ಭಾನುವಾರ, ಮೇ 16, 2021
22 °C
ನಗರದ ಅನೇಕ ರಸ್ತೆಗಳು ಗುಂಡಿ; ವಾಹನ ಚಾಲಕರ ಪರದಾಟ

ಹೆದ್ದಾರಿಯಲ್ಲಿ ಸೋರುತ್ತಿರುವ ಕಾವೇರಿ, ಗಮನಹರಿಸದ ನಗರಸಭೆ

ರವಿ.ಎನ್ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಗರದ ರಾಷ್ಟ್ರೀಯ ಹೆದ್ದಾರಿ 209ರ ಸತ್ಯಮಂಗಲಕ್ಕೆ ಹೋಗುವ ರಸ್ತೆಯಲ್ಲಿ ಕಾವೇರಿ ಕುಡಿಯುವ ನೀರು ಪೈಪ್‌ಲೈನ್‌ನಲ್ಲಿ ಹಲವು ದಿನಗಳಿಂದ ಸೋರಿಕೆ ಕಂಡು ಬಂದಿದ್ದು, ಸುರಸ್ತಿಗೆ ನಗರಸಭೆ ಕ್ರಮ ಕೈಗೊಂಡಿಲ್ಲ.

ನೀರಿನ ಸೋರಿಕೆಯಿಂದಾಗಿ ಎಪಿಎಂಸಿಗೆ ಹೋಗುವ ರಸ್ತೆಯ ಮುಂಭಾಗದಲ್ಲಿ ಹಳ್ಳಬಿದ್ದಿದ್ದು ವಾಹನ ಸವಾರರು ಪರದಾಡುವಂತಾಗಿದೆ.

ಈ ರಸ್ತೆಯು ತಮಿಳುನಾಡಿಗೆ ಸಂಪರ್ಕ ಕಲ್ಪಿಸುತ್ತದೆ. ನಿತ್ಯವೂ ದೊಡ್ಡ ಗಾತ್ರದ ವಾಹನಗಳು ಸಂಚರಿಸುತ್ತವೆ. ಎರಡು ವರ್ಷಗಳ ಹಿಂದೆ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗಿದೆ. ವಿಭಜಕವನ್ನೂ ಅಳವಡಿಸಲಾಗಿದೆ.

ರಸ್ತೆಯ ಮಧ್ಯದಲ್ಲೇ ಕಾವೇರಿ ನೀರಿನ ಪೈಪ್‌ ಅಳವಡಿಸಲಾಗಿದೆ. ನೀರು ಸೋರಿಕೆಯಾಗುತ್ತಿರುವುದರಿಂದ ರಸ್ತೆಯಲ್ಲಿ ನೀರು ನಿಂತುಕೊಳ್ಳುತ್ತಿದೆ. ಸೋರಿಕೆಯಾಗಿ ಸ್ಥಳದಲ್ಲಿ ಹೊಂಡವೂ ನಿರ್ಮಾಣವಾಗಿದ್ದು ಅಪಾಯವನ್ನು ಆಹ್ವಾನಿಸುತ್ತಿದೆ. ಸದ್ಯ ಸ್ಥಳೀಯರು ಅಲ್ಲಿಗೆ ಕಲ್ಲನ್ನು ಇಟ್ಟು, ಸವಾರರನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ. 

‘ಒಂದು ತಿಂಗಳಿನಿಂದ ನೀರು ಪೋಲಾಗುತ್ತಿದೆ. ದೂರದಿಂದ ನೋಡುವಾಗ ಗುಂಡಿ ಬಿದ್ದಿರುವುದು ಗೊತ್ತಾಗುವುದಿಲ್ಲ. ದುರಸ್ತಿ ಮಾಡಲು ಯಾರೂ ಕ್ರಮ ಕೈಗೊಂಡಿಲ್ಲ’ ಎಂದು ಎಳನೀರು ವ್ಯಾಪಾರಿ ಸಿದ್ದಶೆಟ್ಟಿ ಹೇಳುತ್ತಾರೆ.

‘ಕಾವೇರಿ ಕುಡಿಯುವ ನೀರಿನ ಪೈಪ್‌ ಒಡೆದಿರುವುದು ಗಮನಕ್ಕೆ ಬಂದಿದೆ. ಶೀಘ್ರವೇ, ಪೈಪ್‌ ಸರಿಪಡಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು’ ಎಂದು ನಗರಸಭೆ ಆಯುಕ್ತ ಎಂ.ರಾಜಣ್ಣ ‌ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಮುಖ್ಯರಸ್ತೆಯಲ್ಲೇ ಗುಂಡಿ: ‘ನಗರದ ಅನೇಕ ಮುಖ್ಯರಸ್ತೆಗಳಲ್ಲಿ ಇಂತಹ ಗುಂಡಿಗಳು ಬಿದ್ದಿವೆ. ಪ್ರವಾಸಿ ಮಂದಿರದ ಎದುರು, ಎಪಿಎಂಸಿ ಸಮೀಪ ಹಾಗೂ ಭುವನೇಶ್ವರಿ ವೃತ್ತದಲ್ಲಿಯೂ ಚರಂಡಿ ನೀರು ರಸ್ತೆಗೆ ಹರಿಯುತ್ತದೆ. ಉತ್ತಮ ರಸ್ತೆ ಇರುವ ಕಡೆಗಳಲ್ಲಿ ಚರಂಡಿ ನೀರು ಹರಿದು ರಸ್ತೆ ಹಾಳಾಗುತ್ತದೆ. ಮತ್ತೊಂದೆಡೆ ಒಳಚರಂಡಿ ಕಾಮಗಾರಿಗಾಗಿ ಇರುವ ರಸ್ತೆಯನ್ನೇ ಅಗೆಯುತ್ತಾರೆ. ಇದರಿಂದ ಸಾರ್ವಜನಿಕರು, ವಾಹನ ಸವಾರರಿಗೆ ತೊಂದರೆ‌ಯಾಗುತ್ತಿದೆ’ ಎಂದು ಹೇಳುತ್ತಾರೆ ಅಟ್ಟುಗುಳಿಪುರ ರವೀಂದ್ರ. 

ವಿದ್ಯುತ್‌ ದೀಪವಿಲ್ಲದೆ ತೊಂದರೆ: ಒಳಚರಂಡಿ ಹದಗೆಟ್ಟಿರುವ ಜಾಗ ವಾಹನ ಸವಾರರಿಗೆ ತಿಳಿಯುವುದಿಲ್ಲ. ಇಲ್ಲೊಂದು ಸೂಚನಾ ಫಲಕ ಇಟ್ಟು ಶೀಘ್ರವೇ ದುರಸ್ತಿಗೆ ಮುಂದಾಗಬೇಕು. ಡಿವೈಡರ್‌ ಇರುವೆಡೆ ವಿದ್ಯುತ್‌ ಕಂಬವಿಲ್ಲ. ಇದರಿಂದಲೂ ರಾತ್ರಿ ಸಂಚರಿಸುವವರಿಗೆ ತೊಂದರೆ ಮತ್ತು ಅಪಘಾತಗಳು ನಡೆಯುತ್ತಿದೆ. ಕೂಡಲೇ, ರಾಷ್ಟ್ರೀಯ ಹೆದ್ದಾರಿಯಲ್ಲಿ ವಿದ್ಯುತ್‌ ದೀಪ ಅಳವಡಿಕೆಗೆ ಸಂಚಾರಿ ಪೊಲೀಸ್‌ ಇಲಾಖೆ ಮುಂದಾಗಬೇಕು ಎಂದು ನಗರ ನಿವಾಸಿ ರತ್ನಮ್ಮ ‘ಪ್ರಜಾವಾಣಿ’ಗೆ ಹೇಳಿದರು.

’ನಿತ್ಯವೂ ಅಪಘಾತ ತಪ್ಪಿದ್ದಲ್ಲ’

‘ಕೃಷಿ ಉತ್ಪನ್ನ ಮಾರುಕಟ್ಟೆ ಎದುರು ಬಿದ್ದಿರುವ ಗುಂಡಿಯನ್ನು ದುರಸ್ತಿ ಪಡಿಸುವ ಕೆಲಸವನ್ನು ಯಾರೂ ಮಾಡಿಲ್ಲ. ಇದರಿಂದ ಸ್ಥಳೀಯರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ’ ಎಂದು ಗಾಳೀಪುರ ನಿವಾಸಿ ಮಹಮ್ಮದ್‌ ಹೇಳುತ್ತಾರೆ.

‘ಎರಡೂ ಬದಿಯಿಂದ ಬರುವ ವಾಹನಗಳು ಹಳ್ಳ ಗಮನಿಸದೇ ಸಂಚರಿಸುತ್ತವೆ. ಹಳ್ಳ ಎದುರಾದಾಗ ಸವಾರರು ತಕ್ಷಣ ಬ್ರೇಕ್‌ ಹಾಕುತ್ತಾರೆ ಅಥವಾ ಸಿಗ್ನಲ್‌ ನೀಡದೇ ಬದಿಗೆ ಸರಿಯುತ್ತಾರೆ. ಇದರಿಂದ ಅಪಘಾತ ನಡೆದು ಸಣ್ಣ ಪುಟ್ಟ ಗಾಯಗಳಾಗಿರುವ ಉದಾಹರಣೆಗಳು ಇವೆ. ತಮಿಳುನಾಡಿಗೆ ನಿತ್ಯವೂ ಭಾರಿಗಾತ್ರದ ಲಾರಿಗಳು ಸಂಚರಿಸುತ್ತವೆ. ಅವುಗಳ ಚಕ್ರ ಹಳ್ಳಕ್ಕೆ ಬಿದ್ದಾಗ ಅದು ಗುಂಡಿ ಇನ್ನಷ್ಟು ದೊಡ್ಡದಾಗುತ್ತದೆ. ನಗರಸಭೆ ಆಡಳಿತ ಶೀಘ್ರವಾಗಿ ಇದನ್ನು ದುರಸ್ತಿ ಮಾಡಬೇಕು’ ಎನ್ನುತ್ತಾರೆ ಅವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು