‘ಕ್ರೀಡೆಯಿಲ್ಲದ ಜೀವನ ವ್ಯರ್ಥ’

ಕಕ್ಕೇರಾ: ‘ಮಕ್ಕಳು ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಹಂತದಲ್ಲಿಯೇ ಕ್ರೀಡೆಯಲ್ಲಿ ಆಸಕ್ತಿಯಿಂದ ತೊಡಗಿಕೊಳ್ಳಬೇಕು. ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಬೌದ್ಧಿಕ ಮತ್ತು ಮಾನಸಿಕವಾಗಿ ಸದೃಢತೆ ಸಾಧಿಸಬಹುದು’ ಎಂದು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿಯಾದ ನೀಲಮ್ಮ ನಾಗರಬೆಟ್ಟ ಹೇಳಿದರು.
ಭಾನುವಾರ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವನವಾಸಿ ಕಲ್ಯಾಣ ಕರ್ನಾಟಕದ ವತಿಯಿಂದ ಏರ್ಪಡಿಸಲಾಗಿದ್ದ ತಾಲ್ಲೂಕು ಮಟ್ಟದ ಕಬಡ್ಡಿ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
‘ ವನವಾಸಿ ಕಲ್ಯಾಣದ ವತಿಯಿಂದ ವನವಾಸಿ ವಿದ್ಯಾರ್ಥಿಗಳ ಪ್ರಗತಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮೂಲ ಆದಿವಾಸಿಗಳನ್ನು ಮೇಲ್ದರ್ಜೆಗೆ ತರುವ ಪ್ರಯತ್ನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದು ಶ್ಲಾಘಿಸಿದರು.
ದೇಶದಾದ್ಯಂತ ವನವಾಸಿಗಳ ಶಿಕ್ಷಣ, ಆರೋಗ್ಯ, ಕ್ರೀಡೆ, ಸಾಮಾಜಿಕ ಸಮಾನತೆ ತರುವಂತ ಅನೇಕ ಯೋಜನೆಗಳನ್ನು ಆಯೋಜಿಸಿ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಕೆಲಸ ಮಾಡುತ್ತಿರುವ ವನವಾಸಿ ಕಲ್ಯಾಣ ಸಂಘಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಯಡ್ರಾಮಿ ಕನ್ನಡ ಪಂಡಿತ ಬಸಯ್ಯ ಸ್ವಾಮಿ ಮಾತನಾಡಿ, ವನವಾಸಿ ಕಲ್ಯಾಣ ಕರ್ನಾಟಕದ ಕಾರ್ಯವೈಖರಿ ಸಂಸ್ಥೆಯ ಕಾರ್ಯ ಮತ್ತು ಉದ್ದೇಶ ವನ ನಿವಾಸಿಯ ಮೂಲದ ಬಗ್ಗೆ ವಿವರವಾಗಿ ಮಾತನಾಡಿದರು.
ತಾಲ್ಲೂಕು ಮಟ್ಟದ ಈ ಕಬಡ್ಡಿ ಪಂದ್ಯಾವಳಿಯಲ್ಲಿ ಸುರಪುರ ತಾಲ್ಲೂಕಿನ ಕಕ್ಕೇರಾ, ದೇವಾಪುರ, ತಿಂಥಣಿ, ತೋಳದಿನ್ನಿ, ಅರಳಹಳ್ಳಿ, ಹೆಮನೂರ ಗ್ರಾಮದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಾದ ವೀರೇಶ ಅಂಗಡಿ ಮತ್ತು ಚಂದ್ರು ಪೊಲೀಸ್ ಪಂದ್ಯದ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.
ವನವಾಸಿ ಕಲ್ಯಾಣದ ಜಿಲ್ಲಾಧ್ಯಕ್ಷರಾದ ರಾಜಾಪಿಡ್ಡನಾಯಕ, ಪುರಸಭೆ ಅಧ್ಯಕ್ಷ ಸೋಮಣ್ಣನಾಯಕ ಹವಾಲ್ದಾರ, ನಂದಣ್ಣ ದೇಸಾಯಿ, ಗುಂಡಪ್ಪ ಸೊಲ್ಲಾಪುರ, ರಮೇಶ ದೊರೆ, ವೆಂಕಟೇಶ ಬೇಟೆಗಾರ, ಎಎಸ್ಐ ಶ್ಯಾಮಸುಂದರನಾಯಕ, ಪರಮಣ್ಣ ತೇರಿನ್, ಬುಚ್ಚಪ್ಪ ಗುರಿಕಾರ, ವನವಾಸಿ ಕಲ್ಯಾಣದ ಮಂಜುಳಾ ದೇವಾಪುರ ಸೇರಿದಂತೆ ಪುರಸಭೆ ಸದಸ್ಯರು ಹಾಗೂ ಪಟ್ಟಣದ ಮುಖಂಡರು ಪಾಲ್ಗೊಂಡಿದ್ದರು.
ವನವಾಸಿ ಕಲ್ಯಾಣದ ವಿಭಾಗಿಯ ಸಂಚಾಲಕ ಶ್ರೀನಿವಾಸ ಪ್ರಾಸ್ತಾವಿಕ ಮಾತನಾಡಿದರು. ಲಕ್ಷ್ಮೀ ಹಾಗೂ ಚೈತ್ರಾ ಪ್ರಾರ್ಥಿಸಿದರು. ಕರಿಯಪ್ಪ ಸ್ವಾಗತಿಸಿದರು. ಚಂದ್ರಶೇಖರ ವಜ್ಜಲ್ ವಂದಿಸಿದರು. ಸೋಮಶೇಖರ ದೊರೆ ನಿರೂಪಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.