ಸೋಮವಾರ, ಜೂಲೈ 6, 2020
27 °C
ಕಾಶ್ಮೀರದ ಉರಿಯಲ್ಲಿ ಜೈಷ್‌–ಎ–ಮೊಹಮ್ಮದ್‌ ಭಯೋತ್ಪಾದಕ ಸಂಘಟನೆ ಕೃತ್ಯ

ಉಗ್ರರ ದಾಳಿ: 17 ಯೋಧರ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

ಉಗ್ರರ ದಾಳಿ: 17 ಯೋಧರ ಸಾವು

ಉರಿ (ಜಮ್ಮು ಮತ್ತು ಕಾಶ್ಮೀರ): ಉತ್ತರ ಕಾಶ್ಮೀರದ ಉರಿಯಲ್ಲಿರುವ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸೇನೆಯ ಮೇಲೆ ನಡೆದ ಅತ್ಯಂತ ಘೋರ ದಾಳಿ ಇದಾಗಿದ್ದು 17 ಯೋಧರು ಹುತಾತ್ಮರಾಗಿದ್ದಾರೆ. 20 ಸೈನಿಕರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.ಭಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಜೈಷ್‌–ಎ– ಮೊಹಮ್ಮದ್ ಸಂಘಟನೆಗೆ ಸೇರಿದವರು ಎಂದು ಶಂಕಿಸಲಾದ ನಾಲ್ವರು ಉಗ್ರರು ಈ ದಾಳಿ ನಡೆಸಿದ್ದಾರೆ. ದಾಳಿಯ ಹಿಂದೆ ಇರುವವರು ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ದಾಳಿಗೆ ಒಳಗಾದ ಸೇನಾ ಶಿಬಿರವು ನಿಯಂತ್ರಣ ರೇಖೆಯಿಂದ ಕೆಲವೇ ಕಿಲೋಮೀಟರ್‌ ದೂರದಲ್ಲಿದೆ. ಉರಿ ಪಟ್ಟಣ ಶ್ರೀನಗರದಿಂದ 70 ಕಿಲೋಮೀಟರ್‌ ದೂರವಿದೆ.ಪಾಕ್‌ ಭಯೋತ್ಪಾದಕ ದೇಶ: ಘೋರ ದಾಳಿಗೆ ಭಾರತ ಕಠಿಣ ಪ್ರತಿಕ್ರಿಯೆ ನೀಡಿದೆ. ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ನೇರವಾಗಿ ಪಾಕಿಸ್ತಾನದತ್ತಲೇ ಬೆರಳು ತೋರಿದ್ದಾರೆ. ಪಾಕಿಸ್ತಾನ ಭಯೋತ್ಪಾದಕ ದೇಶ ಎಂದು ಅವರು ಹೇಳಿದ್ದಾರೆ. ಅಂತರರಾಷ್ಟ್ರೀಯ ಸಮುದಾಯ ಈ ದೇಶವನ್ನು ದೂರ ಇರಿಸುವ ಕೆಲಸ ಮಾಡಬೇಕು ಎಂದು ರಾಜನಾಥ್‌ ಕೋರಿದ್ದಾರೆ.ಬಿಜೆಪಿ ಮುಖಂಡ ರಾಮಮಾಧವ್‌ ಪ್ರತಿಕ್ರಿಯೆ ನೀಡಿ, ನಮ್ಮ ಸಂಯಮದ ದಿನಗಳು ಮುಗಿದು ಹೋಗಿವೆ. ದಾಳಿಯ ನಂತರ, ‘ನಮ್ಮ ಒಂದು ಹಲ್ಲು ಹೋದರೆ ಅವರ ಇಡೀ ದವಡೆಯನ್ನು ಒಡೆದು ಹಾಕುವ’ ನೀತಿ ಅನುಸರಿಸಬೇಕಿದೆ ಎಂದು ಹೇಳಿದ್ದಾರೆ.ಕಳವಳ: ಸೇನಾ ಕಾರ್ಯಾಚರಣೆಯ ಮಹಾ ನಿರ್ದೇಶಕ (ಡಿಜಿಎಂಒ) ಲೆ. ಜ. ರಣಬೀರ್ ಸಿಂಗ್‌ ಅವರು ಪಾಕಿಸ್ತಾನದ ಡಿಜಿಎಂಒಗೆ ಕರೆ ಮಾಡಿ ದಾಳಿಯ ಬಗ್ಗೆ ತಮ್ಮ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.  ಸೇನಾ ಶಿಬಿರದ ಮೇಲೆ ದಾಳಿ ನಡೆಸಿದವರು ಬಳಸಿದ ಶಸ್ತ್ರಗಳಲ್ಲಿ ಪಾಕಿಸ್ತಾನದಲ್ಲಿ ತಯಾರಾಗಿರುವ ಕುರಿತ ಗುರುತುಗಳಿದ್ದವು. ಇದು ಗಂಭೀರ ಕಳವಳದ ವಿಚಾರ ಎಂದು ರಣಬೀರ್‌ ಸಿಂಗ್‌ ಹೇಳಿದ್ದಾರೆ.‘ದಾಳಿ ನಡೆಸಿದ ನಾಲ್ವರು ಉಗ್ರರ ಬಳಿ ಇದ್ದ ಶಸ್ತ್ರಗಳಲ್ಲಿಯೂ ಪಾಕಿಸ್ತಾನದ ಗುರುತು ಇತ್ತು. ಹತ್ಯೆಯಾದ ಎಲ್ಲ ಉಗ್ರರು ಜೈಷ್‌–ಎ–ಮೊಹಮ್ಮದ್‌ ಸಂಘಟನೆಗೆ ಸೇರಿದವರು ಎಂಬುದು ಆರಂಭಿಕ ತನಿಖೆಯಿಂದ ತಿಳಿದು ಬಂದಿದೆ’ ಎಂದು ರಣಬೀರ್‌ ಸಿಂಗ್‌ ತಿಳಿಸಿದ್ದಾರೆ.ಉಗ್ರರು ಬೆಂಕಿ ಉಗುಳುವ ಶಸ್ತ್ರಗಳನ್ನು ಹೊಂದಿದ್ದರು. ಇದರಿಂದಾಗಿ ಸೈನಿಕರು ಮಲಗಿದ್ದ ಟೆಂಟ್‌ಗಳಿಗೆ ಬೆಂಕಿ ಹತ್ತಿಕೊಂಡಿತು. ಹುತಾತ್ಮರಾದ 17 ಯೋಧರ ಪೈಕಿ 13–14 ಮಂದಿ ಬೆಂಕಿಯಿಂದಾಗಿ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.***

ಈ ನೀಚ ದಾಳಿಯ ಹಿಂದೆ ಇರುವವರು ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುತ್ತೇನೆಂದು ದೇಶದ ಜನರಿಗೆ ಭರವಸೆ ನೀಡುತ್ತೇನೆ.

-ನರೇಂದ್ರ ಮೋದಿ, ಪ್ರಧಾನಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.