ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬದ ಸೀರೆ

Last Updated 13 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಹೊಸ್ತಿಲ ಮುಂದೆ ರಂಗೋಲಿ, ಮಾವಿನೆಲೆಯ ತೋರಣ, ದೇವರಮನೆಯಲ್ಲಿ ಹೂ, ಕರ್ಪೂರ, ಊದುಕಡ್ಡಿ ಸುವಾಸನೆ, ಬೆಳಗ್ಗಿನಿಂದ ರಾತ್ರಿವರೆಗೂ ಬಗೆ ಬಗೆ ಊಟೋಪಹಾರದ ಘಮ... ಇಷ್ಟೇನಾ? ಊಹೂಂ... ಯುಗಾದಿ ಹಬ್ಬ ‘ಸಂಪನ್ನ’ವಾಗಬೇಕಾದರೆ ಒಡವೆ, ಹೂವು, ಸಿಂಗಾರ ಮಾಡಿಕೊಂಡ ಹೆಣ್ಣುಮಕ್ಕಳು ಸರ ಬರ ಅಂತ ಸೀರೆ ಸದ್ದು ಮಾಡಿಕೊಂಡು ಮನೆ ತುಂಬಾ ಓಡಾಡುತ್ತಿರಬೇಕು!

ಹೌದಲ್ಲ? ಹೆಣ್ಣು ಮಕ್ಕಳು ಸಿಂಗಾರಗೊಳ್ಳುವಲ್ಲಿಂದಲೇ ಹಬ್ಬಕ್ಕೆ ನಾಂದಿ. ಯುಗಾದಿ ಹಬ್ಬದ ಖದರು ಹೆಚ್ಚಲು ರೇಷ್ಮೆ ಸೀರೆ ಬೇಕೇಬೇಕು. ಸೀರೆ ಖರೀದಿಸುವುದೆಂದರೆ ಮನೆ ಖರೀದಿಸುವಷ್ಟೇ ಲೆಕ್ಕಾಚಾರ, ಚಿಂತನ ಮಂಥನ. ದರ, ಬಣ್ಣ, ಅಂಚು ಮತ್ತು ಸೆರಗು ಹೇಗಿರಬೇಕು, ಯಾವ ಬಗೆಯದು, ಮಳಿಗೆ ಯಾವುದು ಹೀಗೆ ಹತ್ತಾರು ಚಿಂತೆಗಳು! ಹಬ್ಬದ ವೇಳೆ ಇಂತಹ ಚಿಂತೆಗಳಿಗೆ ಎಡೆ ಮಾಡಿಕೊಡದೆ ಯಾವುದಾದರೂ ಬ್ರ್ಯಾಂಡೆಡ್‌ ಸೀರೆ ಮಳಿಗೆಗೆ ಹೋಗಿ ಅಲ್ಲಿನ ಸಂಗ್ರಹಗಳನ್ನು ಪರಿಶೀಲಿಸಿದರೆ ನಿಮ್ಮ ಮನಸ್ಸಿನಲ್ಲಿರುವ ಸೀರೆ ಸಿಗಬಹುದು!

ಯುಗಾದಿ ಹಬ್ಬಕ್ಕಂತೂ ರೇಷ್ಮೆ ಸೀರೆಯನ್ನೇ ಉಡಬೇಕು ಎಂಬುದು ಹೆಣ್ಣು ಮಕ್ಕಳೇ ಮಾಡಿಕೊಂಡಿರುವ ಅಘೋಷಿತ ಸೂತ್ರ. ಹಬ್ಬಕ್ಕಾಗಿಯೇ ನಗರದ ಹತ್ತಾರು ಮಳಿಗೆಗಳಲ್ಲಿ ರಿಯಾಯಿತಿ ದರ ಮತ್ತು ಹೊಸ ಬಗೆಯ ಸಂಗ್ರಹಗಳು ಬಂದಿರುವಾಗ ಮನಮೆಚ್ಚುವ ಸೀರೆ ಖರೀದಿ ಇನ್ನಷ್ಟು ಸುಲಭವಾಗಿದೆ.

‘ನಮ್ಮ ಮಳಿಗೆಗಳಿಗೆ ಕೆಳ ಮಧ್ಯಮ, ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಗ್ರಾಹಕರೇ ಹೆಚ್ಚಾಗಿ ಬರುತ್ತಾರೆ. ಪಕ್ಕಾ ರೇಷ್ಮೆ ಸೀರೆ ಗುಣಮಟ್ಟದ ಕಾರಣದಿಂದಾಗಿ ದುಬಾರಿಯಾಗುವುದು ಸಹಜ. ಹಾಗಾಗಿ ಎಲ್ಲಾ ವರ್ಗದ ಗ್ರಾಹಕರಿಗೂ ಕೈಗೆಟಕುವ ಬೆಲೆಯ ಸೀರೆಗಳು ನಮ್ಮ ಮಳಿಗೆಯಲ್ಲಿವೆ. ಯುಗಾದಿ, ವರ್ಷದ ಮೊದಲ ಹಬ್ಬವಾದ್ದರಿಂದ ಹೆಚ್ಚಿನ ಹೆಣ್ಣು ಮಕ್ಕಳು ರೇಷ್ಮೆ ಸೀರೆಗೇ ಆದ್ಯತೆ ನೀಡುತ್ತಾರೆ’ ಎಂಬುದು, ಸುದರ್ಶನ್‌ ಸಿಲ್ಕ್ಸ್‌ನ ಮಾಲೀಕರಾದ ಶ್ರೀನಿವಾಸ ಜೆ.ಆರ್. ಅವರ ಅನುಭವದ ಮಾತು.

‘ಬರ್ಮಾ, ಕಾಂಜೀವರಂ, ಆರಣಿ, ಸೇಲಂ ಸೀರೆಗಳು ಹಲವು ಬಣ್ಣಗಳಲ್ಲಿ ಲಭ್ಯವಿರುವ ಕಾರಣ ಎಲ್ಲಾ ವರ್ಗದ ಹೆಣ್ಣು ಮಕ್ಕಳಿಗೂ ಮೆಚ್ಚುಗೆಯಾಗುತ್ತವೆ. ಶೇಷಾದ್ರಿಪುರ, ಮಲ್ಲೇಶ್ವರ ಮತ್ತು ಚಿಕ್ಕಪೇಟೆಯಲ್ಲಿರುವ ‘ಸುದರ್ಶನ್‌ ಸಿಲ್ಕ್ಸ್‌’ ಮಳಿಗೆಗಳಲ್ಲಿ ಯುಗಾದಿಗಾಗಿ ಹೊಸ ಸಂಗ್ರಹಗಳನ್ನು ಪರಿಚಯಿಸಿದ್ದೇವೆ. ಹಸಿರು ಬಣ್ಣವನ್ನು ಥೀಮ್‌ ಆಗಿಟ್ಟುಕೊಂಡು ವಿನ್ಯಾಸ ಮಾಡಿಸಿರುವ ಸೀರೆಗಳಿವು. ₹5,000ದಿಂದ ₹9,000ದವರೆಗಿನ ಸೀರೆಗಳಿಗೆ ಈಗ ಹೆಚ್ಚಿನ ಬೇಡಿಕೆ ಇರುತ್ತದೆ’ ಎಂದು ಶ್ರೀನಿವಾಸ ಅವರು ವಿವರಿಸುತ್ತಾರೆ.

‘ದೀಪಂ ಸಿಲ್ಕ್ಸ್‌’ನ ಮಹಾತ್ಮ ಗಾಂಧಿ ರಸ್ತೆಯ ಮಳಿಗೆಯಲ್ಲಿ ಪ್ರತಿ ವರ್ಷದಂತೆ ಯುಗಾದಿ ಹಿನ್ನೆಲೆಯ ರಿಯಾಯಿತಿ ದರದ ಮಾರಾಟ ಮಾ.24ರವರೆಗೂ ನಡೆಯಲಿದೆ. ‘ವಿಜಯಲಕ್ಚ್ಮಿ ಸಿಲ್ಕ್ಸ್‌’, ಶಾಂತಲಾ ಸಿಲ್ಕ್‌ ಹೌಸ್‌, ಕಲಾನಿಕೇತನ್‌, ಕಳಾಮಂದಿರ್‌, ಸೌತ್‌ ಇಂಡಿಯಾ ಶಾಪಿಂಗ್‌ ಮಾಲ್‌, ಮೆಬಾಜ್‌, ಕಳಾಂಜಲಿ ಮಳಿಗೆಗಳಲ್ಲೂ ಯುಗಾದಿಗಾಗಿಯೇ ಬಂದಿರುವ ಭರ್ಜರಿ ಸಂಗ್ರಹಗಳಿವೆ. ‘ವಿಜಯಲಕ್ಷ್ಮಿ ಸಿಲ್ಕ್ಸ್‌’ನಲ್ಲಿ ಪ್ರತಿ ಯುಗಾದಿಯಂತೆ ಈ ಬಾರಿಯೂ ಶೇ 40ರಷ್ಟು ರಿಯಾಯಿತಿ ದರ ಪ್ರಕಟಿಸಲಾಗಿದೆ.

‘ಕಳಾನಿಕೇತನ್‌’ನಲ್ಲಿ ಯಾವುದೇ ಬೆಲೆಯ ಸೀರೆ ಖರೀದಿಸಿದರೆ ಅದೇ ಬೆಲೆಯ ಮತ್ತೊಂದು ಸೀರೆ ಉಚಿತವಾಗಿ ಪಡೆಯುವ ಅವಕಾಶ ನೀಡಲಾಗಿದೆ. ₹195ರಿಂದ ಆರಂಭಿಸಿ ₹1ಲಕ್ಷದವರೆಗಿನ ಸೀರೆಗಳೂ ಇಲ್ಲಿ ಸಿಗುತ್ತವೆ. ಜಯನಗರ 4ನೇ ಬ್ಲಾಕ್‌ ಮತ್ತು ಮಲ್ಲೇಶ್ವರದ ಮಾರ್ಗೊಸಾ ರಸ್ತೆಯಲ್ಲಿರುವ ಮಳಿಗೆಗಳಲ್ಲಿ ಈ ಕೊಡುಗೆಗಳು ಲಭ್ಯ.

‘ಕಳಾಮಂದಿರ್’ನಲ್ಲಿ ರೇಷ್ಮೆ ಸೀರೆಯಷ್ಟೇ ಅಲ್ಲದೆ ಫ್ಯಾನ್ಸಿ ಸೀರೆಗಳ ಬೃಹತ್‌ ಸಂಗ್ರಹವಿದೆ. ಪ್ರತಿ ಖರೀದಿಯಲ್ಲೂ ಶೇ 20ರಿಂದ 30ರಷ್ಟು ರಿಯಾಯಿತಿಯೂ ಅನ್ವಯವಾಗುತ್ತದೆ. ಜಯನಗರ ಮತ್ತು ಮಾರತ್‌ಹಳ್ಳಿಯ ಮಳಿಗೆಗಳಿಗೆ ಭೇಟಿ ನೀಡಿದರೆ ನಿಮ್ಮ ಮನಸ್ಸಿಗೊಪ್ಪುವ ಸೀರೆಯನ್ನು ಆರಿಸಿಕೊಳ್ಳಬಹುದು.

ಅಪ್ಪಟ ಕಂಚಿ ಸೀರೆಗಳ ರಾಯಭಾರಿಗಳೆಂದೇ ಗುರುತಿಸಿಕೊಳ್ಳುವ ‘ವರಮಹಾಲಕ್ಷ್ಮಿ ಸಿಲ್ಕ್ಸ್‌’ನಲ್ಲಿ ಕಾಂಜೀವರಂ, ಆರಣಿ, ಬನಾರಸ್‌, ಉಪ್ಪಾಡ, ಕೈಮಗ್ಗ, ಡಿಸೈನರ್‌ ಮತ್ತು ಅಪ್ಪಟ ಜರಿ ಸೀರೆಗಳು ಸಿಗುತ್ತವೆ. ಸೀರೆ ಖರೀದಿಸಿ ದುಡ್ಡು ತೆತ್ತು ಹೊರಬರುವುದಕ್ಕೂ ಮೊದಲು ಬೃಹತ್‌ ದೇವಿ ವಿಗ್ರಹದ ಮುಂದೆ ಅರ್ಚಕರು ಪೂಜೆ ಮಾಡಿ ಪ್ರಾರ್ಥಿಸಿ ಕೊಡುವುದು ಇಲ್ಲಿನ ವಿಶೇಷ.

**

ಸೆಲೆಬ್ರಿಟಿಗಳ ಮೆಚ್ಚಿನ ‘ನೀರೂಸ್‌’

ಹೈದರಾಬಾದ್‌ ಮೂಲದ ‘ನೀರೂಸ್‌’ ಬ್ರ್ಯಾಂಡ್‌ ಯುಗಾದಿಗಾಗಿ ವಿಶೇಷ ವಿನ್ಯಾಸಗಳನ್ನು ಪರಿಚಯಿಸಿದೆ. ಬನಾರಸ್‌ ಸೀರೆಗಳ ಟ್ರೆಂಡ್‌ ಮತ್ತೆ ಹೆಣ್ಣು ಮಕ್ಕಳ ಮನಗೆಲ್ಲುತ್ತಿದೆ. ಯುಗಾದಿಯ ಸಂಗ್ರಹದಲ್ಲಿ ಬನಾರಸ್‌ನ ವೈವಿಧ್ಯಮಯ ಸೀರೆಗಳು ಇವೆ. ಪೋಚಂಪಲ್ಲಿ, ಕಾಂಜೀವರಂ, ಉಪ್ಪಾಡ, ಕೊಯಮತ್ತೂರು ಸಿಲ್ಕ್‌ ಸೇರಿದಂತೆ ಹಲವು ಬಗೆಯ ಸೀರೆಗಳಿವೆ. ‘ಕೈಗೆಟಕುವ ದರದಲ್ಲಿ ಫ್ಯಾಷನ್‌ನ ಮಾರಾಟ’ ಎಂಬುದು ನಮ್ಮ ಬ್ರ್ಯಾಂಡ್‌ನ ಧ್ಯೇಯವಾಕ್ಯ. ಮಗ್ಗಗಳಲ್ಲಿ ನೇಕಾರರ ಮೂಲಕ ಪ್ರತಿ ಸೀರೆಯನ್ನು ನೇಯ್ಗೆ ಮಾಡಿಸುವಾಗಲೂ ನಮ್ಮ ಈ ಧ್ಯೇಯವನ್ನು ಸಾಕಾರಗೊಳಿಸುತ್ತೇವೆ’ ಎಂದು, ‘ನೀರೂಸ್‌’ನ ಮಾಲೀಕ ಅವನೀಶ್‌  ಕುಮಾರ್‌ ಹೇಳುತ್ತಾರೆ.

‘ನೀರೂಸ್‌’ ವಿಶಿಷ್ಟ ವಿನ್ಯಾಸದ ಸೀರೆಗಳಿಗೆ ಹೆಸರಾದ ಬ್ರ್ಯಾಂಡ್. ಇಲ್ಲಿ ರೇಷ್ಮೆ ಸೀರೆಗಳ ಆರಂಭಿಕ ದರ ₹4ಸಾವಿರ. ಜಯನಗರದಲ್ಲಿ ಎರಡು, ಇಂದಿರಾನಗರ 100 ಅಡಿ ರಸ್ತೆ, ವೈಟ್‌ಫೀಲ್ಡ್‌ನ ವಿ.ಆರ್. ಮಾಲ್ ಮತ್ತು ಫೀನಿಕ್ಸ್‌ ಮಾಲ್‌ನಲ್ಲಿ ‘ನೀರೂಸ್‌’ ಮಳಿಗೆಗಳಿವೆ. ಹೈದರಾಬಾದ್‌ನ ಮುಖ್ಯ ಮಳಿಗೆಯಲ್ಲಿ ನೇಕಾರರು ರೇಷ್ಮೆ ಸೀರೆ ನೇಯುವುದನ್ನು ಗ್ರಾಹಕರು ನೋಡಬಹುದು. ಇಲ್ಲಿ ತಮಗೆ ಬೇಕಾದ ವಿನ್ಯಾಸ ನೀಡಿದರೆ ತಮ್ಮ ಕನಸಿನ ಸೀರೆಯನ್ನು ತಮ್ಮದಾಗಿಸಿಕೊಳ್ಳುವ ‘ಕಸ್ಟಮೈಸ್ಡ್ ಸರ್ವಿಸ್‌’ ಕೂಡಾ ಲಭ್ಯವಿದೆ’ ಎಂದು, ಇದೇ ಬ್ರ್ಯಾಂಡ್‌ನ ಮಾರ್ಕೆಟಿಂಗ್‌ ಮುಖ್ಯಸ್ಥ ಅಸೀಂ ಖಾನ್‌ ಮಾಹಿತಿ ನೀಡುತ್ತಾರೆ.

ಸೆಲೆಬ್ರಿಟಿಗಳ ನೆಚ್ಚಿನ ಈ ಬ್ರ್ಯಾಂಡ್‌ಗೆ ಬಾಲಿವುಡ್‌ ನಟಿ ಸೋನಂ ಕಪೂರ್‌ ಪ್ರಸ್ತುತ, ‘ನೀರೂಸ್‌’ನ ರಾಯಭಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT