ನವಜಾತ ಶಿಶುವಿನಲ್ಲಿ ನಿರ್ಜಲತೆಯ ಜ್ವರ

ಸೋಮವಾರ, ಏಪ್ರಿಲ್ 22, 2019
31 °C

ನವಜಾತ ಶಿಶುವಿನಲ್ಲಿ ನಿರ್ಜಲತೆಯ ಜ್ವರ

Published:
Updated:
Prajavani

ಇಪ್ಪತ್ತು ವರ್ಷಗಳ ಹಿಂದೆ ನನ್ನ ಹಿರಿಯ ಮಗ ಜನಿಸಿದ್ದು ಬಿಸಿಲ ನಾಡೆಂದೇ ಪ್ರಖ್ಯಾತವಾದ ಕಲಬುರ್ಗಿ ನಗರದಲ್ಲಿ. ಅದು ಜೂನ್ ತಿಂಗಳಾಗಿದ್ದರೂ ಬಿಸಿಲ ಪ್ರಖರತೆ ಕಿಂಚಿತ್ತೂ ತಗ್ಗಿರಲಿಲ್ಲ. ಫ್ಯಾನುಗಳು ಸದಾ ತಿರುಗುತ್ತಲಿದ್ದರೂ ಅವುಗಳಿಂದ ಬಿಸಿಗಾಳಿಯೇ ಹೊಮ್ಮುತ್ತಿತ್ತು. ಝಳಕ್ಕೋ ಏನೋ ನವಜಾತ ಶಿಶು ಸರಿಯಾಗಿ ಹಾಲು ಕುಡಿಯದೆ ತುಂಬಾ ಕಿರಿಕಿರಿ ಮಾಡುತ್ತಿತ್ತು.

ಅದಾಗಲೇ ಎರಡು ದಿನಗಳಾಗಿದ್ದವು. ಮಗುವಿನ ಮೈ ಬೆಂಕಿಯಂತೆ ಸುಡತೊಡಗಿತು. ಆದರೆ ಮಗು ಚಟುವಟಿಕೆಯಿಂದಲೇ ಇತ್ತು. ಹಾಲು ಕುಡಿಯುವುದನ್ನು ಕಡಿಮೆ ಮಾಡಿದ್ದರೂ ಸಂಪೂರ್ಣವಾಗಿ ನಿಲ್ಲಿಸಿರಲಿಲ್ಲ. ಅದು 'ನಿರ್ಜಲತೆಯ ಜ್ವರ'ವಾಗಿತ್ತು.

ಏನಿದು ನಿರ್ಜಲತೆಯ ಜ್ವರ?

ವಾತಾವರಣದ ಉಷ್ಣತೆ ಸಿಕ್ಕಾಪಟ್ಟೆ ಏರಿದಾಗ ಜನಿಸಿದ ಎರಡನೇ ಅಥವಾ ಮೂರನೇ ದಿನ ನವಜಾತ ಶಿಶುಗಳಲ್ಲಿ ಕಾಣಿಸಿಕೊಳ್ಳುವ ಜ್ವರಕ್ಕೆ ನಿರ್ಜಲತೆಯ ಜ್ವರ ಎನ್ನಲಾಗುತ್ತದೆ. ನವಜಾತ ಶಿಶುಗಳ ಶರೀರದಲ್ಲಿ ನೀರಿನ ಅಂಶ ಬಹಳ ಕಡಿಮೆ ಪ್ರಮಾಣದಲ್ಲಿರುತ್ತದೆ ಮತ್ತು ಬೆವರುವ ಪ್ರಕ್ರಿಯೆಯೂ ವಿಕಾಸಗೊಂಡಿರುವುದಿಲ್ಲ. ಈ ಕಾರಣಗಳಿಂದ ವಾತಾವರಣದ ಉಷ್ಣತೆಯಲ್ಲಿ ಗಣನೀಯವಾಗಿ ಏರಿಕೆಯಾದಾಗ ಶರೀರದ ನೀರಿನ ಅಂಶದಲ್ಲಿ ಏರುಪೇರಾಗಿ ಮೈ ಕಾವೇರತೊಡಗುತ್ತದೆ. ಸಾಮಾನ್ಯವಾಗಿ ದಿನದಲ್ಲಿ ಏಳರಿಂದ ಎಂಟು ಬಾರಿ ಮೂತ್ರ ವಿಸರ್ಜಿಸುವ ಮಗು ವಿರಳವಾಗಿ ವಿಸರ್ಜಿಸತೊಡಗುತ್ತದೆ. ವಾತಾವರಣದ ಉಷ್ಣತೆ ಹೆಚ್ಚಾಗಿರುವ ಸಂದರ್ಭಗಳಲ್ಲಿ ಮಗುವನ್ನು ದಪ್ಪನೆಯ ಬಟ್ಟೆಗಳಿಂದ ಸುತ್ತಿದರೆ, ಹೊದಿಕೆಗಳನ್ನು ಹೊದೆಸಿದರೆ ಮತ್ತು ಉಷ್ಣತೆಯನ್ನು ಹೆಚ್ಚಿಸುವಂಥ ಉಪಕರಣ (ಇನ್ಕ್ಯುಬೇಟರ್, ವಾರ್ಮರ್ ಇತ್ಯಾದಿ) ಗಳಲ್ಲಿ ಇಟ್ಟರೆ ನಿರ್ಜಲತೆಯ ಜ್ವರದ ತೀವ್ರತೆ ಹೆಚ್ಚು. ತೀರಾ ಅಪರೂಪಕ್ಕೊಮ್ಮೆ ಜ್ವರದ ತಾಪ ವಿಪರೀತವೆನಿಸುವಷ್ಟು (40-44 ಡಿಗ್ರಿ ಸೆಲ್ಸಿಯಸ್) ಹೆಚ್ಚಾದಾಗ ಮಗು ಮಂಕಾಗಿಬಿಡುತ್ತದೆ ಮತ್ತು ಕೆಲವೊಮ್ಮೆ ಫಿಟ್ಸ್ ಕೂಡ ಬರಬಹುದು.

ಎಲ್ಲಾ ಜ್ವರವೂ ನಿರ್ಜಲತೆಯ ಜ್ವರವೇ ?

ಖಂಡಿತ ಇಲ್ಲ. ನವಜಾತ ಶಿಶುಗಳಲ್ಲಿ ಜ್ವರ ಕಾಣಿಸಿಕೊಳ್ಳಲು ಹಲವಾರು ಕಾರಣಗಳಿದ್ದರೂ ಹೆಚ್ಚಿನ ಸಂದರ್ಭಗಳಲ್ಲಿ ಅದು ರಕ್ತದ ನಂಜಿನಿಂದ ಬಂದಿರುತ್ತದೆ. ಅದನ್ನು ಸಮರ್ಪಕವಾಗಿ ಗುರುತಿಸದಿದ್ದರೆ ನಂಜು ಮೆದುಳು, ಮೆದುಳ ಪೊರೆಯಂಥ ಪ್ರಮುಖ ಅಂಗಗಳನ್ನು ಹಾನಿಗೊಳಿಸಿ ಮಗುವಿನಲ್ಲಿ ಸಾವು ನೋವಿಗೂ ಕಾರಣವಾಗಬಲ್ಲದು. ಹೀಗಾಗಿ ಯಾವುದು ನಂಜಿನ ಜ್ವರ ಮತ್ತು ಯಾವುದು ನಿರ್ಜಲತೆಯ ಜ್ವರ ಎಂದು ಸರಿಯಾಗಿ ಗುರುತಿಸಬೇಕಾದುದು ಮಗುವಿನ ಆರೈಕೆಯಲ್ಲಿ ತೊಡಗಿಕೊಂಡಿರುವವರ ಕರ್ತವ್ಯ. ಯಾವ ಮಗುವಿನಲ್ಲಿ ದೈಹಿಕ ಚಟುವಟಿಕೆ ಸಮರ್ಪಕವಾಗಿದ್ದು, ಕಾಮಾಲೆ, ಹೊಟ್ಟೆಯುಬ್ಬರ, ಭೇದಿ, ಫಿಟ್ಸ್ ಮುಂತಾದ ಇನ್ನಾವುದೇ ಸಮಸ್ಯೆಗಳಿರುವುದಿಲ್ಲವೋ ಅಂಥ ಮಗುವಿನಲ್ಲಿ ಕಾಣಿಸಿಕೊಳ್ಳುವ ಜ್ವರವನ್ನು ನಿರ್ಜಲತೆಯ ಜ್ವರ ಎಂದು ಪರಿಗಣಿಸಬೇಕು.

ಚಿಕಿತ್ಸೆ ಏನು?

ವಾತಾವರಣದ ಉಷ್ಣತೆಯನ್ನು ಶೀಘ್ರವಾಗಿ ತಗ್ಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಅದಕ್ಕಾಗಿ ಫ್ಯಾನ್, ಕೂಲರ್ ಮುಂತಾದ ಉಪಕರಣಗಳ ಮೊರೆ ಹೋಗಬಹುದು. ಹಾಗೆಯೇ ಆವರಿಸಿರುವ ಬಟ್ಟೆಬರೆಗಳಿಂದ ಮಗುವನ್ನು ಮುಕ್ತಗೊಳಿಸಿ ಸಂಪೂರ್ಣ ಬೆತ್ತಲಾಗಿಸಬೇಕು. ಮೈ ಕಾವು ಅಪಾಯಕಾರಿಯೆನಿಸುವ ಮಟ್ಟಿಗೆ ಏರಿದ್ದರೆ ಉಗುರು ಬೆಚ್ಚಗಿನ ನೀರಿನಲ್ಲಿ ಬಟ್ಟೆಯೊಂದನ್ನು ಅದ್ದಿ ಮುಡಿಯಿಂದ ಅಡಿಯವರೆಗೆ ಇಡೀ ದೇಹವನ್ನು ಒರೆಸಬೇಕು. ಎಲ್ಲಕ್ಕಿಂತಲೂ ಮುಖ್ಯವಾಗಿ ಮಗುವಿಗೆ ಪದೇ ಪದೇ ಎದೆ ಹಾಲೂಡಿಸಬೇಕು. ಎದೆಹಾಲಿನಲ್ಲಿ ಶೇಕಡಾ ತೊಂಬತ್ತರಷ್ಟು ಭಾಗ ನೀರೇ ಇರುವುದರಿಂದ ಇದು ಮರುಜಲೀಕರಣದ ಅತ್ಯುತ್ತಮ ವಿಧಾನ. ತೀರಾ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಪರಿಶುದ್ಧ ನೀರು ಅಥವಾ ಕೃತಕ ಹಾಲನ್ನು ಬಳಸಬಹುದು. ಆದರೆ ಇವುಗಳನ್ನು ಆದಷ್ಟೂ ಬಳಸದಿರುವುದೇ ಒಳ್ಳೆಯದು. ಒಟ್ಟಿನಲ್ಲಿ ನಿರ್ಜಲತೆಯ ಜ್ವರವನ್ನು ಸರಿಯಾಗಿ ಗುರುತಿಸಿ, ಸೂಕ್ತ ಮಾರ್ಗೋಪಾಯಗಳನ್ನು ಅನುಸರಿಸಿದರೆ ಅದರ ತೀವ್ರತೆ ಮತ್ತು ದುಷ್ಪರಿಣಾಮಗಳಿಂದ ಮಗುವನ್ನು ರಕ್ಷಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !