ಕಾವೇರಿ ಜಲ ವಿವಾದ: ತೀರ್ಪು ಮರುಪರಿಶೀಲನೆಗೆ ಅರ್ಹ

7

ಕಾವೇರಿ ಜಲ ವಿವಾದ: ತೀರ್ಪು ಮರುಪರಿಶೀಲನೆಗೆ ಅರ್ಹ

Published:
Updated:
ಕಾವೇರಿ ಜಲ ವಿವಾದ: ತೀರ್ಪು ಮರುಪರಿಶೀಲನೆಗೆ ಅರ್ಹ

ರಾಜಸ್ತಾನ ಎಂದರೆ ಮರುಭೂಮಿಯ ಚಿತ್ರಣ ನಮ್ಮೆಲ್ಲರ ಕಣ್ಣ ಮುಂದೆ ಬರುತ್ತದೆ. ಅಂತಹ ಪ್ರದೇಶದಲ್ಲಿ ಜಲಮೂಲಕ್ಕೆ ಪುನರುಜ್ಜೀವನ ನೀಡುವ ಮೂಲಕ ಗದ್ದೆಯಲ್ಲಿ ಹಸಿರು ನಳನಳಿಸುವಂತೆ ಮಾಡಿದವರು ಭಾರತದ ‘ವಾಟರ್‌ ಮ್ಯಾನ್‌’ ಎಂದೇ ಪ್ರಸಿದ್ಧರಾಗಿರುವ ರಾಜೇಂದ್ರ ಸಿಂಗ್‌.‘ತರುಣ್ ಭಾರತ್‌’ ಎಂಬ ಸಂಘ ಕಟ್ಟಿಕೊಂಡು ಕಳೆದ ಮೂವತ್ತೈದು ವರ್ಷಗಳಲ್ಲಿ ಅವರು 12,500 ಚೆಕ್‌ ಡ್ಯಾಂ, ಬಾಂದಾರು, ಕೆರೆಗಳ ನಿರ್ಮಾಣ ಮಾಡಿದ್ದಾರೆ. 60 ವರ್ಷಗಳ ಹಿಂದೆ ಬತ್ತಿ ಹೋಗಿದ್ದ ಅರವರಿ ನದಿಯಲ್ಲಿ ನೀರು ಹರಿಯಲಾರಂಭಿಸಿದೆ. ಜಹಜವಾಲಿ ಸೇರಿದಂತೆ ಬತ್ತಿ ಹೋಗಿದ್ದ ಏಳು ನದಿಗಳು ಮತ್ತೆ ಮೈದುಂಬಿಕೊಂಡಿವೆ. ನದಿ ಬತ್ತಿ ಹೋಗಿದ್ದರಿಂದ ವ್ಯವಸಾಯ ಸಾಧ್ಯವಿಲ್ಲ ಎಂದು ನಗರ ಪ್ರದೇಶಗಳಿಗೆ ಗುಳೆ ಹೋಗಿದ್ದ ನೂರಾರು ಗ್ರಾಮಗಳ ರೈತರು, ಕೃಷಿ ಕೂಲಿಕಾರ್ಮಿಕರು ಮರಳಿ ಬಂದು ಬೇಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ.ರಾಜೇಂದ್ರ ಸಿಂಗ್ ಪಾದಯಾತ್ರೆಯ ಮೂಲಕ ಜನರಲ್ಲಿ ನೀರಿನ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಚೆಕ್‌ ಡ್ಯಾಂಗಳ ನಿರ್ಮಾಣಕ್ಕೆ ಸಾರ್ವಜನಿಕರೊಂದಿಗೆ ಸೇರಿ ಶ್ರಮದಾನ ಮಾಡಿದ್ದಾರೆ.ರಾಜಸ್ತಾನದ ಆಳ್ವಾರ್ ಜಿಲ್ಲೆಯನ್ನು ಕೇಂದ್ರವಾಗಿಸಿಕೊಂಡು ಕೆಲಸ ಮಾಡುತ್ತಿದ್ದ ಅವರು, ನಂತರ ತಮ್ಮ ವ್ಯಾಪ್ತಿಯನ್ನು ರಾಜ್ಯದ 11 ಜಿಲ್ಲೆಗಳಿಗೆ ವಿಸ್ತರಿಸಿದ್ದಾರೆ. 850 ಗ್ರಾಮಗಳಲ್ಲಿ 4,500 ಚೆಕ್‌ ಡ್ಯಾಂಗಳನ್ನು ನಿರ್ಮಿಸುವ ಮೂಲಕ ಮಳೆ ನೀರು ಸಂಗ್ರಹಿಸುವ ಕೆಲಸ ಮಾಡಿದ್ದಾರೆ.ಮಧ್ಯಪ್ರದೇಶ, ಗುಜರಾತ್‌, ಆಂಧ್ರ ಪ್ರದೇಶಕ್ಕೂ ‘ತರುಣ್‌ ಭಾರತ್’ ಸಂಘದ ಚಟುವಟಿಕೆ ವಿಸ್ತರಿಸಿದ್ದಾರೆ. ನೀರಿನ ಮೂಲದ ಉಳಿವಿಗಾಗಿ ಗಣಿಗಾರಿಕೆ ವಿರುದ್ಧವೂ ಹೋರಾಟ ಮಾಡಿದ್ದಾರೆ. ಕುಮುದ್ವತಿ ನದಿಯ ಪುನರುಜ್ಜೀವನ ಕಾರ್ಯಕ್ಕೂ ಕೈಜೋಡಿಸಿದ್ದಾರೆ.ಸ್ಟಾಕ್‌ಹೋಮ್‌ ವಾಟರ್‌, ಮ್ಯಾಗ್ಸೆಸೆ, ಜಮ್ನಾಲಾಲ್‌ ಬಜಾಜ್‌ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ‘ನೀರು, ಸಮೃದ್ಧಿ ಮತ್ತು ಸೌಹಾರ್ದಕ್ಕಾಗಿ ನಡಿಗೆ’ ಕುರಿತು ಇತ್ತೀಚೆಗೆ ಉಪನ್ಯಾಸ ನೀಡಲು ಮಂಡ್ಯಕ್ಕೆ ಬಂದಿದ್ದ ರಾಜೇಂದ್ರ ಸಿಂಗ್‌, ಕಾವೇರಿ, ಮಹಾದಾಯಿ ಸೇರಿದಂತೆ ವಿವಿಧ ನದಿಗಳ ನೀರಿನ ವಿವಾದ, ಜಲ ಸಂರಕ್ಷಣೆ ಮುಂತಾದ ವಿಷಯಗಳ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರ. * ದೇಶದ ವಿವಿಧ ರಾಜ್ಯಗಳ ನಡುವೆ ನದಿ ನೀರಿನ ಹಂಚಿಕೆ ವಿಷಯದಲ್ಲಿ ತಿಕ್ಕಾಟ ಜೋರಾಗಿದೆ. ಇಂತಹ ವಿವಾದಗಳಿಗೆ ಪರಿಹಾರದ ಮಾರ್ಗ ಯಾವುದು?

ಕಾವೇರಿ ನದಿ ನೀರಿನ ವಿವಾದವು 150 ವರ್ಷ ದಾಟಿದೆ. ನ್ಯಾಯಾಲಯದ ಮೆಟ್ಟಿಲೇರಿಯೂ ಅರ್ಧ ಶತಮಾನ ಕಳೆದಿದೆ. ಆದರೆ, ಪರಿಹಾರ ಇನ್ನೂ ದೊರಕಿಲ್ಲ. ಹಾಗೆಂದು ನ್ಯಾಯಾಲಯದ ಮೇಲೆ ನನಗೆ ವಿಶ್ವಾಸವಿಲ್ಲ ಎಂದಲ್ಲ. ಎಲ್ಲರೂ ಒಪ್ಪಿಕೊಳ್ಳುವಂತಹ ಉತ್ತಮ ಪರಿಹಾರ ಕಂಡುಕೊಳ್ಳಲು ಮಾತುಕತೆಯಿಂದ ಮಾತ್ರ ಸಾಧ್ಯ.ನದಿ ನೀರಿನ ವಿವಾದಕ್ಕೆ ಸಂಬಂಧಿಸಿದ ರಾಜ್ಯಗಳಲ್ಲಿನ ವಿವಿಧ ಕ್ಷೇತ್ರಗಳ ತಜ್ಞರನ್ನೊಳಗೊಂಡ ಸಮಿತಿ ರಚಿಸಿಕೊಳ್ಳಬೇಕು. ಅಧ್ಯಯನ, ಮಾತುಕತೆ ಮೂಲಕ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಬೇಕು.ನ್ಯಾಯಾಲಯವು ಅಂಕಿಅಂಶಗಳ ಆಧಾರದ ಮೇಲೆ ತೀರ್ಮಾನ ಕೈಗೊಳ್ಳುತ್ತದೆ. ನದಿ ನೀರಿನ ವಿಷಯದಲ್ಲಿ ಅಂಕಿಅಂಶಗಳೇ ಎಲ್ಲವೂ ಆಗಿರುವುದಿಲ್ಲ. ನದಿ ಸಂಸ್ಕೃತಿ, ಬೆಳೆ ಪದ್ಧತಿ, ಮಣ್ಣಿನ ಗುಣಧರ್ಮ ಇತ್ಯಾದಿ ಅಂಶಗಳ ಮೇಲೂ ಬೆಳಕು ಚೆಲ್ಲಬೇಕಾಗುತ್ತದೆ. ಮಾತುಕತೆ ಮೂಲಕ ಇತ್ಯರ್ಥಕ್ಕೆ ಮುಂದಾದಾಗ ಮಾತ್ರ ಈ ಅಂಶಗಳ ಮೇಲೆ ಚರ್ಚೆ ಸಾಧ್ಯವಾಗುತ್ತದೆ. ಆಗ ಪರಿಹಾರವೂ ಸುಲಭವಾಗುತ್ತದೆ.* ಮಹಾದಾಯಿ ನದಿ ನೀರಿನ ವಿವಾದ ಇತ್ಯರ್ಥಕ್ಕೆ ಸಂಬಂಧಿಸಿದ ರಾಜ್ಯಗಳ ನಡುವೆ ಮಧ್ಯಸ್ಥಿಕೆ ವಹಿಸಿಕೊಳ್ಳುತ್ತೇನೆ ಎಂದಿದ್ದೀರಿ. ಕಾವೇರಿ ವಿವಾದದ ಇತ್ಯರ್ಥಕ್ಕೂ ಮಧ್ಯಸ್ಥಿಕೆ ವಹಿಸಿಕೊಳ್ಳುವಿರಾ?

ಎರಡೂ ರಾಜ್ಯಗಳ ಜನರು ಬಯಸಿದರೆ ಖಂಡಿತವಾಗಿ ನಾನೂ ನಿಮ್ಮೆಲ್ಲರ ಜತೆಗೆ ಇರುತ್ತೇನೆ. ದೇಶದಲ್ಲಿರುವ ಎಲ್ಲ ನದಿಗಳು ನನ್ನವೇ ಆಗಿವೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಲು ಸಿದ್ಧನಿದ್ದೇನೆ. ಇತ್ತೀಚೆಗೆ ನನ್ನನ್ನು ಭೇಟಿಯಾಗಿದ್ದ ತಮಿಳುನಾಡಿನ ಹೋರಾಟಗಾರ ಜನಕರಾಜ್‌ ಅವರೂ ಈ ಬಗ್ಗೆ ಚರ್ಚೆ ಮಾಡಿದ್ದಾರೆ. ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಕೆಲಸ ಮಾಡಲು ತಯಾರಾಗಿದ್ದೇನೆ.* ಕಾವೇರಿ, ಮಹಾದಾಯಿ ನದಿ ನೀರಿನ ವಿವಾದ ಹೇಗೆ ಪರಿಹರಿಸಬಹುದು?

ಕಳಸಾ–ಬಂಡೂರಿ ಹಾಗೂ ಕಾವೇರಿ ವಿವಾದಗಳೆರಡೂ ಬೇರೆ ಬೇರೆ. ಆದರೆ, ಎರಡರಲ್ಲೂ ರಾಜಕೀಯ ಲಾಭದ ವಾಸನೆ ಹೊಡೆಯುತ್ತಿದೆ. ನಮಗೆ ಅನ್ಯಾಯ ಆಗಿದೆ ಎಂದು ಕರ್ನಾಟಕದ ಜನರು ಆಕ್ರೋಶಗೊಂಡಿದ್ದಾರೆ. ಇಂತಹ ಆಕ್ರೋಶದಿಂದ ಕರ್ನಾಟಕ ಸೇರಿದಂತೆ ಯಾರಿಗೂ ಒಳ್ಳೆಯದಾಗುವುದಿಲ್ಲ.ರಾಜಕೀಯ, ಕಾನೂನು, ಪರಿಸರ, ತಂತ್ರಜ್ಞಾನ ಸೇರಿದಂತೆ ವಿವಿಧ ತಜ್ಞರನ್ನು ಸೇರಿಸಿಕೊಂಡು ಎಲ್ಲರೂ ಒಂದಾಗಿ ನ್ಯಾಯಾಲಯದ ಹೊರಗಡೆ ಪರಿಹಾರ ಕಂಡು ಹಿಡಿಯುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸಂಬಂಧಿಸಿದ ರಾಜ್ಯದವರು ಯಾವುದೇ ರೀತಿಯ ಪೂರ್ವಗ್ರಹಪೀಡಿತರಾಗದೆ ಮುಕ್ತ ಮನಸ್ಸಿನೊಂದಿಗೆ ಚರ್ಚೆ ಆರಂಭಿಸಬೇಕು.ಪರಿಹಾರಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಮಾತುಕತೆಯದ್ದು ಕಷ್ಟದ ಹಾದಿ. ಆದರೆ, ಕೊನೆಗೆ ಎಲ್ಲರೂ ಒಪ್ಪಿಕೊಳ್ಳುವಂತಹ ಪರಿಹಾರ ದೊರೆಯುತ್ತದೆ. ಕಾವೇರಿ ನದಿ ನೀರಿನ ವಿಷಯದಲ್ಲಿ ಮದ್ರಾಸ್‌ ಪ್ರೆಸಿಡೆನ್ಸಿ ಹಾಗೂ ಮೈಸೂರು ಸಂಸ್ಥಾನದ ನಡುವೆ ಸ್ವಾತಂತ್ರ್ಯ ಪೂರ್ವದಲ್ಲಿ ಆಗಿರುವ ಒಪ್ಪಂದ ನ್ಯಾಯಸಮ್ಮತವಾಗಿಲ್ಲ.ಮದ್ರಾಸ್‌ ಪ್ರೆಸಿಡೆನ್ಸಿ ಪ್ರಬಲವಾಗಿತ್ತು. ಮೈಸೂರು ಸಂಸ್ಥಾನ ಅಷ್ಟು ಪ್ರಬಲವಾಗಿರಲಿಲ್ಲ. ಹಾಗಾಗಿ ಆಗಿನ ಒಪ್ಪಂದದ ಮೇಲೆಯೇ ತೀರ್ಮಾನಿಸಲು ಸಾಧ್ಯವಿಲ್ಲ. ಕಾವೇರಿ ನದಿ ನೀರಿನ ವಿವಾದದ ತೀರ್ಪು ಮರುಪರಿಶೀಲನೆಗೆ ಅರ್ಹವಾಗಿದೆ.ಕರ್ನಾಟಕ ರಾಜ್ಯವು ಕೆಲವೊಮ್ಮೆ ಸುಳ್ಳಿನ ಸಹಕಾರ (ಕುಡಿಯುವ ನೀರಿಗೆ ಎಂದು) ಪಡೆದುಕೊಂಡು ನೀರು ಪಡೆಯಲು ಯತ್ನಿಸಿದೆ. ಅಂತಹ ಸುಳ್ಳು ಹೇಳುವ ಅವಶ್ಯಕತೆ ಇಲ್ಲ.ರಾಜ್ಯದಲ್ಲಿ ನೀರಿನ ತೊಂದರೆ ಇರುವುದು ನಿಜ. ಆ ಸತ್ಯವನ್ನೇ ಹೇಳಬೇಕು. ಅದು ಯಾವಾಗಲೂ ನಮ್ಮೊಂದಿಗೆ ಇರುತ್ತದೆ. ನಮ್ಮ ಹಕ್ಕು ನಮಗೆ ಸಿಕ್ಕೇ ಸಿಗುತ್ತದೆ. ರಾಜ್ಯ ಸರ್ಕಾರವು ಉನ್ನತಾಧಿಕಾರ ಆಯೋಗ (ಹೈ ಪವರ್‌ ಕಮಿಷನ್‌) ರಚನೆಗೆ ಒತ್ತಡ ಹಾಕಬೇಕು.ಈ ಆಯೋಗದಲ್ಲಿ ನ್ಯಾಯಾಂಗ, ಪರಿಸರ, ತಾಂತ್ರಿಕ, ನೀರಾವರಿ, ಸಾಮಾಜಿಕ ಕಾರ್ಯಕರ್ತ, ಭೂವಿಜ್ಞಾನಿ, ರೈತರು ಇರಬೇಕು. ನೀರು ಬಳಕೆಯ ಬಗ್ಗೆ ಎಲ್ಲರೂ ಅವರ ಕ್ಷೇತ್ರದಲ್ಲಿನ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳನ್ನು ಮಂಡಿಸುತ್ತಾರೆ. ಆಗ ಪರಿಹಾರದ ದಾರಿ ತನ್ನಿಂದ ತಾನೇ ತೆರೆದುಕೊಳ್ಳುತ್ತದೆ. ಇದಕ್ಕೆ ನ್ಯಾಯಾಲಯವೂ ಸಮ್ಮತಿ ಸೂಚಿಸುತ್ತದೆ.* ಜಲ ವಿವಾದದಲ್ಲಿ ಮೇಲಿನ ರಾಜ್ಯಗಳಿಗೆ ತೊಂದರೆ ಜಾಸ್ತಿಯೇ?

ಮಳೆ ನೀರು ಮೊದಲು ಎಲ್ಲಿ ಬೀಳುತ್ತದೆಯೋ ಅಲ್ಲಿ ಮೊದಲು ಬಳಕೆಯಾಗಿ ನಂತರ ಮುಂದಕ್ಕೆ ಹೋಗಬೇಕು. ನೀರಿನ ಬಳಕೆ ವಿಷಯದಲ್ಲಿ ಮೇಲಿನ ರಾಜ್ಯಕ್ಕೂ ಕೆಳಗಿನ ರಾಜ್ಯದಷ್ಟೇ ಹಕ್ಕು ಇರುತ್ತದೆ.ವಾತಾವರಣದಲ್ಲಿನ ಏರಿಳಿತ, ನೀರಿನ ಗುಣಧರ್ಮ, ಹರಿವು, ಅದು ಅಲ್ಲಿನ ಜನರಲ್ಲಿ ಹುಟ್ಟುಹಾಕಿರುವ ಸಂಸ್ಕೃತಿಯಂತಹ ವಿಷಯಗಳು ಆಡಳಿತ ನಡೆಸುವ ಸರ್ಕಾರ ಅಥವಾ ನ್ಯಾಯಾಲಯಗಳಿಗೆ ಅರ್ಥವಾಗುವುದಿಲ್ಲ. ಅವರು ಅಂಕಿಸಂಖ್ಯೆಗಳ ಆಧಾರದ ಮೇಲೆ ಲೆಕ್ಕಾಚಾರ ಹಾಕುತ್ತಾರೆ. ಹಾಗಾಗಿ ಮೇಲಿನ ರಾಜ್ಯಕ್ಕೆ ತೊಂದರೆ ಎನ್ನುವ ಭಾವನೆ ಹುಟ್ಟಿಕೊಂಡಿದೆ. ನೀರಿನ ಮೇಲೆ ಎಲ್ಲರಿಗೂ ಸಮಾನ ಹಕ್ಕಿದೆ.

* ನದಿ ನೀರಿನ ವಿವಾದದಲ್ಲಿ ರಾಜಕೀಯ ನಾಯಕರ ಪಾತ್ರ ಎಷ್ಟಿರಬೇಕು?

ರಾಜಕೀಯ ನಾಯಕರನ್ನು ಅವಶ್ಯವಿದ್ದಷ್ಟು ಮಾತ್ರ ಬಳಸಿಕೊಳ್ಳಬೇಕು. ಅವರು ಮತ ಬ್ಯಾಂಕ್‌ ರಾಜಕೀಯ ಮಾಡುವುದರಿಂದ ನ್ಯಾಯ ಒದಗಿಸುವುದು, ಸಮಸ್ಯೆ ಪರಿಹರಿಸುವುದಕ್ಕಿಂತ ಮತ ಬ್ಯಾಂಕ್ ಆಧಾರದ ಮೇಲೆಯೇ ನಿರ್ಣಯ ಕೈಗೊಳ್ಳುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂತಿಮವಾಗಿ ಪ್ರಜೆಗಳೇ ಪ್ರಭುಗಳು. ವಾಸ್ತವ ಅರಿತುಕೊಂಡು, ವೈಜ್ಞಾನಿಕ ಆಧಾರದ ಮೇಲೆ ಮಾತುಕತೆ ಮೂಲಕ ಸಮ್ಮತಕ್ಕೆ ಬರುವುದಾದರೆ ರಾಜಕೀಯ ನಾಯಕರಿಗೆ, ನ್ಯಾಯಾಲಯಕ್ಕೆ ಅಲ್ಲಿ ಕೆಲಸ ಇರುವುದಿಲ್ಲ.* ‌ನದಿ ಜೋಡಣೆ ಬಗ್ಗೆ ನಿಮ್ಮ ಅಭಿಪ್ರಾಯವೇನು?

ನದಿಗಳ ಜೋಡಣೆ ಭಾರತಕ್ಕೆ ಒಳ್ಳೆಯದಲ್ಲ. ದೊಡ್ಡವರಿಗೆ (ಕೈಗಾರಿಕೆಗಳಿಗೆ) ನೀರು ದಗಿಸಲು ಮಾಡುತ್ತಿರುವ ಯೋಜನೆ. ಇದರಲ್ಲಿ ಸಾಮಾನ್ಯ ಜನರು ಹಾಗೂ ರೈತರನ್ನು ದೂರ ಇಡಲಾಗುತ್ತದೆ. ನೀರು ವ್ಯರ್ಥವಾಗಿ ಹೋಗದಂತೆ ತಡೆಯಲು ಸಣ್ಣ ಸಣ್ಣ ನದಿಗಳ ಜೋಡಣೆ ಸ್ಥಳೀಯ ಮಟ್ಟದಲ್ಲಿ ಆಗಬೇಕು. ದೊಡ್ಡ ಪ್ರಮಾಣದಲ್ಲಿ ಮಾಡುವುದರಿಂದ ಲಾಭಕ್ಕಿಂತ ನಷ್ಟ ಜಾಸ್ತಿ.

ನಿಜವಾಗಿಯೂ ಸಾಮಾನ್ಯ ಜನರಿಗೆ ನೀರು ಒದಗಿಸುವ ಉದ್ದೇಶವಿದ್ದರೆ ಕಳಸಾ–ಬಂಡೂರಿಯನ್ನು ಮಲಪ್ರಭಾಕ್ಕೆ ಜೋಡಿಸಲು ಅವಕಾಶ ಮಾಡಿಕೊಡಬೇಕಿತ್ತು. ಹಾಗಾಗದಿರುವುದು ನದಿ ಜೋಡಣೆಯ ಉದ್ದೇಶದ ಬಗೆಗೆ ಅನುಮಾನಗಳು ಹುಟ್ಟಿಕೊಳ್ಳಲು ಕಾರಣವಾಗಿದೆ.* ಕರ್ನಾಟಕ ರಾಜ್ಯ ಸರ್ಕಾರಕ್ಕೆ ನಿಮ್ಮ ಸಲಹೆ ಏನು ?

ರಾಜ್ಯದ ಶೇ 12ರಷ್ಟು ಭೂ ಪ್ರದೇಶದ ಪಶ್ಚಿಮಘಟ್ಟದಲ್ಲಿ ಒಟ್ಟು ಮಳೆಯ ಶೇ 57ರಷ್ಟು ಮಳೆಯಾಗುತ್ತದೆ. ಅಂದಾಜು 2 ಸಾವಿರ ಟಿಎಂಸಿ ಅಡಿಯಷ್ಟು ನೀರು ಸಮುದ್ರ ಸೇರುತ್ತದೆ. ಈ ಬಗ್ಗೆ ನಿಖರವಾದ ಅಧ್ಯಯನ ನಡೆಸಿ, ಆ ನೀರು ಬಳಕೆಯ ಬಗ್ಗೆ ಯೋಚಿಸಬೇಕು. 500ರಿಂದ 800 ಮೀಟರ್‌ ಅಂತರದಲ್ಲಿ ಜಲ ಮೂಲಗಳಿವೆ. ಆ ಮೂಲಗಳಿಗೆ ಸರಿಯಾದ ದಿಕ್ಕು ತೋರಿಸುವ ಮೂಲಕ ಕಡಿಮೆ ಖರ್ಚಿನಲ್ಲಿ ಬಳಸಿಕೊಳ್ಳಬಹುದಾಗಿದೆ.ಅಭಿವೃದ್ಧಿಯ ಹೆಸರಿನಲ್ಲಿ ನೀರಿನ ಮೂಲಗಳನ್ನು ಹಾಳು ಮಾಡುವ ಕೆಲಸ ಆಗಬಾರದು. ಕೆರೆಗಳನ್ನು ಮುಚ್ಚಬಾರದು. ಅಂತರ್ಜಲ ಹೆಚ್ಚಿಸಲು ಚೆಕ್‌ ಡ್ಯಾಂ, ಬಾಂದಾರು ನಿರ್ಮಿಸುವ ಕೆಲಸ ಆಗಬೇಕು. ಈ ಕಾರ್ಯಕ್ಕೆ ಜನರ ಸಹಭಾಗಿತ್ವದ ಯೋಜನೆ ರೂಪಿಸಬೇಕು. ನೀರಿಗಾಗಿ ಹಕ್ಕು ಚಲಾಯಿಸುವ ಜನರಲ್ಲಿ ನೀರಿನ ರಕ್ಷಣೆಯ ಜವಾಬ್ದಾರಿ ಹೊರಿಸಬೇಕು.ಜಲ ರಕ್ಷಣೆಗೆ ಹೆಚ್ಚಿನ ಒತ್ತು ನೀಡದಿದ್ದರೆ ಈಗ ರಾಜ್ಯಗಳ ನಡುವೆ ಇರುವ ವಿವಾದ ಮುಂದಿನ ದಿನಗಳಲ್ಲಿ ಜಿಲ್ಲೆ, ತಾಲ್ಲೂಕು, ಗ್ರಾಮಗಳ ನಡುವೆ ಬರುತ್ತದೆ. ನಿತ್ಯ ನೀರಿಗಾಗಿ ಹೊಡೆದಾಡಬೇಕಾಗುತ್ತದೆ. ನೀರಿನ ಬಗ್ಗೆ ನಮಗಿರುವ ಧೋರಣೆ ಬದಲಿಸಿಕೊಳ್ಳದಿದ್ದರೆ ಅಪಾಯ ಹೆಚ್ಚಾಗುತ್ತದೆ. ಲಭ್ಯ ಇರುವ ನೀರಿನ ಬಳಕೆ, ವಿತರಣೆ ಹೇಗೆ ಮಾಡಲಾಗುತ್ತದೆ ಎನ್ನುವುದು ಬಹಳ ಮುಖ್ಯ. ನೀರಿನ ಬಳಕೆಯಲ್ಲಿ ಶಿಸ್ತು ತರಬೇಕು. ಯಾವ, ಯಾವ ಕಾರಣಕ್ಕೆ ಬಳಸಲಾಗುತ್ತದೆ ಎನ್ನುವುದನ್ನೂ ಗಮನಿಸಬೇಕು. ನ್ಯಾಯಾಲಯದ ಮೊರೆ ಹೋದಾಗ ಅದು ಇಂತಹ ಅಂಶಗಳ ಮೇಲೆ ಹೆಚ್ಚು ಗಮನ ಹರಿಸುತ್ತದೆ.* ರೈತ ಸಮುದಾಯ ಇಂತಹ ಸಂದರ್ಭದಲ್ಲಿ ಏನು ಮಾಡಬೇಕು?

ಬೆಳೆ ಪದ್ಧತಿಯನ್ನು ಮಳೆ ಪದ್ಧತಿಯೊಂದಿಗೆ ರೈತರು ಜೋಡಿಸಬೇಕು. ಇದರಿಂದ ಪರಿಸರಕ್ಕೆ ಲಾಭವಾಗುತ್ತದೆ, ರೈತರಿಗೂ ಲಾಭವಾಗುತ್ತದೆ. ಇದಕ್ಕೆ ವಿರುದ್ಧವಾಗಿ ಹೋದರೆ ಹಾನಿಯಾಗುತ್ತದೆ. ವಿರುದ್ಧವಾಗಿ ಹೋಗುತ್ತಿರುವುದರಿಂದಲೇ ಈಗ ಜಲ ವಿವಾದಗಳು ಹುಟ್ಟಿಕೊಂಡಿವೆ. ಹವಾಗುಣ, ಮಣ್ಣಿನ ಫಲವತ್ತತೆ ಅರಿತುಕೊಂಡು ಬೆಳೆ ಬೆಳೆಯಬೇಕು.ಯಾವತ್ತೂ ನಿಸರ್ಗದ ವಿರುದ್ಧ ಹೋಗಲಾಗುವುದಿಲ್ಲ. ನೀರು ಬಳಕೆಗೆ ಚಲಾಯಿಸುವ ಹಕ್ಕನ್ನು ನೀರು ಉಳಿಸುವ ಜವಾಬ್ದಾರಿಯಲ್ಲಿಯೂ ಪ್ರತಿಪಾದಿಸಬೇಕು. ಜಲ ಮೂಲ ರಕ್ಷಣೆಗೆ ಒತ್ತು ನೀಡಬೇಕು. ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ನೀರಿನ ವಿಷಯದಲ್ಲಿ ಮಿದುಳು ಹಾಗೂ ಹೃದಯಗಳ ಜೋಡಣೆ ಮಾಡುವ ಕೆಲಸ ಮಾಡಬೇಕಿದೆ. ಆಗ ಎಲ್ಲರಿಗೂ ನೀರು ಸಿಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry