ಭಾನುವಾರ, ಡಿಸೆಂಬರ್ 8, 2019
21 °C

ನಂದಿ ಬೆಟ್ಟ: ಏರಿಕೆಯಾಗಲಿದೆ ಪ್ರವೇಶ, ಪಾರ್ಕಿಂಗ್‌ ಶುಲ್ಕ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಂದಿ ಬೆಟ್ಟಕ್ಕೆ ಹೋಗುವ ಆಸೆಯೇ? ಹಾಗಾದರೆ ಈಗಲೇ ಹೋಗಿ. ಇಲ್ಲದಿದ್ದರೆ, ಮುಂಬರುವ ದಿನಗಳಲ್ಲಿ ಪ್ರವೇಶ ಹಾಗೂ ಪಾರ್ಕಿಂಗ್‌ ಶುಲ್ಕ ಏರಿಕೆಯಾಗಲಿದ್ದು, ಪ್ರವಾಸಿಗರು ಹೆಚ್ಚಿನ ಶುಲ್ಕ ಭರಿಸುವುದು ಅನಿವಾರ್ಯವಾಗಲಿದೆ. 

ಹೌದು, ಪ್ರವೇಶ ಶುಲ್ಕ ಹೆಚ್ಚಳಕ್ಕೆ ತೋಟಗಾರಿಕಾ ಇಲಾಖೆ ನಿರ್ಧರಿಸಿದ್ದು, ₹10ರಿಂದ ₹20ಕ್ಕೆ ಏರಿಕೆಯಾಗಲಿದೆ. 

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾರಣದಿಂದಾಗಿ ಸಾರ್ವಜನಿಕರ ಮೇಲೆ ಈ ಹೊರೆ ಬೀಳಲಿದೆ. ಪ್ರವಾಸಿಗರ ವಾಹನಗಳ ಪಾರ್ಕಿಂಗ್‌ ಶುಲ್ಕ ಕೂಡ ಹೆಚ್ಚಳವಾಗಲಿದೆ. ಅಂದರೆ, ಈಗಿರುವ ಶುಲ್ಕಕ್ಕೆ ಶೇಕಡ 18ರಷ್ಟು ಜಿಎಸ್‌ಟಿ ಅನ್ವಯವಾಗಲಿದೆ. ಆದರೆ, ಕ್ಯಾಮೆರಾ ಶುಲ್ಕದಲ್ಲೇನೂ ಬದಲಾವಣೆಯಾಗಿಲ್ಲ.

‘ಈಗಾಗಲೇ ಹೊಸ ಟೆಂಡರ್‌ ಪ್ರಕ್ರಿಯೆ ಅಂತಿಮವಾಗಿದೆ. ಹೊಸ ಗುತ್ತಿಗೆದಾರರು ಬಂದ ಬಳಿಕ ದರಗಳು ಅನ್ವಯವಾಗಲಿವೆ. ಸದ್ಯದ ಟೆಂಡರ್‌ ಅವಧಿ ಜನವರಿಗೆ ಕೊನೆಗೊಳ್ಳಲಿದೆ’ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಎಂ.ಜಗದೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.


ಇಕೋ ವಾಹನಗಳ ಪ್ರಾಯೋಗಿಕ ಸಂಚಾರಕ್ಕೆ ಇನ್ಫೊಸಿಸ್‌ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ (ಎಡದಿಂದ) ಹಾಗೂ ಸಚಿವ ಎಂ.ಸಿ.ಮನಗೂಳಿ ಚಾಲನೆ ನೀಡಿದರು. ಎಂ.ಜಗದೀಶ್‌ ಇದ್ದಾರೆ

ಪರಿಸರಸ್ನೇಹಿ ವಾಹನ:

ನಂದಿಬೆಟ್ಟದಲ್ಲಿ ಇದೀಗ ಪರಿಸರಸ್ನೇಹಿ ಬ್ಯಾಟರಿ ಚಾಲಿತ ವಾಹನಗಳು ಪ್ರವಾಸಿಗರನ್ನು ಹೊತ್ತೊಯ್ಯಲು ಸಿದ್ಧವಾಗಿ ನಿಂತಿವೆ. ಈ ಬ್ಯಾಟರಿಚಾಲಿತ ವಾಹನಗಳ ಪ್ರಾಯೋಗಿಕ ಸಂಚಾರಕ್ಕೆ ಸಚಿವ ಎಂ.ಸಿ.ಮನಗೂಳಿ, ಇನ್ಫೊಸಿಸ್‌ ಫೌಂಡೇಷನ್‌ನ ಮುಖ್ಯಸ್ಥೆ ಸುಧಾಮೂರ್ತಿ ಈಚೆಗೆ ಚಾಲನೆ ನೀಡಿದರು. 

‘ಮೈನಿ ಕಂಪನಿಯವರು ಉಚಿತವಾಗಿ ಈ ಸೇವೆಯನ್ನು ನೀಡುತ್ತಿದ್ದು, ಮೂರು ತಿಂಗಳ ಪ್ರಾಯೋಗಿಕ ಸಂಚಾರಕ್ಕಾಗಿ ಸದ್ಯ ಮೂರು ವಾಹನಗಳನ್ನು ನೀಡಿದ್ದಾರೆ. ಪ್ರತಿ ವಾಹನದಲ್ಲೂ 6 ಸೀಟುಗಳ ಸಾಮರ್ಥ್ಯವಿದೆ. ಸಾರ್ವಜನಿಕರು ಪಾರ್ಕಿಂಗ್‌ ಪ್ರದೇಶದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿದ ನಂತರ ಬೆಟ್ಟ ಸುತ್ತಲು ಈ ವಾಹನಗಳನ್ನು ಬಳಸಬಹುದು. ಅಂದಾಜು 1 ಗಂಟೆ ಅವಧಿಯಲ್ಲಿ ಬೆಟ್ಟವನ್ನು ಸುತ್ತಬಹುದು’ ಎಂದು ಜಗದೀಶ್‌ ತಿಳಿಸಿದರು.

‘ಈ ವಾಹನದಲ್ಲಿ ಸಂಚರಿಸಲು ವಯಸ್ಕರಿಗೆ ₹100, ಮಕ್ಕಳು ಮತ್ತು ಅಂಗವಿಕಲರಿಗೆ ₹50 ಟಿಕೆಟ್‌ ದರ ನಿಗದಿಪಡಿಸಲಾಗಿದೆ. ಸಾರ್ವಜನಿಕರ ಪ್ರತಿಕ್ರಿಯೆ ಆಧರಿಸಿ ಮುಂದಿನ ದಿನಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಿಸುವ ಬಗ್ಗೆ ಯೋಚಿಸಲಿದ್ದೇವೆ’ ಎಂದು ಹೇಳಿದರು.

ಇನ್ಫೊಸಿಸ್‌ ವತಿಯಿಂದ ₹85 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ, ಕೋಟೆ ಪ್ರದೇಶದಿಂದ ಟಿಪ್ಪು ಡ್ರಾಪ್‌ವರೆಗಿನ ಪ್ರದೇಶದಲ್ಲಿರುವ 1 ಕಿ.ಮೀ ಉದ್ದದ ಕಾಲುದಾರಿಯನ್ನೂ ಲೋಕಾರ್ಪಣೆ ಮಾಡಲಾಯಿತು. 

ಭೇಟಿ ನೀಡುವವರ ಸಂಖ್ಯೆ

ಸಾಮಾನ್ಯ ದಿನ; 1,000–1,200

ವಿಶೇಷ ದಿನ; 4,000–4,500

ರಜಾ ದಿನ; 7,500–8,000

*ಏರಿಕೆಯಾದ ಶುಲ್ಕಗಳ ವಿವರ (₹ಗಳಲ್ಲಿ)

ಪ್ರವೇಶ ಶುಲ್ಕ(12 ವರ್ಷ ಮೇಲ್ಪಟ್ಟವರಿಗೆ);20

ದ್ವಿ ಚಕ್ರ; 30 

ನಾಲ್ಕು ಚಕ್ರ;

ಕಾರು (4+1ಸೀಟು)(ಬಸ್‌ ನಿಲ್ದಾಣ ಬಳಿಯ ಪಾರ್ಕಿಂಗ್‌); 125

ಕಾರು (4+1ಸೀಟು)(ಗಿರಿಧಾಮದ ಬಳಿಯ ಪಾರ್ಕಿಂಗ್‌); 175

ಕಾರು (5+1ಸೀಟು)(ಬಸ್‌ ನಿಲ್ದಾಣ ಬಳಿಯ ಪಾರ್ಕಿಂಗ್‌); 150

ಕಾರು (5+1ಸೀಟು)(ಗಿರಿಧಾಮದ ಬಳಿಯ ಪಾರ್ಕಿಂಗ್‌); 175

ತ್ರಿಚಕ್ರ;

(ಬಸ್‌ ನಿಲ್ದಾಣ ಬಳಿಯ ಪಾರ್ಕಿಂಗ್‌);70

(ಗಿರಿಧಾಮದ ಬಳಿಯ ಪಾರ್ಕಿಂಗ್‌);80

* ಕ್ಯಾಮೆರಾ ಶುಲ್ಕ (₹ ಗಳಲ್ಲಿ)

ಕನ್ನಡ ಸಿನಿಮಾ ಚಿತ್ರೀಕರಣ; 20,000

ಇತರೆ ಸಿನಿಮಾ ಚಿತ್ರೀಕರಣ; 25,000

ಧಾರಾವಾಹಿ ಚಿತ್ರೀಕರಣ; 10,000

ಫೋಟೊ ಶೂಟ್‌; 3,000

ಸಾಮಾನ್ಯ ಕ್ಯಾಮೆರಾ; 50

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು