ದೇಶದಲ್ಲೀಗ ಚುನಾವಣೆಯದ್ದೆ ಮಾತು

7
ಮೋದಿ ಆಡಳಿತಕ್ಕೆ ನಾಲ್ಕು ವರ್ಷ

ದೇಶದಲ್ಲೀಗ ಚುನಾವಣೆಯದ್ದೆ ಮಾತು

Published:
Updated:

ದೇಶವನ್ನು ಇದೀಗ ಮುಂಗಾರು ಮೋಡವಷ್ಟೇ ಅಲ್ಲ, ಚುನಾವಣೆಯ ಮೋಡವೂ ಆವರಿಸಿದೆ. ನಿಂತಲ್ಲಿ–ಕುಳಿತಲ್ಲಿ, ಬಸ್ಸು–ರೈಲಿನಲ್ಲಿ ಜನರ ಮಾಮೂಲಿ ಮಾತಿನ ಜೊತೆಗೆ ರಾಜಕೀಯದ ಚರ್ಚೆಯೂ ಸಾಮಾನ್ಯ ಎನಿಸಿದೆ. ಶೀಘ್ರ ಲೋಕಸಭೆ ಚುನಾವಣೆ ನಡೆಯಲಿದೆ ಎಂದು ಬಹುತೇಕರು ನಂಬಿದ್ದಾರೆ. ದೇಶ ನಿಧಾನವಾಗಿ ಚುನಾವಣೆಗೆ ಸಜ್ಜಾಗುತ್ತಿದೆ.

ಸದಾ ಗೆಲುವಿನ ಮಾತನ್ನೇ ಆಡುವ ಪ್ರಧಾನಿ ನರೇಂದ್ರ ಮೋದಿ 2019ರಲ್ಲಿ ಎರಡನೇ ಬಾರಿಗೆ ಆಯ್ಕೆ ಆಗುವ ಗುರಿ ಹೊಂದಿದ್ದಾರೆ. ಮೋದಿಯನ್ನು ಸೋಲಿಸುವ ಮಾತನಾಡುವ ಪಕ್ಷಗಳಿಗ ಒಂದಾಗಲು ಸಮಾನ ಕಾರಣಗಳು ಹುಡುಕುತ್ತಿವೆ. ಮತ್ತೊಂದು ಅವಧಿಯ ಆಡಳಿತಕ್ಕೆ ತಾನು ಸಮರ್ಥ ಎಂಬುದನ್ನು ಬಿಂಬಿಸಿಕೊಳ್ಳಲು ಯೋಜಿತ ರೀತಿಯ ಕಾರ್ಯಾಚರಣೆ ನಡೆಸುತ್ತಿದ್ದಾರೆ. ದೇಶ ಈಗ ಮೋದಿ ಆಡಳಿತದ ನಾಲ್ಕನೇ ವರ್ಷದಲ್ಲಿದೆ. ದೆಹಲಿ ಗದ್ದುಗೆ ಆಳಿದ ಹಿಂದಿನ ಎಲ್ಲ ಪ್ರಧಾನಿಗಳ ಪಾಲಿಗೂ ನಾಲ್ಕನೇ ವರ್ಷ ಮಹತ್ತರ ಕಾಲಘಟ್ಟವೇ ಎನಿಸಿಕೊಂಡಿತ್ತು. ಈ ವರ್ಷವನ್ನು ಮೋದಿ ಹೇಗೆ ನಿಭಾಯಿಸುತ್ತಾರೆ ಎಂಬುದು ಅವರ ಮತ್ತು ಬಿಜೆಪಿಯ ಭವಿಷ್ಯವನ್ನು ನಿರ್ಧರಿಸುತ್ತದೆ.

1984ರ ಚುನಾವಣೆಯಲ್ಲಿ ರಾಜೀವ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ 404 ಸ್ಥಾನಗಳ ಅಭೂತಪೂರ್ವ ಗೆಲುವು ದಾಖಲಿಸಿತ್ತು. ಆದರೆ, ಪ್ರಧಾನಿ ರಾಜೀವ್‌ ಆಡಳಿತದ ನಾಲ್ಕನೇ ವರ್ಷದಲ್ಲಿ ಪಕ್ಷದ ವರ್ಚಸ್ಸು ನೆಲಕಚ್ಚಿತ್ತು. ಅದಕ್ಕೆ ಬೋಫೊರ್ಸ್‌ನಂತ ಹಗರಣ, ಶ್ರೀಲಂಕಾದಲ್ಲಿ ಶಾಂತಿ ಸ್ಥಾಪಿಸಲು ದೇಶದ ಸೇನೆ ಕಳುಹಿಸಿದ್ದು ಹಾಗೂ ರಾಜೀವರ ಸಂಪುಟದಲ್ಲಿಯೇ ರಕ್ಷಣಾ ಮಂತ್ರಿಯಾಗಿದ್ದ ವಿ.ಪಿ.ಸಿಂಗ್‌ ನಾಯಕತ್ವದಲ್ಲಿ ವಿರೋಧಿ ಬಣ ಹುಟ್ಟಿಕೊಂಡಿದ್ದು ಪ್ರಮುಖ ಕಾರಣಗಳಾಗಿದ್ದವು. ಪರಿಣಾಮ 1989ರಲ್ಲಿ ಕಾಂಗ್ರೆಸ್‌ 197 ಸ್ಥಾನಗಳಿಗೆ ತೃಪ್ತವಾಗಬೇಕಾಯಿತು. ವಿ.ಪಿ.ಸಿಂಗ್‌ ನೇತೃತ್ವದಲ್ಲಿ ರಾಜೀವರ ವಿರೋಧಿ ಬಣ ಸರ್ಕಾರ ರಚಿಸಿತ್ತು. 


ರಾಜೀವ್‌ ಗಾಂಧಿ    – ಚಿತ್ರಕೃಪೆ: ಪತ್ರಿಕಾ

ಪ್ರಮುಖ ಆರ್ಥಿಕ ಸುಧಾರಣೆಗಳನ್ನು ದೇಶಕ್ಕೆ ಪರಿಚಯಿಸಿದ ಪ್ರಧಾನಿ ಪಿ.ವಿ.ನರಸಿಂಹರಾವ್‌ 1991ರಿಂದ 96ರವೆಗೆ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರ ನಡೆಸಿದ್ದರು. ಅವರ ಆಡಳಿತದ ನಾಲ್ಕನೆ ವರ್ಷದ ಅಂತ್ಯದಲ್ಲಿಯೂ ಸರ್ಕಾರದ ಬುಡ ಅಲುಗಾಡಿತ್ತು. 1992ರಲ್ಲಿ ಬಾಬರಿ ಮಸಿದಿಯ ಧ್ವಂಸ ಸರ್ಕಾರದ ವಿಶ್ವಾಸಾರ್ಹತೆಯನ್ನು ಕುಂದಿಸಿತ್ತು. ಕಾಂಗ್ರೆಸ್‌ನಲ್ಲಿಯೂ ಭಿನ್ನಮತ ಬುಗಿಲೆದ್ದಿತ್ತು. ಅರ್ಜುನ್‌ ಸಿಂಗ್‌ ಮತ್ತು ಎನ್‌.ಡಿ.ತಿವಾರಿರಂತಹ ಹಿರಿಯ ನಾಯಕರು ಪಕ್ಷ ತೊರೆದಿದ್ದರು. ಸ್ವತಃ ಪ್ರಧಾನಿಯೇ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದರು. ಇದರ ಪರಿಣಾಮವಾಗಿಯೇ ಕಾಂಗ್ರೆಸ್‌ ಪಕ್ಷ 1996ರ ಚುನಾವಣೆಯಲ್ಲಿ 140 ಸೀಟುಗಳನ್ನು ಮಾತ್ರ ಗೆಲ್ಲುವ ಮೂಲಕ ಮತ್ತಷ್ಟು ಕೆಳಕ್ಕೆ ಕುಸಿಯಿತು. ಇದೇ ಸಂದರ್ಭದಲ್ಲಿ 161 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ, ಹೆಚ್ಚು ಸ್ಥಾನಗಳನ್ನು ಗೆದ್ದ ಪಕ್ಷವಾಗಿ ಹೊರಹೊಮ್ಮಿತ್ತು. 


ವಿ.ಪಿ.ಸಿಂಗ್‌   –ಚಿತ್ರಕೃಪೆ:ವಿಕಿಪಿಡಿಯಾ

1998–1999ರಲ್ಲಿ ಅಧಿಕಾರದ ಗದ್ದುಗೆ ಹತ್ತಿದ್ದ ಅಟಲ್‌ ಬಿಹಾರಿ ವಾಜಪೇಯಿರ ಮೊದಲ ಅವಧಿಯಲ್ಲಿ 13 ದಿನಗಳಲ್ಲೆ ಕೆಳಗಿಳಿದಿದ್ದರು. ಎರಡನೇ ಬಾರಿ ಪ್ರಧಾನಿಯಾದಾಗ ಒಂದು ವರ್ಷಕ್ಕಿಂತ ಸ್ವಲ್ಪ ಹೆಚ್ಚು ಕಾಲ ಆಡಳಿತ ನಡೆಸಿದ್ದರು. ಅವರು ಮೂರನೆ ಬಾರಿಗೆ ಪ್ರಧಾನಿಯಾದಾಗ(1999-2004) ಮಾತ್ರ ಐದು ವರ್ಷ ವರ್ಷಗಳ ಸಂಪೂರ್ಣ ಆಡಳಿತ ಅವಧಿಯನ್ನು ಪೂರ್ಣಗೊಳಿಸಿದ್ದರು. ವಾಜಪೇಯಿ ಆಡಳಿತದ ನಾಲ್ಕನೆ ವರ್ಷದಲ್ಲಿ ಬಿಜೆಪಿಯು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಡ ರಾಜ್ಯ ಚುನಾವಣೆಯಲ್ಲಿ ಜಯಗಳಿಸಿತ್ತು. ಈ ಫಲಿತಾಂಶ ಲೋಕಸಭೆಯಲ್ಲೂ ಮರುಕಳಿಸಲಿದೆ ಎಂದು ಬಿಜೆಪಿ ಪ್ರತಿಪಾದಿಸಿತ್ತು. ತ್ವರಿತವಾಗಿ ಬೆಳೆಯುತ್ತಿದ್ದ ಆರ್ಥಿಕತೆಯನ್ನೆ ಮುಂದಿರಿಸಿಕೊಂಡು ‘ಭಾರತ ಪ್ರಕಾಶಿಸುತ್ತಿದೆ’ (ಇಂಡಿಯಾ ಶೈನಿಂಗ್‌) ಅಭಿಯಾನ ಆರಂಭಿಸಿತು. ಆದರೆ, ಗ್ರಾಮೀಣ ಜನರು ಮತ್ತು ಅಲ್ಪಸಂಖ್ಯಾರಲ್ಲಿದ್ದ ಅಸಮಾಧಾನವನ್ನು ಗ್ರಹಿಸುವಲ್ಲಿ ಪಕ್ಷ ಸೋತಿತ್ತು. ಹಾಗಾಗಿ ಪಕ್ಷ ಚುನಾವಣೆಯ ನಿರೀಕ್ಷಿಸಿದಷ್ಟು ಯಶಸ್ಸನ್ನು ಕಾಣಲಿಲ್ಲ. ಆಗ ಆರ್‌ಎಸ್‌ಎಸ್‌ ವಾಜಪೇಯಿ ಅವರಲ್ಲಿ ವ್ಯಕ್ತಿತ್ವ (ವ್ಯಕ್ತಿ), ಅಭಿವೃದ್ಧಿ (ವಿಕಾಸ್‌) ಇದೆ, ಆದರೆ ಸಿದ್ಧಾಂತ (ವಿಚಾರ್‌ಧಾರಾ) ಇಲ್ಲ ಎಂದು ಆ ಸೋಲನ್ನು ವ್ಯಾಖ್ಯಾನಿಸಿತ್ತು. ವಾಜಪೇಯಿ ಬಣದ ಸೋಲಿನ ಬಳಿಕ ಸಮಾನ ಮನಸ್ಕ ಪಕ್ಷಗಳೊಂದಿಗೆ ಸಮನ್ವಯ ಸಾಧಿಸಿ ಕಾಂಗ್ರೆಸ್‌ ಪಕ್ಷ ಯುಪಿಎ ಒಕ್ಕೂಟ ರಚಿಸಿತು. ಮನ್‌ಮೋಹನ್‌ ಸಿಂಗ್‌ರನ್ನು ಪ್ರಧಾನಿಯಾಗಿ ಆಯ್ಕೆ ಮಾಡಿತು.


ಅಟಲ್‌ ಬಿಹಾರಿ ವಾಜಪೇಯಿ

ಮನ್‌ಮೋಹನ್‌ ಸಿಂಗ್‌ ತಮ್ಮ ಮೊದಲ ಅವಧಿಯ ಆಡಳಿತದ ಕೊನೆಯಲ್ಲಿದ್ದಾಗ, 2009ರಲ್ಲಿ ಮತ್ತೊಮ್ಮೆ ತಮ್ಮ ಪಕ್ಷವೇ ಅಧಿಕಾರಕ್ಕೆ ಬರಲು ಪ್ರಮುಖ ಸುಧಾರಣೆಗಳಿಗೆ ಒತ್ತುಕೊಟ್ಟಿದ್ದರು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದಾಗಿ ಗ್ರಾಮವಾಸಿಗಳನ್ನು ಒಲಿಸಿಕೊಂಡಿದ್ದರು. ಅಮೆರಿಕದೊಂದಿಗೆ ಪರಮಾಣು ಒಪ್ಪಂದಕ್ಕೆ ಸಹಿಹಾಕಿ, ಹಣದುಬ್ಬರ ನಿಯಂತ್ರಿಸಿ ಆರ್ಥಿಕ ವೃದ್ಧಿದರದಲ್ಲಿ ಸುಸ್ಥಿರತೆ ಕಾಯ್ದುಕೊಂಡು ದೇಶದ ಮಧ್ಯಮ ವರ್ಗದ ಒಲುವು ಪಕ್ಷದೆಡೆಗೆ ವಾಲುವಂತೆ ನೋಡಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಹಲವಾರು ರಾಜ್ಯಗಳಲ್ಲಿ ಸ್ಥಾಪನೆಯಾದ ಪ್ರಾದೇಶಿಕ ಪಕ್ಷಗಳು ಬಿಜೆಪಿಯ ಮತಬ್ಯಾಂಕ್‌ನಿಂದ ವೋಟ್‌ಗಳನ್ನು ಕೊಳ್ಳೆ ಹೊಡೆದವು. ಇದಕ್ಕೆ ವಿರುದ್ಧವೆಂಬಂತೆ ಮನ್‌ಮೋಹನ್‌ರ ಎರಡನೆ ಅವಧಿಯ ಅಂತ್ಯದಲ್ಲಿ ಯುಪಿಎ ಸರ್ಕಾರ ಮೇಲೆ ಹಲವಾರು ಹಗರಣಗಳ ಆರೋಪಗಳು ಕೇಳಿಬಂದವು. ಇದೇ ಸಂದರ್ಭ ಬಳಸಿಕೊಂಡ ಬಿಜೆಪಿ ನರೇಂದ್ರ ಮೋದಿ ಅವರನ್ನು ಪ್ರಬಲ ನಾಯಕನಾಗಿ ಮುನ್ನಲೆಗೆ ತಂದಿತು.


ಮನ್‌ಮೋಹನ್‌ ಸಿಂಗ್‌

2014ರ ಮೇ ತಿಂಗಳಲ್ಲಿ ನರೇಂದ್ರ ಮೋದಿ ಪ್ರಧಾನಿ ಪಟ್ಟ ಧರಿಸಿದಾಗ, ಇವರೊಬ್ಬ ಕಡಿಮೆ ದೂರದೃಷ್ಟಿಯುಳ್ಳ ಉತ್ತಮ ಕೆಲಸಗಾರ ಎಂದೇ ಭಾವಿಸಲಾಗಿತ್ತು. ಆರಂಭದಲ್ಲಿ ಇವರು ಘೋಷಿಸಿದ ಹಲವಾರು ಯೋಜನೆಗಳು ಅಭಿಮಾನಿಗಳ ಪ್ರಚಾರದಿಂದ ಗಮನ ಸೆಳೆದವು. ಈ ಭರಪೂರ ಯೋಜನೆಗಳ ಪ್ರಯೋಜನಗಳನ್ನು ಗ್ರಹಿಸಲು ಸಹ ಜನರಿಗೆ ಸ್ವಲ್ಪ ಸಮಯ ಬೇಕಾಯಿತು. ಆರಂಭಿಕ ಯೋಜನೆಗಳಿಂದ ನಗರವಾಸಿಗಳ ಮತಗಳನ್ನು ಮಾತ್ರ ಸೆಳೆಯಬಹುದು. ಆದರೆ, ದೊಡ್ಡ ಮತಬ್ಯಾಂಕ್‌ ಇರುವುದು ಗ್ರಾಮೀಣ ಭಾರತದಲ್ಲಿ ಎಂಬುದು ಮೋದಿಗೂ ಅಷ್ಟೊತ್ತಿಗೆ ಗೊತ್ತಾಗಿತ್ತು. ಹಾಗಾಗಿ ಇಂದಿರಾ ಗಾಂಧಿಯಂತೆ ತಾನು ಕೂಡ ಬಡವರ ಬಂಧು ಎಂದು ಮೋದಿ ಪ್ರತಿಪಾದಿಸಿಕೊಳ್ಳಲು ಶುರು ಮಾಡಿದರು. ಸಾಮಾನ್ಯರ ಜೀವನಕ್ಕೆ ಬೇಕಾದ ಮೂಲ ಸೌಕರ್ಯಗಳ ಕಡೆ ಗಮನ ಹರಿಸತೊಡಗಿದರು. ಹಾಗೇಯೇ ಆ ಸೌಕರ್ಯಗಳನ್ನು ಒದಗಿಸಲುವಲ್ಲಿ ಕಳೆದ 60 ವರ್ಷಗಳಲ್ಲಿ ದೇಶವನ್ನು ಆಳಿದ ಪಕ್ಷಗಳು ವಿಫಲವಾಗಿವೆ ಎಂದು ಹರಿಹಾಯತೊಡಗಿದರು.

ಬಡ ಮತ್ತು ಗ್ರಾಮೀಣ ಸಮುದಾಯದ ಪ್ರತಿ ಮನೆಯಲ್ಲಿ ಶೌಚಾಲಯ ನಿರ್ಮಿಸುವ ‘ಸ್ವಚ್ಛ ಭಾರತ ಅಭಿಯಾನ’, ಗ್ರಾಮ ಮತ್ತು ಪ್ರತಿಮನೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ‘ಸೌಭಾಗ್ಯ’, ಅಡುಗೆ ಅನೀಲ ಸಂಪರ್ಕ ಕಲ್ಪಿಸುವ ಮತ್ತು ಮೊದಲ ಸಿಲಿಂಡರ್‌ ಉಚಿತವಾಗಿ ವಿತರಿಸುವ ‘ಉಜ್ವಲ್‌ ಯೋಜನೆ’ ಆರಂಭಿಸಿದರು. ವಸತಿಹೀನರು ಮನೆ ಕಟ್ಟಿಸಲು ನೆರವಾಗುವ ‘ಇಂದಿರಾ ಆವಾಸ್‌ ಯೋಜನೆ’ ಮತ್ತು ಸಂಪರ್ಕ ಸಾಧಿಸಲು ನೆರವಾಗುವ ರಸ್ತೆಗಳ ಅಭಿವೃದ್ಧಿಗೂ ಗಮನ ಹರಿಸಿದರು. ಉದ್ಯೋಗ ಖಾತ್ರಿ ಯೋಜನೆಯನ್ನು ವಿಸ್ತರಿಸಿದರು. ‘ಜನ ಧನ, ಫಲಾನುಭವಿಗಳಿಗೆ ಹಣದ ನೇರ ವರ್ಗಾವಣೆ(ಡಿಬಿಟಿ) ಮತ್ತು ಮೊಬೈಲ್‌ ಸಂಪರ್ಕದಿಂದ ಭ್ರಷ್ಟಾಚಾರ ತಡೆದು, ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ನೀಡಿದ್ದೇವೆ. ಅನುದಾನದ ಹಂಚಿಕೆಯಲ್ಲಿ ಆಗುವ ಸೋರಿಕೆ ತಡೆಯಲಾಗಿದೆ’ ಎಂದು ಕೇಂದ್ರ ಸರ್ಕಾರ ಹೇಳಿಕೊಳ್ಳತೊಡಗಿದೆ. ಈ ಯೋಜನೆಗಳ ಅನುಷ್ಠಾನದ ವಿಷಯದಲ್ಲಿ ಹಲವಾರು ದೋಷಗಳಿದ್ದರೂ, ಇವುಗಳಿಂದ ಪ್ರಧಾನಿಯ ವರ್ಚಸ್ಸು ಒಂದಿಷ್ಟು ಬೆಳೆದಿರುವುದು ಸುಳ್ಳಲ್ಲ.  

ಆರ್ಥಿಕ ದೃಷ್ಟಿಯಲ್ಲಿ ನೋಡಿದರೆ ಮೋದಿ ಸರ್ಕಾರ ಏಳು–ಬೀಳುಗಳನ್ನು ಕಂಡಿದೆ. ತೈಲಗಳ ದರ ಏರಿಕೆ, ರೈತರನ್ನು ಪದೇ–ಪದೇ ಭಾದಿಸಿದ ಬರಗಳು ಆರ್ಥಿಕತೆಗೆ ಅಡ್ಡಗಾಲಾದವು. ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿ ಜಾರಿ ಹಣಕಾಸಿನ ಲೋಕದಲ್ಲಿ ಕೋಲಾಹಲವನ್ನೆ ಸೃಷ್ಟಿಸಿದವು. ಇವುಗಳಿಂದಾದ ಲಾಭಗಳು ಇನ್ನು ಸ್ಪಷ್ಟವಾಗಿಲ್ಲ. ಬಿಜೆಪಿ ಗೆದ್ದಿರುವ ಕ್ಷೇತ್ರಗಳಲ್ಲಿಯೇ ಈ ಕ್ರಮಗಳಿಂದ ವ್ಯಾಪಾರಿಗಳು ಹೆಚ್ಚು ಭಾದಿತರಾಗಿದ್ದಾರೆ. ಈ ಕ್ರಮಗಳಿಂದ ಭ್ರಷ್ಟಾಚಾರ ಮತ್ತು ಕಪ್ಪುಹಣಕ್ಕೆ ಕಡಿವಾಣ ಬಿದ್ದಿದೆ ಎಂಬುದು ಕೇಂದ್ರ ಸರ್ಕಾರದ ವಾದ. 

ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಮರುಪಾವತಿಸದ ಸಾಲದ ಮೊತ್ತ ಹೆಚ್ಚುತ್ತಿದೆ. ಅದನ್ನು ಕಡಿಮೆಗೊಳಿಸಲು ಕೇಂದ್ರವು ಹೆಣಗುತ್ತಿದೆ. ಈ ಮಧ್ಯೆ ರೈತರಿಗೆ ಬೆಳೆ ವಿಮೆ ಮಾಡಿಸುವ ಯೋಜನೆಗಳು ಮತ್ತು ಅಧಿಕ ಬೆಂಬಲ ಬೆಲೆ ದೊರಕಿಸಿ ಕೊಡುವ ಭರವಸೆಗಳನ್ನು ನೀಡಲಾಗಿದೆ. ದೇಶದಲ್ಲಿ ಸೃಷ್ಟಿಸಲಾದ ಉದ್ಯೋಗಗಳ ಕುರಿತು ಸ್ಷಷ್ಟ ಅಂಕಿ–ಅಂಶಗಳಿಲ್ಲ. ಕನಿಷ್ಟ ಕೂಲಿ ನಿಗದಿಯಲ್ಲೂ ಗೊಂದಲಗಳಿವೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ತೈಲ ದರ, ವಿದೇಶಿ ಬಂಡವಾಳದ ಹರಿವಿನಲ್ಲಿ ಇಳಿಕೆ ಸರ್ಕಾರದ ಮುಂದೆ ಹೊಸ ಸವಾಲುಗಳನ್ನು ತಂದು ನಿಲ್ಲಿಸಿವೆ. ಆದಾಯ ತೆರಿಗೆ ಇಲಾಖೆಯನ್ನು ಕೇಂದ್ರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳ ಆರೋಪವನ್ನು ಎದುರಿಸಬೇಕಾಗಿದೆ. ಕೇಂದ್ರದ ಮೇಲೆ ಭ್ರಷ್ಟಾಚಾರದ ಗುರುತರ ಆರೋಪಗಳು ಇಲ್ಲದಿದ್ದರೂ, ಬ್ಯಾಂಕ್‌ಗಳಿಗೆ ವಂಚಿಸಿರುವ ನೀರವ್‌ ಮೋದಿ ಮತ್ತು ವಿಜಯ್‌ ಮಲ್ಯರು ಯಾಕೆ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದಾರೆ ಎಂಬ ಪ್ರಶ್ನೆ ಸಾಮಾನ್ಯರಿಗೂ ಕಾಡುತ್ತಿದೆ. ಸದ್ಯ ವೃದ್ಧಿಸುತ್ತಿರುವ ಆರ್ಥಿಕ ದರವನ್ನು ಚುನಾವಣೆವರೆಗೂ ಸರ್ಕಾರ ಕಾಯ್ದುಕೊಂಡರೆ, ಸಾರ್ವತ್ರಿಕ ಚುನಾವಣೆಯಲ್ಲಿ ಸಾಧನೆಗಳನ್ನು ಬಿಂಬಿಸಲು ಮುಖ್ಯಾಂಶವೊಂದು ಸಿಗಲಿದೆ. 

ವಿದೇಶಾಂಗ ನೀತಿಯ ನಿರ್ವಹಣೆಯಲ್ಲಿ ಅನುಭವವಿಲ್ಲದಿದ್ದರೂ, ಪ್ರಧಾನಿಯವರು ಹಲವಾರು ದೇಶಗಳನ್ನು ಸುತ್ತಿ ಅಂತರರಾಷ್ಟ್ರಿಯ ಸಂಬಂಧಗಳನ್ನು ಸುಧಾರಿಸಲು ಯತ್ನಿಸಿದ್ದಾರೆ. ಅವರ ‘ನೆರೆಹೊರೆಯವರಿಗೆ ಆದ್ಯತೆ (ನೈಬರ್‌ವುಡ್‌ ಫಸ್ಟ್‌) ನೀತಿ ಕೆಲಕಾಲ ಕುಸಿದು, ಪಕ್ಕದ ಪಾಕಿಸ್ತಾನ, ನೇಪಾಳ ಮತ್ತು ಚೀನಾದೊಂದಿಗೆ ಸಂಬಂಧ ಸ್ವಲ್ಪಕಾಲ ಹದಗೆಟ್ಟಿದ್ದು ಉಂಟು. ದೇಶಕ್ಕೆ ಇಂಧನದ ಪ್ರಮುಖ ಮೂಲಗಳಾಗಿರುವ ಮಧ್ಯಪ್ರಾಚ್ಯ ಮತ್ತು ಪಶ್ಚಿಮ ಏಷ್ಯಾದ ದೇಶಗಳೊಂದಿಗಿನ ಬಾಂಧವ್ಯ ಸುಧಾರಿಸುವ ಕೆಲಸ ನಡೆದಿದೆ. ಇದರಲ್ಲಿ ಮುಸ್ಲಿಂ ಪ್ರಾಬಲ್ಯದ ದೇಶಗಳಲ್ಲಿ ಪಾಕಿಸ್ತಾನದ ಪ್ರಭಾವವನ್ನು ಕಡಿಮೆಗೊಳಿಸುವ ಉದ್ದೇಶವೂ ಅಡಗಿದೆ. ದೇಶದ ಹಿತಾಸಕ್ತಿ ದೃಷ್ಟಿಯಿಂದ ಪ್ರಬಲ ರಾಷ್ಟ್ರಗಳಾದ ಅಮೆರಿಕಾ, ರಷ್ಯಾ, ಜಪಾನ್‌ ಮತ್ತು ಯುರೋಪ್‌ ಒಕ್ಕೂಟದೊಂದಿಗೆ ವ್ಯಾಪಾರ, ವಾಣಿಜ್ಯ ವೃದ್ಧಿಸಲು ರಾಜತಾಂತ್ರಿಕ ಬಂಧ ಬೆಸೆಯಲಾಗುತ್ತಿದೆ.

ಮೋದಿಯೊಬ್ಬರ ಯಶಸ್ಸು ‘ಒನ್‌ ಮೆನ್‌ ಆರ್ಮಿ’ ರೀತಿ ಜನರಿಗೆ ಕಂಡು, ಅದು ಪಕ್ಷಕ್ಕೆ ದೊಡ್ಡ ಹೊಡೆತ ನೀಡಲುಬಹುದು. ಸರ್ಕಾರ ಸಾಮಾಜಿಕ ವಲಯವನ್ನು ಬದಲಾಯಿಸುವ ಮಹತ್ವದ ಕ್ರಮಗಳನ್ನು ಕೈಗೊಂಡಿಲ್ಲ, ಸರ್ಕಾರದ ಮೇಲೆ ಅಲ್ಪಸಂಖ್ಯಾತರಲ್ಲಿ ಅಸಮಾಧಾನವಿದೆ. ಅದರೊಂದಿಗೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ನೀಡಬೇಕಾಗಿದ್ದ ಒತ್ತನ್ನು ಕೊಟ್ಟಿಲ್ಲ. ಉದ್ಯೋಗ ಸೃಷ್ಟಿಯ ಸ್ಕಿಲ್ ಇಂಡಿಯಾ ಕಾರ್ಯಕ್ರಮ ಇನ್ನೂ ಸಮರ್ಪಕವಾಗಿ ಜಾರಿಯಾಗಿಲ್ಲ ಎಂಬ ಅಪವಾದ ಈಗಾಗಲೇ ಕೇಳಿಬಂದಿದೆ. ಇದರಿಂದ ಹೊರಬರಲು ಬಡ ಮತ್ತು ಮಧ್ಯಮ ವರ್ಗದವರ ಮೇಲಿರುವ ಆರೋಗ್ಯ ವೆಚ್ಚವನ್ನು ಕಡಿತಗೊಳಿಸಲು ‘ಆಯುಷ್ಮಾನ್‌ ಆರೋಗ್ಯ ವಿಮೆ ಯೋಜನೆ’ ಜಾರಿ ಮಾಡಲು ಕೇಂದ್ರ ಸಿದ್ಧತೆ ನಡೆಸಿದೆ. 

ಅಲ್ಪಸಂಖ್ಯಾತರ ವಿಷಯಕ್ಕೆ ಬಂದಾಗ ಮೋದಿ ಸರ್ಕಾರವಾಗಲಿ ಹಾಗೂ ಬಿಜೆಪಿಯವರಾಗಲಿ ಒಡೆದು ಆಳುವ ನೀತಿಯಿಂದ ಹೊರಬಂದಂತೆ ಕಾಣುತ್ತಿಲ್ಲ. ಹಾಗಾಗಿ ಮುಸ್ಲಿಮರು ಮತ್ತು ದಲಿತರ ಮೇಲೆ ದೌರ್ಜನ್ಯಗಳು ನಡೆದಾಗ ಪ್ರಧಾನಿಯವರು ಗಟ್ಟಿದನಿಯಲ್ಲಿ ವಿರೋಧಿಸುತ್ತಿಲ್ಲ ಎಂಬ ಮಾತಿದೆ. 

ಗುಜರಾತ್‌ನಲ್ಲಿ 13 ವರ್ಷಗಳ ಕಾಲ ರಾಜ್ಯ ಸರ್ಕಾರ ನಡೆಸಿ ತಾವೊಬ್ಬ ದೀರ್ಘ ನಡಿಗೆಯ ಓಟಗಾರ ಎಂಬುದನ್ನು ಮೋದಿ ಈ ಹಿಂದೆಯೇ ಸಾಬೀತು ಪಡಿಸಿದ್ದಾರೆ. ಅವರ ಕಠಿಣ ಪರಿಶ್ರಮ, ಪ್ರಾಮಾಣಿಕತೆ, ಭರವಸೆಗಳನ್ನು ಈಡೇರಿಸುವ ವ್ಯಕ್ತಿತ್ವ ಪಕ್ಷಕ್ಕೆ ನೆರವಾಗಲಿದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಹಾಗಾಗಿ 2019ರ ಚುನಾವಣೆಗಾಗಿ ‘ಸದುದ್ದೇಶ, ಸರಿಯಾದ ಅಭಿವೃದ್ಧಿ’ (ಸಾಫ್‌ ನಿಯತ್‌, ಸಹಿ ವಿಕಾಸ್‌) ಎಂಬ ಘೋಷವಾಕ್ಯವನ್ನು ಬಿಜೆಪಿ ಈಗಾಗಲೇ ರಚಿಸಿದೆ.


ಬಿಜೆಪಿಯ ನಾಯಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ. –ಚಿತ್ರಕೃಪೆ: ಜೀ ನ್ಯೂಸ್‌

(ಮಾಹಿತಿ: ಇಂಡಿಯಾ ಟುಡೆ ಮತ್ತು ವಿವಿಧ ವೆಬ್‌ಸೈಟ್‌ಗಳು)

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !