ಶನಿವಾರ, ಮೇ 8, 2021
24 °C

ಭಾನುವಾರ ವಿಶೇಷ | ವಲಸೆ ಭಾರತ, ಬಹುತ್ವದ ಬಾಗಿಲು ತೆರೆದು

ಸತ್ಯಾ ಎಸ್. Updated:

ಅಕ್ಷರ ಗಾತ್ರ : | |

Prajavani

ದೊಡ್ಡ, ಸಣ್ಣ ಗಣರಾಜ್ಯಗಳನ್ನು ನಮ್ಮ ಸಂವಿಧಾನವು ಆಡಳಿತಾತ್ಮಕವಾಗಿ ಒಂದಾಗಿ ಹಿಡಿದಿಟ್ಟಿದ್ದರೆ, ನೂರಾರು ಅಸ್ಮಿತೆಗಳ ಬಹುತ್ವ ಭಾರತವು ವಲಸೆಯ ಸಾಂಸ್ಕೃತಿಕ ಆಯಾಮಗಳ ಮೂಲಕ ಸಮನ್ವಯತೆಯನ್ನು ಕಂಡುಕೊಂಡಿದೆ.

ಜನಕರಾಜನ ಮಗಳು ಸೀತೆ, ರಾಮನನ್ನು ಮದುವೆಯಾಗಿ ಅಯೋಧ್ಯೆಗೆ ಹೊರಟು ನಿಂತಾಗ ತಂದೆ ಸುಂದರವಾದ ಪುಟ್ಟದೊಂದು ಭರಣಿಯಲ್ಲಿ ಮಿಥಿಲೆಯ ಹಿಡಿ ಮಣ್ಣನ್ನು ಇಟ್ಟು ಮಗಳ ಕೈಗೆ ಕೊಟ್ಟನಂತೆ. ಮಿಥಿಲೆಯ ಮಣ್ಣಿನಲ್ಲಿ ಹುಟ್ಟಿ ಬೆಳೆದಿದ್ದ ಸೀತೆಗೆ ಅಯೋಧ್ಯೆಯ ಹೊಸ ಮಣ್ಣಿಗೆ ಹೊಂದಿಕೊಳ್ಳಲು ಕಷ್ಟವಾಗದಿರಲಿ ಎಂದು ಕೊಟ್ಟ ಮಿಥಿಲೆಯ ಹಿಡಿಮಣ್ಣು ಅದು. ಅಯೋಧ್ಯೆ ತಲುಪಿದ ಸೀತೆ ಮಿಥಿಲೆಯ ಮಣ್ಣನ್ನು ಒಮ್ಮೆ ಆಘ್ರಾಣಿಸಿ, ಅರಮನೆಯ ತೋಟದ ಮಣ್ಣಿಗೆ ಸೇರಿಸಿದಳಂತೆ. ಹೀಗೆ ಮಿಥಿಲೆ ಮತ್ತು ಅಯೋಧ್ಯೆಯ ನಡುವೆ ಸೇತು ಕಟ್ಟಿದಳಂತೆ.

ನಾವು ಚಿಕ್ಕವರಿದ್ದಾಗ ನಮ್ಮ ಕೈತೋಟದಿಂದ ಸಸಿ ಕಿತ್ತು ಯಾರಿಗಾದರೂ ಕೊಡುವಾಗ ಅಥವಾ ಬೇರೆಲ್ಲಿಂದಾದರೂ ಸಸಿ ತಂದು ನೆಡುವಾಗ ಅಮ್ಮ ಹೇಳುತ್ತಿದ್ದರು, ‘ಸಸಿಯ ಜೊತೆಗೆ ಅಲ್ಲಿನದೇ ಹಿಡಿ ಮಣ್ಣನ್ನೂ ಇಡಬೇಕು. ಆಗ ಬೇರುಗಳು ಒಣಗುವುದಿಲ್ಲ ಮತ್ತು ಹೊಸ ಮಣ್ಣಿಗೆ ಹೊಂದಿಕೊಳ್ಳಲೂ ಅನುಕೂಲ’ ಅಂತ. ಒಂದೆಡೆಯಿಂದ ಬದುಕಿನ ಗೂಟ ಕಿತ್ತು ಮತ್ತೊಂದೆಡೆಯಲ್ಲಿ ಬದುಕು ಕಟ್ಟುವ ಮನುಷ್ಯ ಕುಲಕ್ಕೆ ಅನ್ವಯಿಸುವ ಮಾತು ಇದು.

ವಲಸಿಗರು ತಮ್ಮೂರ ಭಾಷೆ ಆಡುತ್ತಲೇ, ತಮ್ಮೂರ ಅಡುಗೆ ಬೇಯಿಸುತ್ತಲೇ, ತಮ್ಮೂರ ಹಾಡು ಗುನುಗುತ್ತಲೇ, ತಮ್ಮೂರ ನೆನಪುಗಳಲ್ಲಿ ತೋಯುತ್ತಲೇ ಬಂದೂರಲ್ಲಿ ಬಿಲ್ಡಿಂಗ್ ಎಬ್ಬಿಸುತ್ತಾರೆ. ಕಾಫಿ ತೋಟದಲ್ಲಿ ಬೀಜ ಕೀಳುತ್ತಾರೆ, ರಬ್ಬರ್ ಇಳಿಸುತ್ತಾರೆ, ಚಾ ಮಾರುತ್ತಾರೆ, ರಸ್ತೆಗೆ ಟಾರು ಹಾಕುತ್ತಾರೆ, ರೈಲು ಹಳಿ ಜೋಡಿಸುತ್ತಾರೆ, ಅಂಗಡಿ-ಮುಂಗಟ್ಟು ತೆರೆಯುತ್ತಾರೆ, ಹೋಟೆಲ್‌ಗಳಲ್ಲಿ ಟೇಬಲ್ ಸ್ವಚ್ಛ ಮಾಡುತ್ತಾರೆ. ನಾಟಕ ಮಾಡುತ್ತಾರೆ, ಸಿನಿಮಾ ಕಟ್ಟುತ್ತಾರೆ, ಸಾಹಿತ್ಯ ರಚಿಸುತ್ತಾರೆ, ನೃತ್ಯ ಚಿಮ್ಮುತ್ತಾರೆ, ಹಾಡು ಹರಡುತ್ತಾರೆ...

ವಲಸೆ ಮನುಷ್ಯ ಕುಲದ ಮೂಲಗುಣ. ಆದಿ ಮಾನವರಿಂದ ಹಿಡಿದು ಅತ್ಯಾಧುನಿಕ ಮಾನವರವರೆಗೆ ಎಲ್ಲಾ ಮನುಷ್ಯರೂ ವಲಸಿಗರೇ. ಬರಿದೆ ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳೂ ಕೂಡ. ಸುಮಾರು ನಾಲ್ಕೈದು ಗ್ರಾಂ ತೂಕದ ಪುಟ್ಟ ಪುಟಾಣಿ ಹಕ್ಕಿ ಹಮ್ಮಿಂಗ್ ಬರ್ಡ್ ಪ್ರತಿವರ್ಷ 600 ಕಿ.ಮೀ. ವಲಸೆ ಹೋಗುತ್ತದೆ!

‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ, ನೀವೆ ಪ್ರಮಾಣ ಕೂಡಲ ಸಂಗಮದೇವ’ ಎಂದ ನಾಡು ನಮ್ಮದು. ನಿಂತಲ್ಲಿ ನಿಂತರೆ ನೀರೂ ಕೆಡುತ್ತೆ, ಹರಿಯುವ ನೀರು ಸದಾ ಸ್ವಚ್ಛ; ಉರುಳೋ ಮಣ್ಣಿನ ಹೆಂಟೆ ಗುಡ್ಡ ಆಗುತ್ತೆ; ದೇಶ ಸುತ್ತು, ಕೋಶ ಓದು; ಇತ್ಯಾದಿ ಸಂಚಾರಕ್ಕೆ ಒತ್ತಾಸೆ ನೀಡುವ ಅನುಭವ ಜನ್ಯ ಮಾತುಗಳು ಅಸಂಖ್ಯಾತ. ವಲಸೆ ಇಲ್ಲದಿದ್ದರೆ ಅರೇಬಿಯಾದ ಕಾಫಿ ಬೀಜ ಬಾಬಾಬುಡನ್‍ಗಿರಿಗೆ ಬರುತ್ತಿರಲಿಲ್ಲ. ಕಾಫಿಯ ಜಾಗತಿಕ ನಕ್ಷೆಯಲ್ಲಿ ಕರ್ನಾಟಕದ ಹೆಸರು ಕಾಣುತ್ತಿರಲಿಲ್ಲ.

ಪಂಜಾಬಿನ ಸೂಫಿ ಹಾಡುಗಾರ ಮದನ್ ಗೋಪಾಲ್ ಸಿಂಗ್ ಅವರು ಬಂದೇನವಾಜನ ಕುರಿತು ಹಾಡು ಕಟ್ಟಿ ಕಲಬುರ್ಗಿಗೂ, ಪಂಜಾಬಿಗೂ ಸೇತುವೆ ಕಟ್ಟುತ್ತಿರಲಿಲ್ಲ. ಮುಂಬೈನಿಂದ ಬಂದ ನಾಗ್ ಸಹೋದರರು ಕನ್ನಡದ ಸಿನಿಮಾ ಮತ್ತು ರಂಗಭೂಮಿಯನ್ನು ಶ್ರೀಮಂತಗೊಳಿಸುತ್ತಿರಲಿಲ್ಲ; ಕೊಕ್ಕರೆ ಬೆಳ್ಳೂರಿನ ಜನರು ಪಕ್ಷಿ ತಜ್ಞರಾಗುತ್ತಿರಲಿಲ್ಲ; ಉತ್ತರ ಕನ್ನಡದ ಮೆಘಾನೆ ಬೆಟ್ಟದಲ್ಲಿ ಸಿದ್ಧಿಗಳ ಮಲುಂಗ ಸದ್ದು ಮಾಡುತ್ತಿರಲಿಲ್ಲ; ಬಯಲು ಸೀಮೆಯ ಜಿಲ್ಲೆಗಳಲ್ಲಿ ಲಂಬಾಣಿಗರ ಲಂಗದ ಕನ್ನಡಿಗಳು ಫಳಕ್ ಎಂದು ಮಿಂಚುತ್ತಿರಲಿಲ್ಲ; ರೈತರ ಹೊಲಗಳಿಗೆ ಕುರಿ ಗೊಬ್ಬರ ಬೀಳುತ್ತಿರಲಿಲ್ಲ; ಜಗತ್ತಿನ ಅತ್ಯಂತ ಶ್ರೀಮಂತ ಭಾಷೆ ಎನ್ನಲಾದ ಹಿಂದೂಸ್ತಾನಿ ಜುಬಾನ್ (ಉರ್ದು) ರೂಪ ತಳೆಯುತ್ತಿರಲಿಲ್ಲ; ಕನ್ನಡದ ಕಿಟ್ಟೆಲ್ ನಿಘಂಟು, ಮಂಗಳೂರು ಸಮಾಚಾರ ಪತ್ರಿಕೆಗಳು ಪ್ರಥಮಗಳ ಸಾಲಿನಲ್ಲಿ ನಿಲ್ಲುತ್ತಿರಲಿಲ್ಲ; ಜರ್ಮನಿಯ ಯೂನಿವರ್ಸಿಟಿಯಲ್ಲಿ ಮಂಗಳೂರಿನ ಸಿರಿ ಪಾಡ್ದನ ಹರಿಯುತ್ತಿರಲಿಲ್ಲ; ಒಟ್ಟಿನಲ್ಲಿ ವಲಸೆ ಇಲ್ಲದೇ ಇದ್ದಿದ್ದರೆ ಭಾರತ ಒಂದು ದೇಶವಾಗಿ ಭಾಸವಾಗುತ್ತಿರಲಿಲ್ಲ.

ಅಮೆರಿಕವನ್ನು ವಲಸಿಗರ ದೇಶ ಎಂದೇ ಕರೆಯುತ್ತಾರೆ. ಅಲ್ಲಿ ಮೂಲನಿವಾಸಿಗಳ ಸಂಖ್ಯೆ ಬಹಳಷ್ಟು ಕಡಿಮೆ ಇದ್ದು ಯೂರೋಪ್, ದಕ್ಷಿಣ ಅಮೆರಿಕ ಮತ್ತು ಮಧ್ಯ ಏಪಿಯಾದಿಂದ ವಲಸೆ ಹೋದವರೇ ಕಟ್ಟಿದ ದೇಶ ಅದು. ಹಾಗೆ ನೋಡಿದರೆ ಭಾರತದಲ್ಲೂ ವಲಸಿಗರ ಪ್ರಮಾಣ ಕಡಿಮೆಯೇನಲ್ಲ. ಯುರೇಷಿಯಾದಿಂದ ಬಂದ ಆರ್ಯನ್ ಜನಾಂಗ ಹರಪ್ಪ ಮೊಹೆಂಜದಾರೊದ ಮೂಲಕ ಭಾರತವನ್ನು ಪ್ರವೇಶಿಸಿ ತನ್ನ ಭೌಗೋಳಿಕ ವ್ಯಾಪ್ತಿಯನ್ನು ವಿಸ್ತರಿಸಿದಂತೆಲ್ಲ ಈ ಭೂಭಾಗದಲ್ಲಿದ್ದ ಮೂಲ ನಿವಾಸಿಗಳು ದಕ್ಷಿಣಕ್ಕೆ ಸರಿಯುತ್ತಾ ಬಂದರು. ಆ ನಂತರ ಅರಬ್ ರಾಷ್ಟ್ರಗಳ ಮುಸ್ಲಿಂ ದೊರೆಗಳು, ಆಂಗ್ಲರು, ಪರ್ಶಿಯನ್, ಪೋರ್ಚುಗೀಸ್ ಇತ್ಯಾದಿ ದೇಶಗಳ ಜನ ಸಮುದಾಯಗಳು ಬೇರೆ ಬೇರೆ ಕಾರಣಕ್ಕೆ ಭಾರತಕ್ಕೆ ಬಂದು ದೀರ್ಘಕಾಲ ನೆಲೆ ನಿಂತು ಈ ನೆಲದಲ್ಲಿ ಸಮನ್ವಯಗೊಂಡಿದ್ದಾರೆ. ಭಾರತದ ಹೆಗ್ಗುರುತಾದ ಬಹುತ್ವದಲ್ಲಿ ಸೇರಿಹೋಗಿದ್ದಾರೆ.

ಈ ‘ಬಹುತ್ವ ಭಾರತ’ದಲ್ಲಿ ಮೈಲಿಗೊಂದು ಭಾಷೆ, ಹೆಜ್ಜೆಗೊಂದು ಊಟ, ಒಂದೊಂದು ದೂರಕ್ಕೂ ಒಂದೊಂದು ಉಡುಗೆ-ತೊಡುಗೆ, ಹಾಡು-ನೃತ್ಯ, ಆಚಾರ-ವಿಚಾರ, ಬಿಸಿಲು-ಬೇನೆ, ನೀರು-ಮಣ್ಣು, ಬಣ್ಣ-ನೋಟ... ಇವೆಲ್ಲವೂ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಸಂಚರಿಸುತ್ತಲೇ ಇವೆ. ಈ ಸಂಚಾರ ಭಾರತವನ್ನು ಬೆಸೆಯುತ್ತಾ ಬಂದಿದೆ. ತಮ್ಮ ತಮ್ಮ ಮೂಲ ಗುಣಗಳ ಜೊತೆಗೆ ಹೊಸ ಊರಿನ ಗುಣಗಳನ್ನೂ ಮೇಳೈಸಿಕೊಂಡು ಬೆಳೆಯುವುದರ ಜೊತೆಗೆ ಇವು ಎರಡು ಊರುಗಳನ್ನು, ಎರಡು ಸಮುದಾಯಗಳನ್ನು, ಎರಡು ಸಂಸ್ಕೃತಿಗಳನ್ನು ಬೆಸೆಯುತ್ತವೆ.

ಮುಂಬೈ ಮಹಾನಗರದ ಹೋಟೆಲ್‌ ಉದ್ಯಮಕ್ಕೆ ಬುನಾದಿಯೇ ನಮ್ಮ ಕರಾವಳಿ ಜಿಲ್ಲೆಗಳಿಂದ ವಲಸೆ ಹೋದ ಕನ್ನಡಿಗರು. ಬಲಾಢ್ಯರು ಸ್ವಂತ ಹೋಟೆಲ್‌ಗಳನ್ನೇ ಆರಂಭಿಸಿದರೆ, ಜೀವನೋಪಾಯ ಅರಸಿ ಹೋದವರು ಹೋಟೆಲ್‌ಗಳಲ್ಲಿ ಪಾತ್ರೆ ತೊಳೆಯುವ, ಟೇಬಲ್ ಒರೆಸುವ ಜನವಾಗಿ ಸೇರಿಕೊಂಡು ನಿಧಾನವಾಗಿ ಸಪ್ಲೈಯರ್ ಆಗಿ, ಕ್ಯಾಷಿಯರ್ ಆಗಿ, ಮ್ಯಾನೇಜರ್ ಆಗಿ, ಕೊನೆಗೆ ತಾನೇ ಹೋಟೆಲ್‌ ಮಾಲೀಕನಾಗುವವರೆಗೆ ಬೆಳೆದರು. ಹೀಗೆ ಬೇರೆ ಬೇರೆ ಉದ್ಯೋಗವರಸಿ ಹೋದವರು ಮುಂಬೈನಲ್ಲಿ ಕಟ್ಟಿರುವ ಕನ್ನಡ ಸಂಘಗಳಿಗೆ ಲೆಕ್ಕವಿಲ್ಲ. ಜೊತೆಗೆ ಕರಾವಳಿ ಸಂಘಗಳು, ಬಿಲ್ಲವ-ಬಂಟ ಇತ್ಯಾದಿ ಜಾತಿ ಹೆಸರಿನ ಸಂಘಟನೆಗಳು, ಎಲ್ಲವೂ ಒಟ್ಟಾರೆಯಾಗಿ ಮುಂಬೈ ನೆಲದಲ್ಲಿ ಕನ್ನಡದ ಭಾಷೆ ಮತ್ತು ಸಂಸ್ಕೃತಿಯನ್ನು ಹರಡಿದವರೇ. ಹಾಗೆಯೇ ಕನ್ನಡದ ನೆಲದಲ್ಲಿ ಮುಂಬೈನ, ಮರಾಠಿ ಸಂಸ್ಕೃತಿಯ ಸಂವೇದನೆಗಳನ್ನು ಹರಡಿದ ಬರಹಗಾರರು, ಭಾಷಾ ತಜ್ಞರು, ಶಿಕ್ಷಣ ತಜ್ಞರು, ಚಿತ್ರ ಕಲಾವಿದರು, ರಂಗಭೂಮಿ ಮತ್ತು ಚಲನಚಿತ್ರ ಕಲಾವಿದರೂ ಅನೇಕರಿದ್ದಾರೆ.

ದಶಕಗಳ ಹಿಂದೆ ಮೊದಲ ಬಾರಿಗೆ ದೆಹಲಿಗೆ ಹೋಗಿದ್ದಾಗ, ಅಲ್ಲಿನ ಸ್ಥಳೀಯರೊಬ್ಬರಲ್ಲಿ ಕರ್ನಾಟಕ ಭವನದ ವಿಳಾಸ ಕೇಳಿದಾಗ ಅವರು ಕೊಟ್ಟಿದ್ದು ದೆಹಲಿ ಕನ್ನಡ ಸಂಘದ ವಿಳಾಸ! ಕರ್ನಾಟಕ ಭವನವು ಸ್ಥಾವರವಾದಿ ಸರ್ಕಾರದ, ಪ್ರಭುತ್ವದ ತಾಣವಾದರೆ, ಕನ್ನಡ ಸಂಘವು ಜಂಗಮವಾದಿ ಜನ ಸಮುದಾಯದ ತಾಣ. ಹಾಗಾಗಿ ದೆಹಲಿಯ ಜನರಿಗೆ ಕನ್ನಡ ಸಂಘದ ಅರಿವಿತ್ತು. ದೇಶದ ರಾಜಧಾನಿಯಾದ ಆ ನಗರದಲ್ಲಿ ಸಹಜವಾಗಿಯೇ ಮಿನಿ ಬಹುತ್ವ ಭಾರತವೊಂದು ಉಸಿರಾಡುತ್ತಿದೆ. ನವದೆಹಲಿ ಮತ್ತು ಹಳೆದೆಹಲಿ ಎಂಬ ಎರಡು ಭಾಗಗಳಲ್ಲಿ ತನ್ನ ಸಂಸ್ಕೃತಿಯ ಮೂಲ ಸೆಲೆಗಳನ್ನು ಭದ್ರವಾಗಿಯೂ, ಹೊಸತುಗಳನ್ನು ಬಿಡು ಬೀಸಾಗಿಯೂ ಕಾಪಿಟ್ಟುಕೊಂಡು ಬಂದಿದೆ. ಥೇಟ್ ಬೆಂಗಳೂರಿನಂತೆ.

ಉತ್ತರ ಬೆಂಗಳೂರಿನಲ್ಲಿ ಕರ್ನಾಟಕದ ಮೂಲ ಸೆಲೆಗಳು ಕಾಣುವುದೇ ಇಲ್ಲವಲ್ಲ? ಎಂದು ಕೇಳುತ್ತಿದ್ದಳು ಬರೋಡಾದಿಂದ ಬಂದು ಬೆಂಗಳೂರಲ್ಲಿ ನೆಲೆಸಿರುವ ಮಲಯಾಳ ಮಾತೃಭಾಷೆಯ, ಸ್ಪಷ್ಟ ಕನ್ನಡ ಮಾತನಾಡುವ ಗೆಳತಿ. ಅವಳ ಸಂಗಾತಿ ನೇರವಾಗಿ ಕೇರಳದಿಂದ ಬಂದು ಇಲ್ಲಿ ಬದುಕು ಕಟ್ಟಿಕೊಂಡವರು. ಓಣಂಗೆ ಸಾದ್ಯವನ್ನೂ, ಗೌರಿ ಹಬ್ಬಕ್ಕೆ ಪೂರಣ್ ಪೋಳಿಯನ್ನೂ (ಹೋಳಿಗೆ) ಮಾಡುವ, ಬಹುತ್ವ ಭಾರತದ ಪ್ರತಿನಿಧಿ ಕುಟುಂಬ ಇದು. ಅವರಿರುವುದು ಉತ್ತರ ಬೆಂಗಳೂರಿನಲ್ಲಿ. ಇಡೀ ಜಗತ್ತಿನ ಜನ ಸಮುದಾಯಗಳು, ಅವರ ಊಟ ದೊರೆಯುವ ಹೋಟೆಲ್‌ಗಳು ನೆಲೆಯೂರಿರುವ ವಲಸಿಗರ ನಾಡು ಈ ಉತ್ತರ ಬೆಂಗಳೂರು.

ಕೇರಳದ ಸಾಂಸ್ಕೃತಿಕ ಸಂಕೇತಗಳಲ್ಲಿ ಎರಡು ತುಂಡಿನ ಅವರ ಬಿಳಿಯ ಸೀರೆ ಮಹತ್ವದ್ದು. ಅದನ್ನು ಕಸವು, ಮುಂಡು ಎನ್ನುತ್ತಾರೆ. ಆ ಕಸವುಗಳನ್ನು ನೇಯುವವರು ಕರ್ನಾಟಕದಿಂದ ಸುಮಾರು 500 ವರ್ಷಗಳ ಹಿಂದೆ ಕೇರಳಕ್ಕೆ ವಲಸೆ ಹೋದ ದೇವಾಂಗ ಜನಾಂಗದ ನೇಕಾರರು.

ಕನ್ನಡದ ಆದಿ ಕವಿಗಳೆಂದು ಕರೆಯುವ ಪಂಪ, ರನ್ನ, ಜನ್ನ, ನಾಗಚಂದ್ರ, ಮೊದಲಾದವರೆಲ್ಲ ಉತ್ತರ ಭಾರತದಿಂದ ಕರ್ನಾಟಕಕ್ಕೆ ಬಂದ ಜೈನ ಸಮುದಾಯಕ್ಕೆ ಸೇರಿದವರು. ಜೈನ ಧರ್ಮೀಯರು ಕರ್ನಾಟಕಕ್ಕೆ ಬಾರದೆ ಇದ್ದಿದ್ದರೆ, ಶ್ರವಣಬೆಳಗೊಳದಲ್ಲಿ ಗೊಮ್ಮಟನಿಲ್ಲದೆ ಹೋಗಿದ್ದರೆ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಯಾವ ರೂಪದಲ್ಲಿ ಇರುತ್ತಿತ್ತೋ ಊಹಿಸಿಕೊಳ್ಳಲು ಕಷ್ಟ.

ಭಾರತದ ಬಹುದೊಡ್ಡ ವಲಸಿಗ ಸಮುದಾಯ ಮಹಿಳೆಯರದ್ದು. 2011ರ ಜನಗಣತಿಯ ಪ್ರಕಾರ ಒಟ್ಟು ಆಂತರಿಕ ವಲಸಿಗರ ಸಂಖ್ಯೆ 45.57 ಕೋಟಿಯಲ್ಲಿ 30.96 ಕೋಟಿ ಮಹಿಳೆಯರು. ಅಂದರೆ ಶೇಕಡ 67.93ರಷ್ಟು. ಇದರಲ್ಲಿ ಮದುವೆ ಕಾರಣ ವಲಸೆ ಹೋಗುವ ಮಹಿಳೆಯರ ಸಂಖ್ಯೆ 21.11 ಕೋಟಿ! ಈ ಮದುವೆ ವಲಸೆಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯಾಮಗಳು ಮಹತ್ತರವಾದವು. ಈ ವಲಸೆಯಲ್ಲಿ ಪ್ರತಿಯೊಂದು ಹೆಣ್ಣು ಒಬ್ಬ ಸಾಂಸ್ಕೃತಿಕ ರಾಯಭಾರಿಯೇ. ತಾನು ಬೆಳೆದ ಊರಿನ ಮಣ್ಣಿನಲ್ಲಿರುವ ಆಹಾರ-ಭಾಷೆ-ಉಡುಗೆ-ತೊಡುಗೆ-ಆಚಾರ-ವಿಚಾರ-ನಂಬಿಕೆಗಳ ಕಣಗಳನ್ನು ಸಮಕಾಲೀನರಲ್ಲಿ ಮಾತ್ರವಲ್ಲದೆ ಮಕ್ಕಳಲ್ಲೂ ಬಿತ್ತಿ ಮುಂದಿನ ಜನಾಂಗದವರೆಗೆ ಬೆಳೆಸುವ ಪರಿ ಅನನ್ಯವಾದದ್ದು. ಆದರೆ ವಲಸೆಯ ಸಾಂಸ್ಕೃತಿಕ ಆಯಾಮವನ್ನು ಶೋಧಿಸಲು ಬೇಕಾದ ಸೂಕ್ಷ್ಮತೆ ಧಕ್ಕಿಲ್ಲದೇ ಇರುವ ಕಾರಣ ಈ ವೈವಾಹಿಕ ವಲಸೆ ಕುರಿತ ಚರ್ಚೆಗಳು ಬೆಳೆದಿಲ್ಲ.

ಮದುವೆ ವಲಸೆ ನಂತರದ ಸ್ಥಾನ ಉದ್ಯೋಗ ಅರಸಿ ಸಂಚರಿಸುವ ಕಾರ್ಮಿಕರದ್ದು. ಇವರನ್ನು ಕೇವಲ ಆರ್ಥಿಕ ಕನ್ನಡಕದ ಮೂಲಕ ನೋಡುವ ಪ್ರಭುತ್ವಗಳು ಹಾಗೂ ಅಧ್ಯಯನಶೀಲರು ತಳ ಸಮುದಾಯಗಳ ಈ ಜನರು ತರುವ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪರಿಗಣಿಸುವ, ಅಧ್ಯಯನ ಮಾಡುವ, ಅದಕ್ಕೆ ಬೇಕಾದ ಮಹತ್ವವನ್ನು ಸಲ್ಲಿಸುವ ಕೌಶಲವನ್ನು ಹೊಂದಿಲ್ಲ.

ವಲಸೆಯ ಮೂಲಕ ಜಂಗಮವಾಗಿರುವ, ಉರುಳಿದಂತೆಲ್ಲ ಗುಡ್ಡವಾಗುವ ಮಣ್ಣಿನ ಹೆಂಟೆಯಂತಿರುವ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯು ಜಾಗತೀಕರಣದ ಹೊಡೆತದಲ್ಲಿ ಏಕರೂಪತೆಯ ಒತ್ತಡಕ್ಕೆ ಸಿಲುಕುತ್ತಿದೆ. ‘ವಸುದೈವ ಕುಟುಂಬಕಂ’ ಎಂಬ ವಿಶಾಲ ಪರಿಕಲ್ಪನೆಯು ಆಧುನಿಕ ತಂತ್ರಜ್ಞಾನ ಜಗತ್ತಿನಲ್ಲಿ ‘ಇಡೀ ವಿಶ್ವವೇ ಒಂದು ಹಳ್ಳಿ’ ಎಂದು ಬದಲಾಗಿದೆ. ಈ ಬೆಳವಣಿಗೆ ಬಹುತ್ವ ಭಾರತದ ಪರಿಕಲ್ಪನೆಗೆ ಪೆಟ್ಟು ನೀಡುತ್ತಿದೆ.

ದೊಡ್ಡ ಸಣ್ಣ ಗಣರಾಜ್ಯಗಳನ್ನು ನಮ್ಮ ಸಂವಿಧಾನವು ಆಡಳಿತಾತ್ಮಕವಾಗಿ ಒಂದಾಗಿ ಹಿಡಿದಿಟ್ಟಿದ್ದರೆ, ನೂರಾರು ಅಸ್ಮಿತೆಗಳ ಬಹುತ್ವ ಭಾರತವು ಸಮನ್ವಯತೆಯನ್ನು ಕಂಡುಕೊಂಡಿರುವುದು ವಲಸೆಯ ಸಾಂಸ್ಕೃತಿಕ ಆಯಾಮಗಳ ಮೂಲಕವೇ. ಕಾಶ್ಮೀರವನ್ನು ಕೇರಳದೊಂದಿಗೆ, ಗುಜರಾತನ್ನು ಅಸ್ಸಾಂನೊಂದಿಗೆ ಬೆಸೆಯುತ್ತಾ ಭಾರತದ ಪರಿಕಲ್ಪನೆಯನ್ನು ಜನರ ಮಾನಸದಲ್ಲಿ ಬಿತ್ತುತ್ತಿರುವುದು ವಲಸೆಯ ಸಾಂಸ್ಕೃತಿಕ ಆಯಾಮವೇ. ಈ ಆಯಾಮದಲ್ಲಿರುವ ಶ್ರೀಮಂತಿಕೆಯನ್ನು ವರ್ಗ ಭೇದವಿಲ್ಲದೆ ಕಾಣುವ ಕಣ್ಣುಗಳು ಇಂದಿನ ಭಾರತದ ತುರ್ತು ಅಗತ್ಯ.

ಮಹಿಳೆಯರದ್ದೇ ಸಿಂಹಪಾಲು

ಭಾರತದ ಬಹುದೊಡ್ಡ ವಲಸಿಗ ಸಮುದಾಯ ಮಹಿಳೆಯರದ್ದು. 2011ರ ಜನಗಣತಿಯ ಪ್ರಕಾರ ಒಟ್ಟು ಆಂತರಿಕ ವಲಸಿಗರ ಸಂಖ್ಯೆ 45.57 ಕೋಟಿಯಲ್ಲಿ 30.96 ಕೋಟಿ ಮಹಿಳೆಯರು. ಅಂದರೆ ಶೇಕಡ 67.93ರಷ್ಟು. ಇದರಲ್ಲಿ ಮದುವೆ ಕಾರಣ ವಲಸೆ ಹೋಗುವ ಮಹಿಳೆಯರ ಸಂಖ್ಯೆ 21.11 ಕೋಟಿ! ಈ ಮದುವೆ ವಲಸೆಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯಾಮಗಳು ಮಹತ್ತರವಾದವು. ಈ ವಲಸೆಯಲ್ಲಿ ಪ್ರತಿಯೊಂದು ಹೆಣ್ಣು ಒಬ್ಬ ಸಾಂಸ್ಕೃತಿಕ ರಾಯಭಾರಿಯೇ. ತಾನು ಬೆಳೆದ ಊರಿನ ಮಣ್ಣಿನಲ್ಲಿರುವ ಆಹಾರ-ಭಾಷೆ-ಉಡುಗೆ-ತೊಡುಗೆ-ಆಚಾರ-ವಿಚಾರ-ನಂಬಿಕೆಗಳ ಕಣಗಳನ್ನು ಸಮಕಾಲೀನರಲ್ಲಿ ಮಾತ್ರವಲ್ಲದೆ ಮಕ್ಕಳಲ್ಲೂ ಬಿತ್ತಿ ಮುಂದಿನ ಜನಾಂಗದವರೆಗೆ ಬೆಳೆಸುವ ಪರಿ ಅನನ್ಯವಾದದ್ದು. ಆದರೆ ವಲಸೆಯ ಸಾಂಸ್ಕೃತಿಕ ಆಯಾಮವನ್ನು ಶೋಧಿಸಲು ಬೇಕಾದ ಸೂಕ್ಷ್ಮತೆ ಧಕ್ಕಿಲ್ಲದೇ ಇರುವ ಕಾರಣ ಈ ವೈವಾಹಿಕ ವಲಸೆ ಕುರಿತ ಚರ್ಚೆಗಳು ಬೆಳೆದಿಲ್ಲ.

ಮದುವೆ ವಲಸೆ ನಂತರದ ಸ್ಥಾನ ಉದ್ಯೋಗ ಅರಸಿ ಸಂಚರಿಸುವ ಕಾರ್ಮಿಕರದ್ದು. ಇವರನ್ನು ಕೇವಲ ಆರ್ಥಿಕ ಕನ್ನಡಕದ ಮೂಲಕ ನೋಡುವ ಪ್ರಭುತ್ವಗಳು ಹಾಗೂ ಅಧ್ಯಯನಶೀಲರು ತಳ ಸಮುದಾಯಗಳ ಈ ಜನರು ತರುವ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪರಿಗಣಿಸುವ, ಅಧ್ಯಯನ ಮಾಡುವ, ಅದಕ್ಕೆ ಬೇಕಾದ ಮಹತ್ವವನ್ನು ಸಲ್ಲಿಸುವ ಕೌಶಲವನ್ನು ಹೊಂದಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು