ರೈತ ದಸರಾ, ವಾಕಥಾನ್‌, ಚಲನಚಿತ್ರೋತ್ಸವ ಆಯೋಜನೆ

7
ಜಿಲ್ಲಾ ದಸರಾ ಮಹೋತ್ಸವಕ್ಕೆ ಮತ್ತಷ್ಟು ಕಾರ್ಯಕ್ರಮಗಳ ಸೇರ್ಪಡೆ

ರೈತ ದಸರಾ, ವಾಕಥಾನ್‌, ಚಲನಚಿತ್ರೋತ್ಸವ ಆಯೋಜನೆ

Published:
Updated:
Deccan Herald

ಚಾಮರಾಜನಗರ: ನಗರದಲ್ಲಿ ಅಕ್ಟೋಬರ್‌ 13ರಿಂದ 16ರವರೆಗೆ ನಡೆಯಲಿರುವ ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಇನ್ನಷ್ಟು ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ಸೇರ್ಪಡೆ ಮಾಡಿದೆ.

ರೈತ ‌ದಸರಾ, ದಸರಾ ನಡಿಗೆ, ಚಲನಚಿತ್ರೋತ್ಸವ ಮತ್ತು ಫಲಪುಷ್ಪ ಪ್ರದರ್ಶನಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಬೃಹತ್‌ ಮೆರವಣಿಗೆ: ಜಿಲ್ಲೆಯಲ್ಲಿ 2013ರಿಂದ ಪ್ರತಿವರ್ಷ ದಸರಾ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಮುಖ್ಯಮಂತ್ರಿ ಅವರು ದಸರಾ ಆಚರಣೆಗಾಗಿ ಅನುದಾನ ಕೊಟ್ಟಿದ್ದಾರೆ. ₹1ಕೋಟಿ ಅನುದಾನ ಕೇಳಿದ್ದೆವು. ₹50 ಲಕ್ಷ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಬೃಹತ್‌ ಮೆರವಣಿಗೆ: ಅಕ್ಟೋಬರ್‌ 5 ಗಂಟೆಗೆ ದಸರಾ ಮಹೋತ್ಸವಕ್ಕೆ ಅಧಿಕೃತವಾಗಿ ಚಾಲನೆ ಸಿಗುವುದಕ್ಕೂ ಮೊದಲು ಚಾಮರಾಜನಗರದಲ್ಲಿ ಬೃಹತ್‌ ಮೆರವಣಿಗೆ ನಡೆಯಲಿದೆ. ನಂದಿಧ್ವಜ, ನಾದಸ್ವರ ಮತ್ತು ಒಂದು ಸಾವಿರ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಪ್ರಮುಖ ಬೀದಿಗಳಲ್ಲಿ ಸಾಗುವ ಮೆರವಣಿಗೆ ಚಾಮರಾಜೇಶ್ವರ ದೇವಾಲಯದಲ್ಲಿ ಮುಕ್ತಾಯಗೊಳ್ಳಲಿದೆ.

ರೈತ ದಸರಾ: 15ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಜಿಲ್ಲಾಡಳಿತ ಭವನದ ಜೆ.ಎಚ್‌. ಪಟೇಲ್‌ ಸಭಾಂಗಣದಲ್ಲಿ ರೈತ ದಸರಾ ಕಾರ್ಯಕ್ರಮ ನಡೆಯಲಿದೆ.

ದಸರಾ ನಡಿಗೆ: 16ರಂದು ಬೆಳಿಗ್ಗೆ 7 ಗಂಟೆಗೆ ವಾಕಥಾನ್‌ ಕಾರ್ಯಕ್ರಮ ‘ದಸರಾ ನಡಿಗೆ’ ಹಮ್ಮಿಕೊಳ್ಳಲಾಗಿದೆ. ಕಾಲೇಜು ವಿದ್ಯಾರ್ಥಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ 500 ಜನರು ಇದರಲ್ಲಿ ಭಾಗವಹಿಸಲಿದ್ದಾರೆ.

ಫಲಪುಷ್ಪ ಪ್ರದರ್ಶನ: ದಸರಾ ಅಂಗವಾಗಿ ತೋಟಗಾರಿಕಾ ಇಲಾಖೆ ವತಿಯಿಂದ ಜಿಲ್ಲಾಡಳಿತ ಭವನದ ಆವರಣದಲ್ಲಿ ಅಕ್ಟೋಬರ್‌ 20ರಿಂದ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುವುದು. ಇದು ನಾಲ್ಕು ದಿನಗಳ ಕಾಲ ನಡೆಯಲಿದೆ ಎಂದು ಸಚಿವರು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ. ಹರೀಶ್‌ ಕುಮಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ ಇದ್ದರು.

ನಾಲ್ಕು ದಿನ ಕನ್ನಡ ಚಲನಚಿತ್ರಗಳ ಪ್ರದರ್ಶನ

ದಸರಾ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಚಲನಚಿತ್ರೋತ್ಸವ ಹಮ್ಮಿಕೊಂಡಿದೆ. 13ರಿಂದ 16ರವರೆಗೆ ಪ್ರತಿದಿನ ಬೆಳಿಗ್ಗೆ 10 ಗಂಟೆಗೆ (ಬೆಳಗಿನ ಪ್ರದರ್ಶನ) ಪಟ್ಟಣದ ಭ್ರಮರಾಂಭ ಮತ್ತು ಸಿಂಹ ಮೂವಿ ಪ್ಯಾರಡೈಸ್‌ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಚಿತ್ರಗಳನ್ನು ವೀಕ್ಷಿಸಲು ಪ್ರವೇಶ ಉಚಿತ.

ಎಲ್ಲಿ, ಯಾವ ಚಿತ್ರ?

ಅ.13: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು (ಭ್ರಮರಾಂಭ ಚಿತ್ರಮಂದಿರ), ಟಗರು (ಸಿಂಹ ಮೂವಿ ಪ್ಯಾರಡೈಸ್‌).

ಅ.14: ದಯವಿಟ್ಟು ಗಮನಿಸಿ (ಭ್ರಮರಾಂಭ ಚಿತ್ರಮಂದಿರ), ಮುಗುಳುನಗೆ (ಸಿಂಹ ಮೂವಿ ಪ್ಯಾರಡೈಸ್‌).

ಅ.15: ರಾಜು ಕನ್ನಡ ಮೀಡಿಯಂ (ಭ್ರಮರಾಂಭ ಚಿತ್ರಮಂದಿರ), ಹೆಬ್ಬೆಟ್ಟು ರಾಮಕ್ಕ (ಸಿಂಹ ಮೂವಿ ಪ್ಯಾರಡೈಸ್‌).

ಅ.16: ನಾಗರಹಾವು (ಭ್ರಮರಾಂಭ ಚಿತ್ರಮಂದಿರ), ಕಾನೂರಾಯಣ (ಸಿಂಹ ಮೂವಿ ಪ್ಯಾರಡೈಸ್‌).

‘ಎಲ್ಲವನ್ನೂ ಜಿ.ಟಿ. ದೇವೇಗೌಡರೇ ಮಾಡುತ್ತಿದ್ದಾರೆ’

ನಾಡ ಹಬ್ಬ ಮೈಸೂರು ದಸರಾದಲ್ಲಿ ಭಾಗವಹಿಸದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪುಟ್ಟರಂಗಶೆಟ್ಟಿ, ’ನಾನು ಕೇಳಿದ ಮೇಲೆ, ದಸರಾ ಸಮಿತಿಯಲ್ಲಿ ನಾಮಕವಾಸ್ತೆಗೆ ಉಪಾಧ್ಯಕ್ಷರನ್ನಾಗಿ ಮಾಡಿದರು. ಯಾವ ಉಪ ಸಮಿತಿಗಳಿಗೂ ನನ್ನನ್ನು ಪರಿಗಣಿಸಲಿಲ್ಲ. ಎಲ್ಲವನ್ನೂ ಜಿ.ಟಿ.ದೇವೇಗೌಡರೇ ಮಾಡುತ್ತಿದ್ದಾರೆ. ಹಾಗಾಗಿ, ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ’  ಎಂದು ಹೇಳಿದರು.

‘ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ನಾನೊಬ್ಬನೇ ಕಾಂಗ್ರೆಸ್‌ ಸಚಿವನಿದ್ದೇನೆ. ಟಿ.ಟಿ. ದೇವೇಗೌಡ ಅವರು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ’ ಎಂದು ಅವರು ಹೇಳಿದರು.

‘ಅಂದ ಮಾತ್ರಕ್ಕೆ ಮೈತ್ರಿಯಲ್ಲಿ ಏನೂ ಅಸಮಾಧಾನವಿಲ್ಲ. ಕುಮಾರಸ್ವಾಮಿ ಅವರು ಸರ್ಕಾರವನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !