ಪ್ರಕೃತಿ ಕೊರಳಿನ ಮುತ್ತಿನಹಾರ...

7

ಪ್ರಕೃತಿ ಕೊರಳಿನ ಮುತ್ತಿನಹಾರ...

Published:
Updated:
Prajavani

‘ಈ ಭಾಗದಲ್ಲಿ ನೋಡಲೇಬೇಕಾದ ಸುಂದರ ತಾಣವೊಂದಿದೆ. ಅದು ಬೆಳಗಾವಿಗೆ ಸಮೀಪದಲ್ಲಿಯೇ ಇರುವ ಮಹಾರಾಷ್ಟ್ರದ ಸ್ವಪ್ನವೇಲ್ ಪಾಯಿಂಟ್’ ಎಂದು ಸ್ನೇಹಿತರು ಆಗಾಗ ಹೇಳುತ್ತಲೇ ಇದ್ದರು. ಮೊಬೈಲ್‌ನಲ್ಲಿ ತೆಗೆದಿದ್ದ ಫೋಟೊಗಳನ್ನು ತೋರಿಸಿ ಅವರು ಆಡುತ್ತಿದ್ದ ಮಾತುಗಳು ಹುಟ್ಟುಹಾಕಿದ್ದ ಕುತೂಹಲ ತಣಿಸಿಕೊಳ್ಳಲು ಮೂರು ಬಾರಿ ಆ ಸ್ಥಳಕ್ಕೆ ಹೋಗಿದ್ದೇನೆ. ಎಲ್ಲ ಋತುಗಳಲ್ಲೂ ಸೌಂದರ್ಯವತಿ ಈ ಸಹಜ ನಿಸರ್ಗ ನಿರ್ಮಿತ ರಮ್ಯತಾಣ. ‌ಎಷ್ಟು ನೋಡಿದರೂ ತೃಪ್ತಿಯಾಗದಂಥ ರೂಪಸಿ!

ಪ್ರಕೃತಿಯ ಕೊರಳಿಗೆ ಮುತ್ತಿನ ಹಾರದಂತಿರುವ ಈ ವೀವ್ ಪಾಯಿಂಟ್‌ ಒಂದು ದಿನದ ಪ್ರವಾಸಕ್ಕೆ ಹೇಳಿಮಾಡಿಸಿದ ಜಾಗ. ಕುಟುಂಬದವರೆಲ್ಲರೂ ಸೇರಿ ಪ್ರಕೃತಿಯ ಮಡಿಲಲ್ಲಿ ಮಕ್ಕಳಾಗಿ ನಲಿದು, ಅಮೂಲ್ಯವಾದ ಸಮಯ ಕಳೆದು ಬರುವುದಕ್ಕೆ ತಕ್ಕದಾದುದು. ಬೇಸಿಗೆಗಾಲ, ಚಳಿಗಾಲದಲ್ಲೂ ಹಸಿರುಡುಗೆ ಉಟ್ಟ ಇಲ್ಲಿನ ಭೂರಮೆ ನವವಧುವಿನಂತೆ ಕಂಗೊಳಿಸುತ್ತಾಳೆ. ಈ ಜಾಗದಲ್ಲಿ ನಿಂತು ಎತ್ತ ನೋಡಿದರತ್ತ ಒಂದೊಂದು ಸಣ್ಣ ಝರಿ, ತೊರೆ ಅಥವಾ ಜಲಪಾತಗಳು ಕಣ್ಣು ಕೋರೈಸುವುದನ್ನು ಅಕ್ಷರದಲ್ಲಿ ಹಿಡಿದಿಡುವುದು ಹೇಗೆ?!

ಕಾಡಿನ ನಡುವೆ ಈ ಜಾಗಕ್ಕೆ ಹೋದ ಮನಸ್ಸುಗಳನ್ನು ಕವಿತೆಯೊಂದಿಗೆ ಬೀಳ್ಕೊಡುವುದರಲ್ಲಿ ಸಂದೇಹವಿಲ್ಲ! ಇಲ್ಲಿನ ಅಂದವನ್ನು ನೋಡಲು ಆಕಾಶವೇ ಬಾಗಿದೆ; ಚುಂಬಿಸಲು, ಆಲಂಗಿಸಲು ಹರಸಾಹಸಪಡುತ್ತಿದೆಯೇನೋ ಎನ್ನುವಂತೆ ಭಾಸವಾಗುತ್ತದೆ! ಅಲ್ಲಿನ ಒಂದೊಂದು ಗಿಡಗಳೂ ವಿಶೇಷ. ಕಾಡು ಹೂವಿನ ಗಿಡಗಳಂತೂ ಅಲ್ಲಿನ ಸೌಂದರ್ಯವನ್ನು ದ್ವಿಗುಣಗೊಳಿಸಿವೆ. ಮಳೆಗಾಲದಲ್ಲಿ ಇಲ್ಲಿನ ಸೌಂದರ್ಯ ಇಮ್ಮಡಿಯಾಗಿರುತ್ತದೆ. ಮಂಜು ಸುರಿಯುತ್ತಿರುವ ಈ ಸಂದರ್ಭದಲ್ಲೂ ಕಳೆಗುಂದಿಲ್ಲ.

ಇತ್ತೀಚೆಗೆ ಅಲ್ಲಿಗೆ ಹೋಗಿದ್ದಾಗಲೂ ಸಣ್ಣದೊಂದು ಜಲಪಾತ ಧುಮ್ಮಿಕ್ಕುತ್ತಲೇ ಇತ್ತು. ಮಹಾರಾಷ್ಟ್ರದಿಂದ ಬಂದಿದ್ದ ಐದಾರು ಮಂದಿಯ ಕುಟುಂಬ ಅಲ್ಲಿನ ಪ್ರಕೃತಿಯ ಸವಿಯನ್ನು ಸವಿಯುತ್ತಿತ್ತು. ಬೆಳಗಾವಿ, ಹುಬ್ಬಳ್ಳಿಯಿಂದ ಬಂದಿದ್ದ ಯುವಕರ ತಂಡ ಮೊಬೈಲ್‌ಗಳಲ್ಲಿ ಸೆಲ್ಫಿಗಳಲ್ಲಿ, ಕ್ಯಾಮೆರಾಗಳಲ್ಲಿ ಫೋಟೊಗಳನ್ನು ಕ್ಲಿಕ್ಕಿಸಿಕೊಳ್ಳುವುದರಲ್ಲಿ ಬ್ಯುಸಿಯಾಗಿತ್ತು. ಅಲ್ಲಿನ ಯಾವುದೇ ಜಾಗದಲ್ಲಿ ನಿಂತು ಫೋಟೊ ತೆಗೆದುಕೊಂಡರೂ, ತೆಗೆಸಿಕೊಂಡರೂ ಹಸಿರಸಿರಿಯ ಹಿನ್ನೆಲೆಯಲ್ಲಿ ಮೂಡಿದ ಚಿತ್ರಗಳು ಅದೆಷ್ಟೋ!?

ಅದರಲ್ಲೂ ಸೂರ್ಯಾಸ್ತದ ಕ್ಷಣಗಳನ್ನು ತುಂಬಿಕೊಳ್ಳಲು ಎರಡು ಕಣ್ಣುಗಳು ಸಾಲದು! ಇದರಿಂದಾಗಿಯೇ ಇದು ಚಂದಗಡ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶದ ಹಾಗೂ ಬೆಳಗಾವಿ ಜಿಲ್ಲೆಯ ಕಾಲೇಜು ಯುವಕ–ಯುವತಿಯರ ಅಚ್ಚುಮೆಚ್ಚಿನ ತಾಣವೆನಿಸಿದೆ. ಚಾರಣಪ್ರಿಯರನ್ನು ಕೈಬೀಸಿ ಕರೆಯುತ್ತದೆ. ಆಗಾಗ ಸಾಗುವ ಮೋಡಗಳ ಮೆರವಣಿಗೆಯು ಗಿರಿ ಶ್ರೇಣಿಗಳನ್ನು ಮರೆಮಾಚುತ್ತಿರುತ್ತವೆ! ಈ ಮೋಡಗಳ ಆಟವನ್ನು ನೋಡುವುದೇ ಚೆಂದ.

ಈ ಚಳಿಗಾಲದ ಸಂದರ್ಭದಲ್ಲಿ ಮಂಜಿನ ಹನಿಗಳಿಂದ ಕೂಡಿದ ಪಶ್ಚಿಮ ಘಟ್ಟ ಶ್ರೇಣಿಗಳು ಮನಸ್ಸಿಗೆ ಮುದ ನೀಡುತ್ತವೆ. ಅಲ್ಲಿಯೇ ವಾಸ್ತವ್ಯ ಮಾಡುವುದಕ್ಕೆ ಬಯಸುವವರಿಗೆ ಸ್ವಪ್ನವೇಲ್ ಹೆಸರಿನ ರೆಸಾರ್ಟ್‌ ಕೂಡ ಇದೆ.‌

**

ಹೋಗುವುದು ಹೇಗೆ?

‌ಮಹಾರಾಷ್ಟ್ರದ ಚಂದಗಡ ಜಿಲ್ಲೆಯ ತಿಲ್ಲಾರಿನಗರಕ್ಕೆ ಸಮೀಪದಲ್ಲಿರುವ ಅದ್ಭುತ ನಿಸರ್ಗದ ಮಡಿಲಿದು. ಬೆಳಗಾವಿಯಿಂದ ಸುಮಾರು 40 ಕಿ.ಮೀ. ದೂರದಲ್ಲಿದೆ. ಈ ಪ್ರದೇಶಕ್ಕೆ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲ. ವೈಯಕ್ತಿಕ ವಾಹನಗಳಲ್ಲಿ ಹೋಗಬೇಕು. ಬೈಕಿಂಗ್‌ ಪ್ರಿಯರಿಗೆ ಹೇಳಿ ಮಾಡಿಸಿದ ತಾಣ. ಸುತ್ತಲಿನ ಹಸಿರ ಸಿರಿಯನ್ನು ಆಸ್ವಾದಿಸುತ್ತಾ ಕಲ್ಲುಮುಳ್ಳಿನ ಹಾದಿಯಲ್ಲಿ ಸಾಗಿದರೆ, ಮನಸ್ಸಿಗೆ ಮುದ ನೀಡುವ ಸ್ವಪ್ನವೇಲ್‌ ಪಾಯಿಂಟ್‌, ಪ್ರಯಾಣದಲ್ಲಾದ ದಣಿವನ್ನು ಅಕ್ಷರಶಃ ಮರೆಸುತ್ತದೆ; 

ತಿಲಾರಿ ಡ್ಯಾಂಗೆ ಹೋಗುವ ರಸ್ತೆಯಲ್ಲಿ, ಎಡಕ್ಕೆ ತಿರುಗಿದರೆ, ಸ್ವಪ್ನವೇಲ್ ಪಾಯಿಂಟ್‌ ರಸ್ತೆಗೆ ಸೇರುತ್ತೇವೆ. ಅಷ್ಟೊಂದು ಸುಸಜ್ಜಿತ ರಸ್ತೆಯಲ್ಲವಾದ್ದರಿಂದ ಹಾಗೂ ಕಡಿದಾದ ರಸ್ತೆಯೂ ಇದಾಗಿರುವುದರಿಂದ ಎಚ್ಚರಿಕೆಯಿಂದ ವಾಹನಗಳನ್ನು ಚಲಾಯಿಸಬೇಕು. ಸ್ವಪ್ನವೇಲ್ ಪಾಯಿಂಟ್‌ ಇನ್ನೇನು ಒಂದೂವರೆ ಕಿ.ಮೀ. ಇದೆ ಎನ್ನುವಾಗ ಪಕ್ಕದಲ್ಲಿಯೇ ನಾಲೆ ಇರುವ ಕಿರಿದಾದ ರಸ್ತೆಯಲ್ಲಿ ಸಾಗಬೇಕು. ಇಲ್ಲಂತೂ ಹೆಚ್ಚಿನ ಜಾಗರೂಕತೆ ವಹಿಸುವುದನ್ನು ಮರೆಯಬಾರದು.

**

ಇನ್ನೇನು ನೋಡಬಹುದು

ಆ ಜಾಗದಿಂದ ವಾಪಸ್ ಆಗುವಾಗ ಮಾರ್ಗದಲ್ಲಿಯೇ ಸಿಗುವ ‘ನಿಸರ್ಗ’ ಎನ್ನುವ ರೆಸಾರ್ಟ್‌ ಸಿಗುತ್ತದೆ. ಇಲ್ಲಿಗೆ ಉಚಿತ ಪ್ರವೇಶವಿದೆ. ರಿಫ್ರೆಶ್‌ಮೆಂಟ್‌ಗೂ ಅವಕಾಶವಿದೆ. ಅಲ್ಲಿ ಆಕರ್ಷಕವಾಗಿ ಅಭಿವೃದ್ಧಿಪಡಿಸಿರುವ ಉದ್ಯಾನ ವೀಕ್ಷಿಸಬಹುದು.

ಉದ್ಯಾನ ದಾಟಿ ಕೊಂಚ ಮುಂದಕ್ಕೆ ಹೆಜ್ಜೆ ಹಾಕಿದರೆ, ಅಲ್ಲೊಂದು ವೀವ್ ಪಾಯಿಂಟ್‌ ಇದೆ. ಅಲ್ಲಿಂದಲೂ ಒಂದಷ್ಟು ಜಲಪಾತಗಳು ಧುಮ್ಮಿಕ್ಕುತ್ತಿರುವುದು, ಪರ್ವತಶ್ರೇಣಿಯ ಸೌಂದರ್ಯವನ್ನು ಆಸ್ವಾದಿಸಬಹುದು. ಆ ರೆಸಾರ್ಟ್‌ನವರು ಸಫಾರಿಗೆ ಕೂಡ ವ್ಯವಸ್ಥೆ ಮಾಡುತ್ತಾರೆ.

ಅಲ್ಲಿಂದ ತಿಲಾರಿ ಡ್ಯಾಂ ನೋಡಲು ಹೋಗಬಹುದು. ಬೆಳಗಾವಿಗೆ ರಸ್ತೆಗೆ ಬಂದು 40 ಕಿ.ಮೀ. ಮುಂದೆ ಸಾಗಿದರೆ ಅಂಬೋಲಿ ಜಲಪಾತ ಸಿಗುತ್ತದೆ. ಪಶ್ಚಿಮಘಟ್ಟ ಶ್ರಣಿಯ ತಂಪು ತಂಪಾದ ವಾತಾವರಣದಲ್ಲಿ ದಾರಿ ಸಾಗುವುದೇ ಗೊತ್ತಾಗುವುದಿಲ್ಲ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !