ಡೆಮಾಕ್ರಟಿಕ್‌ ಪ್ರಾಬಲ್ಯ: ಟ್ರಂಪ್‌ಗೆ ಹಿನ್ನಡೆ

7
ಮಧ್ಯಂತರ ಚುನಾವಣೆ: ಜನಪ್ರತಿನಿಧಿಗಳ ಸಭೆಯಲ್ಲಿ ಹೆಚ್ಚು ಸ್ಥಾನ: ರಿಪಬ್ಲಿಕನ್‌ ಹಿಡಿತದಲ್ಲೇ ಸೆನೆಟ್‌

ಡೆಮಾಕ್ರಟಿಕ್‌ ಪ್ರಾಬಲ್ಯ: ಟ್ರಂಪ್‌ಗೆ ಹಿನ್ನಡೆ

Published:
Updated:
Deccan Herald

ವಾಷಿಂಗ್ಟನ್: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷ ಹೆಚ್ಚು ಸ್ಥಾನಗಳನ್ನು ಪಡೆದು ಜನಪ್ರತಿನಿಧಿಗಳ ಸಭೆಯನ್ನು ನಿಯಂತ್ರಣಕ್ಕೆ ತೆಗದುಕೊಂಡಿದೆ.

ಇದರಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಹಿನ್ನಡೆಯಾಗಿದೆ. ಟ್ರಂಪ್‌, ಅಮೆರಿಕ ಅಧ್ಯಕ್ಷರಾದ ಬಳಿಕ ನಡೆದ ಮೊದಲ ಚುನಾವಣೆ ಇದಾಗಿತ್ತು. ಮಂಗಳವಾರ ನಡೆದ ಮತದಾನವನ್ನು ಡೊನಾಲ್ಡ್‌ ಟ್ರಂಪ್‌ ಅವರ ಆಡಳಿತದ ಜನಪ್ರಿಯತೆ ಕುರಿತು ಅಭಿಪ್ರಾಯ ಸಂಗ್ರಹಿಸುವ ಜನಮತಗಣನೆ ಎಂದೇ ಬಿಂಬಿಸಲಾಗಿತ್ತು. ಆದರೆ, ಟ್ರಂಪ್‌ ಅವರು ಇದೊಂದು ಅದ್ಭುತ ಯಶಸ್ಸು ಎಂದು ಬಣ್ಣಿಸಿದ್ದಾರೆ.

ಡೆಮಾಕ್ರಟಿಕ್‌ ಪಕ್ಷದ ಪ್ರಾಬಲ್ಯದಿಂದ ಟ್ರಂಪ್‌ ಅವರು ಜಾರಿಗೊಳಿಸಲು ಉದ್ದೇಶಿಸಿರುವ ಕಾನೂನುಗಳು ಮತ್ತು ಯೋಜನೆಗಳಿಗೆ ಅನುಮೋದನೆ ಪಡೆದುಕೊಳ್ಳುವುದು ಕಷ್ಟಸಾಧ್ಯವಾಗಲಿದೆ. ಜತೆಗೆ 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಹಸ್ತಕ್ಷೇಪ ಕುರಿತು ತನಿಖೆ ಮತ್ತು ಟ್ರಂಪ್‌ ಅವರ ವಿರುದ್ಧ ವಾಗ್ದಂಡನೆಗೂ ಮುಂದಾಗಬಹುದು ಎಂದು ವಿಶ್ಲೇಷಿಸಲಾಗಿದೆ.

ಆದರೆ, ರಿಪಬ್ಲಿಕನ್‌ ಪಕ್ಷ ಸೆನೆಟ್‌ ಅನ್ನು ತನ್ನ ಹಿಡಿತವನ್ನು ಉಳಿಸಿಕೊಂಡಿದೆ.

ಪ್ರಸ್ತುತ ಜನಪ್ರತಿನಿಧಿಗಳ ಸಭೆಯಲ್ಲಿ ರಿಪಬ್ಲಿಕನ್ಸ್‌ನ 235 ಮತ್ತು ಡೆಮಾಕ್ರಟ್ಸ್‌ನ 193 ಸದಸ್ಯರಿದ್ದಾರೆ. ಚುನಾವಣಾ ಫಲಿತಾಂಶ ಸಂಪೂರ್ಣ ಪ್ರಕಟವಾಗಿಲ್ಲ. ಇದುವರೆಗಿನ ಫಲಿತಾಂಶದ ಪ್ರಕಾರ ಡೆಮಾಕ್ರಟಿಕ್ ಪಕ್ಷ ಹೆಚ್ಚುವರಿಯಾಗಿ 23 ಸ್ಥಾನಗಳಲ್ಲಿ ಜಯಗಳಿಸಿದೆ.  

435 ಸದಸ್ಯರ ಜನಪ್ರತಿನಿಧಿಗಳ ಸಭೆಯಲ್ಲಿ ನ್ಯಾನ್ಸಿ ಪೆಲೊಸಿ (78) ಸ್ಪೀಕರ್‌ ಆಗಿ ಮತ್ತೆ ಆಯ್ಕೆಯಾಗುವ ಸಾಧ್ಯತೆಗಳಿವೆ. ‘ಡೆಮಾಕ್ರಟಿಕ್‌ ಪಕ್ಷ ಪ್ರಬಲ ವಿರೋಧ ಪಕ್ಷವಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಲಿದೆ’ ಎಂದು ಚುನಾವಣೆ ಫಲಿತಾಂಶದ ಬಳಿಕ ನ್ಯಾನ್ಸಿ ಪೆಲೊಸಿ ಪ್ರತಿಕ್ರಿಯಿಸಿದ್ದಾರೆ.

ಡೊನಾಲ್ಡ್‌ ಟ್ರಂಪ್‌ ನೇತೃತ್ವದ ರಿಪಬ್ಲಿಕ್‌ ಪಕ್ಷ 100 ಸದಸ್ಯರ ಸೆನೆಟ್‌ನಲ್ಲಿ ಬಹುಮತ ಉಳಿಸಿಕೊಂಡಿದೆ. ಸದ್ಯ ಸೆನೆಟ್‌ನಲ್ಲಿ 51 ರಿಪಬ್ಲಿಕನ್ಸ್‌ ಮತ್ತು 49 ಡೆಮಾಕ್ರಟ್ಸ್‌ ಸದಸ್ಯರಿದ್ದಾರೆ. ಈ ಬಾರಿ 51ರಿಂದ 54 ಸ್ಥಾನಗಳನ್ನು ರಿಪಬ್ಲಿಕನ್ಸ್‌ ಪಡೆದಿದ್ದಾರೆ.

ಇವರು ಮೊದಲಿಗರು
ಮಧ್ಯಂತರ ಚುನಾವಣೆಯಲ್ಲಿ ಮೊದಲ ಬಾರಿ ಇಬ್ಬರು ಮುಸ್ಲಿಂ ಮಹಿಳೆಯರು, ಮತ್ತು ಸಲಿಂಗಿಯೊಬ್ಬರು ಗವರ್ನರ್‌ ಆಗಿ ಆಯ್ಕೆಯಾಗಿದ್ದಾರೆ.

ರಶೀದಾ ತ್ಲೈಬ್‌ ಮತ್ತು ಇಲ್ಹಾನ್‌ ಒಮರ್‌ ಆಯ್ಕೆಯಾದ ಮುಸ್ಲಿಂ ಮಹಿಳಾ ಸದಸ್ಯೆಯರು. ಒಮರ್‌ ಅವರು ಮೊದಲ ಸೋಮಾಲಿ–ಅಮೆರಿಕನ್ನರು. ಎರಡು ದಶಕಗಳ ಹಿಂದೆ ನಿರಾಶ್ರಿತರಾಗಿ ಅಮೆರಿಕಗೆ ಒಮರ್‌ ವಲಸೆ ಬಂದಿದ್ದರು.

ಈ ಬಾರಿ ಚುನಾವಣೆಯಲ್ಲಿ ಮಹಿಳೆಯರು ಅತಿ ಹೆಚ್ಚು ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಇದುವರೆಗಿನ ಫಲಿತಾಂಶದ ಪ್ರಕಾರ ಡೆಮಾಕ್ರಟಿಕ್‌ ಪಕ್ಷದ 83 ಮತ್ತು ರಿಪಬ್ಲಿಕನ್‌ ಪಕ್ಷದ 12 ಮಹಿಳೆಯರು ಆಯ್ಕೆಯಾಗಿದ್ದಾರೆ.

ಕೊಲೊರಾಡೊ ಗವರ್ನರ್‌ ಆಗಿ ಆಯ್ಕೆಯಾಗಿರುವ ಜರೇಡ್‌ ಪೊಲಿಸ್‌ ಮೊದಲ ಸಲಿಂಗಿಯಾಗಿದ್ದಾರೆ.

ಗವರ್ನರ್‌ ಹುದ್ದೆಗೆ ನಡೆದ ಚುನಾವಣೆಯಲ್ಲೂ ಡೆಮಾಕ್ರಟಿಕ್ ಪಕ್ಷ ಕೆಲವು ಮಹತ್ವದ ಸ್ಥಳಗಳಲ್ಲಿ ಜಯಗಳಿಸಿದೆ. ಕನ್ಸಾಸ್‌, ಇಲ್ಲಿನೊಯಿಸ್‌, ಮಿಚಿಗನ್‌ ಮತ್ತು ಮಿನ್ನೆಸೋಟಾದಲ್ಲಿ ಡೆಮಾಕ್ರಟಿಕ್‌ ಪಕ್ಷ ಜಯ ಸಾಧಿಸಿದ್ದು, ಫ್ಲಾರಿಡಾದಲ್ಲಿ ರಿಪಬ್ಲಿಕನ್‌ ಪಕ್ಷ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.

ಭಾರತ–ಅಮೆರಿಕನ್ನರ ಗುಂಪಿನಲ್ಲಿ ಗುರುತಿಸಿಕೊಂಡಿರುವ ನಾಲ್ವರು ಮರು ಆಯ್ಕೆಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !