ಮಂಗಳವಾರ, ಮಾರ್ಚ್ 2, 2021
29 °C
ಕಿತ್ತು ಬಂದ ಡಾಂಬರು, ಹೊಂಡ ಗುಂಡಿಗಳ ಕಾರುಬಾರು

ಹದಗೆಟ್ಟ ಮಹದೇ‌ಶ್ವರ ಬೆಟ್ಟದ ರಸ್ತೆ: ಭಕ್ತರಿಗೆ ಸಂಚಾರ ಸಂಕಟ

ಬಿ. ಬಸವರಾಜು Updated:

ಅಕ್ಷರ ಗಾತ್ರ : | |

Prajavani

ಹನೂರು: ರಾಜ್ಯದಲ್ಲೇ ಹೆಚ್ಚು ಆದಾಯ ತರುವ ದೇವಾಲಯಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಮಹದೇಶ್ವರ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. 

ಪ್ರತಿನಿತ್ಯ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ಅಲ್ಲದೇ, ನೆರೆಯ ತಮಿಳುನಾಡಿಗೆ ಈ ರಸ್ತೆ ಸಂಪರ್ಕ ಕಲ್ಪಿಸುವುದರಿಂದ ಅಂತರರಾಜ್ಯ ಸಾರಿಗೆ ವಾಹನಗಳೂ ಇದೇ ಮಾರ್ಗದಲ್ಲಿ ಸಂಚರಿಸುತ್ತವೆ.

ರಸ್ತೆಯ ತೀವ್ರ ತಿರುವುಗಳಲ್ಲಿ ಜಲ್ಲಿಕಲ್ಲುಗಳು ಕಿತ್ತು ಬಂದಿವೆ. ಬಹುತೇಕ ಕಡೆಗಳಲ್ಲಿ ಹೊಂಡಗಳು ಇಡೀ ರಸ್ತೆಯನ್ನು ಆಕ್ರಮಿಸಿಕೊಂಡಿವೆ. ಮಳೆ ಬಂದರೆ ಹೊಂಡಗಳಲ್ಲಿ ನಿಲ್ಲುವ ನೀರು ಸಂಚಾರವನ್ನು ಮತ್ತಷ್ಟು ದುಸ್ತರಗೊಳಿಸುತ್ತಿದೆ.

ಅಮಾವಾಸ್ಯೆ, ಹುಣ್ಣಿಮೆ ಹಾಗೂ ವಿಶೇಷ ದಿನಗಳಲ್ಲಿ ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬೆಟ್ಟಕ್ಕೆ ಬರುವ ವಾಹನಗಳು ದಿನನಿತ್ಯ ಹೆಣಗಾಡುವಂತಾಗಿದೆ. ತೀವ್ರ ತಿರುವು ಹಾಗೂ ಸಮತಟ್ಟಾಗಿರುವ ರಸ್ತೆಯಲ್ಲಿ ಉಂಟಾಗಿರುವ ಗುಂಡಿಗಳಿಂದಾಗಿ ದ್ವಿಚಕ್ರ ಹಾಗೂ ಕಾರುಗಳು ಸಂಚರಿಸಲು ಹರಸಾಹಸ ಪಡುವಂತಾಗಿದೆ. 

‘10 ವರ್ಷಗಳಿಂದಲೂ ನಾನು ಮಹದೇಶ್ವರ ಬೆಟ್ಟಕ್ಕೆ ಬರುತ್ತಿದ್ದೇನೆ. ಮೊದಲು ವಾಹನಗಳ ಸಂಖ್ಯೆ ಕಡಿಮೆಯಿತ್ತು. ಹೀಗಾಗಿ ರಸ್ತೆ ನಿರ್ವಹಣೆ ಕೊಂಚ ತಡವಾದರೂ ಸರಿಹೋಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಬೆಟ್ಟಕ್ಕೆ ಬರುವವರ ಸಂಖ್ಯೆ ಹೆಚ್ಚಾದ್ದರಿಂದ ವಾಹನಗಳ ಸಂಖ್ಯೆಯೂ ಏರಿಕೆಯಾಗುತ್ತಿವೆ. ಇದರೊಟ್ಟಿಗೆ ದೇವಾಲಯದ ಆದಾಯವೂ ಗಣನೀಯವಾಗಿ ಹೆಚ್ಚಾಗುತ್ತಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮರ್ಪಕ ರಸ್ತೆ ನಿರ್ಮಿಸುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು’ ಎಂದು ಕನಕಪುರ ತಾಲ್ಲೂಕಿನ ಮಹದೇವಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಳಬೆಟ್ಟದಿಂದ ಬೆಟ್ಟದೆಡೆಗೆ ಸಾಗುತ್ತಿದ್ದಂತೆ ರಸ್ತೆಯಲ್ಲಿ ಗುಂಡಿಗಳ ದರ್ಶನವಾಗುತ್ತದೆ. ರಸ್ತೆಯಲ್ಲಿರುವ ಕಡಿದಾದ ತಿರುವಿನಲ್ಲಿ ಉಂಟಾಗಿರುವ ಗುಂಡಿಗಳಲ್ಲಿ ಜಲ್ಲಿಕಲ್ಲುಗಳು ಮೇಲೆದ್ದಿವೆ. ಭಾರಿ ವಾಹನಗಳು ಚಲಿಸುವ ಸಂದರ್ಭದಲ್ಲಿ ಟೈರಿಗೆ ಸಿಕ್ಕುವ ಕಲ್ಲುಗಳು ಸಿಡಿದು ಇತರೆ ವಾಹನ ಸವಾರರಿಗೆ ಗಾಯವಾಗಿರುವ ಘಟನೆಗಳು ನಡೆದಿವೆ.

ಮಳೆಗಾಲದಲ್ಲಂತೂ ವಾಹನ ಸವಾರರ ಪಾಡು ಹೇಳತೀರದು. ವೇಗವಾಗಿ ಬರುವ ವಾಹನ ಸವಾರರು ಗುಂಡಿಗಳಿರುವುದು ತಿಳಿಯದೇ ಬಿದ್ದು  ಗಾಯಗೊಂಡಿದ್ದಾರೆ. ರಸ್ತೆಯಲ್ಲಿ ನೀರು ನಿಲ್ಲುವುದರಿಂದ ಹೊಂಡಗಳು ಕಾಣದೆ ವಾಹನಗಳು ಜಖಂಗೊಂಡಿವೆ. ತಾಳಬೆಟ್ಟದಿಂದ ತೆರಳುವ ರಸ್ತೆಯ ಕೆಲವು ಕಡೆ ಅತ್ಯಂತ ಕಿರಿದಾದ ರಸ್ತೆಯಿದ್ದು, 2 ವಾಹನಗಳು ಸರಾಗವಾಗಿ ಸಂಚರಿಸಲಾಗದ ಸ್ಥಿತಿಯಿದೆ. ಮಳೆ ನೀರು ರಸ್ತೆಯುದ್ದಕ್ಕೂ ಹರಿಯುವುದರಿಂದ ಕೆಲವು ಕಡೆ ರಸ್ತೆಯೇ ಕೊಚ್ಚಿ ಹೋಗಿದೆ. ಇದರಿಂದ ಅಲ್ಲಲ್ಲಿ ರಸ್ತೆ ಕಿರಿದಾಗಿರುವುದರಿಂದ ವಿಶೇಷ ಸಂದರ್ಭಲ್ಲಿ ಸಂಚಾರ ದಟ್ಟಣೆಯುಂಟಾಗಿ ಗಂಟೆಗಟ್ಟಲೆ ವಾಹನಗಳು ಸರತಿ ಸಾಲಿನಲ್ಲಿ ನಿಲ್ಲುವಂತ ಪರಿಸ್ಥಿತಿ ಎದುರಾಗುತ್ತದೆ.

‘ದುರಸ್ತಿ ಕಾರ್ಯ ಪ್ರಗತಿಯಲ್ಲಿ’

‘ಮಹದೇಶ್ವರ ಬೆಟ್ಟದ ವ್ಯಾಪ್ತಿ ವನ್ಯಧಾಮ ಹಾಗೂ ಪರಿಸರ ಸೂಕ್ಷ್ಮವಲಯ ಎಂದು ಘೋಷಣೆಯಾಗಿರುವುದರಿಂದ ರಸ್ತೆ ವಿಸ್ತರಣೆಗೆ ಅವಕಾಶವಿಲ್ಲ. ಇರುವ ರಸ್ತೆಯನ್ನೇ ರಿಪೇರಿ ಮಾಡಲಾಗುತ್ತಿದೆ’ ಎಂದು ಅಧಿಕಾರಿಗಳು ಹೇಳುತ್ತಾರೆ. 

‘ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸಿ ಅನುಮೋದನೆಗಾಗಿ ಕಳುಹಿಸಿಕೊಡಲಾಗಿತ್ತು. ಶಾಸಕರು ಕಾಮಗಾರಿ ನಡೆಸಲು ಅನುಮತಿ ನೀಡಿದ್ದಾರೆ. ಈ ಹಿಂದೆ ನಡೆದ ಪ್ರಾಧಿಕಾರದ ಸಭೆಯಲ್ಲಿ ಇದಕ್ಕಾಗಿ ₹ 40 ಕೋಟಿ ಅನುದಾನ ಮೀಸಲಿಡಲಾಗಿದೆ. 5.5 ಮೀ ಡಾಂಬರೀಕರಣ ಸೇರಿದಂತೆ ರಸ್ತೆಯ ಎರಡೂ ಬದಿಗಳಲ್ಲಿ ಮಳೆ ನೀರು ಹರಿಯಲು ವ್ಯವಸ್ಥೆ ಮಾಡಲಾಗಿದೆ’ ಎಂದು ಮಹದೇಶ್ವರ ಬೆಟ್ಟದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಲ್ಲಿಯವರೆಗೆ ತಾಳಬೆಟ್ಟದಿಂದ ಇರುವ 21 ತಿರುವಿನಲ್ಲಿ ಕಿತ್ತು ಬಂದಿರುವ ರಸ್ತೆಗೆ ಡಾಂಬರೀಕರಣ ಹಾಗೂ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡಲಾಗುತ್ತಿದೆ. ತಿಂಗಳೊಳಗೆ ಈ ಕಾರ್ಯ ಮುಗಿಯಲಿದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು