ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂಸ್ತಾನಿ ಗಾಯನಕ್ಕೊಂದು ಸಂಗೀತ ಅಕಾಡೆಮಿ

Last Updated 25 ಏಪ್ರಿಲ್ 2018, 5:44 IST
ಅಕ್ಷರ ಗಾತ್ರ

ರವಾಡದಲ್ಲಿ ಸಂಗೀತ ಕಲಿಕಾಸಕ್ತರಿಗೇನೂ ಬರವಿಲ್ಲ. ಕಲ್ಲೊಂದನ್ನು ಎಸೆದರೆ ಕವಿಗಳ ಮನೆಯ ಮೇಲೆ ಬೀಳುತ್ತದೆ ಎಂಬ ಹಳೇ ಗಾದೆ ಮಾತನ್ನು ವಿಸ್ತರಿಸಿ ಸಂಗೀತ ಕಲಾವಿದರ ಮನೆ ಮೇಲೂ ಬೀಳುತ್ತದೆ ಎನ್ನಬಹುದು.

ಸಂಗೀತವನ್ನೇ ಉಸಿರಾಗಿಸಿಕೊಂಡು ಧ್ಯಾನಿಸುವವರು ಹಲವು ಮಂದಿ. ತಮ್ಮ ಜ್ಞಾನವನ್ನು ಕಿರಿಯರಿಗೆ ಹಂಚಬೇಕು ಎಂಬ ಉಮೇದಿನವರೂ ಹಲವು ಜನ ಇದ್ದಾರೆ. ಆ ಹುಮ್ಮಸ್ಸಿನಲ್ಲಿ ಆರಂಭವಾಗಿದ್ದು ಡಾ. ನಂದಾ ಪಾಟೀಲ ಸಂಗೀತ ಅಕಾಡೆಮಿ.

ಕೆಸಿಡಿ ಕಾಲೇಜಿನ ಸಂಗೀತ ವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿರುವ ನಂದಾ ಹಾಗೂ ಅವರ ಪತಿ, ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಡಾ. ಮಲ್ಲಿಕಾರ್ಜುನ ಪಾಟೀಲ ಅವರ ಆಸಕ್ತಿಯ ಫಲವಾಗಿ ಸಂಗೀತ ಅಕಾಡೆಮಿಯನ್ನು ಆರಂಭಿಸಲಾಗಿದ್ದು, ನುರಿತ ಶಿಕ್ಷಕಿಯರು ಅಕಾಡೆಮಿಯಲ್ಲಿ ಸಂಗೀತ ಕಲಿಕೆಗಾಗಿ ಸೇರಿರುವ ವಿದ್ಯಾರ್ಥಿಗಳು ಹಲವು ರಾಗಗಳನ್ನು ಹೇಳಿಕೊಡುತ್ತಿದ್ದಾರೆ.

ಧಾರವಾಡದ ಹಳಿಯಾಳ ರಸ್ತೆಗೆ ಹೊಂದಿಕೊಂಡಂ ತಿರುವ ಪ್ರಗತಿ ಕಾಲೊನಿ (ದಾಸನಕೊಪ್ಪ ವೃತ್ತದಿಂದ ಜಯನಗರಕ್ಕೆ ಹೋಗುವ ಹಾದಿ)ಯ ಡಾ. ಪಾಟೀಲ ಅವರ ಮನೆಯಲ್ಲಿಯೇ ಅಕಾಡೆಮಿಯ ಚಟುವಟಿಕೆಗಳು ಆರಂಭವಾಗಿವೆ. ಮೊದಲು ಹಿಂದೂಸ್ತಾನಿ, ಭಾವಗೀತೆ, ಭಕ್ತಿಗೀತೆ, ಜಾನಪದ ಸೇರಿದಂತೆ ಹಲವು ಸಂಗೀತ ಪ್ರಕಾರಗಳನ್ನು ಹೇಳಿಕೊಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಒಂದೇ ಸಂಗೀತ ಪ್ರಕಾರಕ್ಕೆ ಒತ್ತು ಕೊಡುವ ಉದ್ದೇಶದಿಂದ ಹಿಂದೂಸ್ತಾನಿ ಸಂಗೀತವನ್ನು ಹೇಳಿಕೊಡಲಾಗುತ್ತದೆ. ಬಹುಸಂಖ್ಯೆಯ ವಿದ್ಯಾರ್ಥಿಗಳಿಗೆ ಕಲಿಸುವ ಬದಲು ನಿಜವಾದ ಆಸಕ್ತಿ ಇರುವ ಕೆಲವೇ ವಿದ್ಯಾರ್ಥಿಗಳಿಗೆ ಹೇಳುವುದಕ್ಕೆ ಒತ್ತು ನೀಡಲಾಗುತ್ತಿದೆ ಎನ್ನುತ್ತಾರೆ ಡಾ. ಮಲ್ಲಿಕಾರ್ಜುನ ಪಾಟೀಲ.

ಕನಸಿನ ಅಕಾಡೆಮಿ...

ಸತಿಯ ಹೆಸರಲ್ಲಿ ಅಕಾಡೆಮಿ ಆರಂಭಿಸಬೇಕು ಎಂಬುದು ಪಾಟೀಲರ ಹಲವು ದಿನಗಳ ಕನಸು. ತಮ್ಮ ಕನಸಿನ ಅಕಾಡೆಮಿ ನನಸಾದ ಬಗೆಯನ್ನು ‘ಪ್ರಜಾವಾಣಿ’ ಮೆಟ್ರೊದೊಂದಿಗೆ ಹಂಚಿಕೊಂಡ ಅವರು, ‘ಇದನ್ನು ಬರೀ ಸಂಗೀತ ಅಕಾಡೆಮಿಯನ್ನಾಗಿ ಉಳಿಸಿಕೊಳ್ಳದೇ ಪ್ರದರ್ಶನ ಕಲೆಗಳ ಕೇಂದ್ರವನ್ನಾಗಿ ಬದಲಾಯಿಸುವ ಉದ್ದೇಶವಿದೆ. ಹುಬ್ಬಳ್ಳಿಯ ಉಣಕಲ್‌ನಲ್ಲಿರುವ ಡಾ. ಗಂಗೂಬಾಯಿ ಹಾನಗಲ್‌ ಗುರುಕುಲದಂತೆ ಬೆಳೆಸುವ ಪ್ರಯತ್ನಗಳು ಮುಂದುವರಿದಿವೆ.

ಇದನ್ನೊಂದು ಧರ್ಮಾರ್ಥ ಉದ್ದೇಶದಿಂದ ಆರಂಭಿಸಿದ್ದರಿಂದ ಅತ್ಯಂತ ಕಡಿಮೆ ಶುಲ್ಕ ಪಡೆದು ಸಂಗೀತವನ್ನು ಹೇಳಿಕೊಡಲಾಗುತ್ತಿದೆ. ಮೂರ್ನಾಲ್ಕು ಸಂಗೀತ ಶಿಕ್ಷಕಿಯರು ನಿತ್ಯ ಕೆಲವು ಗಂಟೆಗಳನ್ನು ವಿದ್ಯಾರ್ಥಿನಿಯರೊಂದಿಗೆ ಕಳೆಯುತ್ತಾರೆ. ರಿಯಾಜ್‌ ಮಾಡಿಸುತ್ತಾರೆ. ಹೀಗೆ ಅಕಾಡೆಮಿಯಲ್ಲಿ ಕಲಿತವರು ಸರ್ಕಾರದ ಹಲವು ಉತ್ಸವಗಳಲ್ಲಿ ಕಾರ್ಯಕ್ರಮ ನೀಡುವಂತಾದರೆ ಅದೇ ದೊಡ್ಡ ತೃಪ್ತಿ ಎಂದರು.

ನಂದಾ–ಮಲ್ಲಿಕಾರ್ಜುನ ಪಾಟೀಲ ದಂಪತಿಯ ಪುತ್ರ ಶಿವಕುಮಾರ ಸಹ ಸಂಗೀತ ಕಲಾವಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT