ವಯನಾಡಿನಲ್ಲಿ ನಕ್ಸಲ್‌ ಎನ್‌ಕೌಂಟರ್‌: ಜಿಲ್ಲೆಯಲ್ಲೂ ಶೋಧ

ಭಾನುವಾರ, ಮಾರ್ಚ್ 24, 2019
27 °C
ಜಿಲ್ಲೆಯಲ್ಲಿ ನಕ್ಸಲರ ಚಲನವಲನ ಇಲ್ಲ, ಗಡಿಭಾಗದಲ್ಲಿ ಕಟ್ಟೆಚ್ಚರ– ಎಸ್‌ಪಿ ಧರ್ಮೇಂದರ್‌ ಕುಮಾರ್‌ ಮೀನಾ

ವಯನಾಡಿನಲ್ಲಿ ನಕ್ಸಲ್‌ ಎನ್‌ಕೌಂಟರ್‌: ಜಿಲ್ಲೆಯಲ್ಲೂ ಶೋಧ

Published:
Updated:
Prajavani

ಚಾಮರಾಜನಗರ: ನೆರೆಯ ಕೇರಳದ ವಯನಾಡು ಜಿಲ್ಲೆಯಲ್ಲಿ ನಕ್ಸಲ್‌ ಎನ್‌ಕೌಂಟರ್‌ ನಡೆದಿರುವ ಬೆನ್ನಿಗೇ, ಅಲ್ಲಿಂದ ತಪ್ಪಿಸಿಕೊಂಡಿರುವ ನಕ್ಸಲರು ರಾಜ್ಯವನ್ನು ಪ್ರವೇಶಿಸಿರುವ ಸಾಧ್ಯತೆ ಇದೆ ಎಂಬ ಮಾಹಿತಿಯ ಆಧಾರದಲ್ಲಿ ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. 

ಕೇರಳಕ್ಕೆ ಹೊಂದಿಕೊಂಡಿರುವ ಗಡಿ ಭಾಗದ ಅರಣ್ಯದಲ್ಲಿ ಎರಡು ದಿನಗಳಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ನಕ್ಸಲ್‌ ನಿಗ್ರಹ ದಳ, ಜಿಲ್ಲಾ ಪೊಲೀಸ್‌ ಕಮಾಂಡೊಗಳು, ಸ್ಥಳೀಯ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಗಡಿ ಭಾಗದ ಅರಣ್ಯದಲ್ಲಿ ನಕ್ಸಲರ ಹುಡುಕಾಟದಲ್ಲಿ ನಿರತರಾಗಿದ್ದಾರೆ.

ಗಡಿ ಭಾಗದಲ್ಲಿರುವ ಪೊಲೀಸ್‌ ಚೆಕ್‌ಪೋಸ್ಟ್‌ಗಳಲ್ಲಿ ಹೆಚ್ಚಿನ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಗುಂಡ್ಲುಪೇಟೆ ತಾಲ್ಲೂಕಿನ ಮದ್ದೂರು ಚೆಕ್‌ಪೋಸ್ಟ್‌, ಬಂಡೀಪುರದ ಚೆಕ್‌ಪೋಸ್ಟ್‌ಗಳಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ನಕ್ಸಲ್‌ ನಿಗ್ರಹದ ದಳದ ಸಿಬ್ಬಂದಿ ಕೂಡ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. 

‘ವಯನಾಡು ಜಿಲ್ಲೆಯ ರೆಸಾರ್ಟ್‌ಗೆ ಬುಧವಾರ ರಾತ್ರಿ ನಕ್ಸಲರು ಭೇಟಿ ನೀಡಿದ ವಿಷಯ ಗೊತ್ತಾದ ತಕ್ಷಣ, ಮೂಲೆಹೊಳೆ ಸೇರಿದಂತೆ ಜಿಲ್ಲೆಯ ಗಡಿ ಭಾಗದಲ್ಲೂ ಕಟ್ಟೆಚ್ಚರ ವಹಿಸಿದ್ದೇವೆ. ಅರಣ್ಯ ಇಲಾಖೆಯ ನೆರವಿನೊಂದಿಗೆ ಶೋಧ ಕಾರ್ಯಾಚರಣೆ ಆರಂಭಿಸಿದ್ದೇವೆ. ನಕ್ಸಲ್‌ ನಿಗ್ರಹ ಪಡೆಯ 10, ಭಯೋತ್ಪಾದನೆ ನಿಗ್ರಹ ತರಬೇತಿ ಪಡೆದಿರುವ 12, ಸ್ಥಳೀಯ ಪೊಲೀಸ್‌ ಸಿಬ್ಬಂದಿ ಸೇರಿದಂತೆ 25ಕ್ಕೂ ಹೆಚ್ಚು ಮಂದಿ ಶೋಧ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಶನಿವಾರದವರೆಗೂ ಶೋಧ ಮುಂದುವರಿಯಲಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದರ್‌ ಕುಮಾರ್‌ ಮೀನಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗಡಿ ಠಾಣೆಯಲ್ಲಿ ಭದ್ರತೆಗಾಗಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿದ್ದೇವೆ. ಅವರಿಗೆ ಸ್ವಯಂಚಾಲಿತ ರೈಫಲ್‌ಗಳನ್ನು ಪೂರೈಸಲಾಗಿದೆ. ನಾವು ನಕ್ಸಲ್‌ ನಿಗ್ರಹ ದಳದ ಎರಡು ತಂಡವನ್ನು ಕಳುಹಿಸುವಂತೆ ಕೇಳಿದ್ದೆವು. ಬೇಚನಹಳ್ಳಿಯಲ್ಲಿರುವ ಶಿಬಿರದಿಂದ ಒಂದು ತಂಡ ಬಂದಿದೆ. ಇನ್ನೊಂದು ತಂಡ ಶನಿವಾರ ಬರುವ ನಿರೀಕ್ಷೆ ಇದೆ’ ಎಂದು ಅವರು ಮಾಹಿತಿ ನೀಡಿದರು.

ಕಂಡು ಬರದ ಚಲನವಲನ: ‘ಜಿಲ್ಲೆಯಲ್ಲಿ ನಕ್ಸಲರ ಚಲನವಲನ ಕಂಡು ಬಂದಿಲ್ಲ. ಅವರು ಯಾವುದೇ ಮನೆಗಳಿಗೆ ಭೇಟಿ ಕೊಟ್ಟ ಅಥವಾ ಭಿತ್ತಿಪತ್ರಗಳನ್ನು ಹಂಚಿಹೋದ ಪ್ರಕರಣಗಳು ಇದುವರೆಗೆ ವರದಿಯಾಗಿಲ್ಲ. ಹಾಗಾಗಿ, ಇಲ್ಲಿ ಆತಂಕ ಪಡುವ ಸ್ಥಿತಿ ಇಲ್ಲ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದರು. 

ಜಿಲ್ಲೆಯ ಅರಣ್ಯದಲ್ಲಿರುವ ಸಾಧ್ಯತೆ ಕ್ಷೀಣ
‘ಚಾಮರಾಜನಗರ ಜಿಲ್ಲೆಯಲ್ಲಿ ನಕ್ಸಲರು ಸಂಚರಿಸುವ ಮಾರ್ಗ ಯಾವುದೂ ಇಲ್ಲ. ಅವರು ಸಾಮಾನ್ಯವಾಗಿ ಕೇರಳ ಭಾಗದಿಂದ ಬಂದು ಕೊಡಗು, ಸಂಪಾಜೆ ಮೂಲಕ ದಕ್ಷಿಣ ಕನ್ನಡಕ್ಕೆ ಹೋಗುತ್ತಾರೆ. ಬಹುತೇಕ ಸಂದರ್ಭದಲ್ಲಿ ಇದೇ ದಾರಿಯನ್ನು ಬಳಸುತ್ತಾರೆ’ ಎಂದು ಧರ್ಮೇಂದರ್‌ ಕುಮಾರ್‌ ಮೀನಾ ತಿಳಿಸಿದರು.

‘ನಮ್ಮ ಜಿಲ್ಲೆಯ ಅರಣ್ಯದಲ್ಲಿ ಆನೆಗಳು ಸೇರಿದಂತೆ ವನ್ಯಪ್ರಾಣಿಗಳ ಇರುವಿಕೆ ಜಾಸ್ತಿ ಇದೆ. ಹಾಗಾಗಿ ಇಲ್ಲಿ ನಕ್ಸಲರು ಆಶ್ರಯ ಪಡೆಯುವ ಸಾಧ್ಯತೆ ಅತ್ಯಂತ ಕಡಿಮೆ. ಹೆಚ್ಚು ಪ್ರಾಣಿಗಳಿರದ ಅದರಲ್ಲೂ ಪ್ರಮುಖವಾಗಿ ಆನೆಗಳು ಇರದ ಅರಣ್ಯದಲ್ಲೇ ಅವರು ಹೆಚ್ಚು ಓಡಾಡುತ್ತಾರೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !