ಶನಿವಾರ, ಸೆಪ್ಟೆಂಬರ್ 25, 2021
25 °C
ಪ್ಲಾಸ್ಟಿಕ್‌ ಬಳಕೆಗೆ ಬೀಳದ ಕಡಿವಾಣ, ರಾಜಾರೋಷವಾಗಿ ಬಳಕೆಯಾಗುತ್ತಿದೆ ಪ್ಲಾಸ್ಟಿಕ್‌

ಚಾಮರಾಜನಗರ: ಗಲ್ಲಿ, ರಸ್ತೆ, ಬಡಾವಣೆಗಳಲ್ಲಿ ತ್ಯಾಜ್ಯದ ಹಾವಳಿ

ರವಿ.ಎನ್‌ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಪ್ಲಾಸ್ಟಿಕ್‌ ಬಳಕೆಯನ್ನು ನಿಷೇಧಿಸಿದ್ದರೂ ನಗರದಲ್ಲಿ ಅದರ ಬಳಕೆಗೆ ಕಡಿವಾಣ ಬಿದ್ದಿಲ್ಲ. ನಗರದ ಬಡಾವಣೆಯ ಗಲ್ಲಿಗಳು, ಖಾಲಿ ನಿವೇಶನ, ರಸ್ತೆ ತಿರುವು, ಹೋಟೆಲ್, ಚರಂಡಿ, ಬಸ್‌ ನಿಲ್ದಾಣ ಹೀಗೆ ಎಲ್ಲೆಡೆಯೂ ಪ್ಲಾಸ್ಟಿಕ್ ತ್ಯಾಜ್ಯವೇ ರಾರಾಜಿಸುತ್ತಿದೆ. 

ನಗರಸಭೆ ಆಡಳಿತದ ಪ್ಲಾಸ್ಟಿಕ್‌ ಬಳಕೆ ವಿರುದ್ಧದ ಕಾರ್ಯಾಚರಣೆ ಅಂಗಡಿಗಳ ಮೇಲಿನ ದಾಳಿಗೆ ಸೀಮಿತವಾಗಿದೆ. ಜನ ದಿನನಿತ್ಯದ ಬಳಕೆಯಲ್ಲಿ ಪ್ಲಾಸ್ಟಿಕ್‌ ಅನ್ನು ಮಿತಿ ಮೀರಿ ಬಳಸುತ್ತಿದ್ದಾರೆ. ನಗರದಲ್ಲಿ ಒಂದು ಸುತ್ತು ಹಾಕಿದರೆ, ಪ್ಲಾಸ್ಟಿಕ್‌ ಬಳಕೆಯ ವಿರಾಟ್‌ ರೂಪ ದರ್ಶನವಾಗುತ್ತದೆ. ನಗರಸಭೆ ಯಾವುದೋ ಕಾಲಕ್ಕೊಮ್ಮೆ ತುಂಬಿದ ಚರಂಡಿಗಳ ಹೂಳು ತೆಗೆಯುತ್ತಿದ್ದಂತೆ ಪಕ್ಕದ ರಸ್ತೆ ಇಕ್ಕೆಲಗಳು ಪ್ಲಾಸ್ಟಿಕ್‌ಮಯವಾಗುತ್ತವೆ.

ಎಲ್ಲೆಂದರಲ್ಲಿ ಪ್ಲಾಸ್ಟಿಕ್‌: ಊಟದ ತಟ್ಟೆ, ಚಹಾ ಕಪ್, ಕುಡಿವ ನೀರಿಗೂ ಪ್ಲಾಸ್ಟಿಕ್ ಕಪ್‌ಗಳನ್ನೇ ಬಳಸಲಾಗುತ್ತಿದೆ. ಸಣ್ಣ ಪುಟ್ಟ ಅಂಗಡಿ ಮಳಿಗೆಗಳಲ್ಲಿ, ಟೀ ಸ್ಟಾಲ್‌, ಫಾಸ್ಟ್‌ ಫುಡ್‌ಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಕಂಡು ಬರುತ್ತಿದೆ. ಜನರು ಕೂಡ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಕವರ್‌ಗಳನ್ನೇ ಕೇಳುತ್ತಾರೆ.

ರಾಜ್ಯ ಸರ್ಕಾರ ಎಲ್ಲ ಬಗೆಯ ಪ್ಲಾಸ್ಟಿಕ್‌ ಉತ್ಪನ್ನಗಳ ತಯಾರಿಕೆ, ಮಾರಾಟ, ಸಾಗಣೆ ಮಾಡುವುದನ್ನು ನಿಷೇಧಿಸಿದೆ. ಆದರೆ, ನಗರಸಭೆ ಆಡಳಿತ ಅಪರೂಪಕ್ಕೊಮ್ಮೆ ಮಳಿಗೆಗಳಿಗೆ ದಿಢೀರ್‌ ದಾಳಿ ನಡೆಸಿ ಪ್ಲಾಸ್ಟಿಕ್‌ ಕವರ್‌ಗಳನ್ನು ವಶ ಪಡಿಸಿಕೊಂಡು ದಂಡ ವಿಧಿಸುತ್ತಿದೆ. ಇದರಿಂದ ಸರ್ಕಾರದ ಆದೇಶ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ.

‘ಕೆಲ ಅಂಗಡಿಗಳನ್ನು ಬಿಟ್ಟು ಇಂದಿಗೂ 40 ಮೈಕ್ರಾನ್‌ಗಿಂತಲೂ ಕಡಿಮೆ ದಪ್ಪ ಇರುವ ಪ್ಲಾಸ್ಟಿಕ್‌ ಕವರ್‌ ಬಳಕೆಯಲ್ಲಿದೆ. ಸಾರ್ವಜನಿಕರೂ ಪ್ಲಾಸ್ಟಿಕ್‌ ಕವರ್‌ ಕೊಡಿ ಎಂದು ಕೇಳುತ್ತಾರೆ. ಅಂಗಡಿಯವರು ಕೊಡಲೇ ಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಈ ಬಗ್ಗೆ ನಗರಸಭೆ ಆಡಳಿತ ಸಮರ್ಪಕವಾಗಿ ಅರಿವು ಊಡಿಸುವ ಕಾರ್ಯ ಮಾಡಬೇಕು. ಸರ್ಕಾರದ ಆದೇಶ ಪಾಲನೆಗೆ ಮುಂದಾಗಬೇಕು’ ಎಂದು ಶಿಕ್ಷಕ ಮಹದೇವಸ್ವಾಮಿ ಸಲಹೆ ನೀಡುತ್ತಾರೆ. 

ಉಳಿಕೆ ಆಹಾರ ಪದಾರ್ಥ ರವಾನೆ: ‘ನಗರ ಪ್ರದೇಶದ ಅರಿವಿಲ್ಲದ ಕೆಲ ನಿವಾಸಿಗಳು ಉಳಿದಂತಹ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್‌ನಲ್ಲಿ ಕಟ್ಟಿ ಗಲ್ಲಿಯೊಳಗೆ ಬಿಸಾಕುತ್ತಾರೆ. ಇದರ ವಾಸನೆಗೆ ಸಾಕು ಪ್ರಾಣಿಗಳು, ಪಕ್ಷಗಳು ಪ್ಲಾಸ್ಟಿಕ್‌ ಕವರ್‌ಗೆ ಬಾಯಿ ಹಾಕಿ ಆಹಾರ ಹುಡುಕುತ್ತವೆ. ಇದರಿಂದ ಅವುಗಳ ಪ್ರಾಣಕ್ಕೆ ಕುತ್ತು ಬೀಳುತ್ತದೆ. ಆದ್ದರಿಂದ ನಗರಸಭೆ ಆಡಳಿತ ನಗರದ ವ್ಯಾಪ್ತಿ ನಿವಾಸಿಗಳು, ಸಾರ್ವಜನಿಕರು, ಅಂಗಡಿ ಮಳಿಗೆಯವರು ಬಟ್ಟೆಯಿಂದ ತಯಾರಿಸಿದ ಕೈ ಚೀಲಗಳನ್ನು ಬಳಸುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.

ತ್ಯಾಜ್ಯ ತೆರವಿಗೆ ಕ್ರಮ: ‘ವಾರ್ಡ್ಗೆ ಒಬ್ಬರಂತೆ ಎಲ್ಲ ವಾರ್ಡ್‌ಗಳಿಗೂ ನೇಮಕ ಮಾಡಿರುವವರು ಪ್ಲಾಸ್ಟಿಕ್ ತ್ಯಾಜ್ಯ ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತಾರೆ’ ಎಂದು ನಗರಸ‌ಭೆಯ ಆಯುಕ್ತ ಎಂ.ರಾಜಣ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರಸಭೆಯಿಂದ ಎರಡು ತಿಂಗಳಿಗೊಮ್ಮೆ ಹೆಚ್ಚಿನ ತ್ಯಾಜ್ಯ ವಿಲೇವಾರಿಗೆ ಮೂರು ಜನರಿರುವ ಗುಂಪುಗಳು ಕೆಲಸ ಮಾಡುತ್ತಿವೆ. ಇಂತಹ ಎಂಟು ಗುಂಪುಗಳಿವೆ. ಹೆಚ್ಚು ತ್ಯಾಜ್ಯ ಇರುವ ವಾರ್ಡ್‌ಗಳಲ್ಲಿ ಅವರು ವಿಲೇವಾರಿ ಮಾಡುತ್ತಾರೆ’ ಎಂದು ಅವರು ಮಾಹಿತಿ ನೀಡಿದರು.

ಪ್ಲಾಸ್ಟಿಕ್‌ ಬಳಕೆ: ಆರೋಗ್ಯಕ್ಕೆ ಹಾನಿ

ಪ್ಲಾಸ್ಟಿಕ್‌ ಕಪ್‌ನಲ್ಲಿ ಬಿಸಿ ಮಾಡಿದ ಕಾಫಿ, ಹಾಲು, ಟೀ ಇತ್ಯಾದಿ ದ್ರವ ರೂಪದ ಆಹಾರ ಸೇವನೆಯಿಂದ ಜೀವ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. 

‘ಪ್ಲಾಸ್ಟಿಕ್ ಕವರ್‌ಗಳಲ್ಲಿ ಬಿಸಿಯಾದ ಸಾಂಬಾರ್, ಚಹ ಮತ್ತು ಕಾಫಿ ಬಳಕೆ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುವ ಜೊತೆಗೆ ಅತಿಯಾದ ಪ್ಲಾಸ್ಟಿಕ್ ಬಳಕೆ ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೆ ದಾರಿ ಮಾಡಿಕೊಡುತ್ತದೆ. ಅಲ್ಲದೆ, ಬಡಾವಣೆ, ರಸ್ತೆ ಬದುಗಳಲ್ಲಿ ವಿಲೇವಾರಿ ಮಾಡಲಾದ ಪ್ಲಾಸ್ಟಿಕ್ ತ್ಯಾಜ್ಯದಿಂದ ಪ್ರಾಣಿ ಪಕ್ಷಿಗಳ ಮೇಲೆಯೂ ದುಷ್ಪರಿಣಾಮ ಬೀರುತ್ತದೆ.  ಸ್ವಲ್ಪ ಕಷ್ಟವಾದರೂ ಪರಿಸರ ಸ್ನೇಹಿ ವಸ್ತುಗಳನ್ನು ಬಳಕೆ ಮಾಡುವುದು ಸೂಕ್ತ’ ಎಂದು ಹೇಳುತ್ತಾರೆ ಪರಿಸರವಾದಿಗಳು.

‘ನಿಯಂತ್ರಣಕ್ಕೆ ಕ್ರಮ’

‘ತಿಂಗಳಿಗೆ ಎರಡು ಬಾರಿ ಎಲ್ಲ ಅಂಗಡಿ, ಹೋಟೆಲ್, ಕ್ಯಾಂಟಿನ್‌ಗಳಿಗೆ ದಾಳಿ ಮಾಡಿ ಎಲ್ಲ ಪ್ಲಾಸ್ಟಿಕ್ ಗಳನ್ನು ವಶಕ್ಕೆ ಪಡೆಯುತ್ತಿದ್ದೇವೆ. ಮಾಲೀಕರಿಗೆ ದಂಡವನ್ನು ವಿಧಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತೆ ಅದೇ ಮಾಲೀಕರು ಅಥವಾ ಪ್ಲಾಸ್ಟಿಕ್‌ ಮಾರಾಟ ಮಾಡುವವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕುವ ಯೋಚನೆ ಇದೆ. ಇದನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಬಳಿಕ ಕ್ರಮ ಕೈಗೊಳ್ಳುತ್ತೇವೆ’ ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಶರವಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು