ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಯ್ಸಳ ಶಿಲ್ಪ ವೈಭವದ ಕನ್ನಡಿ

Last Updated 27 ಮೇ 2016, 19:50 IST
ಅಕ್ಷರ ಗಾತ್ರ

ನಗರದ ಗಡಿಬಿಡಿಯ ಜೀವನದ ಏಕತಾನತೆಯು ಬೇಸರ ತರಿಸುತ್ತಿದೆಯೇ? ಈ ಸದ್ದು-ಗದ್ದಲಗಳಿಂದ ಸ್ವಲ್ಪವಾದರೂ ಬಿಡುಗಡೆ ಪಡೆದು, ನಗರದಿಂದ ದೂರವಾದ ಯಾವುದಾದರೂ ಪ್ರಶಾಂತ ಸ್ಥಳಕ್ಕೆ ಪ್ರವಾಸ ಹೋಗುವ ಆಸೆಯಾಗುತ್ತಿದೆಯೇ?

ಹಾಗಾದರೆ ಬನ್ನಿ, ಹಸಿರಿನ ಗಿಡ, ಮರ, ಹೊಲ, ಗದ್ದೆಗಳ ನಡುವೆ ನೆಮ್ಮದಿಯಾಗಿರುವ ಪುಟ್ಟಹಳ್ಳಿ ಬೆಳವಾಡಿಗೆ ಪ್ರವಾಸ ಹೋಗಿಬರೋಣ!
ಬೇಲೂರು ಮತ್ತು ಹಳೆಬೀಡು ಹೊಯ್ಸಳರ ಕಾಲದ ಅದ್ಭುತ ಶಿಲ್ಪಕಲೆಗೆ ಪ್ರಸಿದ್ಧಿ. ಕರ್ನಾಟಕದ ಪ್ರವಾಸಿತಾಣಗಳಲ್ಲಿ ಇವೆರಡೂ ಸ್ಥಳಗಳು ಮುಖ್ಯ.
ಬೇಲೂರು ಮತ್ತು ಹಳೆಬೀಡು ಪಟ್ಟಣಗಳಿಂದ ಕೆಲವೇ ಕಿ.ಮೀ.ಗಳ ಅಂತರದಲ್ಲಿದೆ ಬೆಳವಾಡಿ. ಗ್ರಾಮದ ವೀರನಾರಾಯಣ ದೇಗುಲ ಶಿಲ್ಪಕಲಾ ವೈಭವದಿಂದ ಕಣ್ಮನ ತಣಿಸುತ್ತದೆ. ಈ ದೇಗುಲ ಕಟ್ಟಿಸಿದವನು ಹೊಯ್ಸಳರ ವಂಶದ ಎರಡನೇ ವೀರಬಲ್ಲಾಳ (ಕ್ರಿ.ಶ. 1173-1220).
ಸರಿ ಸುಮಾರು ಬೇಲೂರಿನ ದೇವಾಲಯದಷ್ಟೇ (ಕ್ರಿ.ಶ. 1200) ಹಳೆಯದಾದ ಈ ದೇಗುಲವೂ ಕೂಡಾ ಹೊಯ್ಸಳರ ಆಕರ್ಷಕ ಶೈಲಿಯನ್ನು ಹೊಂದಿದೆ.

ಶಿಥಿಲವಾಗಿರುವ, ಸಾಧಾರಣವಾದ ಪ್ರವೇಶದ್ವಾರವನ್ನು ನೋಡಿದಾಗ, ಇದರೊಳಗಡೆ ಮನಸೂರೆಗೊಳ್ಳುವ ಶಿಲ್ಪಕಲೆಯ ಅನರ್ಘ್ಯರತ್ನವೊಂದು ಅಡಗಿದೆಯೆಂದು ಗೊತ್ತಾಗುವುದೇ ಇಲ್ಲ. ಪ್ರವೇಶದ್ವಾರವನ್ನು ದಾಟಿ ಒಳಹೊಕ್ಕ ಕೂಡಲೇ ಎದುರಿಗೆ ಕಾಣುವ ದೇವಾಲಯ, ತನ್ನ ಸೌಂದರ್ಯದಿಂದ ನಮ್ಮನ್ನು ದಂಗುಬಡಿಸಿಬಿಡುತ್ತದೆ.

ಮುಂದಿರುವ ಧ್ವಜಸ್ತಂಭವು ದೇವಾಲಯವನ್ನು ಏಕರೂಪವಾಗಿ ಎರಡೂ ಬದಿಗಳಲ್ಲಿ ವಿಭಾಗಿಸಿದಂತೆ ಕಂಡು ಬರುತ್ತದೆ. ಹೊಯ್ಸಳರ ಇತರ ದೇವಾಲಯಗಳಂತೆ ಇದನ್ನೂ ಹಲವು ಮೂಲೆಗಳಿರುವ ನಕ್ಷತ್ರದಾಕಾರದಲ್ಲಿ ಕಟ್ಟಲಾಗಿದೆ. ಸುಮಾರು ಮೂರು ಅಡಿ ಎತ್ತರದ ಜಗುಲಿಯ ಮೇಲಿರುವ ದೇಗುಲದ ಮುಂಭಾಗದಲ್ಲಿ ಮುದ್ದಾಗಿರುವ ಎರಡು ಆನೆಗಳ ವಿಗ್ರಹಗಳಿವೆ. ಇಡೀ ದೇವಾಲಯನ್ನೇ ತೇರಿನ ರೀತಿಯಲ್ಲಿ ಎಳೆಯಲು ಸನ್ನದ್ಧವಾಗಿರುವಂತೆ ಕಾಣುವ ಆನೆಗಳ ಮೈಮೇಲಿನ ಅಲಂಕಾರಿಕ ಕೆತ್ತನೆ ಆಕರ್ಷಕವಾಗಿದೆ.

ವಿಷ್ಣುವಿನ ಮೂರು ರೂಪಗಳಾದ ವೀರನಾರಾಯಣ, ಯೋಗನರಸಿಂಹ ಮತ್ತು ವೇಣುಗೋಪಾಲನ ಮೂರು ಗರ್ಭಗುಡಿಗಳನ್ನು ಈ ದೇವಸ್ಥಾನ ಹೊಂದಿದೆ. ಮೂರು ಗರ್ಭಗುಡಿಗಳ ಮೇಲೂ ಗೋಪುರಗಳನ್ನು ನಿರ್ಮಿಸಿ ತ್ರಿಕೂಟಾಚಲ ಶೈಲಿಯಲ್ಲಿ ಕಟ್ಟಲಾಗಿದೆ. ಮೂರು ಗರ್ಭಗುಡಿಗಳನ್ನು ವಿಶಾಲವಾದ ನವರಂಗದಿಂದ ಜೋಡಿಸಿಲಾಗಿದೆ. ನವರಂಗದಲ್ಲಿ ಒಂದಕ್ಕಿಂತ ಒಂದು ಸುಂದರವಾದ ಕಂಬಗಳನ್ನು ಅಳವಡಿಸಲಾಗಿದೆ
ಸಾವಿರಾರು ವರ್ಷಗಳು ಕಳೆದಿದ್ದರೂ ಕಂಬಗಳು ಈಗಲೂ ತಮ್ಮ ಹೊಳಪನ್ನು ಉಳಿಸಿಕೊಂಡು ಫಳಫಳಿಸುತ್ತವೆ. ಕೆಲವು ಕಂಬಗಳನ್ನು ನಕ್ಷತ್ರದ ಆಕಾರದಲ್ಲಿ ಕೆತ್ತಲಾಗಿದೆ.

ನವರಂಗದ ಸುತ್ತಲೂ ಭಕ್ತರು ಕುಳಿತುಕೊಳ್ಳಲು ಅನುಕೂಲವಾಗುವಂತೆ ಕಲ್ಲುಹಾಸಿನ ಜಗಲಿ ಇದೆ. ಈ ಕಂಬ ಮತ್ತು ಜಗಲಿಗಳು ಇಡೀ ದೇಗುಲಕ್ಕೆ ಒಂದು ರೀತಿಯ ಗಾಂಭೀರ್ಯ ಮತ್ತು ನಿಗೂಢತೆಯನ್ನು ತಂದುಕೊಟ್ಟಿವೆ. ಪ್ರವೇಶದ್ವಾರದ ಎದುರಿನ ಗರ್ಭಗುಡಿ ಪೂರ್ವಾಭಿಮುಖವಾಗಿದ್ದು, ಇದರಲ್ಲಿ ಸುಮಾರು 8 ಅಡಿ ಎತ್ತರದ ವೀರನಾರಾಯಣನ ವಿಗ್ರಹವಿದೆ. ನಾಲ್ಕು ಕೈಗಳ, ನಿಂತಿರುವ ಭಂಗಿಯಲ್ಲಿರುವ ಶಿಲ್ಪದ ಒಂದು ಕೈಯಲ್ಲಿ ಗದೆ, ಇನ್ನೊಂದು ಕೈಯಲ್ಲಿ ಚಕ್ರವಿದೆ. ಎರಡೂ ಪಕ್ಕಗಳಲ್ಲಿ ಚಿಕ್ಕದಾದ ಭೂದೇವಿ ಮತ್ತು ಶ್ರೀದೇವಿ ಶಿಲ್ಪಗಳು ಮತ್ತು ಹಿಂಭಾಗದಲ್ಲಿ ಪ್ರಭಾವಳಿ ಕೆತ್ತನೆ ಮಾಡಲಾಗಿದೆ.

ಪ್ರವೇಶದ್ವಾರದ ಬಲಭಾಗದ ಗರ್ಭಗುಡಿಯಲ್ಲಿ ದಕ್ಷಿಣಾಭಿಮುಖವಾಗಿ ಸುಮಾರು 7 ಅಡಿ ಎತ್ತರದ ಯೋಗ ನರಸಿಂಹನ ಮನೋಹರವಾದ ವಿಗ್ರಹವಿದೆ. ಯೋಗ ಮುದ್ರೆಯಲ್ಲಿ ಕುಳಿತಿರುವ ನರಸಿಂಹನ ನಾಲ್ಕು ಕೈಗಳಲ್ಲಿ ಎರಡು ಕೈಗಳು ಮಂಡಿಯ ಮೇಲಿದ್ದರೆ, ಇನ್ನೆರಡು ಕೈಗಳಲ್ಲಿ ಶಂಖ ಮತ್ತು ಚಕ್ರಗಳಿವೆ. ಮಂಡಿಯ ಮೇಲಿರುವ ಕೈಗಳಲ್ಲಿರುವ ಉಂಗುರಗಳು ಮತ್ತು ಕಡಗಗಳ ಕೆತ್ತನೆ ಬಹಳ ಸೂಕ್ಷ್ಮವಾಗಿದ್ದು ನೋಡುಗರನ್ನು ಸೆಳೆಯುತ್ತವೆ. ಹಿಂಭಾಗದ ಪ್ರಭಾವಳಿಯಲ್ಲಿ ದಶಾವತಾರಗಳನ್ನು ಕೆತ್ತಲಾಗಿದೆ.

ಪ್ರವೇಶದ್ವಾರದ ಎಡಭಾಗದಲ್ಲಿ, ಯೋಗ ನರಸಿಂಹನ ಗರ್ಭಗುಡಿಗೆ ಎದುರಾಗಿ ಸುಮಾರು 8 ಅಡಿ ಎತ್ತರದ ವೇಣುಗೋಪಾಲನ ವಿಗ್ರಹವನ್ನು ಸ್ಥಾಪಿಸಲಾಗಿದೆ. ತ್ರಿಭಂಗಿಯಲ್ಲಿ ನಿಂತು ಕೊಳಲನ್ನು ನುಡಿಸುತ್ತಿರುವ ಅತ್ಯಂತ ಆಕರ್ಷಕವಾದ ವೇಣುಗೋಪಾಲನ ವಿಗ್ರಹ ಪ್ರಮಾಣಬದ್ಧವಾಗಿದ್ದು, ಸೂಕ್ಷ್ಮ ಕೆತ್ತನೆಗಳಿಂದ ಕೊರಳಿನ ಹಾರಗಳನ್ನು ಅಲಂಕಾರಿಕವಾಗಿ ಕೆತ್ತಲಾಗಿದೆ. ಕೃಷ್ಣನ ಅಕ್ಕಪಕ್ಕದಲ್ಲಿ ರುಕ್ಮಿಣಿ ಮತ್ತು ಸತ್ಯಭಾಮೆಯರನ್ನೂ ಕಾಣಬಹುದು.

ಕಲ್ಪವೃಕ್ಷದ ಕೆಳಗೆ ನಿಂತಿರುವ ಕೃಷ್ಣನ ಸುತ್ತಲೂ ಮೈ ಮರೆತು ನಿಂತಿರುವ ಗೋವುಗಳು, ಗೋಪಿಕಾ ಸ್ತ್ರೀಯರು ಮತ್ತು ಗೋಪಾಲಕರನ್ನು ಚಿತ್ರಿಸಲಾಗಿದೆ. ಈ ಸುಂದರ ವೇಣುಗೋಪಾಲನನ್ನು ನೋಡುತ್ತಾ ನಾವೂ ಮೈಮರೆತು ನಿಂತು ಬಿಡುತ್ತೇವೆ. ನವರಂಗದ ಮಾಡಿನಲ್ಲಿ ನಾಗಮಂಡಲ ಮತ್ತು ಅದರ ನಡುವೆ ನಾಟ್ಯ ಮಾಡುತ್ತಿರುವ ಕೃಷ್ಣನನ್ನು (ಕಾಳಿಂಗಮರ್ದನ) ನೋಡಬಹುದು. ಎಂತಹ ಬಿರುಬಿಸಿಲಿದ್ದರೂ ನವರಂಗದ ಒಳಗೆ ಮಾತ್ರ ಸದಾ ತಂಪಾಗಿರುವುದು ಈ ದೇಗುಲದ ವಿಶೇಷ.

ಗರ್ಭಗುಡಿಗಳ ಹೊರಭಾಗದ ಗೋಡೆಗಳಲ್ಲಿ ವಿಷ್ಣುವಿನ ಅವತಾರಗಳು ಮತ್ತು ಇತರ ದೇವತೆಗಳ ಸುಂದರ ಶಿಲ್ಪಗಳಿವೆ. ಇಡೀ ದೇವಸ್ಥಾನದ ಹೊರಭಾಗದಲ್ಲಿರುವ ವಿಗ್ರಹಗಳೆಲ್ಲವೂ ಮುಕ್ಕಾಗದೇ ಚೆನ್ನಾಗಿವೆ. ಆದರೆ, ಸಾವಿರಾರು ವರ್ಷಗಳಿಂದ ಮಳೆ, ಗಾಳಿ ಮತ್ತು ಬಿಸಿಲಿನ ದಾಳಿಗೆ ಸವೆದು ಹೋಗಿವೆ. ಜೊತೆಗೆ ಅಲ್ಲಲ್ಲಿ ಇತ್ತೀಚಿನ ‘ದಾಳಿಕೋರ’ ಭಕ್ತರು ತಮ್ಮ ಹೆಸರನ್ನು ಕೆತ್ತಿ ಅಂದಗೆಡಿಸಿರುವುದೂ ಕಂಡು ಬರುತ್ತದೆ.

ಈ ದೇವಾಲಯದ ಇನ್ನೊಂದು ಪ್ರಮುಖ ಆಕರ್ಷಣೆ ಇಲ್ಲಿನ ಗೋಪುರಗಳದ್ದು. ಮೂರೂ ಗೋಪುರಗಳ ಮೇಲೆಲ್ಲಾ ಕೆತ್ತಿರುವ ಸೂಕ್ಷ್ಮ ಕುಸುರಿಕೆತ್ತನೆಗಳು ಮನಸೂರೆಗೊಳ್ಳುತ್ತವೆ. ಗೋಪುರಗಳು ಮತ್ತು ನವರಂಗದ ಮೇಲ್ಭಾಗದಲ್ಲಿ ಹಲವಾರು ದೇವತೆಗಳ ಸಣ್ಣಸಣ್ಣ ಶಿಲ್ಪಗಳನ್ನು ಅಳವಡಿಸಲಾಗಿದೆ. ಎಲ್ಲ ದೇವತೆಗಳಿಗೂ ಪ್ರಭಾವಳಿಗಳನ್ನು ಕೆತ್ತಲಾಗಿದೆ.

ದೇವಸ್ಥಾನದ ಸುತ್ತಲೂ ಹುಲ್ಲುಹಾಸಿನ ಉದ್ಯಾನವನವಿದೆ. ಪುರಾತತ್ವ ಇಲಾಖೆಯ ವಶದಲ್ಲಿರುವ ದೇಗುಲದಲ್ಲಿ ಶುಚಿತ್ವ ಕಾಯ್ದುಕೊಳ್ಳಲಾಗಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದಿಲ್ಲವಾದ ಕಾರಣ, ವಾತಾವರಣ ಪ್ರಶಾಂತವಾಗಿರುತ್ತದೆ. ಬೇಲೂರು-ಚಿಕ್ಕಮಗಳೂರು ಮುಖ್ಯರಸ್ತೆಯಲ್ಲಿರುವ ನಾಮಫಲಕವನ್ನು ಬಿಟ್ಟರೆ, ದೇವಾಲಯದ ಬಗ್ಗೆ ಮಾಹಿತಿ ನೀಡುವ ಫಲಕಗಳು ಬೇರೆಲ್ಲೂ ಕಂಡುಬರುವುದಿಲ್ಲ.
ಈ ಬಾರಿ ಬೇಲೂರು– ಹಳೇಬೀಡು ಪ್ರವಾಸ ಹೊರಟರೆ, ಹತ್ತಿರದಲ್ಲಿಯೇ ಇರುವ ಬೆಳವಾಡಿಯನ್ನೂ ನಿಮ್ಮ ಪಟ್ಟಿಯಲ್ಲಿ ಸೇರಿಸಿಕೊಳ್ಳಿ. ಹೊಯ್ಸಳರ ಕಾಲದ ಈ ಶಿಲ್ಪಸೌಂದರ್ಯದ ಕಲಾ ಕುಸುಮ ನೋಡಲು ಮರೆಯದಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT