹಿರಿಯ ಗಾಯಕರಿಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT