ನೋಟು ಬಳಕೆ: ಅಧಿಸೂಚನೆಗೆ ಮನವಿ

7
ಆರ್‌ಬಿಐಗೆ ಪತ್ರ ಬರೆದ ನೇಪಾಳ ರಾಷ್ಟ್ರೀಯ ಬ್ಯಾಂಕ್‌

ನೋಟು ಬಳಕೆ: ಅಧಿಸೂಚನೆಗೆ ಮನವಿ

Published:
Updated:

ಕಠ್ಮಂಡು: ಭಾರತದಲ್ಲಿ ಹೊಸದಾಗಿ ಚಲಾವಣೆಗೆ ಬಂದಿರುವ ₹100ಕ್ಕಿಂತ ಹೆಚ್ಚಿನ ಮೌಲ್ಯದ ನೋಟುಗಳನ್ನು ನೇಪಾಳದಲ್ಲಿ ಬಳಸುವುದನ್ನು ಮಾನ್ಯಗೊಳಿಸಬೇಕು ಎಂದು ರಿಸರ್ವ್‌ ಬ್ಯಾಂಕ್ ಆಫ್ ಇಂಡಿಯಾಗೆ (ಆರ್‌ಬಿಐ) ನೇಪಾಳ ಮನವಿ ಮಾಡಿದೆ. 

‘ಭಾರತದ ₹200, ₹500 ಹಾಗೂ ₹2,000ದ ನೋಟುಗಳ ಬಳಕೆ ಕಾನೂನುಬದ್ಧಗೊಳಿಸಲು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿಯಲ್ಲಿ ಅಧಿಸೂಚನೆ ಹೊರಡಿಸಬೇಕು. ಆಗ ಇವುಗಳ ವಿನಿಮಯ ಅಧಿಕೃತವಾಗಿರುತ್ತದೆ’ ಎಂದು ಆರ್‌ಬಿಐಗೆ ನೇಪಾಳ ರಾಷ್ಟ್ರ ಬ್ಯಾಂಕ್ (ಎನ್‌ಆರ್‌ಬಿ) ಪತ್ರ ಬರೆದಿದೆ. 

‘ಭಾರತದಲ್ಲಿ ರದ್ದಾಗಿರುವ ₹500 ಹಾಗೂ ₹1,000 ಮುಖಬೆಲೆಯ ₹4.8 ಕೋಟಿ ಮೌಲ್ಯದ ಹಣ ನೇಪಾಳದ ಬ್ಯಾಂಕ್‌, ಹಣಕಾಸು ಸಂಸ್ಥೆಗಳು ಹಾಗೂ ಎನ್‌ಆರ್‌ಬಿ ಬಳಿ ಇದೆ. ಇವುಗಳ ವಿನಿಮಯಕ್ಕೆ ಅವಕಾಶ ನೀಡಬೇಕು’ ಎಂದೂ ಪತ್ರದಲ್ಲಿ ಕೋರಲಾಗಿದೆ. ‘ದಿ ಹಿಮಾಲಯನ್ ಟೈಮ್ಸ್‌’ ಈ ಕುರಿತು ವರದಿ ಮಾಡಿದೆ. 

ಪ್ರಸ್ತುತ, ನೇಪಾಳದಲ್ಲಿ ₹100 ಹಾಗೂ ಅದಕ್ಕಿಂತ ಕಡಿಮೆ ಮೌಲ್ಯದ ಭಾರತೀಯ ನೋಟುಗಳ ಚಲಾವಣೆಗೆ ಮಾತ್ರ ಆರ್‌ಬಿಐ ಅವಕಾಶ ನೀಡಿದೆ.

ಭಾರತದಲ್ಲಿ ಅಧಿಕ ಮುಖಬೆಲೆಯ ನೋಟು ರದ್ದಾಗುವ ಮೊದಲು, ನೇಪಾಳದಲ್ಲಿ ₹500 ಹಾಗೂ ₹1,000 ಮುಖಬೆಲೆಯ ಭಾರತೀಯ ನೋಟುಗಳನ್ನು (₹25 ಸಾವಿರ ಮಿತಿ) ಬಳಸಲು ಫೆಮಾ ಅಡಿಯಲ್ಲಿ ಆರ್‌ಬಿಐ ಅನುಮತಿ ನೀಡಿತ್ತು. ಆದರೆ, ನೋಟು ರದ್ದತಿ ಬಳಿಕ ಚಲಾವಣೆಗೆ ಬಂದ ₹200, ₹500, ₹2,000 ಮುಖಬೆಲೆಯ ನೋಟುಗಳನ್ನು ನೇಪಾಳದಲ್ಲಿ ಬಳಸಲು ಆರ್‌ಬಿಐ ಅಧಿಸೂಚನೆ ನೀಡಿಲ್ಲ. ಹೀಗಾಗಿ ಇವುಗಳ ಬಳಕೆ ಅನಧಿಕೃತವಾಗಿದೆ. 

ದೂರಿನ ಬಳಿಕ ಮನವಿ
‘ಹೊಸ ನೋಟುಗಳ ಚಲಾವಣೆಗೆ ಆರ್‌ಬಿಐ ಅನುಮತಿ ನೀಡದೆ ಇದ್ದುದರಿಂದ, ನೇಪಾಳಿಗರ ರಕ್ಷಣೆಗಾಗಿ ಇಲ್ಲಿ ಅವುಗಳ ಬಳಕೆಯನ್ನು ನಿಷೇಧಿಸಬೇಕಾಯಿತು. ಆದರೆ, ಸತತವಾಗಿ ಭಾರತಕ್ಕೆ ಭೇಟಿ ನೀಡುವ ವಿವಿಧ ಕ್ಷೇತ್ರದ ಜನರಿಂದ ದೂರುಗಳು ಬಂದ ಬಳಿಕ, ಈ ನೋಟುಗಳ ಬಳಕೆ ಮಾನ್ಯ ಮಾಡುವಂತೆ ನಾವು ಆರ್‌ಬಿಐಗೆ ಮನವಿ ಮಾಡಿದ್ದೇವೆ’ ಎಂದು ಎನ್‌ಆರ್‌ಬಿಯ ವಿದೇಶಿ ವಿನಿಮಯ ನಿರ್ವಹಣಾ ವಿಭಾಗದ ಮುಖ್ಯಸ್ಥ ಧುಂಗನ ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !